ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಇಲ್ಲಿವೆ.
ಇಂದಿನ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿನ ಯುಪಿಎ ಸರ್ಕಾರ ನಿರ್ಮಲ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಉದ್ದೇಶಿಸಿತ್ತು. 2013-14 ರ ಬಜೆಟ್ ನಲ್ಲೆ 4,260 ಕೋಟಿ ರೂ. ಗಳನ್ನು ಒದಗಿಸಿತ್ತು. 2013 ರ ವೇಳೆಗೆ ಸುಮಾರು ಶೇ.38-40 ರಷ್ಟು ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಮೋದಿಯವರು ನಿರ್ಮಲ್ ಭಾರತ್ ಯೋಜನೆಯನ್ನು ಸ್ವಚ್ಛ ಭಾರತ್ ಮಿಷನ್ ಎಂದು ಬದಲಾಯಿಸಿದರು. 2019-20 ರ ವೇಳೆಗೆ ಶೇ.90 ರಷ್ಟು ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾದವೆಂದು ವರದಿ ಹೇಳುತ್ತದೆ ಎಂದರು.
ಈ ವಿಚಾರದ ಕುರಿತು ವಿಶ್ವಬ್ಯಾಂಕ್ ಆಸಕ್ತಿಯ ಸಂಗತಿಯೊಂದನ್ನು ಅಧ್ಯಯನಗಳ ಮೂಲಕ ಬಹಿರಂಗಗೊಳಿಸಿದೆ. 2021-21 ರಲ್ಲಿ ಶೇ. 90 ರಷ್ಟು ಶೌಚಾಲಯಗಳಿದ್ದರೂ ಸಹ ಶೌಚಾಲಯಗಳನ್ನು ಬಳಸುವವರ ಪ್ರಮಾಣ ಶೇ. 65 ರಷ್ಟು ಮಾತ್ರ. 2018-19 ರಲ್ಲಿ ಶೇ.74 ರಷ್ಟು ಜನ ಶೌಚಾಲಯ ಬಳಸುತ್ತಿದ್ದರೆ 21ರ ವೇಳೆಗೆ ಶೇ.9 ರಷ್ಟು ಕಡಿಮೆಯಾಯಿತು. ಇದಕ್ಕೆ ಕಾರಣಗಳೇನು? ಎಂದು ಪ್ರಶ್ನಿಸಿದರು.
ಜೇವರ್ಗಿ ಕ್ಷೇತ್ರದ ಶಾಸಕರು ಮಹಿಳೆಯರ ಬಹಿರ್ದೆಸೆಗೆ ಅಡ್ಡ ಗೋಡೆಗಳನ್ನು ನಿರ್ಮಿಸಬೇಕಾಗಿದೆ ಎಂದು ಕೇಳುತ್ತಿದ್ದಾರೆ. ಶೌಚಾಲಯಗಳಿದ್ದಾವಲ್ಲ ಎಂದು ಹೇಳಿದ್ದೆ ಆದರೆ ಜನ ಬಳಸುವುದಿಲ್ಲ ಸಾರ್ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳುವುದು. ಸರ್ಕಾರ ಅನುದಾನ ನೀಡಿ ಶೌಚಾಲಯ ಕಟ್ಟಿಸಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿಗಳನ್ನು ಅಳವಡಿಸಿ ನೀರನ್ನೂ ಸರಬರಾಜು ಮಾಡಲಾಗುತ್ತಿದೆ. ಆದರೂ ಜನ ಬಳಸುವುದಿಲ್ಲ ಎನ್ನುತ್ತಾರೆ. ಹೇಗೆ ಈ ಸಮಸ್ಯೆಯನ್ನು ಸರಿ ಪಡಿಸುವುದು? ಇವೆಲ್ಲ ಸರಳವಾದ ಸಂಗತಿಗಳಲ್ಲ. ಇವಕ್ಕೆ ಪರಿಹಾರಗಳನ್ನು ನಾವುಗಳು ಹುಡುಕಬೇಕಾಗಿದೆ ಎಂದರು.
ಬಾಲ್ಯ ವಿವಾಹ ಮಾಡಬಾರದು. ಮಾಡಿದರೆ ಕಠಿಣ ಶಿಕ್ಷೆಗಳಿವೆ ಎಂಬ ಕಾನೂನುಗಳಿವೆ. ಆದರೆ ಇಡೀ ಆಡಳಿತಾಂಗದ ಕಣ್ಣು ತಪ್ಪಿಸಿ ಮದುವೆ ಮಾಡಿ ಬಿಡುತ್ತಾರೆ. ಇದರಿಂದ ಬಾಲಕಿಯರು ಗರ್ಭಿಣಿಯರಾಗುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಲ ಗರ್ಭಿಣಿಯರ ಹೊಟ್ಟೆಯಲ್ಲಿ ಹುಟ್ಟುವ ಕೂಸುಗಳು ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತವೆ. ಜನರಿಗೆ ಎಲ್ಲ ತಿಳುವಳಿಕೆ ಇದ್ದೂ ಈ ರೀತಿಯ ಕ್ರೈಮ್ ಮಾಡುತ್ತಾರೆ. ಆದ್ದರಿಂದಲೆ ನಾನು ಪ್ರತಿ ಬಾರಿ ಡಿಸಿ, ಸಿಇಓಗಳ ಸಭೆ ಮಾಡಿದಾಗಲೂ ಈ ವಿಚಾರವನ್ನು ಪ್ರಸ್ತಾಪಿಸಿ ಕಠಿಣ ಕ್ರಮ ಕೈಗೊಂಡು, ತಡೆಗಟ್ಟಲು ಹೇಳಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕರಾದಿಯಾಗಿ ಅನೇಕರು ತಲಾದಾಯದ ಬಗ್ಗೆ ಪ್ರಸ್ತಾಪ ಮಾಡಿದರು. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾದಾಯ ರಾಜ್ಯದ ಉಳಿದೆಡೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಮ್ಮಲ್ಲಿ ಪೂರ್ಣ ಪ್ರಮಾಣದ ತಲಾದಾಯ ಕುರಿತ ವರದಿ 2023-24 ರ ಸಾಲಿನದಾಗಿದೆ ಎಂದರು. ಅದರ ಪ್ರಕಾರ ರಾಜ್ಯದ ಜನರ ಸರಾಸರಿ ತಲಾದಾಯ ಪ್ರಸ್ತುತ ದರಗಳಲ್ಲಿ 3,39,813 ರೂ. ಇದೆ. ಅದಕ್ಕಿಂತ ಮೇಲೆ 6 ಜಿಲ್ಲೆಗಳಿವೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ಜನರ ತಲಾದಾಯ 3.4 ಲಕ್ಷ ರೂ.ಗಳಿಗಿಂತ ಹೆಚ್ಚು. ಅದಕ್ಕೆ ಸಮೀಪದಲ್ಲಿ 10 ಜಿಲ್ಲೆಗಳಿವೆ. 2.5 ಲಕ್ಷದಿಂದ 3.4 ಲಕ್ಷದವರೆಗೆ ಮಂಡ್ಯ, ತುಮಕೂರು, ಕೊಡಗು, ಹಾಸನ, ಬಳ್ಳಾರಿ, ರಾಮನಗರ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳು. 2 ರಿಂದ 2.5 ಲಕ್ಷ ತಲಾದಾಯ ಇರುವ ಜಿಲ್ಲೆಗಳು 4. ಅವು ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ. 2 ಲಕ್ಷಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ, ಕಲಬುರಗಿ ಸೇರಿ 11 ಇವೆ ಎಂದರು.
ನಾವು ತಲಾದಾಯವನ್ನು ಅಭಿವೃದ್ಧಿಯ ಮಾನದಂಡವಾಗಿರಿಸಿಕೊಳ್ಳುತ್ತೇವೆ. ತಲಾದಾಯವೆಂದರೆ ಒಟ್ಟಾರೆ ಆ ಜಿಲ್ಲೆಯ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಿ ಅದನ್ನು ಆ ಜಿಲ್ಲೆಯ ಎಲ್ಲಾ ಜನರಿಗೆ ಡಿವೈಡ್ ಮಾಡಿದಾಗ ಸಿಗುವ ಮೌಲ್ಯವಾಗಿರುತ್ತದೆ. ಹೆಚ್ಚು ಇಂಡಸ್ಟಿಯಲೈಸ್ ಆದ, ಕಮರ್ಷಿಯಲೈಸ್ ಆದ ಜಿಲ್ಲೆಗಳ ತಲಾದಾಯ ಹೆಚ್ಚಿರುತ್ತದೆ. ಹೆಚ್ಚು ಕೃಷಿಯನ್ನು ಅವಲಂಬಿಸಿದ ಜಿಲ್ಲೆಗಳಲ್ಲಿ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಜಿಲ್ಲೆ ಕಡೆಯ ಕೆಟಗರಿಯಲ್ಲಿ ಬರುತ್ತವೆ. ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳ ತಲಾದಾಯವು 4 ನೇ ಗುಂಪಿನ ಜನರ ತಲಾದಾಯಕ್ಕೆ ಸಮೀಪದಲ್ಲೆ ಇರುವುದಾಗಿ ತಿಳಿಸಿದರು. ಆದರೂ ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾದಾಯ ಅದರಲ್ಲೂ ಕಲ್ಯಾಣ ಕರ್ನಾಟಕದ ಜನರ ತಲಾದಾಯ ಕಡಿಮೆ ಇರಲು ಕಾರಣಗಳೇನು? ಎಂದು ಹುಡುಕುತ್ತಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ ಎಂದು ತಿಳಿಸಿದರು.
ಹಸು, ಎಮ್ಮೆ ಸಾಕಾಣಿಕೆಯು ತಕ್ಷಣದ ಆದಾಯವನ್ನು ಹೆಚ್ಚು ಮಾಡುತ್ತದೆ. ಜನರು ಗುಳೆ ಹೋಗುವುದನ್ನು ತಪ್ಪಿಸುತ್ತದೆ. ಜನ ನಿಂತರೆ ಅಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶಿಕ್ಷಣವು ಉತ್ತಮ ಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಕೌಶಲ್ಯಯುತ ಶಿಕ್ಷಣದ ಅಗತ್ಯವೂ ಇಂದಿನ ಅಗತ್ಯವಾಗಿದೆ. ಬೆಂಗಳೂರು ಮಿಲ್ಕ್ ಯೂನಿಯನ್‌ನಲ್ಲಿ ಪ್ರತಿ ದಿನ ಸರಾಸರಿ 17.13 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತದೆ. ಹಾಸನ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ಕೋಲಾರ ಮಿಲ್ಕ್ ಯೂನಿಯನ್‌ಗಳಲ್ಲಿ ಪ್ರತಿ ದಿನ ಸರಾಸರಿ 7.2 ರಿಂದ 14.08 ಲಕ್ಷ ಕೆಜಿ ಗಳಷ್ಟು ಹಾಲನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಕಲಬುರ್ಗಿ ಮಿಲ್ಕ್ ಯೂನಿಯನ್‌ನಲ್ಲಿ [ ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡದ್ದು] ದಿನಕ್ಕೆ ಕೇವಲ 67 ಸಾವಿರ ಕೆಜಿ ಹಾಲು ಉತ್ಪಾದನೆಯಾಗುತ್ತಿದೆ. ವಿಜಯಪುರ ಯೂನಿಯನ್‌ನಲ್ಲಿ 1.47 ಲಕ್ಷ ಕೆಜಿ, ಹಾವೇರಿ ಯೂನಿಯನ್‌ನಲ್ಲಿ 1.55 ಲಕ್ಷ ಕೆಜಿ ಹಾಲು ಮಾತ್ರ ಉತ್ಪಾದನೆಯಾಗುತ್ತದೆ. ಬೆಳಗಾವಿಯಲ್ಲಿ 2.39 ಲಕ್ಷ ಕೆಜಿ ಸಂಗ್ರಹವಾಗುತ್ತದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಕೆಜಿ ಮಾತ್ರ. ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಉಡುಪಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹದ ಪ್ರಮಾಣ ದಿನಕ್ಕೆ 22.4 ಲೀಟರುಗಳು. ರಾಜ್ಯದಲ್ಲಿ ಸರಾಸರಿ 1 ಕೋಟಿ ಲೀ.ಗಳು. ಇದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ. ಇನ್ನುಳಿದ ಹಾಲು ಉಳಿದ 17 ಜಿಲ್ಲೆಗಳ ಸುಮಾರು 4 ಕೋಟಿ ಜನರು ಸಂಗ್ರಹಿಸುತ್ತಾರೆ.ಈ ಕಾರಣದಿಂದಲೆ ನಾವು ಈ ವರ್ಷದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಲೀಪ್ ಎಂಬ [ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ] ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಎಂಬುದು ಕ್ಷಣಾರ್ಧದಲ್ಲಿ ಸಾಧ್ಯವಾಗಿಬಿಡಬಹುದಾದ ವಿದ್ಯಮಾನವಲ್ಲ. ನಿರಂತರವಾಗಿ ಹಠತೊಟ್ಟ ಹಾಗೆ ಸಾಧಿಸಬೇಕಾದ ಸಂಗತಿ. ಇದಕ್ಕೆ ಜನರೂ ಸಹ ಒಗ್ಗೂಡಬೇಕು. ಮನೋಭಾವದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಆರ್. ಅಶೋಕ್ ಅವರು ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೇವೆ. ಒಮ್ಮೆ ಮೂರು ರೂಪಾಯಿ ಮತ್ತೊಮ್ಮೆ 4 ರೂಪಾಯಿಗಳು. ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ 630 ಕೋಟಿ ರೂಪಾಯಿಗಳನ್ನೂ ರೈತರಿಗೆ ನೀಡಿದ್ದೇವೆ. 2023-24 ರಿಂದ 2025-26 ರವರೆಗೆ 4,048 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರೋತ್ಸಾಹಧನ ಮಾತ್ರ ಬಾಕಿ ಇದೆ. ಬಾಕಿ ಇರುವ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದರು.
2013-14 ರಲ್ಲಿ ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ತಂದು 3 ರೂ. ಇದ್ದ ಪ್ರೋತ್ಸಾಹ ಧನವನ್ನು 5 ರೂ.ಗೆ ಹೆಚ್ಚಿಸಿತ್ತು. ಅದನ್ನು 7 ರೂ.ಗಳಿಗೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇವೆ. ನಾವು ಇದನ್ನೆಲ್ಲ ಮಾಡಿದ ಕಾರಣಕ್ಕಾಗಿಯೇ ಬಿಜೆಪಿ ಸರ್ಕಾರದ ಅವಧಿಗಿಂತ ಸುಮಾರು 25-30 ಲಕ್ಷ ಲೀಟರುಗಳಷ್ಟು ಹೆಚ್ಚು ಹಾಲನ್ನು ಪ್ರತಿ ದಿನ ರೈತರು ನಮ್ಮ ಡೈರಿಗಳಿಗೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ 75 ಲಕ್ಷ ಲೀಟರುಗಳಿಗೆ ಇಳಿದಿದ್ದ ಹಾಲಿನ ಸಂಗ್ರಹ ಈಗ 1.05 ಕೋಟಿ ಲೀಟರ್‌ಗಳ ವರೆಗೆ ಏರಿಕೆಯಾಗಿದೆ ಎಂದರು.
ಅನುಗ್ರಹ ಯೋಜನೆ
ನಾವು 2014 ರಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದ್ದೆವು. ಕುರಿ, ಮೇಕೆ, ಎತ್ತು, ಎಮ್ಮೆ, ಹಸು ಮುಂತಾದವುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತರಿಗೆ ತೀವ್ರ ಅನಾನುಕೂಲವಾಗುತ್ತದೆಂದು ತೀರ್ಮಾನಿಸಿ ಪರಿಹಾರ ಕೊಡಲು ಪ್ರಾರಂಭಿಸಿದೆವು. ಇದು ದೇಶದಲ್ಲಿಯೆ ಮಾದರಿ ಕಾರ್ಯಕ್ರಮವಾಗಿದೆ. ಹಿಂದಿನ ಸರ್ಕಾರ 2021ನೇ ಸಾಲಿನಿಂದ 2023 ರವರೆಗೆ ಈ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು ಎಂದರು.
ಕುರಿ/ಮೇಕೆ ಆಕಸ್ಮಿಕ ಸಾವುಗಳು ಉಂಟಾದ ಸಂದರ್ಭದಲ್ಲಿ ಅವುಗಳ ಮಾಲೀಕರಿಗೆ ಪರಿಹಾರವಾಗಿ ರೂ.5,000 ನೀಡಲಾಗುತ್ತಿತ್ತು. ಈ ವರ್ಷದಿಂದ 7,500 ರೂ.ಗಳಿಗೆ ಹೆಚ್ಚಿಸಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ರೂ.58 ಕೋಟಿಗಳನ್ನು ಮಾಲೀಕರಿಗೆ ಪರಿಹಾರವಾಗಿ ನೀಡಲಾಗಿದೆ. ಆಕಸ್ಮಿಕವಾಗಿ ಮರಣ ಹೊಂದಿದ ದನ, ಎಮ್ಮೆ, ಎತ್ತು, ಹೋರಿಗಳ ಮಾಲೀಕರಿಗೆ ಪರಿಹಾರವಾಗಿ ರೂ.10,000 ನೀಡಲಾಗುತ್ತಿತ್ತು. ಈ ವರ್ಷದಿಂದ 15,000 ರೂ.ಗಳಿಗೆ ಏರಿಕೆ ಮಾಡಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ರೂ.37.41 ಕೋಟಿಗಳನ್ನು ಮಾಲೀಕರಿಗೆ ಪರಿಹಾರವಾಗಿ ನೀಡಿದ್ದೇವೆ. ನಾವು ಅಲೆಮಾರಿ ಕುರಿಗಾರರ ಸಂರಕ್ಷಣೆಗಾಗಿ ಕಾಯ್ದೆಯನ್ನೂ ಜಾರಿಗೆ ತಂದಿದ್ದೇವೆ ಎಂದರು.
ರಾಜ್ಯದ ಹಾಗೂ ಈ ಭಾಗದ ಯುವ ಜನರ ಉದ್ಯೋಗಾವಕಾಶಗಳು ಹೆಚ್ಚಲಿ ಎಂಬ ಕಾರಣದಿಂದ ಹೆಚ್ಚೆಚ್ಚು ಜಿಟಿಟಿಸಿಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಐಟಿಐಗಳನ್ನು ನೀಡುತ್ತಿದ್ದೇವೆ. ನಮ್ಮ ಸರ್ಕಾರವು ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನವನ್ನು ಆದ್ಯತೆಯ ಸಂಗತಿಗಳಾಗಿ ಪರಿಗಣಿಸುತ್ತದೆ. ಪ್ರಾದೇಶಿಕ ಸಮತೋಲನ ಸಾಧಿಸಬೇಕಾದರೆ ಅಸಮತೋಲನವನ್ನು ಹೋಗಲಾಡಿಸಬೇಕು. ಅಸಮತೋಲನ ಉಂಟಾಗುವುದಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿದ್ದಾಗ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಕುರಿತು ಚಿಂತನೆಗಳನ್ನು ನಡೆಸಿದೆ ಹಾಗೂ ಅನುಷ್ಠಾನಗಳನ್ನು ಮಾಡಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡೆ ಹಿಂದೆ 1980 ರ ಆಸುಪಾಸಿನಲ್ಲಿ ಧರಂಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹೈಪವರ್ ಸಮಿತಿಯನ್ನು ಪ್ರಾರಂಭಿಸಲಾಯಿತು. ಹೈಪವರ್ ಕಮಿಟಿ ವರದಿಯನ್ನು ಆಧರಿಸಿ 1991 ರಲ್ಲಿ ಎಚ್.ಕೆ.ಡಿ.ಬಿ. ಯನ್ನು ಪ್ರಾರಂಭಿಸಲಾಯಿತು. ಆಗ ಯಾವ ಸರ್ಕಾರ ಇತ್ತು ಎಂದು ಪ್ರಶ್ನಿಸಿದರು.
2002 ರಲ್ಲಿ ಡಾ. ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆದಿದ್ದೆವು. ಸದರಿ ವರದಿಯನ್ನು ಆಧರಿಸಿ ಸುಮಾರು 35,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಹಾಗೂ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದೇವೆ. 2002 ರಲ್ಲಿ ಯಾವ ಸರ್ಕಾರವಿತ್ತು? ವಾಜಪೇಯಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಆರ್ಟಿಕಲ್ 371ಜೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದಲ್ಲಿ 6-11-2013 ರಂದು ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ವಿಶೇಷ ಸ್ಥಾನಮಾನದ 371ಜೆ ಅನುಷ್ಠಾನ ಮಾಡಲಾಯಿತು. 371ಜೆ ಅನುಷ್ಠಾನವಾದ ಮೇಲೆ ಆ ಭಾಗದ ಅಭಿವೃದ್ಧಿಗಾಗಿ 24,778 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇದುವರೆಗೆ ಸುಮಾರು 14,800 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ ಎಂದರು.
371ಜೆ ಸ್ಥಾನಮಾನ ದೊರೆತ ನಂತರ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2024 ರ ಶೈಕ್ಷಣಿಕ ಸಾಲಿನವರೆಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದಲ್ಲದೆ 12,000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬಂಧಿತ, ಬಿ-ಫಾರ್ಮಸಿ/ ಡಿ-ಫಾರ್ಮಸಿ ಕೋರ್ಸ್ ಗಳು ಮುಂತಾದವುಗಳಿಗೆ ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಈ ವರ್ಷದ ಅಂಕಿ ಅಂಶಗಳೂ ಸೇರಿದರೆ ಇನ್ನಷ್ಟು ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ತಿಳಿಯುತ್ತದೆ ಎಂದರು.
ಈ ಎರಡೂ ವರದಿಗಳನ್ನು ಅನುಷ್ಠಾನ ಮಾಡಿದ ಮೇಲೆ ಪರಿಸ್ಥಿತಿ ಏನಾಗಿದೆಯೆಂದು ಪರಿಶೀಲಿಸುವ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಅರ್ಥಶಾಸ್ತ್ರಜ್ಞರುಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಸದರಿ ಸಮಿತಿಯು ಸದ್ಯದಲ್ಲಿಯೆ ವರದಿ ಸಲ್ಲಿಸಲಿದೆ. ಆ ವರದಿ ಬಂದ ಕೂಡಲೆ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನಮ್ಮ ಬಿ.ಆರ್ ಪಾಟೀಲರ ಆದಿಯಾಗಿ ಅನೇಕ ಸದಸ್ಯರು ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಕುರಿತು ಕಾಳಜಿಯಿದೆ. ಕಲ್ಯಾಣ ಕರ್ನಾಟಕದ ಶಿಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಲು ಶಿಕ್ಷಣ ತಜ್ಞರಾದ ಛಾಯಾ ದೇಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೇವೆ. ಸದರಿ ಸಮಿತಿಯು ವರದಿ ಸಲ್ಲಿಸಲು ಸಮಯ ಕೇಳಿದ್ದಾರೆ. ಕೂಡಲೇ ವರದಿ ಸ್ವೀಕರಿಸಿ ಸಾಧಕ ಬಾಧಕ ಪರಿಶೀಲಿಸಿ ಅನುಷ್ಠಾನ ಮಾಡಲಾಗುವುದು ಎಂದರು.
ಇಷ್ಟನ್ನೂ ಮಾಡಿದ್ದು ಯಾರು? ಕಾಂಗ್ರೇಸ್ ನೇತೃತ್ವದ ಸರ್ಕಾರಗಳೆ. ಇದೆಲ್ಲ ಸಾಧ್ಯವಾಗಿರುವುದು ನಮ್ಮ ಸರ್ಕಾರಗಳಿಂದಲೇ. ಕಳೆದ 20 ವರ್ಷಗಳಲ್ಲಿ ನೀವು ಸುಮಾರು 11 ವರ್ಷಗಳ ಕಾಲ ಅಧಿಕಾರದಲ್ಲಿದ್ರಿ. ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿಮಗೆ ಉತ್ತರ ಕರ್ನಾಟಕ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ನಿಮಗೆ ಉತ್ತರ ಕರ್ನಾಟಕ ಇದೆ, ಅದರ ಹಿತಾಸಕ್ತಿ ಕಾಪಾಡಬೇಕು ಎಂದು ಅನ್ನಿಸುವುದೇ ಇಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಹೇಳಬೇಕು? ಎಷ್ಟು ಸಂಸ್ಥೆಗಳನ್ನು ಪ್ರಾರಂಭಿಸಲಾಗಿದೆ? ಐಐಎಂಗಳು, ಏಮ್ಸ್ ಆಸ್ಪತ್ರೆಗಳು, ಇಎಸ್‌ಐ ಆಸ್ಪತ್ರೆಗಳು, ಕೇಂದ್ರದ ಕೈಗಾರಿಕೆಗಳು, ವಿಶ್ವ ವಿದ್ಯಾಲಯಗಳು, ನೀರಾವರಿ ಯೋಜನೆಗಳು ಮುಂತಾದಂತೆ ಏನನ್ನು ಸ್ಥಾಪಿಸಲಾಗಿದೆ ಎಂಬುದನ್ನು ಹೇಳಬೇಕು? ನರೇಂದ್ರ ಮೋದಿ ಸರ್ಕಾರದಲ್ಲಿ ಪ್ರಹ್ಲಾದ ಜೋಶಿಯವರು ನಿರಂತರವಾಗಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಕಂದಾಯ ವಿಭಾಗದ ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾಗುವ ಎಂಪಿಗಳು ಬಹುತೇಕರು ಬಿಜೆಪಿಯವರು. ಬೆಳಗಾವಿ, ಧಾರವಾಡ, ಹಾವೇರಿ-ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಆಯ್ಕೆಯಾಗಿರುವವರು ಯಾರು? ಇಷ್ಟಿದ್ದರೂ ಕೇಂದ್ರ ಸರ್ಕಾರದ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜನರಿಗ ಮೋಸ ಮಾಡುತ್ತಲೇ ಇದ್ದಾರೆ. ಡಬಲ್ ಎಂಜಿನ್ ಸರ್ಕಾರ ಇದ್ದರೆ ಅನುಕೂಲ ಎಂದು ಹೇಳುವುದು ಮಾಮೂಲಿ ಮಾತು. ಆದರೆ 2019 ರಿಂದ 2023 ರವರೆಗೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೆ ಇದ್ದದ್ದು. ಆ ಸಂದರ್ಭದಲ್ಲಿಯಾದರೂ ಏನಾದರೂ ಯೋಜನೆಗಳನ್ನು ಈ ಭಾಗಕ್ಕೆ ಕೊಟ್ರಾ? ಈ ಭಾಗ ಅಷ್ಟೆ ಅಲ್ಲ ರಾಜ್ಯಕ್ಕೆ ಏನಾದ್ರೂ ಮಾಡಿದ್ರಾ? ಉತ್ತರ ಕರ್ನಾಟಕದ ಬಗ್ಗೆಯಾಗಲಿ, ಕರ್ನಾಟಕದ ಬಗ್ಗೆಯಾಗಲಿ ಮಾತಾಡುವ ನೈತಿಕತೆ ನಿಮಗೆ ಎಲ್ಲಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ ಈ ವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿಲ್ಲ. ಮಹದಾಯಿ ಯೋಜನೆಯನ್ನು ಇತ್ಯರ್ಥ ಪಡಿಸಲಾಗಿಲ್ಲ. ನಿಮಗೆ ನೈತಿಕತೆ ಇಲ್ಲವೆಂದು ಹೇಳಿ ನಿಮಗೆ ನಾವು ಸುಮ್ಮನಿರುವುದಿಲ್ಲ. ನಮಗೆ ನೈತಿಕತೆಯಿದೆ. ನಾವು ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಭಾಗದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು.
ಆರ್ ಅಶೋಕ್, ವಿಜಯೇಂದ್ರ ಹಾಗೂ ಇನ್ನಿತರೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರು ಶ್ವೇತಪತ್ರವನ್ನೂ ಡಿಮ್ಯಾಂಡ್ ಮಾಡಿದ್ದಾರೆ. ನಾವು ತಯಾರಿದ್ದೇವೆ. 2006 ರಿಂದಲೂ ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನೂ ಹೇಳುತ್ತೇವೆ.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ರಾಜ್ಯದ ಭೌಗೋಳಿಕ ವಿಸ್ತೀರ್ಣ 1,91,791 ಚದರ ಕಿಮೀಗಳು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ವಿಸ್ತೀರ್ಣ1,01,708 ಚದರ ಕಿಮೀಗಳು. ವಿಸ್ತೀರ್ಣದಲ್ಲಿ ಶೇ.53 ರಷ್ಟು ಭೂ ಪ್ರದೇಶ ಈ ಭಾಗದಲ್ಲಿದೆ. ಜನಸಂಖ್ಯೆವಾರು ನೋಡಿದರೆ [ ಜನಸಂಖ್ಯಾ ಸಾಂದ್ರತೆ-ಉತ್ತರ ಕರ್ನಾಟಕದಲ್ಲಿ ಒಂದು ಕಿಮೀಗೆ 292 ಜನ ಜೀವಿಸುತ್ತಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ 443 ಜನ ಬದುಕುತ್ತಿದ್ದಾರೆ.
ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲೂ ಶೇ. 43 ರಷ್ಟು ಕ್ಷೇತ್ರಗಳು ಈ ಭಾಗದಲ್ಲಿವೆ. ಹಾಗಾಗಿ ಸರ್ಕಾರಗಳು ಜಾರಿಗೆ ತರುವ ಯೋಜನೆಗಳಲ್ಲೂ ಕನಿಷ್ಟ ಶೇ. 42 ರಿಂದ ಶೇ. 43 ರಷ್ಟಾದರೂ ಈ ಭಾಗಕ್ಕೆ ನೀಡಲೇಬೇಕು ಎಂಬುದು ನಮ್ಮ ಇರಾದೆಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು
ನಮ್ಮ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಗ್ಯಾರಂಟಿ ಯೋಜನೆಗಳೂ ಸೇರಿವೆ. ಮೊದಲಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಎಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಈ ಭಾಗದ ಜನರ ಖಾತೆಗಳಿಗೆ ವರ್ಗಾವಣೆ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸದನದ ಮೂಲಕ ಎಲ್ಲರ ಗಮನಕ್ಕೆ ತರಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು.
ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 1,06,076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರಲ್ಲಿ 46,277 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಒಟ್ಟು ವೆಚ್ಚದಲ್ಲಿ ಶೇ. 43.63 ರಷ್ಟು ಅನುದಾನಗಳು ಈ ಭಾಗದ ಜನರಿಗಾಗಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು..
ಈ ಸದನದಲ್ಲಿ ಅನೇಕರಿಗೆ ಗ್ಯಾರಂಟಿ ಯೋಜನೆಗಳ ಕುರಿತು ನಕಾರಾತ್ಮಕ ಭಾವನೆಗಳಿವೆ. ಆದರೆ ಇಡೀ ದೇಶದ ಆರ್ಥಿಕತೆ ಕುಸಿಯುತ್ತಿರುವಾಗ ಕರ್ನಾಟಕ ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿರುವುದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಬಹಳ ದೊಡ್ಡದಿದೆ ಎಂದರು.
ಮಾಜಿ ಸಚಿವರುಗಳಾಗಿದ್ದ ಶಶಿಕಲಾ ಜೊಲ್ಲೆಯವರು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದವುಗಳ ಕುರಿತಂತೆ ಹಲವು ಅಂಕಿ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಹೇಳಿರುವ ಅಂಕಿ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ವಿರೋಧ ಪಕ್ಷದ ಅನೇಕ ಸದಸ್ಯರು ಅಭಿವೃದ್ಧಿ ಕಾಮಗಾರಿಗಳ ಕುರಿತೂ ಪ್ರಸ್ತಾಪಿಸಿದ್ದಾರೆ. ಆದರೆ ಹಿಂದಿನ ಸರ್ಕಾರ ಅನುದಾನ ಒದಗಿಸದೆ ಕಾಮಗಾರಿಗಳನ್ನು ತೆಗೆದುಕೊಂಡ ಕಾರಣದಿಂದ ಬಾಕಿ ಉಳಿಸಿದ್ದ ಬಿಲ್ಲುಗಳನ್ನು ತೀರಿಸುವ ಭಾರ ನಮ್ಮ ಮೇಲೆ ಬಿದ್ದಿದೆ. ಆದರೂ ಸಹ ಎರಡೂವರೆ ವರ್ಷಗಳಲ್ಲಿ 10,467 ಕಿಮೀ ರಸ್ತೆ ನಿರ್ಮಿಸಿದ್ದೇವೆ. ಜೊತೆಗೆ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ 46,107 ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಉತ್ತರ ಕರ್ನಾಟಕದಲ್ಲಿ 20,526 ಶಾಲೆಗಳಿವೆ. ಶೇ. 44.52 ರಷ್ಟು ಸರ್ಕಾರಿ ಶಾಲೆಗಳು ಈ ಭಾಗದಲ್ಲಿವೆ. ರಾಜ್ಯದಲ್ಲಿ ಒಟ್ಟು 38,45,990 ಮಕ್ಕಳು ಕಲಿಯುತ್ತಿದ್ದಾರೆ. ಒಟ್ಟು 1,76,195 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ 22 ಮಕ್ಕಳಿಗೆ ಒಬ್ಬ ಶಿಕ್ಷಕರು ಇದ್ದಾರೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ 20,526 ಸರ್ಕಾರಿ ಶಾಲೆಗಳಿವೆ. ಶೇ. 44.52 ರಷ್ಟು ಸರ್ಕಾರಿ ಶಾಲೆಗಳು ಈ ಭಾಗದಲ್ಲಿವೆ. ಈ ಭಾಗದ ಸರ್ಕಾರಿ ಶಾಲೆಗಳಲ್ಲಿ 24,19,393 ಮಕ್ಕಳು ಕಲಿಯುತ್ತಿದ್ದಾರೆ. 89,214 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ 27 ಮಕ್ಕಳಿಗೆ ಒಬ್ಬ ಶಿಕ್ಷಕರು ಇದ್ದಾರೆ. ಶಿಕ್ಷಣ ಕಾಯ್ದೆಯ ಪ್ರಕಾರ 1-5 ತರಗತಿವರೆಗೆ 30 ಮಕ್ಕಳಿಗೆ ಒಬ್ಬ ಶಿಕ್ಷಕರು, 6-8 ರವರೆಗೆ 35 ಮಕ್ಕಳಿಗೆ ಒಬ್ಬ ಶಿಕ್ಷಕರು ಹಾಗೂ ಪ್ರೌಢ ಶಿಕ್ಷಣಕ್ಕೆ 40 ಮಕ್ಕಳಿಗೆ ಒಬ್ಬ ಶಿಕ್ಷಕರು ಇರಬೇಕು ಎಂದಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ 27 ಮಕ್ಕಳಿಗೆ ಒಬ್ಬ ಶಿಕ್ಷಕರು ಇದ್ದಾರೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇಷ್ಟಲ್ಲದೆ, ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 2025-26ನೇ ಸಾಲಿಗೆ 34,027 ಅತಿಥಿ ಶಿಕ್ಷಕರನ್ನು, ಪ್ರೌಢ ಶಾಲೆಗಳಲ್ಲಿ 9,499 ಅತಿಥಿ ಶಿಕ್ಷಕರನ್ನು ಒಟ್ಟು 43,526 ಅತಿಥಿ ಶಿಕ್ಷಕರನ್ನು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 4,689 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ ಎಂದರು.
2024-25 ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ತರಗತಿವರೆಗಿನ ಶಿಕ್ಷಣವನ್ನು ಒಂದೇ ಕಡೆ ನೀಡುವ ಉದ್ದೇಶದಿಂದ ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಮುಂದುವರಿದು, ₹2,500 ಕೋಟಿ ವೆಚ್ಚದಲ್ಲಿ 600 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಹಾಗೂ ಇವುಗಳ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಕೆಆರ್‌ಡಿಬಿ ವತಿಯಿಂದ 200 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಇದಲ್ಲದೆ ಗ್ರಾಮೀಣ ಮಕ್ಕಳಲ್ಲಿ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದ 872 ಶಾಲೆಗಳನ್ನು ದ್ವಿಭಾಷಾ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.
ಓದು ಕರ್ನಾಟಕ’ ಯೋಜನೆಯಡಿ 4 ಮತ್ತು 5 ನೇ ತರಗತಿಯ 10,03,821 ವಿದ್ಯಾರ್ಥಿಗಳಿಗೆ ರೂ.14.25 ಕೋಟಿ ವೆಚ್ಚದಲ್ಲಿ ಬುನಾದಿ ಸಾಕ್ಷರತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಲ್ಲದೆ ಮಕ್ಕಳ ಕಲಿಕೆಗೆ ಪೂರಕವಾಗಿ ಶಿಕ್ಷಣ ಗುಣಮಟ್ಟವನ್ನು ಉತ್ತಮಪಡಿಸಲು ಕಲಿಕಾ ಚಿಲುಮೆ, ಕಲಿಕಾ ದೀಪ, ಜ್ಞಾನಸೇತು, ಕಲಿಕಾಸರೆ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಬಲಪಡಿಸಲು ₹1,450 ಕೋಟಿ ವೆಚ್ಚ ಮಾಡಲಾಗಿದೆ. 2024-25 ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಅಕ್ಷರ ಆವಿಕ್ಷಾರ’ ಯೋಜನೆಯಡಿ ರೂ.652.49 ಕೋಟಿ ಅನುದಾನವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇನ್ನು ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಿಸಲು ಶಾಲಾ ಮಕ್ಕಳಿಗೆ ಪೂರ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಾರದ ಆರು ದಿನವೂ ಮೊಟ್ಟೆ ಅಥವಾ ಬಾಳೆಹಣ್ಣು ನೀಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ 437 ಸರ್ಕಾರಿ ಪದವಿ ಕಾಲೇಜುಗಳು, 110 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 17 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ 185 ಸರ್ಕಾರಿ ಪದವಿ ಕಾಲೇಜುಗಳು, 47 ಸರ್ಕಾರಿ ಪಾಲಿಟೆಕ್ನಿಕ್ ಮತ್ತು 8 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 4 ಕಿರಿಯ ತಾಂತ್ರಿಕ ಶಾಲೆಗಳಿವೆ.
ರಾಜ್ಯದಲ್ಲಿ 437 ಸರ್ಕಾರಿ ಪದವಿ ಕಾಲೇಜುಗಳಿವೆ. ಉತ್ತರ ಕರ್ನಾಟಕ ಭಾಗದಲ್ಲಿ 185 ಸರ್ಕಾರಿ ಪದವಿ ಕಾಲೇಜುಗಳು, ಶೇ.42.33 ರಷ್ಟಿವೆ. ರಾಜ್ಯದಲ್ಲಿ 110 ಪಾಲಿಟೆಕ್ನಿಕ್ ಕಾಲೇಜುಗಳಿದ್ದರೆ, ಉತ್ತರ ಕರ್ನಾಟಕದಲ್ಲಿ 47 ಇವೆ. ಶೇ. 42.8 ರಷ್ಟು. ರಾಜ್ಯದಲ್ಲಿ 17 ಇಂಜಿನಿಯರಿಂಗ್ ಕಾಲೇಜುಗಳಿವೆ. ಉತ್ತರ ಕರ್ನಾಟಕದಲ್ಲಿ 8 ಇವೆ. ಶೇ.47 ರಷ್ಟು. ರಾಜ್ಯದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 6 ಕಿರಿಯ ತಾಂತ್ರಿಕ ಶಾಲೆಗಳಿವೆ. ಉತ್ತರ ಕರ್ನಾಟಕದಲ್ಲಿ 4 ಕಿರಿಯ ತಾಂತ್ರಿಕ ಶಾಲೆಗಳಿವೆ. ಶೇ. 66.7 ರಷ್ಟು ಎಂದು ತಿಳಿಸಿದರು.
ಹಾಗೆಯೇ ರಾಜ್ಯದಲ್ಲಿ 270 ಸರ್ಕಾರಿ ಐಟಿಐ ಕಾಲೇಜುಗಳಿದ್ದರೆ, ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ 131 ಸ್ಥಾಪನೆಯಾಗಿವೆ. ಶೇ. 48.51. ಹಾಗೆಯೇ ಅನುದಾನಿತ ಐಟಿಐ ಗಳು 191 ಇದ್ದರೆ, 83 ಐಟಿಐ ಗಳು ಈ ಭಾಗದಲ್ಲಿ ಸ್ಥಾಪನೆಯಾಗಿವೆ ಎಂದರು.
ರಾಜ್ಯದಲ್ಲಿ 32 ಜಿಟಿಟಿಸಿ ಗಳಿದ್ದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 14 ಜಿಟಿಟಿಸಿ ಗಳಿವೆ. ಮಲ್ಟಿ ಸ್ಕಿಲ್ ಡೆವೆಲಪ್‌ಮೆಂಟ್ ಸೆಂಟರ್‌ಗಳು ರಾಜ್ಯದಲ್ಲಿ 6 ಕಡೆ ಸ್ಥಾಪನೆಯಾಗಿವೆ. ಅವುಗಳಲ್ಲಿ ಉತ್ತರ ಕರ್ನಾಟಕದಲ್ಲೆ 4 ಸ್ಥಾಪನೆಯಾಗಿವೆ. 2024-25 ರಲ್ಲಿ ನಮ್ಮ ಸರ್ಕಾರ ರೋಣ, ಸಂಡೂರು ಮತ್ತು ಕೊಪ್ಪಳದಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದೆ. 2025-26 ರಲ್ಲಿ 6 ಜಿಟಿಟಿಸಿ ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದ್ದೇವೆ. ಇಡೀ ರಾಜ್ಯಕ್ಕೆ ರಾಜ್ಯದಲ್ಲಿ 7 ಜಿಟಿಟಿಸಿ ಗಳನ್ನು ನೀಡಿದರೆ ಅದರಲ್ಲಿ ಉತ್ತರ ಕರ್ನಾಟಕಕ್ಕೆ 6 ಜಿಟಿಟಿಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಸಂಡೂರಿನಲ್ಲಿ ಒಂದು ಮೆಗಾ ಸ್ಕಿಲ್ ಪಾರ್ಕ್ ಅನ್ನು ಸ್ಥಾಪಿಸುತ್ತಿದ್ದೇವೆ. ಇದು ನಮ್ಮ ಬದ್ಧತೆ. ಈ ಭಾಗದ ಯುವಕರು ಹೆಚ್ಚು ಕೌಶಲ್ಯ ತರಬೇತಿಯನ್ನು ಪಡೆದು ಉದ್ಯೋಗಗಳನ್ನು ಪಡೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ಒಟ್ಟಾರೆ 5,306 ಹಾಸ್ಟೆಲ್‌ಗಳಿವೆ. ಅದರ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿ 2,524 ಹಾಸ್ಟೆಲ್‌ಗಳಿವೆ. ಶೇ. 47.56 ರಷ್ಟಾಗುತ್ತದೆ ಎಂದರು.
ರಾಜ್ಯದಲ್ಲಿ ಕ್ರೈಸ್ ಅಡಿಯಲ್ಲಿ ಒಟ್ಟು 788 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 153 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, 2024-25 ರಲ್ಲಿ ಯಾವುದೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ ಎಂದು ತಿಳಿಸಿದರು.
ಆರ್. ಅಶೋಕ್ ಅವರು ಸುಳ್ಳು ಹೆಳುವುದೇ ವಿರೋಧ ಪಕ್ಷದವರ ಕೆಲಸ ಎಂದು ಭಾವಿಸಿದ್ದಾರೆ. ಹಾಗಾಗಿ ಅನೇಕರು ಈ ಸದನದಲ್ಲಿ ನಿಂತು ರಾಜಾರೋಷವಾಗಿ ಪುಂಖಾನುಪುಂಖವಾಗಿ ಸುಳ್ಳು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ 2024-25ರಲ್ಲಿ 53 ಪದವಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ. ಅದು ಸುಳ್ಳು. ವಾಸ್ತವವಾಗಿ 2024-25 ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಯಾವ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿರುವುದಿಲ್ಲ. ಪಿಯುಸಿ ಯಲ್ಲಿ ಕಲಬುರಗಿ ವಿಭಾಗದಲ್ಲಿ ಕೇವಲ 2 ಕಾಲೇಜುಗಳಲ್ಲಿ ಮಾತ್ರ ಶೂನ್ಯ ಫಲಿತಾಂಶ ಬಂದಿದೆ.
ರಾಜ್ಯದಲ್ಲಿ 1,245 ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 665 ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಿವೆ. ಶೇ.53.42 ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿಯೇ ಇವೆ ಎಂದರು.
ರಾಜ್ಯದಲ್ಲಿ 1,414 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿವೆ. ಅವುಗಳಲ್ಲಿ ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳಲ್ಲಿ 604 ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಿವೆ. ಹಾಗಾಗಿ ನಿಮ್ಮ ಸರ್ಕಾರದ ಸಾಧನೆಗಳನ್ನು ಗಮನಿಸುತ್ತಿದ್ದೆ. ಉದಾಹರಣೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿದ ಹಾಸ್ಟೆಲ್‌ಗಳು. ರಾಜ್ಯದಲ್ಲಿ ಇದುವರೆಗೆ 2,659 ಹಾಸ್ಟೆಲುಗಳನ್ನು ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ 2013 ರಿಂದ 2018 ರವರೆಗೆ 543 ಹಾಸ್ಟೆಲುಗಳನ್ನು ನಮ್ಮ ಸರ್ಕಾರ ನಿರ್ಮಿಸಿತ್ತು. ಈಗ ಈ ಎರಡೂವರೆ ವರ್ಷಗಳಲ್ಲಿ ಮತ್ತೆ ಹೊಸದಾಗಿ 220 ಹಾಸ್ಟೆಲುಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. 763 ಹಾಸ್ಟೆಲುಗಳನ್ನು ಈ ಅವಧಿಯಲ್ಲಿ ನಾವು ಅನುಮೋದನೆ ಮಾಡಲಾಗಿದೆ ಎಂದರು.
ನಿಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಕೇವಲ 5 ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿದ್ದೀರಿ. ಆದರೂ ಉದ್ದುದ್ದದ ಭಾಷಣ ಮಾಡುತ್ತೀರಿ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವುದರ ಕುರಿತು ಮೌಲ್ಯಮಾಪನ ನಡೆಯಬೇಕಾಗಿರುವುದು 2028 ರ ಚುನಾವಣೆಯಲ್ಲಿ. ಆಗ 2013 ರಿಂದ 2018 ರವರೆಗಿನ ನಮ್ಮ ಪ್ರಣಾಳಿಕೆ, ಈ 2023 ರಲ್ಲಿ ನಾವು ರಚಿಸಿದ ಪ್ರಣಾಳಿಕೆಯನ್ನು ನಿಮ್ಮ 2018ರ ಪ್ರಣಾಳಿಕೆ ಜೊತೆ ಹೋಲಿಕೆ ಮಾಡಿ ಚುನಾವಣೆಗೆ ಹೋಗೋಣ. ಅದುವರೆಗೆ ವಾಸ್ತವಾಂಶವನ್ನು ಆಧರಿಸಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಿ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾದ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಸಂಖ್ಯೆ 2005. ಅವುಗಳಲ್ಲಿ 923 ಹಾಸ್ಟೆಲ್‌ಗಳನ್ನು ಉತ್ತರ ಕರ್ನಾಟಕದಲ್ಲಿಯೇ ನಿರ್ಮಿಸಲಾಗಿದೆ. ಶೇ. 46.07 ರಷ್ಟು ಹಾಸ್ಟೆಲ್- ವಸತಿ ಶಾಲೆಗಳನ್ನು ಈ ಭಾಗದಲ್ಲಿ ನಿರ್ಮಿಸಲಾಗಿದೆ ಎಂದರು..
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2013-14 ರಿಂದ ಈವರೆಗೆ ಒಟ್ಟು 630 ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ 2018-19ರ ಸಮ್ಮಿಶ್ರ ಸರ್ಕಾರವೂ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 67 ವಸತಿ ಶಾಲೆ ಮತ್ತು ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ಆದರೆ 2013-18 ಮತ್ತು 2023 ರಿಂದ ಈ ವರೆಗೆ 563 ನ್ನು ಮಂಜೂರು ಮಾಡಲಾಗಿದೆ ಎಂದರು.
ಆರೋಗ್ಯ ಕೇಂದ್ರಗಳು
ಶಶಿಕಲಾ ಜೊಲ್ಲೆ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ 1,483 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೆ ಈ ಭಾಗದಲ್ಲಿ 873 ಇವೆ ಎಂದಿದ್ದಾರೆ.
ವಾಸ್ತವ ಅಂಕಿ ಅಂಶಗಳು ಈ ರೀತಿ ಇವೆ. ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಉಪ ಕೇಂದ್ರಗಳೂ ಸೇರಿ 11,524 ಆರೋಗ್ಯ ಕೇಂದ್ರಗಳು ಇವೆ. ಇದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 4,604 ಆರೋಗ್ಯ ಕೇಂದ್ರಗಳಿವೆ. ಶೇ. 40 ರಷ್ಟು ಆರೋಗ್ಯ ಕೇಂದ್ರಗಳು ಉತ್ತರ ಕರ್ನಾಟಕ ಭಾಗದಲ್ಲಿವೆ ಎಂದರು.
ಮನೆಗಳು
2013-18 ರಿಂದ ಈ ವರೆಗೆ 27.43 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಉತ್ತರ ಕರ್ನಾಟಕದಲ್ಲಿ 14.76 ಲಕ್ಷ ಮನೆಗಳನ್ನು ನಿರ್ಮಿಸಲು ನೆರವು ನೀಡಲಾಗಿದೆ. ಶೇ.54 ರಷ್ಟು ಮನೆಗಳನ್ನು ಈ ಭಾಗದಲ್ಲಿಯೇ ನಿರ್ಮಿಸಲಾಗಿದೆ. ಆದರೆ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಕೇವಲ 3.09 ಲಕ್ಷ ಮನೆಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಇನ್ನುಳಿದ 11.66 ಲಕ್ಷ ಮನೆಗಳನ್ನು 2013-18 ರವರೆಗೆ ಮತ್ತು ಈ ಅವಧಿಯಲ್ಲಿ ನಾವೆ ನಿರ್ಮಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾದ ಮನೆಗಳಲ್ಲಿ ಶೇ. 79 ರಷ್ಟು ಮನೆಗಳನ್ನು ನಮ್ಮ ಸರ್ಕಾರ ನಿರ್ಮಿಸಿದೆ ಎಂದು ತಿಳಿಸಿದರು.
ಬಸ್ಸುಗಳ ಖರೀದಿ
ಅರವಿಂದ ಬೆಲ್ಲದ್ ಅವರು ಬಸ್ಸುಗಳ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯವರಿಗೆ ಯಾವ ನೈತಿಕತೆಯಿದೆಯೆಂದು ಬಸ್ಸುಗಳ ಬಗ್ಗೆ ಮಾತಾಡುತ್ತಾರೆ? ತೇಜಸ್ವಿ ಸೂರ್ಯ ಸರ್ಕಾರ ಯಾಕೆ ಬಸ್ಸು ಓಡಿಸಬೇಕು? ಅದನ್ನು ಖಾಸಗಿಯವರಿಗೆ ಕೊಡಬೇಕು ಎಂದು ಹೇಳಿದಾಗ ಅಶೋಕ್, ಬೆಲ್ಲದ್ ಅವರು ಹೇಳಿಕೆ ಹಿಂಪಡೆಯುವಂತೆ ಒತ್ತಾಯಿಸಿದ್ದರಾ? ಅವರಿಗೆ ಬುದ್ಧಿ ಹೇಳಿದ್ರಾ? ರಾಜ್ಯದಲ್ಲಿ 2013-14 ರಿಂದ 2025-26 ರವರೆಗೆ ಖರೀದಿಸಿದ 21,459 ಬಸ್ಸುಗಳನ್ನು ಖರೀದಿಸಲಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ನೇತೃತ್ವದ ಸರ್ಕಾರಗಳು ಈ ಭಾಗಕ್ಕೆ ಬಸ್ಸುಗಳನ್ನೆ ನೀಡಲಿಲ್ಲ.
ರಾಜ್ಯದಲ್ಲಿ ಒಟ್ಟು 26,335 ಬಸ್ಸುಗಳಿದ್ದು ವಾಯುವ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಾರಿಗೆ ಸಂಸ್ಥೆಗಳಲ್ಲಿ 10,224 ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ. ಶೇ.39 ರಷ್ಟು ಬಸ್ಸುಗಳು ಈ ಭಾಗದಲ್ಲಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಭಾಗಕ್ಕೆ 8,044 ಬಸ್ಸುಗಳನ್ನು ಖರೀದಿಸಿ ಒದಗಿಸಿದೆ. ಬಿಎಂಟಿಸಿಯನ್ನು ಹೊರತು ಪಡಿಸಿದರೆ ಒಟ್ಟಾರೆ ಖರೀದಿಸಿದ ಬಸ್ಸುಗಳಲ್ಲಿ ಅತಿ ಹೆಚ್ಚು ಬಸ್ಸುಗಳನ್ನು ಈ ಭಾಗಕ್ಕೆ ನೀಡಿದ್ದೇವೆ. ಈ 12 ವರ್ಷಗಳಲ್ಲಿ ಸರ್ಕಾರಗಳು ಖರೀದಿಸಿದ 21,459 ಬಸ್ಸುಗಳಲ್ಲಿ ಬಿಎಂಟಿಸಿಗೆ 6,526 ಬಸ್ಸುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಅರವಿಂದ ಬೆಲ್ಲದ್ ಅವರು ಹೇಳಿದ್ದ ಮತ್ತೊಂದು ಸುಳ್ಳು ನಂಜುಂಡಪ್ಪನವರ ಸಮಿತಿ ನೀಡಿದ್ದ ವರದಿ ಹಾಗೂ ಕೆಕೆಆರ್‌ಡಿಬಿ ಅನುದಾನಗಳು ಎರಡೂ ಸೇರಿಸಿದರೂ ಒಟ್ಟು ಬಜೆಟ್‌ನ ಎದುರಿಗೆ ಶೇ.1 ರಷ್ಟು ಅನುದಾನ ಮಾತ್ರ ಈ ಭಾಗಕ್ಕೆ ಲಭಿಸಿದೆ ಎಂದು ಹೇಳಿದ್ದಾರೆ. ಆ ಅನುದಾನ ಸುಮಾರು 31 ರಿಂದ 32 ಸಾವಿರ ಕೋಟಿ, ಅದು ವಿಶೇಷ ಅನುದಾನ. ಒಂದು ಬಜೆಟ್‌ನಲ್ಲಿ ನಿಮಗೆ ಗೊತ್ತಿರುವ ಹಾಗೆ ಶೇ.70-80 ರಷ್ಟು ರೆವೆನ್ಯೂ ವೆಚ್ಚಗಳಿಗೆ ಖರ್ಚಾಗುತ್ತದೆ. ಅದರಲ್ಲಿ ಸಂಬಳ, ಸಾರಿಗೆ, ಪಿಂಚಣಿ, ಇತ್ಯಾದಿಗಳೆಲ್ಲವೂ ಸೇರಿರುತ್ತವೆ. ಬರೀ ದಕ್ಷಿಣ ಕರ್ನಾಟಕದ ನೌಕರರೇ ರಾಜ್ಯದಲ್ಲಿದ್ದಾರಾ? ಸಬ್ಸಿಡಿಗಳು, ಪ್ರೋತ್ಸಾಹ ಧನಗಳು, ವಿವಿಧ ಸಾಮಾಜಿ ಭದ್ರತೆ ಪಿಂಚಣಿಗಳು ಇವುಗಳ ಫಲಾನುಭವಿಗಳು ದಕ್ಷಿಣ ಕರ್ನಾಟಕದವರು ಮಾತ್ರವಾ? ಎಂದು ಪ್ರಶ್ನಿಸಿದರು.
ನೀವೆಲ್ಲರೂ ಉತ್ತರ ಕರ್ನಾಟಕದ ಮುಗ್ಧ ಜನರಲ್ಲಿ ಉತ್ತರ ಕರ್ನಾಟಕ – ದಕ್ಷಿಣ ಕರ್ನಾಟಕ ಎಂದು ಹೊಡೆದಾಡುವ ವಿಷಬೀಜವನ್ನು ಬಿತ್ತಲು ಪ್ರಯತ್ನ ಮಾಡುತ್ತಿದ್ದೀರಿ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆದ ಮೇಲೆ ಉತ್ತರ ಕರ್ನಾಟಕದ ರಸ್ತೆಗಳಿಗೆ ನೀರಾವರಿ ಯೋಜನೆಗಳಿಗೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಎಷ್ಟು ಅನುದಾನಗಳನ್ನು ನೀಡಿದ್ದೇನೆ ಎಂಬುದು ನಿಮಗೆಲ್ಲ ಗೊತ್ತಿದೆ. ಆದರೂ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ನಮ್ಮ ಸರ್ಕಾರದ ಪ್ರಾಥಮಿಕ ಮತ್ತು ಪ್ರಧಾನ ಆದ್ಯತೆ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸುವುದೆ ಆಗಿದೆ. ಹಾಗಾಗಿಯೇ, ಹೆಚ್ಚೆಚ್ಚು ಅನುದಾನಗಳನ್ನು ಹಲವು ಸಂಕಷ್ಟಗಳ ಮಧ್ಯದಲ್ಲಿಯೂ ಈ ಭಾಗದ ಅಭಿವೃದ್ಧಿಗೆ ನೀಡಲು ಪ್ರಯತ್ನಿಸುತ್ತಿದ್ದೇವೆ.
ದಯಮಾಡಿ ನಿಮ್ಮನ್ನು ವಿನಂತಿ ಮಾಡುತ್ತೇನೆ. ಜನರ ಮನಸಲ್ಲಿ ವಿಷಬೀಜವನ್ನು ಬಿತ್ತಬೇಡಿ. ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರ ಆತ್ಮಗಳಿಗೆ ದ್ರೋಹ ಎಸಗಬೇಡಿ ಎಂದು ತಿಳಿಸಿದರು..
ವಿರೋಧ ಪಕ್ಷದ ನಾಯಕರಾದ ಶ್ರೀ.ಆರ್.ಅಶೋಕ್ ಮತ್ತು ಉಪನಾಯಕರಾದ ಶ್ರೀ.ಅರವಿಂದ್ ಬೆಲ್ಲದ್ ಅವರು ನಮ್ಮ ಪ್ರಣಾಳಿಕೆಯ ಕುರಿತು ಮಾತನಾಡಿದ್ದಾರೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳ ಮೇಲೆ ಚರ್ಚೆ ನಡೆಸುವುದು ಒಳ್ಳೆಯ ಸಂಪ್ರದಾಯ. ನನ್ನ ರಾಜಕೀಯ ಇತಿಹಾಸದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳ ಮೇಲೆ ವ್ಯಾಪಕವಾಗಿ ಚರ್ಚೆ ನಡೆಸಿದ್ದು ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಲೆ. ಯಾಕೆಂದರೆ ಕೊಟ್ಟ ಮಾತಿನಂತೆ ನಡೆದ ಇತಿಹಾಸ ನಮ್ಮ ಹಿನ್ನೆಲೆಯಾಗಿದೆ. 2013-18 ರವರೆಗೆ ನಾವು ಕೊಟ್ಟಿದ್ದ 165 ಭರವಸೆಗಳಲ್ಲಿ 158 ನ್ನು ಈಡೇರಿಸಿ ಅವುಗಳ ಜೊತೆಗೆ ಹೊಸದಾಗಿ 30 ಪೈಲೆಟ್ ಯೋಜನೆಗಳನ್ನು ಪ್ರಾರಂಭಿಸಿದ್ದೆವು ಎಂದರು.
ಪ್ರಸ್ತುತ ನಾವು ಘೋಷಣೆ ಮಾಡಿರುವ ಸುಮಾರು 593 ಭರವಸೆಗಳಲ್ಲಿ 3 ಬಜೆಟ್‌ಗಳಲ್ಲಿ ಈಗಾಗಲೆ 243 ಘೋಷಣೆಗಳನ್ನು ಜಾರಿ ಮಾಡಿದ್ದೇವೆ. ಅವುಗಳ ಮಾಹಿತಿ ಅಗತ್ಯವಿದ್ದರೆ ನಿಮಗೆ ಕಳುಹಿಸಿ ಕೊಡುತ್ತೇನೆ. ಶೇ. 41 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ.
ನಮಗೆ ಇನ್ನೂ ಎರಡೂವರೆ ವರ್ಷ ಇದೆ. ಈ ಅವಧಿಯಲ್ಲಿ ಉಳಿದ ಭರವಸೆಗಳನ್ನು ಈಡೇರಿಸುತ್ತೇವೆ ಮತ್ತು ಮುಂದಿನ ಅವಧಿಗೂ ನಾವೆ ಆರಿಸಿ ಬರುತ್ತೇವೆ. ಉತ್ತರ ಕರ್ನಾಟಕದ ಚಿತ್ರಣವನ್ನು ಸಮಗ್ರವಾಗಿ ಬದಲಾಯಿಸುತ್ತೇವೆ. ಸರ್ಕಾರಗಳಿಗೆ ಕಂಟಿನ್ಯುಟಿ ಇದ್ದರೆ ಕೈಗೊಂಡ ಕಾಮಗಾರಿಗಳನ್ನು ಸಮರ್ಥವಾಗಿ ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
2018 ರಲ್ಲಿ ನೀವು ನೀಡಿದ್ದ ಭರವಸೆಗಳು ಎಷ್ಟು? ಅವುಗಳಲ್ಲಿ ಎಷ್ಟನ್ನು ಈಡೇರಿಸಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತೀರಾ? ನಾನು ವಿರೋಧ ಪಕ್ಷದಲ್ಲಿದ್ದಾಗಿನಿಂದಲೂ ಇದರ ಕುರಿತು ವಿವರಿಸುತ್ತಿದ್ದೇನೆ. ನೀವು ಸ್ಪಷ್ಟೀಕರಣ ಕೂಡ ನೀಡಿಲ್ಲ. ನೀವು 600 ಕ್ಕಿಂತ ಹೆಚ್ಚು ಭರವಸೆಗಳನ್ನು ಕೊಟ್ಟಿದ್ರಿ ಅವುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಈಡೇರಿಸಿದ್ದು 25 ಮತ್ತು ಅರ್ಧ ಬರ್ದ ಈಡೇರಿಸಿದ್ದು 35 ಭರವಸೆಗಳನ್ನು. ಎರಡೂ ಸೇರಿ ಕೇವಲ 60 ಭರವಸೆಗಳನ್ನು ಮಾತ್ರ ಈಡೇರಿಸಲು ನಿಮ್ಮಿಂದ ಸಾಧ್ಯವಾಯಿತು. ಅಂದರೆ ನೀವು ಹೇಳಿದ್ದರಲ್ಲಿ ಶೇ. 10 ರಷ್ಟು ಮಾತ್ರ. ಪರಿಸ್ಥಿತಿ ಹೀಗಿರುವಾಗ ನಿಮಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದವರ ಮಾಹಿತಿಗೆ ಇರಲಿ. ಕಳೆದ 5 ವರ್ಷಗಳಿಂದ ನಮ್ಮ ರಾಜ್ಯಕ್ಕೆ ಆದ ಅನ್ಯಾಯ 1.25 ಲಕ್ಷ ಕೋಟಿ ರೂ. ಪರಿಸ್ಥಿತಿ ಹೀಗಿದ್ದಾಗ ರಾಜ್ಯವನ್ನು ಮುನ್ನಡೆಸುವುದು ಹೇಗೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 72 ಮೆಡಿಕಲ್ ಕಾಲೇಜು ಇವೆ. ಈಗ 2 ಕಾಲೇಜುಗಳಿಗೆ ಅನುಮೋದನೆ ನೀಡಿದ್ದೇವೆ. ಅದರಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳು ಇವೆ. ಆ ಸರ್ಕಾರಿ ಮೆಡಿಕಲ್ ಕಾಲೇಜುಗಳು ಎಲ್ಲೆಲ್ಲಿವೆ? ಅವುಗಳನ್ನು ಯಾರು ಕೊಟ್ಟಿದ್ದು ಅಂತ ನಿಮಗೆ ತಿಳಿದಿರಬೇಕು ಅಂತ ಹೇಳ್ತಿದೀನಿ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ರಾಯಚೂರು, ಗದಗ, ಯಾದಗಿರಿ, ಕೊಪ್ಪಳ, ಹಾವೇರಿ ಇವುಗಳನ್ನು ಯಾರು ಮಾಡಿದ್ದು ಅಂತ ತಿಳಿದುಕೊಳ್ಳಿ. ಧಾರವಾಡದಲ್ಲಿ ನಿಮ್ಹಾನ್ಸ್ ಕೇಂದ್ರ, ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ, ಬೆಳಗಾವಿ, ಬೀದರ್, ರಾಯಚೂರು, ಕಲಬುರಗಿಯಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, ತಾಯಿ ಮಕ್ಕಳ ಆಸ್ಪತ್ರೆಗಳನ್ನು ಪ್ರಾರಂಭಿಸಿದ್ದು ನಾವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರಕ್ಕೆ 1,632 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ ಎಂದರು.
ಬೆಲ್ಲದ್ ಅವರೆ, 2,404 ಹಾಸಿಗೆಯ ಕಿಮ್ಸ್-ಹುಬ್ಬಳ್ಳಿ ಸಂಸ್ಥೆಗೆ ರೂ.24 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಆದರೆ 300 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ರೂ.75 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹೇಳಿದ್ದೀರಿ. ವಾಸ್ತವ ಏನೆಂದರೆ, ಕಿಮ್ಸ್ ಸಂಸ್ಥೆಯನ್ನು 2022ರಲ್ಲಿ 1,200 ಹಾಸಿಗೆ ಸಾಮರ್ಥ್ಯದಿಂದ 2,404 ಹಾಸಿಗೆಗೆ ಹೆಚ್ಚಿಸಲಾಗಿದೆ. ಆದರೆ, BMCRI ಸಂಸ್ಥೆಯು 2005 ಹಾಸಿಗೆ ಸಾಮರ್ಥ್ಯ ಹೊಂದಿದೆ. ಇದರ ಅಧೀನದಲ್ಲಿ PMSSY, ಮಿಂಟೋ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ವಿಕ್ಟೋರಿಯ ಆಸ್ಪತ್ರೆ ಮತ್ತು ವಾಣಿ ವಿಲಾಸ ಆಸ್ಪತ್ರೆಗಳು ಒಳಗೊಂಡಂತೆ 5 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಈ ಎಲ್ಲಾ ಆಸ್ಪತ್ರೆಗಳು ಹೊರರೋಗಿ ಮತ್ತು ಒಳರೋಗಿ ತಪಾಸಣೆ ನಿರ್ವಹಣೆಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇರುತ್ತದೆ ಎಂದರು.
ಧಾರವಾಡದ ಡಿಮಾನ್ಸ್‌ಗೆ ಕಡಿಮೆ ಅನುದಾನದ ಬಗ್ಗೆ ಮಾತನಾಡಿದ್ದೀರಿ. ಡಿಮ್ಹಾನ್‌ನಲ್ಲಿ 225 ಬೆಡ್ ಸಾಮರ್ಥ್ಯ ಹೊಂದಿದೆ, ಆದರೆ ಬೆಂಗಳೂರಿನ ನಿಮಾನ್ಸ್‌ನಲ್ಲಿ 1,098 ಬೆಡ್ ಸಾಮರ್ಥ್ಯ ಹೊಂದಿದೆ ಹಾಗೂ ನಿಮಾನ್ಸ್ನಲ್ಲಿ ಪ್ರತಿ ದಿನ 5,000 ಹೊರರೋಗಿಗಳು ತಪಾಸಣೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ನಿಮ್ಹಾನ್ಸ್ ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರದ್ದಲ್ಲ. ರಾಜ್ಯ ಸರ್ಕಾರ ಅದಕ್ಕೆ ಒಂದಿಷ್ಟು ಅನುದಾನಗಳನ್ನು ಕೊಡುತ್ತಿದೆ. ಅದು ಮೊದಲಿನಿಂದಲೂ ಬಂದಿರುವ ಪದ್ಧತಿ.
ಬಾದಾಮಿ ಕ್ಷೇತ್ರದ ಬಗ್ಗೆ ಮಾತನಾಡಿದ್ದೀರಿ, ನಾನು ಏನು ಅಭಿವೃದ್ದಿ ಕೆಲಸ ಮಾಡಿದ್ದೀನಿ ಅಂತ ಬಾದಾಮಿ ಜನರನ್ನು ಕೇಳಿ. ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುತ್ತಿದ್ದೇವೆ. ಈಗಾಗಲೇ 450 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದೇವೆ ಎಂದು ತಿಳಿಸಿದರು.
ಹಕ್ಕುಪತ್ರಗಳು
ಚಾರಿತ್ರಿಕವಾಗಿ ಉತ್ತರ ಕರ್ನಾಟಕದ ಗ್ರಾಮಗಳ ಗಾತ್ರ ದೊಡ್ಡವು. ದಕ್ಷಿಣ ಕರ್ನಾಟಕದಲ್ಲಿ ಸಂಖ್ಯೆ ಹೆಚ್ಚು. ರಾಜ್ಯದಲ್ಲಿ 29,872 ಕಂದಾಯ ಗ್ರಾಮಗಳಿವೆ. ಅವುಗಳಲ್ಲಿ 10,233 ಗ್ರಾಮಗಳು ಉತ್ತರ ಕರ್ನಾಟಕದಲ್ಲಿವೆ. ಶೇ. 34.25 ರಷ್ಟು ಗ್ರಾಮಗಳು ಈ ಭಾಗದಲ್ಲಿವೆ.
ನಮ್ಮ ಸರ್ಕಾರ 2016 ರಲ್ಲಿ ಹಟ್ಟಿ, ಹಾಡಿ, ತಾಂಡಾ, ಮಜರೆ, ಪಾಳ್ಯ ಮುಂತಾದವುಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ತೀರ್ಮಾನಿಸಿದೆವು. ಅದರ ಪ್ರಕಾರ ರಾಜ್ಯದಲ್ಲಿ ಒಟ್ಟು 6,754 ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗುತ್ತಿದೆ. ಅವುಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 2,498 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಲಾಗುತ್ತಿದೆ. ಅಂದರೆ ಶೇ.36.98 ರಷ್ಟು ಕಂದಾಯ ಗ್ರಾಮಗಳನ್ನು ಉತ್ತರ ಕರ್ನಾಟಕದಲ್ಲಿ ರಚಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 4,57,500 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದ್ದು, ಈಗಾಗಲೇ 2,08,328 ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.
ಈ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿ, 2,88,016 ಹಕ್ಕುಪತ್ರಗಳನ್ನು ನೀಡಲಾಗುತ್ತಿದ್ದು, ಈಗಾಗಲೇ 1,31,935 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಶೇ.63.33 ಹಕ್ಕುಪತ್ರಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿಯೆ ನೀಡಲಾಗಿದೆ. ಈಗಾಗಲೇ ವಿತರಿಸಿರುವ ಹಕ್ಕುಪತ್ರಗಳನ್ನು ಹೊರತುಪಡಿಸಿ 1,56,081 ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಂದಾಯ ಗ್ರಾಮ ಯೋಜನೆ ನಮ್ಮ ಸರ್ಕಾರದ ಯೋಜನೆ. ನಿಮ್ಮ ಸರ್ಕಾರ ಅದರ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕೆ.ಪಿ.ಎಸ್. ಶಾಲೆಗಳು
ನಮ್ಮ ಸರ್ಕಾರ ಬಂದ ಮೇಲೆ ಕೆಪಿಎಸ್(ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದೆ. ಸದ್ಯಕ್ಕೆ 900 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಈ 900 ಶಾಲೆಗಳಲ್ಲಿ 333 ಶಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಾಗೂ 215 ಶಾಲೆಗಳು ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಾರಂಭವಾಗುತ್ತಿವೆ. ಶೇ.60.88 ರಷ್ಟು ಕೆಪಿಎಸ್ ಶಾಲೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ
ವಿರೋಧ ಪಕ್ಷದ ನಾಯಕರು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾವು ಪ್ರವಾಸೋದ್ಯಮಯಲ್ಲೂ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದೇವೆ. ಅದಕ್ಕಾಗಿ ‘ಪ್ರವಾಸೋದ್ಯಮ ನೀತಿ 2024-29’ ಅನ್ನು ರೂಪಿಸಿ ಜಾರಿಗೆ ತಂದಿದ್ದೇವೆ.
25,000 ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳಿವೆ. ಇವುಗಳ ಸಂರಕ್ಷಣೆ ಹಾಗೂ ಮೂಲಸೌಕರ್ಯ ಒದಗಿಸಲು ‘ನಮ್ಮ ಸ್ಮಾರಕ ದತ್ತು’ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಯ ಜಾಗೃತಿ ಯಾತ್ರೆಯನ್ನು ನಾವು ಮೊದಲು ಪ್ರಾರಂಭಿಸಿದ್ದೇ ಉತ್ತರ ಕರ್ನಾಟಕದ ಬೀದರ್‌ನಿಂದ ಬಾಗಲಕೋಟೆವರೆಗೆ.
ಉತ್ತರ ಕರ್ನಾಟಕ ಭಾಗದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಪರಿಸರದ ಸಮಗ್ರ ಅಭಿವೃದ್ಧಿಯ ಸಲುವಾಗಿ ‘ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ-2023’ ಅನ್ನು ಜಾರಿಗೆ ತಂದಿದ್ದೇವೆ. ಈಗಾಗಲೇ ವಿಶೇಷ ಸಹಾಯಧನ (SASCI)ದಡಿ 100 ಕೋಟಿ ರೂ. ಮತ್ತು ಪ್ರಸಾದ್ ಯೋಜನೆಯಡಿ 20 ಕೋಟಿ ರೂ. ಮಂಜೂರು ಮಾಡಿದ್ದೇವೆ ಎಂದರು.
ಬಾಗಲಕೋಟೆ ಜಿಲ್ಲೆಯ ಐಹೊಳೆ ಕ್ಷೇತ್ರದ ಸಂರಕ್ಷಣೆ ಮತ್ತು ಪುನರುತ್ಥಾನಕ್ಕೆ ಮುಂದಡಿ ಇರಿಸಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಪುನರ್ವಸತಿ ಯೋಜನೆಗಳನ್ನು ಮತ್ತು ಸ್ಮಾರಕಗಳ ಪುನರುತ್ಥಾನ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಇದಲ್ಲದೆ, ಬೀದರ್ ಕರೇಜ್, ಗೂಗಲ್ ಬ್ಯಾರೇಜ್, ಸಿರಿವಾಳ ದೇವಾಲಯಗಳು, ನಾಗಾವಿಯ ಪ್ರಾಚೀನ ವಿಶ್ವ ವಿದ್ಯಾಲಯ, ಮುಂತಾದ ಐತಿಹಾಸಿಕ ಮಹತ್ವದ ಹನ್ನೊಂದು ತಾಣಗಳ ಮರುಸ್ಥಾಪನೆ ಮತ್ತು ಮೂಲಸೌಕರ್ಯ ಕಲ್ಪಿಸುತ್ತಿದ್ದೇವೆ. ಅಂಜನಾದ್ರಿ ಬೆಟ್ಟವನ್ನು 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 100 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಲ್ಲಮಪ್ರಭು ಗುಹಾಂತರ ದೇವಾಲಯ ಅಭಿವೃದ್ಧಿ ಮತ್ತು ಮಳಖೇಡ ಕೋಟೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಯೋಜನಾ ವರದಿಯನ್ನು ತಯಾರಿಸಲು ಕಾರ್ಯಾದೇಶ ನೀಡಿದ್ದೇವೆ. ವಿಜಯನಗರ ಜಿಲ್ಲೆಯ ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ಡೆಂಕನಮರಡಿ ಪ್ರವಾಸಿ ತಾಣವನ್ನು 30 ಕೋಟಿ ರೂ. ಅನುದಾನದಲ್ಲಿ ಕೆಕೆಆರ್‌ಡಿಬಿ ವತಿಯಿಂದ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ನೀರಾವರಿ
ಕಳೆದ ಎರಡೂವರೆ ವರ್ಷಗಳಲ್ಲಿ ಕೆ.ಬಿ.ಜೆ.ಎನ್.ಲ್. ಮತ್ತು ಕೆ.ಎನ್.ಎನ್.ಎಲ್. ವತಿಯಿಂದ 59,779 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ:
ನಾವು ಉತ್ತರ ಕರ್ನಾಟಕದ ನೀರಾವರಿ ವಿಚಾರದಲ್ಲಿ ಏನು ಹೇಳಿದ್ದೇವೊ ಅದನ್ನು ಮಾಡಿಯೇ ತೀರುತ್ತೇವೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ಎತ್ತರ ಮಾಡುವುದರ ಮೂಲಕ ರಾಜ್ಯಕ್ಕೆ ಹಂಚಿಕೆಯಾದ ನಮ್ಮ ಪಾಲಿನ ನೀರನ್ನು ಸಂಪೂರ್ಣ ಬಳಸಿಕೊಳ್ಳುತ್ತೇವೆ. ಆದ್ದರಿಂದ ಈ ಕೂಡಲೆ ಕೇಂದ್ರ ಸರ್ಕಾರವು ಐತೀರ್ಪನ್ನು ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಉಭಯ ಸದನಗಳ ಮೂಲಕ ನಿರ್ಣಯ ಮಾಡಿ ಕಳುಹಿಸಬೇಕು ಎಂದು ನುಡಿದರು.
ಬೊಮ್ಮಾಯಿಯವರು, ಕಾರಜೋಳ ಅವರು ಕೇಂದ್ರದಲ್ಲಿದ್ದಾರೆ. ಅವರು ಈ ಕುರಿತು ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಹಿಂದೆ ಬೊಮ್ಮಾಯಿಯವರು ಮುಖ್ಯ ಮಂತ್ರಿಗಳಿದ್ದಾಗ ಅಣೆಕಟ್ಟೆಯನ್ನು ಎರಡು ಹಂತಗಳಲ್ಲಿ ನಿರ್ಮಿಸಲು ಹಾಗೂ ಎರಡು ಹಂತಗಳಲ್ಲಿ ಭೂಸ್ವಾಧೀನ ಮಾಡಲು ಸಭೆಗಳನ್ನು ಮಾಡಿ ನಡಾವಳಿಗಳನ್ನು ಮಾಡಿದ್ದಾರೆ. ಆದರೆ ನಮ್ಮ ಸರ್ಕಾರ ಆಣೆಕಟ್ಟೆಯನ್ನು ಒಂದೇ ಬಾರಿಗೆ 519.16 ರಿಂದ 524.256 ಮೀಟರುಗಳಿಗೆ ಹೆಚ್ಚಿಸಲು ತೀರ್ಮಾನಿಸಿದೆ. ಹಾಗೂ ಸುಮಾರು 75,000 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ರೈತರಿಂದ ಕನ್ಸೆಂಟ್ ಮೂಲಕ ಖರೀದಿ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದ್ದೇವೆ ಹಾಗೂ ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ಖುಷ್ಕಿ ಭೂಮಿಗೆ 30 ಲಕ್ಷ ರೂ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಇದನ್ನು ಮಾಡುವುದಕ್ಕೂ ಮೊದಲು ಹಿಂದೆ ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಅಣೆಕಟ್ಟೆಯನ್ನು ಒಂದೇ ಬಾರಿಗೆ ಎತ್ತರಿಸಿದರೆ ಹಾಗೂ ಒಂದೇ ಬಾರಿಗೆ ಭೂ ಸ್ವಾಧೀನ ಮಾಡಿದರೆ, ಒಂದು ಎಕರೆಗೆ 40 ಲಕ್ಷ ನೀಡಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಮತ್ತು ಕಾಂಗ್ರೆಸ್ ನವರಿಗೆ ಚಿನ್ನದ ಕಿರೀಟ ತೊಡಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಪಾಪ ಗೋವಿಂದ ಕಾರಜೋಳ ಅವರು ರಾಜಕೀಯ ನಿವೃತ್ತಿ ಪಡೆಯುವುದು ಬೇಡ. ದಮನಿತ ವರ್ಗಗಳಿಂದ ಬಂದವರು ರಾಜಕಾರಣದಲ್ಲಿರಬೇಕು. ಆದರೆ ಬಿಜೆಪಿಯಂಥ ಜೀವವಿರೋಧಿಯಾದ ಪಕ್ಷದಲ್ಲಿರುವುದು ದುರಂತದ ಸಂಗತಿ ಅಷ್ಟೆ. ಆವರು ಹೇಳಿಕೆ ಕೊಡಲಿ, ಬಿಡಲಿ ನಾವು ಯೋಜನೆಯನ್ನು ಅನುಷ್ಠಾನ ಮಾಡಲು ಪ್ರಾರಂಭಿಸಿದ್ದೇವೆ. ಮುಂಬರುವ ಬಜೆಟ್‌ನಲ್ಲಿ ಹಣ ಒದಗಿಸಿ ಭೂ ಸ್ವಾಧೀನ ಮಾಡುತ್ತೇವೆ ಎಂದರು.
ಈ ಯೋಜನೆಯಿಂದ 9 ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ನೀರಾವರಿ ಕಲ್ಪಿಸಬಹುದು. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ನೀರಾವರಿಗೆ, ಕೃಷಿಗೆ ಅನುಕೂಲವಾಗುತ್ತದೆ ಎಂದರು.
ಕಳಸಾ-ಬಂಡೂರಿ ಯೋಜನೆ:
ಉತ್ತರ ಕರ್ನಾಟಕದ ಮಲಪ್ರಭಾ ನದಿ ಪಾತ್ರದ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ ಮತ್ತು ಬಾಗಲಕೋಟೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕಿತ್ತೂರು ಕರ್ನಾಟಕದ ಒಣ ಪ್ರದೇಶದ ಜನರಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆಗೆ ಮಹದಾಯಿ ನ್ಯಾಯಮಂಡಳಿ 2018 ರಲ್ಲೇ ತೀರ್ಪು ನೀಡಿ, 13.42 ಟಿಎಂಸಿ ನೀರು ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರವು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿ ಎಷ್ಟೋ ದಿನಗಳಾದವು ಎಂದರು.
ಮೋದಿ ಸರ್ಕಾರ ಕುಡಿಯುವ ನೀರಿಗೂ ರಾಜಕೀಯ ಮಾಡುತ್ತಿದೆ. ವನ್ಯಜೀವಿ ಮಂಡಳಿಯ ಅನುಮತಿ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡುತ್ತಿದೆ. ಗೋವಾ ಸರ್ಕಾರ ತಕರಾರು ತೆಗೆದಿದೆ ಎಂಬ ನೆಪ ಹೇಳಲಾಗುತ್ತಿದೆ. ಈ ವಿಷಯ ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಸಮಿತಿಯ ಮುಂದೆ ತೀರ್ಮಾನಕ್ಕೆ ಬಾರದೆ Defer ಮಾಡಲಾಗುತ್ತಿದೆ. ನಾನು ದಿನಾಂಕ 03.09.2025 ರಂದು ನೇರವಾಗಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಏನೂ ಆಗಿಲ್ಲ.
ಇದೇ ಕೇಂದ್ರ ಸರ್ಕಾರ, ಗೋವಾಕ್ಕೆ ವಿದ್ಯುತ್ ನೀಡುವ “ಗೋವಾ-ತಮ್ನಾರ್” ಯೋಜನೆಗೆ ಕರ್ನಾಟಕದ ಕಾಡಿನಲ್ಲಿ 14,000 ಮರಗಳನ್ನು ಕಡಿಯಲು ರಾತ್ರೋರಾತ್ರಿ ಅನುಮತಿ ನೀಡುತ್ತದೆ. ಆದರೆ ನಮ್ಮ ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಲು ಇವರಿಗೆ ಮನಸ್ಸು ಬರುವುದಿಲ್ಲ. ಇದು ಕನ್ನಡಿಗರ ಮೇಲಿನ ದ್ವೇಷವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ:
ಕೇಂದ್ರ ಸರ್ಕಾರದ ಘೋಷಣೆಗಳೆಲ್ಲ ಹುಸಿ ಘೋಷಣೆಗಳು. 2023-24ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಅವರು 5,300 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು. ಆದರೆ ಇವತ್ತಿನವರೆಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ ಎಂದು ನಾವು ಕೇಳುತ್ತಲೇ ಇದ್ದೇವೆ. ಇದಕ್ಕೆ ಸ್ಪಂದನೆಯೇ ಇಲ್ಲ. ಕೇಂದ್ರದ ಘೋಷಣೆಗಳು ಕಾಗದದ ಮೇಲೆಯೇ ಉಳಿದಿವೆ ಎಂದರು..
ನಾವು ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಗೆ 10,000 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದೇವೆ. ಉತ್ತರ ಕರ್ನಾಟಕದವರೇ ಆದ ಗೋವಿಂದ ಕಾರಜೋಳ ಅವರು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಅವರದೇ ಸರ್ಕಾರ ಕೇಂದ್ರದಲ್ಲಿದೆ. ಆದಷ್ಟು ಬೇಗ ಘೋಷಣೆ ಮಾಡಿಸಿ ಎಂದು ಈ ಸದನದ ಮೂಲಕ ಮನವಿ ಮಾಡುತ್ತೇನೆ ಎಂದರು.
ಮೇಕೆದಾಟು ಯೋಜನೆ:
ಮೇಕೆದಾಟು ಯೋಜನೆಗೆ ಇದ್ದ ದೊಡ್ಡ ಕಾನೂನು ತಡೆ ನಿವಾರಣೆಯಾಗಿದೆ. ದಿನಾಂಕ 13.11.2025 ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು Premature ಎಂದು ತಿರಸ್ಕರಿಸಿದೆ. ಈಗ ಚೆಂಡು ಸಂಪೂರ್ಣವಾಗಿ ಕೇಂದ್ರದ ಅಂಗಳದಲ್ಲಿದೆ. CWC ಮತ್ತು ಪರಿಸರ ಸಚಿವಾಲಯ ಅನುಮತಿ ನೀಡಬೇಕು. ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸುವ ಈ ಯೋಜನೆಗೆ ಇನ್ನು ಯಾವ ನೆಪವೂ ಅವರ ಬಳಿ ಉಳಿದಿಲ್ಲ ಎಂದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳು ಜಾರಿಯಾದರೆ ನಮ್ಮ ಉತ್ತರ ಕರ್ನಾಟಕದ ರಾಜ್ಯದ ಜನರು ಹೆಚ್ಚು ಕಬ್ಬು, ಭತ್ತ ಬೆಳೆದು ಉತ್ತರ ಭಾರತದವರಿಗಿಂತ ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತಾರೆ ಎನ್ನುವ ಹೊಟ್ಟೆ ಕಿಚ್ಚು ಕೇಂದ್ರ ಸರ್ಕಾರಕ್ಕೆ. ರಾಜ್ಯದ ರೈತರನ್ನು ತುಳಿಯುವುದೇ ಕೇಂದ್ರ ಸರ್ಕಾರ ಗುರಿಯನ್ನಾಗಿ ಮಾಡಿಕೊಂಡಿದೆ. ಈಗ ದೇಶದಲ್ಲಿ ಎಲ್ಲ ವಿಚಾರದಲ್ಲೂ ಮುಂದೆ ಇರುವ ನಮ್ಮ ರಾಜ್ಯವನ್ನು ಹಿಂದೆ ಹಾಕುವ ಹುನ್ನಾರ ಕೇಂದ್ರದ್ದು. ಜಿಎಸ್‌ಟಿ ಪಾಲಿನಲ್ಲೂ ಅನ್ಯಾಯ, ಬರ ಪರಿಹಾರದಲ್ಲೂ ಅನ್ಯಾಯ, ಈಗ ನೀರಾವರಿಯಲ್ಲೂ ಅನ್ಯಾಯ. ಕೇಂದ್ರದ ಅನುದಾನ ಬರಲಿ, ಬಿಡಲಿ. ನಾವು ನಮ್ಮ ಸ್ವಂತ ಬಲದ ಮೇಲೆ ಏನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದವರು ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ತಮ್ಮ ಸಂಸದರು, ಕೇಂದ್ರ ಸಚಿವರೊಂದಿಗೆ ದೆಹಲಿಗೆ ಹೋಗಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಅನುಮೋದನೆಗಳನ್ನು, ಅನುದಾನವನ್ನು ತರಲು ಒತ್ತಡ ಹೇರಬೇಕು ಎಂದರು.
ಕೆ.ಕೆ.ಆರ್.ಡಿ.ಬಿ ಗೆ ಅನುದಾನ ಮತ್ತು ವೆಚ್ಚ
ಅರವಿಂದ ಬೆಲ್ಲದ್ ಅವರು ಹಾಗೂ ವಿರೋಧ ಪಕ್ಷದ ಕೆಲವು ಸದಸ್ಯರು ಕೆಕೆಆರ್‌ಡಿಬಿ ಗೆ 5,000 ಕೋಟಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ, ನಾವು 2024-25 ರಿಂದಲೇ 5,000 ಕೋಟಿ ಅನುದಾನವನ್ನು ಒದಗಿಸುತ್ತಿದ್ದೇವೆ. ಕೆಕೆಆರ್‌ಡಿಬಿ ಗೆ ಇದುವರೆಗೆ 24,778 ಕೋಟಿ ರೂ. ಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ, 14,890 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಈ ವರ್ಷದ ಮಾರ್ಚ್ ಅಂತ್ಯದ ಒಳಗೆ 3 ರಿಂದ 4 ಸಾವಿರ ಕೋಟಿ ವೆಚ್ಚವಾಗಬಹುದೆಂಬ ಅಂದಾಜಿದೆ. ಎಸ್.ಸಿ.ಪಿ, ಟಿ.ಎಸ್‌ಪಿ ಅನುದಾನದಂತೆ ಕೆಕೆಆರ್‌ಡಿಬಿ ಅನುದಾನವೈ ಸಹ ಲ್ಯಾಪ್ಸ್ ಆಗುವುದಿಲ್ಲ ಎಂದರು.
ಮಾನ್ಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಎಂ.ಟಿ. ಕೃಷ್ಣಪ್ಪ, ವಿಜಯೇಂದ್ರ, ಮುಂತಾದವರು ತುಂಗಭದ್ರಾ ಜಲಾಶಯದ ಗೇಟುಗಳ ಕುರಿತು ಮಾತನಾಡಿದ್ದಾರೆ. ಕ್ರಸ್ಟ್ ಗೇಟ್ ಬದಲಾವಣೆ 3 ತಿಂಗಳಲ್ಲಿ ಆಗುತ್ತೆ ಅಂದಿದ್ದಿರಿ ಇನ್ನು ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ವಾಸ್ತವಾಂಶ ಈ ರೀತಿ ಇದೆ. ವಿರೋಧ ಪಕ್ಷದ ನಾಯಕರು ಸತ್ಯಾಂಶಗಳನ್ನು ತಿಳಿದು ಅಧ್ಯಯನ ಮಾಡಿದರೆ ಇನ್ನಷ್ಟು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಆದರೆ ಆರೋಪಕ್ಕಾಗಿ ಆರೋಪ ಮಾಡಬಾರದು ಎಂದು ತಿಳಿಸಿದರು.
ತುಂಗಭದ್ರಾ ಯೋಜನೆ 1945 ರಲ್ಲಿ ಪ್ರಾರಂಭವಾಗಿ 1953 ರಲ್ಲಿ ಪೂರ್ಣಗೊಂಡು ಕಾಲುವೆಗಳಿಗೆ ನೀರನ್ನು ಹರಿಸಲಾಯಿತು. ಈ ಅಣೆಕಟ್ಟೆಯು 1953ರಲ್ಲೆ ತುಂಗಭದ್ರಾ ಮಂಡಳಿ ರಚನೆಯಾಯಿತು. ಅಣೆಕಟ್ಟೆಯ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳಬೇಕಿದ್ದರೂ ಸಹ ಮಂಡಳಿಯಿಂದ ಅನುಮತಿ ಅಗತ್ಯವಿದೆ. ಅನುಮತಿಯಿಲ್ಲದೆ ಯಾವುದೇ ಕ್ರಮ ತೆಗೆದುಕೊಳ್ಳವಂತಿಲ್ಲ. ಮಂಡಳಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ. ಅಧ್ಯಕ್ಷರಿಗೆ ಕೆಲವು ಪರಮಾಧಿಕಾರಗಳನ್ನು ನೀಡಲಾಗಿದೆ ಎಂದರು.
ಕಳೆದ ಮಳೆ ವರ್ಷದಲ್ಲಿ ಸುರಿದ ವಿಪರೀತ ಮಳೆಯಿಂದ ದಿನಾಂಕ 10-8-2024 ರಂದು ರಾತ್ರಿ 10.50 ಕ್ಕೆ ಅಣೆಕಟ್ಟೆಯ 19 ನೇ ಗೇಟ್ ಕೊಚ್ಚಿ ಹೋಗಿರುತ್ತದೆ. ಸರ್ಕಾರವು ಕೂಡಲೆ ಕಾರ್ಯ ಪ್ರವೃತ್ತವಾಗಿ ದಿನಾಂಕ 16 ಮತ್ತು 17-8-2024 ರಂದು ಸ್ಟಾಪ್ ಲಾಗ್ ಗೇಟನ್ನು ಫ್ಯಾಬ್ರಿಕೇಟ್ ಮಾಡಿ ಅಳವಡಿಸಿ ನೀರನ್ನು ನಿಲ್ಲಿಸಲಾಯಿತು. ದಿನಾಂಕ: 31.08.2024 ರಂದು ಎ.ಕೆ.ಬಜಾಜ್ ಅವರ ಅಧ್ಯಕ್ಷತೆಯಲ್ಲಿ ಟೆಕ್ನಿಕಲ್ ಎನ್‌ಕ್ವಯಿರಿ ಕಮಿಟಿಯು ಎಲ್ಲಾ ಗೇಟ್‌ಗಳನ್ನು ಬದಲಾಯಿಸುವಂತೆ ದಿನಾಂಕ: 18.09.2024 ರಂದು ವರದಿ ನೀಡಿತ್ತು. ದಿನಾಂಕ: 01.01.2025 ಕ್ಕೆ ತುಂಗಭದ್ರಾ ಮಂಡಳಿ ಸ್ಟಾಂಡರ್ಡ್ ಎಕ್ಸ್ಪರ್ಟ್ ಅಡ್ವೈಸರಿ ಕಮಿಟಿ ಯನ್ನು ನೇಮಕ ಮಾಡಿತು. ಆ ಕಮಿಟಿ ಮಾರ್ಚ್ ತಿಂಗಳಲ್ಲಿ ಪರಿಶೀಲಿಸಿ, 32 ಗೇಟ್‌ಗಳನ್ನು ಬದಲಾಯಿಸಬೇಕು ಅಂತ ವರದಿ ಕೊಟ್ಟಿತು. ಅಷ್ಟೊತ್ತಿಗೆ ಮುಂಗಾರು ಪ್ರಾರಂಭ ಆಯಿತು, ಈ ಸಲ ಮುಂಗಾರು ಬೇಗ ಪ್ರಾರಂಭ ಆಯಿತು. ಎಲ್ಲಾ ಗೇಟ್‌ಗಳನ್ನು ಸಿದ್ಧಪಡಿಸಿ ಅಳವಡಿಸಲು ಕನಿಷ್ಟ 15 ತಿಂಗಳು ಬೇಕಾಗುತ್ತಿತ್ತು. ಹಾಗಾಗಿ ಟೆಂಡರ್ ಕರೆದು ನಾವು ಕಾಮಗಾರಿ ಪ್ರಾರಂಭಿಸಿದ್ದೇವೆ. ಸದರಿ ಎಲ್ಲಾ 32 ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ ಜೂನ್-2026 ರೊಳಗೆ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಈಗಾಗಲೆ ಅಣೆಕಟ್ಟೆಯ ಎಲ್ಲಾ ಗೇಟುಗಳನ್ನು ಡಿಸ್ ಮ್ಯಾಂಟಲ್ ಮಾಡುವ ಕೆಲಸ ಇದೇ ತಿಂಗಳ 5 ನೇ ತಾರೀಖಿನಿಂದ ಪ್ರಾರಂಭಿಸಲಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಗಳಿಗೆ ಮಾತ್ರ ನೀರು ಬಳಸಲು ಮಂಡಳಿಯು ತೀರ್ಮಾನಿಸಲಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ರೈತರ ಜಮೀನುಗಳಿಗೆ ನೀರು ಹಾಯಿಸುವುದು ಸಾಧ್ಯವಿಲ್ಲವೆಂದು ಮಂಡಳಿಯೇ ತೀರ್ಮಾನಿಸಿದೆ ಎಂದರು.
ಕಾರ್ಖಾನೆಗಳ ಸ್ಥಾಪನೆ
ಆರ್. ಅಶೊಕ್ ಅವರು ಸೇರಿದಂತೆ ಅನೇಕರು ಉತ್ತರ ಕರ್ನಾಟಕದಲ್ಲಿ ಕಾರ್ಖಾನೆಗಳ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ. ಈ ಭಾಗದಲ್ಲಿ ವ್ಯಾಪಕವಾಗಿ ಕಾರ್ಖಾನೆಗಳು ಪ್ರಾರಂಭವಾಗಬೇಕು. ಕೈಗಾರಿಕೆಗಳು ಸೂರ್ಯ ಮುಳುಗಿ ಉದಯಿಸುವುದರೊಳಗೆ ಸ್ಥಾಪನೆ ಆಗುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ-2025’ ನಲ್ಲಿ 10 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. ಅದರಲ್ಲಿ ನಮ್ಮ ಸರ್ಕಾರ ಕೈಗೊಂಡ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಶೇ.50 ಕ್ಕೂ ಹೆಚ್ಚಿನ ಹೂಡಿಕೆಗಳು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆಡೆಗಳಲ್ಲಿ ಸ್ಥಾಪಿಸಲು ಆಸಕ್ತಿ ತೋರಿಸಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಾಗಿ ಒಡಂಬಡಿಕೆ ಮಾಡಲಾಗಿದೆ. ಅಶೋಕ್ ಅವರೆ ಹೇಳಿದ ಹಾಗೆ ಸುಮಾರು 200 ಕ್ಕೂ ಹೆಚ್ಚು ಕಾರ್ಖಾನೆಗಳು ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾಗುತ್ತಿವೆ. ಇದರ ಜೊತೆಗೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಕೆಐಎಡಿಬಿ ವತಿಯಿಂದ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸುತ್ತಿದ್ದೇವೆ ಎಂದರು.
ಕೆ.ಪಿ.ಎಸ್. ಶಾಲೆಗಳು
ನಮ್ಮ ಸರ್ಕಾರ ಬಂದ ಮೇಲೆ ಕೆಪಿಎಸ್(ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದೆ. ಸದ್ಯಕ್ಕೆ 900 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಈ 900 ಶಾಲೆಗಳಲ್ಲಿ 333 ಶಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಾಗೂ 215 ಶಾಲೆಗಳು ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಾರಂಭವಾಗುತ್ತಿವೆ. ಶೇ.60.88 ರಷ್ಟು ಕೆಪಿಎಸ್ ಶಾಲೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸಲಾಗುತ್ತಿದೆ.
ಪ್ರವಾಸೋದ್ಯಮ ಅಭಿವೃದ್ಧಿ
ವಿರೋಧ ಪಕ್ಷದ ನಾಯಕರು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾವು ಪ್ರವಾಸೋದ್ಯಮಯಲ್ಲೂ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದೇವೆ. ಅದಕ್ಕಾಗಿ ‘ಪ್ರವಾಸೋದ್ಯಮ ನೀತಿ 2024-29’ ಅನ್ನು ರೂಪಿಸಿ ಜಾರಿಗೆ ತಂದಿದ್ದೇವೆ.
25,000 ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳಿವೆ. ಇವುಗಳ ಸಂರಕ್ಷಣೆ ಹಾಗೂ ಮೂಲಸೌಕರ್ಯ ಒದಗಿಸಲು ‘ನಮ್ಮ ಸ್ಮಾರಕ ದತ್ತು’ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು.
ಮೆಕ್ಕೆಜೋಳ
ಈ ಬಾರಿ ಇಡೀ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಮೆಕ್ಕೆ ಜೋಳ ಉತ್ಪಾದನೆಯಾಗಿದೆ. ರಾಜ್ಯದಲ್ಲೂ ಸಹ ಅಂದಾಜು 17.41 ಲಕ್ಷ ಹೆಕ್ಟೇರ್ ಗಳಲ್ಲಿ ಭಿತ್ತನೆ ಮಾಡಿರುವುದರಿಂದ 54.74 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಉತ್ಪಾದನೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಬೆಲೆ ಮಾರುಕಟ್ಟೆಯಲ್ಲಿ ಎಂಎಸ್‌ಪಿ ದರಗಳಿಗಿಂತ ಕಡಿಮೆಯಾಗಿದೆ. ಬೆಲೆ ಕಡಿಮೆಯಾದ ಕಾರಣಕ್ಕೆ ಮೆಕ್ಕೆಜೋಳ ಬೆಳೆಯುವ ರೈತರು ಪ್ರತಿಭಟನೆಗೆ ಇಳಿದರು.
ಮೆಕ್ಕೆ ಜೋಳಕ್ಕೆ ಕೇಂದ್ರ ಸರ್ಕಾರವು 2,400 ರೂಪಾಯಿ ಎಂಎಸ್‌ಪಿ ಎಂದು ಘೋಷಣೆ ಮಾಡಿದೆ. ಎಂಎಸ್‌ಪಿ ಘೊಷಣೆ ಮಾಡಿದ ನಂತರ ಖರೀದಿಯನ್ನೂ ಸಹ ಕೇಂದ್ರ ಸರ್ಕಾರವೇ ಮಾಡಬೇಕು ತಾನೆ? ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೆ ಎಂಎಸ್‌ಪಿ ಯೋಜನೆಯಡಿ ಮೆಕ್ಕೆ ಜೋಳ ಖರೀದಿಯನ್ನೆ ನಿಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಜೋಳಕ್ಕೆ ಎಂಎಸ್‌ಪಿಯನ್ನು ಮಾತ್ರ ನಿಗದಿ ಮಾಡಲಾಗುತ್ತಿದೆ. ಎಂಎಸ್‌ಪಿ ನಿಗದಿ ಮಾಡುವಾಗಲೂ ಸಹ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನೂ ಕೇಳುತ್ತಿಲ್ಲ. ಏಕಾಏಕಿ ನಿಗದಿ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಖರೀದಿ ಮಾಡಬೇಕು ತಾನೆ? ಆದರೆ ಬೆಲೆಗಳು ಕಡಿಮೆಯಾದಾಗ ರಾಜ್ಯದ ರೈತರ ಕಡೆಗೆ ತಿರುಗಿಯೂ ನೋಡುವುದಿಲ್ಲ ಎಂದರು.
ಜೋಳದ್ದೂ ಅದೇ ಕತೆಯಾಗಿದೆ. 2025-26 ರಲ್ಲಿ ಎಂಎಸ್‌ಪಿ 2,400 ರೂ ಇದ್ದರೆ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಮಾರುಕಟ್ಟೆಯಲ್ಲಿ 1,600 ಕೋಟಿ ರೂ.ಗಳಿಗೆ ಕುಸಿದಿತ್ತು. ಸಹಜವಾಗಿಯೇ ರೈತರು ಆಕ್ರೋಶಿತರಾದರು. ರಾಜ್ಯದ ಹಲವು ಕಡೆಗಳಲ್ಲಿ ರೈತರು ಪ್ರತಿಭಟನೆ ಮಾಡಿದರು.
ಈ ನಡುವೆ ರಾಜ್ಯ ಸರ್ಕಾರವು ಜೋಳದ ಕೊಯಿಲು ಪ್ರಾರಂಭವಾಗುತ್ತಿದ್ದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ;
ದಿನಾಂಕ 28.10.2025 ರಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಮೊದಲ ಸಭೆ ಮಾಡಿದ್ದಾರೆ. ಎನ್.ಸಿ.ಸಿ.ಎಫ್., ನಾಫೆಡ್, ಕೆ.ಎಮ್.ಎಫ್. ಮುಂತಾದವರೊಂದಿಗೆ ಚರ್ಚಿಸಿ ರೈತರಿಂದ ಖರೀದಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ದಿನಾಂಕ: 19-11-2025 ಸಚಿವ ಸಂಪುಟ ಉಪಸಮಿತಿ ಸಭೆ ಸೇರಿ ಮೆಕ್ಕೆಜೋಳ ಬೆಳೆಯುವ ರೈತರ ಸಮಸ್ಯೆ ಕುರಿತು ಚರ್ಚಿಸಲಾಗಿತ್ತು ಹಾಗೂ ಪಿಡಿಪಿಎಸ್ ಯೋಜನೆಯ ಕೆಳಗೆ ಮೆಕ್ಕೆಜೋಳವನ್ನು ಖರೀದಿಸಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಹ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿತು.
ದಿನಾಂಕ: 20.11.2025 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಜರುಗಿ ರಾಜ್ಯದ ಎಲ್ಲಾ ಡಿಸ್ಟಲರಿಗಳು ನಾಫೆಡ್/ಎನ್‌ಸಿಸಿಎಫ್ ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಸ್‌ಓಪಿಯಂತೆ ಮೆಕ್ಕೆಜೋಳ ಖರೀದಿಸಲು ನಿರ್ದೇಶನ ನೀಡಲಾಯಿತು. ಹಾಗೆಯೇ ಪಿಡಿಪಿಎಸ್ ಯೋಜನೆಯ ಕೆಳಗೆ ಕೇಂದ್ರ ಸರ್ಕಾರವು ರೈತರಿಂದ ಜೋಳ ಖರೀದಿಸಲು ಅನುಮತಿ ನೀಡಬೇಕೆಂದು ಕೋರಲು ಸಹ ತೀರ್ಮಾನಿಸಲಾಯಿತು. ಇದಾದ ಮೇಲೆ ಪೌಲ್ಟ್ರಿ ಫಾರ್ಮ್ಸ್ ಅಸೋಸಿಯೇಷನ್ ಮತ್ತು ಪಶು ಆಹಾರ ಉತ್ಪಾದಕರೊಂದಿಗೆ ದೀರ್ಘ ಸಭೆ ನಿಗದಿಪಡಿಸಿ ಅವರಿಗೆ ಅಗತ್ಯವಿರುವ ಪ್ರಮಾಣದ ಜೋಳವನ್ನು ರಾಜ್ಯದ ರೈತರಿಂದಲೇ ಖರೀದಿಸಬೇಕೆಂದು ನಿರ್ದೇಶನಗಳನ್ನು ನೀಡಲಾಗಿದೆ.
ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಂದ ಜೋಳ ಖರೀದಿಸಿ, ಪ್ರತಿ ಕ್ವಿಂಟಾಲ್‌ಗೆ ಚೀಲ, ಸಾಗಣೆ ವೆಚ್ಚ, ಲೋಡ್ ಮತ್ತು ಅನ್‌ಲೋಡಿಂಗ್ ಇತ್ಯಾದಿಗಳಿಗಾಗಿ ಪ್ರತಿ ಕ್ವಿಂಟಾಲ್‌ಗೆ 275 ರೂ. ಗಳನ್ನು ಖರ್ಚು ಮಾಡಿ ಆಸಕ್ತರಿಗೆ ಸರಬರಾಜು ಮಾಡಲು ತೀರ್ಮಾನಿಸಿದೆ. ಈಗಾಗಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ರೈತರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಬೆಲೆ ಹೆಚ್ಚಾಗುತ್ತಿದೆ. ಈಗಿನ ಬೆಲೆ ಸರಾಸರಿ 2,000 ರೂಪಾಯಿಗೆ ಬಂದಿದೆ.
ಮೊದಲು ಪ್ರತಿ ರೈತರಿಗೆ 20 ಕ್ವಿಂಟಾಲ್‌ಗಳ ಗರಿಷ್ಟ ಮಿತಿ ನೀಡಿತ್ತು. ಆದರೆ ಅದು ಸಾಕಾಗುವುದಿಲ್ಲ ಎಂದು ರೈತರು ಒತ್ತಾಯಿಸಿದ ಕಾರಣ, ರಾಜ್ಯ ಸರ್ಕಾರವು ಈಗ 50 ಕ್ವಿಂಟಾಲುಗಳಿಗೆ ಹೆಚ್ಚಿಸಿದೆ. ಹಾಗೆಯೇ ನಮ್ಮ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅಭಿವೃದ್ಧಿ ಆಯುಕ್ತರು, ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಿ ಮೆಕ್ಕೆಜೋಳವನ್ನು ಪಿಡಿಪಿಎಸ್ ಯೋಜನೆಯಡಿ ಖರೀದಿಸಲು ಆಗ್ರಹಿಸಿದ್ದರು. ಆದರೆ, ಕೇಂದ್ರ ಸರ್ಕಾರದ ಉತ್ತರ ನಕಾರಾತ್ಮಕವಾಗಿಯೇ ಇದೆ. ಈ ವರೆಗೆ ಕೇಂದ್ರ ಸರ್ಕಾರವು ಖರೀದಿ ಮಾಡುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದು, ಮೆಕ್ಕೆಜೋಳವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಮೆಕ್ಕಜೋಳ ಆಧರಿಸಿ ಎಥನಾಲ್ ಉತ್ಪಾದಿಸುವ ಪ್ರಮಾಣವನ್ನು ಹೆಚ್ಚಿಸಿ ಕರ್ನಾಟಕಕ್ಕೆ ಹೆಚ್ಚಿನ ಕೋಟಾ ನಿಗದಿಪಡಿಸಬೇಕು ಮತ್ತು ಪಿಡಿಎಸ್ ಮೂಲಕ ಮತ್ತು ಎಂ.ಎಸ್.ಪಿ. ಮೂಲಕ ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಹಾಗೂ ಇತರೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಯಾವ ಮನವಿ ಸಲ್ಲಿಸಿದರೂ ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ, ಕೇಂದ್ರ ಸರ್ಕಾರ ಸಂಪೂರ್ಣ ಜಡಗಟ್ಟಿ ಹೋಗಿದೆ. ಕರ್ನಾಟಕದ ರೈತರಿಗೆ ದ್ರೋಹ ಮಾಡುವುದನ್ನು ನಿಲ್ಲಿಸುವುದೂ ಇಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಯಾವ ಪ್ರಮಾಣದಲ್ಲಿ ರಾಜ್ಯ ಮತ್ತು ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದೆ ಎಂಬುದರ ಮಾಹಿತಿಯನ್ನು ಸದನದ ಗಮನಕ್ಕೆ ತರಬೇಕಾಗಿದೆ. ವಿರೋಧ ಪಕ್ಷದವರು ಅದು ಯಾವ ನೈತಿಕತೆಯ ಆಧಾರದ ಮೇಲೆ ಕೇಂದ್ರ ಸರ್ಕಾರವನ್ನು ಸಮರ್ಥನೆ ಮಾಡುತ್ತಿದ್ದಾರೋ ತಿಳಿಯದಾಗಿದೆ. ಗುಜರಾತ್‌ನಲ್ಲಿ 1.83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 3.92 ಲಕ್ಷ ಮೆಟ್ರಿಕ್ ಟನ್ ಬೆಳೆಯುತ್ತಾರೆ, ಗುಜರಾತ್‌ಗೆ 27.3 ಕೋಟಿ ಲೀಟರ್ ಎಥನಾಲ್ ಅನ್ನು ಮೆಕ್ಕೆಜೋಳದ ಮೂಲದಿಂದ ಉತ್ಪಾದಿಸಲು ಹಂಚಿಕೆ ಮಾಡಿದ್ದಾರೆ. ಆದರೆ ಒಟ್ಟಾರೆಯಾಗಿ ಆ ರಾಜ್ಯದ ಎಲ್ಲ ಮೆಕ್ಕೆಜೋಳ ಉತ್ಪಾದನೆಯನ್ನು ಎಥನಾಲ್‌ಗೆ ಬಳಸಿದರೆ ಕೇವಲ 12.83 ಕೋಟಿ ಲೀ. ಗಳಷ್ಟು ಎಥನಾಲ್ ಮಾತ್ರ ಉತ್ಪಾದನೆಯಾಗುತ್ತದೆ (ಒಂದು ಟನ್ನಿಗೆ 390 ಲೀಟರ್‌ಗಳಂತೆ ಲೆಕ್ಕ ಹಾಕಿದರೆ) ಉತ್ಪಾದನೆಯಾಗುತ್ತದೆ. ಶೇ.212.77 ರಷ್ಟು ಉತ್ಪಾದನೆಗೂ ಮತ್ತು ಹಂಚಿಕೆಗೂ ನಡುವೆ ವ್ಯತ್ಯಾಸವಿದೆ. ಗುಜರಾತ್ ರಾಜ್ಯಕ್ಕೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ. ಆ ರಾಜ್ಯದಲ್ಲಿ ಉತ್ಪಾದನೆಯಾಗುವ ಪ್ರತಿ ಟನ್ ಮೆಕ್ಕೆಜೋಳಕ್ಕೆ ಸುಮಾರು 830 ಲೀಟರ್‌ಗಳಷ್ಟು ಎಥನಾಲ್ ಹಂಚಿಕೆಯಾಗಿದೆ.
ಹರಿಯಾಣದಲ್ಲಿ ಕೇವಲ 0.15 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಉತ್ಪಾದನೆಯಾಗುತ್ತದೆ. ಆದರೆ ಆ ರಾಜ್ಯಕ್ಕೆ 41.05 ಕೋಟಿ ಲೀಟರ್ ಎಥನಾಲ್ ಅನ್ನು ಮೆಕ್ಕೆಜೋಳದ ಮೂಲದಿಂದ ಉತ್ಪಾದಿಸಲು ಹಂಚಿಕೆ ಮಾಡಿದ್ದಾರೆ. ಆದರೆ ಒಟ್ಟಾರೆಯಾಗಿ ಆ ರಾಜ್ಯದ ಎಲ್ಲ ಮೆಕ್ಕೆಜೋಳ ಉತ್ಪಾದನೆಯನ್ನು ಎಥನಾಲ್‌ಗೆ ಬಳಸಿದರೆ ಕೇವಲ 0.59 ಕೋಟಿ ಲೀ. ಗಳಷ್ಟು ಎಥನಾಲ್ ಮಾತ್ರ ಉತ್ಪಾದನೆಯಾಗುತ್ತದೆ (ಒಂದು ಟನ್ನಿಗೆ 390 ಲೀಟರ್‌ಗಳಂತೆ ಲೆಕ್ಕ ಹಾಕಿದರೆ) ಉತ್ಪಾದನೆಯಾಗುತ್ತದೆ. ಶೇ.7,017.09 ರಷ್ಟು ಉತ್ಪಾದನೆಗೂ ಮತ್ತು ಹಂಚಿಕೆಗೂ ನಡುವೆ ವ್ಯತ್ಯಾಸವಿದೆ. ಹರಿಯಾಣ ರಾಜ್ಯಕ್ಕೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ. ಆ ರಾಜ್ಯದಲ್ಲಿ ಉತ್ಪಾದನೆಯಾಗುವ ಪ್ರತಿ ಟನ್ ಮೆಕ್ಕೆಜೋಳಕ್ಕೆ ಸುಮಾರು 27,367 ಲೀಟರ್‌ಗಳಷ್ಟು ಎಥನಾಲ್ ಹಂಚಿಕೆಯಾಗಿದೆ ಎಂದರು.
ಕೇವಲ ಮತ್ತು ಗುಜರಾತ್ ಮತ್ತು ಹರಿಯಾಣ ಅಷ್ಟೆ ಅಲ್ಲ. ಆಂಧ್ರ ಪ್ರದೇಶಕ್ಕೆ ಶೇ.111.76, ಅಸ್ಸಾಂಗೆ ಶೇ.483.35, ಬಿಹಾರ್ ಗೆ ಶೇ.121.09, ಛತ್ತೀಸ್‌ಗಡ ಶೇ.102.37, ಒರಿಸ್ಸಾಗೆ ಶೇ.181.12, ಉತ್ತರ ಪ್ರದೇಶ 145.81., ಉತ್ತರಾಖಾಂಡ್ ಶೇ.243.90 ರಷ್ಟು ಹಂಚಿಕೆ ಮಾಡಿದ್ದಾರೆ.
ಆದರೆ, ಕರ್ನಾಟಕದ ರೈತರ ಹೊಟ್ಟೆ ಮೇಲೆ ಬರೆ ಹಾಕಿದ್ದಾರೆ. ನಮ್ಮಲ್ಲಿ 17.64 ಲಕ್ಷ ಹೆಕ್ಟೇರ್‌ಗಳಲ್ಲಿ 54.5 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗುತ್ತದೆ. ನಮ್ಮ ರಾಜ್ಯಕ್ಕೆ 26.55 ಕೋಟಿ ಲೀಟರ್ ಎಥನಾಲ್ ಅನ್ನು ಹಂಚಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಜೋಳವನ್ನು ಎಥನಾಲ್‌ಗೆ ಪರಿವರ್ತಿಸಿದರೆ 212.55 ಕೋಟಿ ಲೀಟರ್ ಎಥನಾಲ್ ಉತ್ಪಾದನೆಯಾಗುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಹಂಚಿಕೆ ಮಾಡಿರುವುದು ಶೇ.12.49 ರಷ್ಟು ಮಾತ್ರ ಎಂದರು.
ಇದಕ್ಕಿಂತ ದ್ರೋಹ ಮತ್ಯಾವುದಿರಲು ಸಾಧ್ಯ? ಇಷ್ಟರ ಮಟ್ಟಿಗೆ ಮೆಕ್ಕೆಜೋಳದ ವಿಷಯದಲ್ಲಾಗಲಿ, ಕಬ್ಬಿನಲ್ಲಾಗಲೀ ಅಥವಾ ಇನ್ಯಾವುದೇ ಕೃಷಿ ಉತ್ಪಾದನೆಯಲ್ಲಾಗಲೀ ಕೇಂದ್ರವು ರಾಜ್ಯದ ರೈತರನ್ನು ತುಳಿಯುತ್ತಿದೆ.
ವಿರೋಧ ಪಕ್ಷದವರು ಮಾತೆತ್ತಿದರೆ ಕೇಂದ್ರ ಸರ್ಕಾರವನ್ನು, ಮೋದಿಯವರನ್ನು ಹೊಗಳುವುದರಲ್ಲಿ ಮುಂದೆ ಇರುತ್ತಾರೆ. ಹಾಗೆ ನೋಡಿದರೆ ಬಿಜೆಪಿಯಿಂದ ಉಚ್ಚಾಟನೆಗೊಂಡ ಯತ್ನಾಳ್ ಅವರು ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಎಂಎಸ್ ಪಿಗಳನ್ನು ಬೆಳೆವಾರು ನಿಗದಿ ಮಾಡುವಾಗಲೂ ಮನಮೋಹನ್ ಸಿಂಗ್ ಮತ್ತು ಮೋದಿಯವರ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ದ್ರಾಕ್ಷಿ ಕೋಲ್ಡ್ ಸ್ಟೋರೇಜ್
ಜೆಡಿಎಸ್‌ನ ಎಂ ಟಿ ಕೃಷ್ಣಪ್ಪ ಅವರು ದ್ರಾಕ್ಷಿಗೆ ಕೋಲ್ಡ್ ಸ್ಟೋರೇಜ್ ಒದಗಿಸುವ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ 26,776 ರೈತರು 30,306 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತಿದ್ದು, 8,68,589 ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪಾದನೆಯಾಗುವ ಅಂದಾಜಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 42 ದ್ರಾಕ್ಷಿ ಕೋಲ್ಡ್ ಸ್ಟೋರೇಜ್‌ಗಳಿದ್ದು, 75,276 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. ಅಗತ್ಯ ಬಿದ್ದರೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗುವುದು ಎಂದರು.
ತೊಗರಿಬೇಳೆ
ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ, ಬೀದರ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚು ತೊಗರಿಯನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಈ ವರ್ಷ 14.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗಿದ್ದು, ಅಂದಾಜು 9.67 ಲಕ್ಷ ಮೆಟ್ರಿಕ್ ಟನ್ ನಿರೀಕ್ಷಿಸಲಾಗಿದೆ ಎಂದರು.
ಕೇಂದ್ರ ಸರ್ಕಾರವು 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಗೆ ಪ್ರತಿ ಕ್ವಿಂಟಾಲಿಗೆ ರೂ.8,000 ಗಳನ್ನು ಬೆಂಬಲ ಬೆಲೆಯನ್ನಾಗಿ ನಿಗದಿಪಡಿಸಿದೆ. ಪ್ರಸ್ತುತ ರಾಜ್ಯದ ಮಾರುಕಟ್ಟೆಗಳಲ್ಲಿ ತೊಗರಿಯು ರೂ.5,930 ರಿಂದ ರೂ.6900 ವರೆಗೆ ಮಾರಾಟವಾಗುತ್ತಿದೆ. ಈ ಬೆಲೆ ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ಕಡಿಮೆ ಇದೆ. ಆದ್ದರಿಂದ ನಾವು ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೆವು. ದಿನಾಂಕ: 10.12.2025 ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಪ್ರಾರಂಭಿಸುತ್ತಿದ್ದೇವೆ.
ಮನಮೋಹನಸಿಂಗ್ ಅವರು ಮತ್ತು ಮೋದಿಯವರು ತಮ್ಮ ಎಂಟು ವರ್ಷಗಳ ಅವಧಿಯಲ್ಲಿ ಬೆಂಬಲ ಬೆಲೆ ಹೆಚ್ಚಿಸಿದ ವಿಚಾರವನ್ನು ಕಂಪೇರ್ ಮಾಡುವ ಉದ್ದೇಶದಿಂದ 2006 ರಿಂದ 2013-14 ರವರೆಗಿನ ಮನಮೋಹನಸಿಂಗ್ ಅವರು ಹೆಚ್ಚಿಸಿದ ಎಂಎಸ್ಪಿಯನ್ನು ಮತ್ತು 2014-15 ರಿಂದ 2021-22ರವರೆಗೆ ಮೋದಿಯವರು ಹೆಚ್ಚಿಸಿದ ಎಂಎಸ್‌ಪಿ ಪ್ರಮಾಣವನ್ನು ಹೋಲಿಕೆ ಮಾಡಿದ್ದೇನೆ ಎಂದರು.
2004 ರಿಂದ 2013 ರವರೆಗೆ 10 ವರ್ಷದಲ್ಲಿ ಮನಮೋಹನಸಿಂಗ್ ಅವರು ಭತ್ತದಿಂದ ಶೇಂಗಾವರೆಗೆ ಪ್ರತಿಯೊಂದರ ಮೇಲೆ ಶೇ.110 ರಿಂದ ಶೇ.219 ರಷ್ಟು ಪ್ರಮಾಣದಲ್ಲಿ ಬೆಂಬಲ ಬೆಲೆ ಹೆಚ್ಚಿಸಿದ್ದರೆ, ಮೋದಿಯವರ ಸರ್ಕಾರ ಅದೇ 10 ವರ್ಷಗಳಲ್ಲಿ 2014 ರಿಂದ 2024-25ರವರೆಗೆ ಕೇವಲ ಶೇ.73 ರಿಂದ ಶೇ.89 ರವರೆಗೆ ಹೆಚ್ಚಿಸಿದ್ದಾರೆ ಅಷ್ಟೆ. ರಾಗಿ ಮಾತ್ರ 176.77 ಶೇ ಹೆಚ್ಚಿಸಿದ್ದಾರೆ. ಆದರೆ ಮನಮೋಹನ ಸಿಂಗ್ ಅವರೂ ಸಹ ರಾಗಿಯ ಮೇಲಿನ ಎಂಎಸ್‌ಪಿಯನ್ನು ಶೇ. 191 ರಷ್ಟು ಹೆಚ್ಚಿಸಿದ್ದರು. 2004-05 ರಲ್ಲಿ ಒಂದು ಕ್ವಿಂಟಾಲ್ ರಾಗಿ ಮೇಲೆ ರೈತರಿಗೆ 515ರೂ. ಸಿಗುತ್ತಿತ್ತು. ಇದನ್ನು 2013-14ರಲ್ಲಿ 1,500ರೂಗೆ ಏರಿಸಿದರು. ಮೋದಿಯವರು 4,290ಕ್ಕೆ ಏರಿಸಿದರು ಎಂದರು.
ಹಾಗಾಗಿ ಎಂಎಸ್‌ಪಿ ವಿಚಾರದಲ್ಲೂ ಮೋದಿ ಸರ್ಕಾರ ದೋಖಾವನ್ನೆ ಮಾಡಿಕೊಂಡು ಬಂದಿದೆ.
2023ರ ಬೆಳಗಾವಿ ಅಧಿವೇಶನದಲ್ಲಿ ನಾನು ಸರ್ಕಾರದ ವತಿಯಿಂದ ಹಲವು ಘೋಷಣೆ ಮಾಡಿದ್ದೆ. ಅವುಗಳ ಕುರಿತು ಸದನಕ್ಕೆ ಮಾಹಿತಿ ನೀಡಲು ಬಯಸುತ್ತೇನೆ.
1. ಮಧ್ಯಮಾವಧಿ, ದೀರ್ಘಾವಧಿ ಅಸಲು ಕಟ್ಟಿದರೆ ರೈತರ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು.
ಮಾರ್ಚ್- 2024 ರವರೆಗೆ 36,146 ರೈತರಿಗೆ ರೂ.239.28 ಕೋಟಿಗಳ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ.
2. ಧಾರವಾಡದಲ್ಲಿರುವ ವಾಲ್ಮಿ [ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ] ಯನ್ನು ರೂ.2.00 ಕೋಟಿಗಳ ಮೊತ್ತದ ಅನುದಾನದೊಂದಿಗೆ “ಜಲ ನಿರ್ವಹಣೆ ಉನ್ನತ ಕೇಂದ್ರ” Center for excellence in Water Management)ಎಂದು ಉನ್ನತೀಕರಿಸಲಾಗುವುದು.
ದಿನಾಂಕ 05.07.2024 ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಉದ್ದೇಶಕ್ಕಾಗಿ ರೂ. 2.00 ಕೋಟಿಗಳ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ.
3. ಸ್ಥಳೀಯ ಉದ್ಯೋಗಾವಕಾಶ ಒದಗಿಸುವ ಸಲುವಾಗಿ ಬೆಳಗಾವಿ ಸಮೀಪ ಸುಮಾರು 2,000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಹಾಗೂ 500 ಎಕರೆ ಪ್ರದೇಶದಲ್ಲಿ Foundry Cluster ಅನ್ನು ಸ್ಥಾಪಿಸಲಾಗುವುದು. ಈಗಾಗಲೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ವಂಟಮುರಿ ಗ್ರಾಮದಲ್ಲಿ ಒಟ್ಟು 3880 ಎಕರೆ 26 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಅದು ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ತುಸು ವಿಳಂಬವಾಗುತ್ತಿದೆ.
4. ರಾಯಚೂರಿನಲ್ಲಿ ಹತ್ತಿ ಉತ್ಪಾದನೆ ಹೆಚ್ಚಾಗಿರುವುದರಿಂದ ಆರ್ಥಿಕ ಅಭಿüವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗುವುದು. ರಾಯಚೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ನ್ನು ಸ್ಥಾಪಿಸಲು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಅದರಂತೆ, ರಾಯಚೂರು ಬಳಿ ಸರ್ವೆ ನಂ.928 ರಲ್ಲಿ 15 ಎಕರೆ ಸರ್ಕಾರಿ ಜಮೀನನ್ನು ರಾಯಚೂರು ತಾಲ್ಲೂಕಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ನೀಡಲಾಗಿದೆ. ಜವಳಿ ಪಾರ್ಕ್ ಕಾಮಗಾರಿ ಸ್ಥಾಪನೆಗೆ ಟೆಂಡರ್ ಕರೆಯಲಾಗುತ್ತಿದೆ.
5. ವಿಜಯಪುರದಲ್ಲಿ ಉತ್ಪಾದನಾ Cluster ಅನ್ನು ಅಂದಾಜು 1,500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಈ ಉದ್ದೇಶಕ್ಕಾಗಿ ವಿಜಯಪುರ ಜಿಲ್ಲೆ, ಕೋಲ್ಹಾರ ತಾಲ್ಲೂಕಿನ, ಮುಳವಾಡ ಗ್ರಾಮದಲ್ಲಿ 3230-03 ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸದರಿ ಜಮೀನಿನಲ್ಲಿ 1120.36 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, ಇಲ್ಲಿಯವರೆಗೆ 71 ಎಕರೆ ಜಮೀನನ್ನು 57 ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗಿರುತ್ತದೆ. ಈ ಯೋಜನೆಯ ಪ್ರಾಥಮಿಕ ಯೋಜನಾ ವರದಿಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
6. ಧಾರವಾಡದಲ್ಲಿ 3000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ ಉದ್ಯೋಗಾವಕಾಶಗಳನ್ನು ಸೃಜಿಸಲು ಅಗತ್ಯ ಕ್ರಮ ವಹಿಸಲಾಗುವುದು. ಭೂ ಸ್ವಾಧೀನಕ್ಕೆ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸುವ ಪ್ರಯುಕ್ತ ಸರ್ಕಾರದ ಆದೇಶ ಹೊರಡಿಸಲಾಗಿದೆ.
7. ಉತ್ತರ ಕರ್ನಾಟಕವು ಸಮೃದ್ಧ ಪ್ರವಾಸೋದ್ಯಮಗಳ ತಾಣವಾಗಿದೆ. ಐತಿಹಾಸಿಕ ಮಹತ್ವವಿರುವ ಈ ತಾಣಗಳು ಅಂತರ ರಾಷ್ಟ್ರೀಯವಾಗಿಯೂ ಮಹತ್ವ ಪಡೆದಿವೆ. ಆದರೆ ಇದಕ್ಕೆ ಸಾಕಷ್ಟು ಮಹತ್ವ ನೀಡದೆ ಹಿನ್ನಡೆಯನ್ನು ಅನುಭವಿಸುತ್ತಿದೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮವಹಿಸುತ್ತೇವೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಈ ಕೆಳಕಂಡ ಯೋಜನೆಗಳಿಗೆ ಸಚಿವ ಸಂಪುಟ ಸಭೆಗಳಲ್ಲಿ ಅನುಮೋದನೆ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಐತಿಹಾಸಿಕ ಮಹತ್ವವಿರುವ ತಾಣಗಳ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 12 ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಬೀದರ್ ಕರೇಜ್, ಸಿರಿವಾಳ ದೇವಾಲಯಗಳು, ಯಾದಗಿರಿ ಕೋಟೆ, ಮಳಖೇಡ ಕೋಟೆ, ಡೆಕ್ಕನ್ ಸುಲ್ತಾನೇಟ್ ಸ್ಮಾರಕ ಸಮೂಹಗಳು, ನಾಗಾವಿಯ ಪ್ರಾಚೀನ ವಿಶ್ವವಿದ್ಯಾಲಯ ಮುಂತಾದ ಐತಿಹಾಸಿಕ ಮಹತ್ವದ ಒಟ್ಟು 06 ತಾಣಗಳ ಸ್ಮಾರಕಗಳ ರಕ್ಷಣೆ ಹಾಗೂ ಮೂಲಸೌಕರ್ಯ ಸುಧಾರಣೆಗೆ ಕೈಗೊಳ್ಳಲು ಕೆಕೆಆರ್‌ಡಿಬಿ ಸಹಯೋಗದಲ್ಲಿ ಕ್ರಮವಹಿಸಲಾಗುತ್ತಿದೆ.
1) ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, 2023” ಜಾರಿಗೆ ತರಲಾಗಿದೆ.
2) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮದ ಶ್ರೀ ಅಲ್ಲಮಪ್ರಭು ಗುಹಾಂತರ ದೇವಾಲಯ ಹಾಗೂ ಗೂಗಲ್ ಬ್ಯಾರೇಜ್ ಹತ್ತಿರ ಅಗತ್ಯವಾಗಿರುವ ಪ್ರವಾಸಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಲು ಕ್ರಮವಹಿಸಲಾಗುತ್ತಿದೆ.
3) ಶ್ರೀ.ಆಂಜನೇಯ ಸ್ವಾಮಿಯ ಜನ್ಮಸ್ಥಳವೆಂದು ಪ್ರಸಿದ್ದವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒಟ್ಟು ₹200 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ.
ಕರ್ನಾಟಕಕ್ಕೆ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಬೇಕು ಎಂದಾದರೆ, ಎರಡನೆಯ ವಿಮಾನ ನಿಲ್ದಾಣ ಉತ್ತರ ಕರ್ನಾಟಕದಲ್ಲೇ ಆಗಲಿ. ವಿಮಾನ ನಿಲ್ದಾಣ ನಿರ್ಮಾಣ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಅರವಿಂದ್ ಬೆಲ್ಲದ್ ಅವರು ಪ್ರಲ್ಹಾದ ಜೋಷಿಯವರ ಗಳಸ್ಯ ಕಂಠಸ್ಯ ಸ್ನೇಹಿತರು. ಅವರು ಪ್ರಲ್ಹಾದ ಜೋಷಿಯವರನ್ನು ಒತ್ತಾಯ ಮಾಡಿ ಮಂಜೂರು ಮಾಡಿಸಲು ಹೇಳಬೇಕು. ಇಡೀ ಸದನ ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಿದ್ದವಿದೆ ಎಂಬುದನ್ನು ನಿರ್ಣಯ ಮಾಡಿ ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಹಾಗೆಯೇ ಬೆಳಗಾವಿ-ಬೆಂಗಳೂರು, ಬೀದರ್-ಬೆಂಗಳೂರು, ಮಂಗಳೂರು- ಬೆಂಗಳೂರು ನಡುವೆ ಬುಲೆಟ್ ಟ್ರೈನ್ ಯೋಜನೆಯನ್ನು ಸ್ಥಾಪಿಸಲು ಮುಂಬರುವ ಬಜೆಟ್‌ನಲ್ಲಿಯೇ ಘೋಷಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಮೂಲಕ ಕಲಬುರಗಿ ಮೂಲಕ ಬ್ಯುಸಿನೆಸ್ ಕಾರಿಡಾರ್ ಮಾಡಬೇಕು.
ಹಾಗೆಯೇ ಉತ್ತರ ಕರ್ನಾಟಕದ ಇನ್ನಿತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ವಿವಿಧ ಮಾದರಿಯ ಕೈಗಾರಿಕಾ ಕಾರಿಡಾರ್‌ಗಳನ್ನಾಗಿ ಘೋಷಣೆ ಮಾಡಬೇಕೆಂದು ಕೇಂದ್ರವನ್ನು ಒತ್ತಾಯಿಸೋಣ, ಈ ಯೋಜನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲು ಬದ್ಧವಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ, ಉಡುಪಿ-ಮಂಗಳೂರು ಮುಂತಾದ ಕಡೆ ಮೆಟ್ರೋ ರೈಲುಗಳಾಗಲೀ ಅಥವಾ ಸಬರ್ಬನ್ ರೈಲುಗಳಾಗಲೀ ಸ್ಥಾಪಿಸಬೇಕಾದ ಅಗತ್ಯವಿದೆ. ಹಾಗೆಯೇ, ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಒಂದು ಮೆಗಾ ರಿಂಗ್ ರಸ್ತೆಯ ಅಗತ್ಯ ಇದೆ. ಅದನ್ನು ಸ್ಥಾಪಿಸಲು ಸಹ ಪ್ರಲ್ಹಾದ ಜೋಷಿಯವರು ಮತ್ತು ಈ ಭಾಗದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ಯೋಜನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲು ಸಿದ್ಧವಿದೆ ಎಂದರು.
ಕೇಂದ್ರ ಸರ್ಕಾರವು ಕೃಷ್ಣಾ ಮೇಲ್ದಂಡೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸಬೇಕು. ಚುನಾವಣೆ ಬಂದಾಗ ಬಿಜೆಪಿಯವರು ಘೋಷಿಸುತ್ತೇವೆ ಎಂದು ಹೇಳಿ ಜನರನ್ನು ವಂಚಿಸಿದ್ದಾರೆ. ಇನ್ನು ವಂಚನೆಯನ್ನು ನಿಲ್ಲಿಸಬೇಕು. ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕದ ಕಡೆ ಕೇಂದ್ರ ಸರ್ಕಾರ ಕಿಂಚಿತ್ತಾದರೂ ಗಮನ ಹರಿಸಬೇಕಾಗಿದೆ. ಈ ಭಾಗದ ಜನರು ನಿರಂತರವಾಗಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸುತ್ತಿದ್ದಾರೆ. ಈ ಎಲ್ಲ ಸಂಸದರು ರಾಜನ ಪಕ್ಕ ನಿಂತು ಬೀಸಣಿಗೆ ಬೀಸುವ ಸೇವಕರಂತೆ ವರ್ತಿಸಬಾರದೆಂಬುದು ನನ್ನ ಮನವಿ. ಗಟ್ಟಿಯಾಗಿ ನಿಂತು ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಿ ಎಸ್ ಟಿ
2014 ರ ನಂತರ ಇದೇ ಮೊದಲ ಬಾರಿಗೆ ಆರ್ಥಿಕತೆ ಕುಸಿತ ಹಾದಿಗೆ ತಲುಪಿದೆ. ಕೊರೋನ ಸಮಯದಲ್ಲೂ ಸಹ ಆರ್ಥಿಕತೆ ಆರೋಗ್ಯಕರವಾಗಿಯೇ ಇತ್ತು. ಆರ್ಥಿಕತೆ ಕುಸಿಯುವ ಕಾರಣದಿಂದಲೆ ಮೋದಿ ಸರ್ಕಾರವು ಜಿಎಸ್‌ಟಿ ದರಗಳನ್ನು ಏಕಾಏಕಿ ಕಡಿಮೆ ಮಾಡಿದೆ. ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕು ರೆಪೊ ದರಗಳನ್ನು ಕಡಿಮೆ ಮಾಡುತ್ತಿದೆ ಎಂದರು.
ಜಿಎಸ್‌ಟಿ ದರಗಳನ್ನು 22-9-2025 ರಂದು ಮೋದಿ ಸರ್ಕಾರ ಕಡಿಮೆ ಮಾಡಲಾಯಿತು. ಮೋದಿ ಸರ್ಕಾರ ಎಷ್ಟು ಬೂಟಾಟಿಕೆಯಿಂದ ವರ್ತಿಸುತ್ತಿದೆಯೆಂದರೆ ಜನರಿಗೆ ವಿವೇಚನೆಯೇ ಇಲ್ಲ ಎಂದು ಭಾವಿಸಿದಂತಿದೆ. 8 ವರ್ಷಗಳ ಕಾಲ ಜನರನ್ನು ದರೋಡೆ ಮಾಡಿ ಬಂಡವಾಳಿಗರು ಉತ್ಪಾದಿಸುವ ವಸ್ತುಗಳನ್ನು ಕೊಳ್ಳುವವರಿಲ್ಲ ಎಂದು ಕಡಿಮೆ ಮಾಡಿ ‘ಜಿಎಸ್‌ಟಿ ಉತ್ಸವ’ ಎಂದು ಕರೆದರು.
ಜಿಎಸ್‌ಟಿ ದರಗಳನ್ನು ಕೇಂದ್ರ ಸರ್ಕಾರ ಏಕಾಏಕಿ ಕಡಿಮೆ ಮಾಡಿದರೂ ರಾಜ್ಯಗಳ ಜಿಎಸ್‌ಟಿ ಸಂಗ್ರಹದಲ್ಲಿ ನಾವೆ ಮುಂದೆ ಇದ್ದೇವೆ. ಇಷ್ಟಾದರೂ ನಮ್ಮ ರಾಜ್ಯಕ್ಕೆ ಸುಮಾರು 15,000 ಕೋಟಿ ರೂ ಕೊರತೆಯಾಗಬಹುದು ಎಂಬ ಅಂದಾಜಿದೆ.
ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ, ಅನುಷ್ಠಾನಗೊಂಡ ಪ್ರಮುಖ ಕಾರ್ಯಕ್ರಮಗಳ ವಿವರ
• ಧಾರವಾಡ ಮತ್ತು ಕಲಬುರಗಿಗಳಲ್ಲಿ ಉಚ್ಛ ನ್ಯಾಯಾಲಯ ಪೀಠಗಳ ಸ್ಥಾಪನೆ ಮಾಡಲಾಗಿದೆ.
• ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ.
• ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ (ಐಟಿ ಪಾರ್ಕ್)ನ್ನು ಸ್ಥಾಪನೆ ಮಾಡಲಾಗಿದೆ.
• ಕಲಬುರಗಿಯಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಲಾಗಿದೆ.
• ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ.
• ಕಲಬುರಗಿಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡಲಾಗಿದೆ.
• ಬೀದರ್ ಜಿಲ್ಲೆಯಲ್ಲಿಯೂ ಸಹ ವಿಮಾಣ ನಿಲ್ದಾಣ ಸ್ಥಾಪನೆಯಾಗಿದೆ ಹಾಗೂ 2024-25ನೇ ಸಾಲಿನಲ್ಲಿ ರೂ.18.00 ಕೋಟಿ ನೀಡಲಾಗಿದೆ.
• ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ರಾಯಚೂರು, ಬೆಳಗಾವಿ ಮತ್ತು ಬೀದರ್ ಹಾವೇರಿ, ಕೊಪ್ಪಳಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಗದಗ, ಬಾಗಲಕೋಟೆಗಳಲ್ಲಿ ಈಗ ಪ್ರಾರಂಭಿಸಲಾಗುತ್ತದೆ.
• ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಬೀದರನಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪನೆ ಮಾಡಲಾಗಿದೆ.
• ಉತ್ತರ ಕರ್ನಾಟಕದ ಅರಬಾವಿ ಗೋಕಾಕ್ ಜಿಲ್ಲೆ, ಮುನಿರಾಬಾದ್ ಕೊಪ್ಪಳ ಜಿಲ್ಲೆ, ಬೀದರ್, ಬಾಗಲಕೋಟೆ, ಹಾವೇರಿ ಮತ್ತು ಶಿರಸಿಯಲ್ಲಿ ತೋಟಗಾರಿಕೆ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
• ತೋಟಗಾರಿಕೆ ಸೇವಾ ಕೇಂದ್ರಗಳನ್ನು ಕಲಬುರ್ಗಿ, ರಾಯಚೂರು, ಬಿಜಾಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲಾಗಿದೆ.
• ಬೀದರನಲ್ಲಿ ಕರ್ನಾಟಕ ಪಶುವೈದ್ಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ.
• ಕಲಬುರಗಿಯಲ್ಲಿ ಹೈನುಗಾರಿಕೆ ವಿಜ್ಞಾನ ಕಾಲೇಜನ್ನು ಸ್ಥಾಪಿಸಲಾಗಿದೆ.
• ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿದ ಬಹುಪಾಲು ತಾಲ್ಲೂಕುಗಳಲ್ಲಿ ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆಗಳನ್ನು ಸ್ಥಾಪಿಸಲಾಗಿದೆ.
• ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ವಾರ್ಡ್ ಗಳನ್ನು ಸ್ಥಾಪಿಸಲಾಗಿದೆ.
• ಬೀದರ್-ಕಲಬುರಗಿ ರೈಲು ಮಾರ್ಗ, ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.
• ರೈತ ತರಬೇತಿ ಕೇಂದ್ರಗಳನ್ನು ಕೃಷಿ ಇಲಾಖಾ ವತಿಯಿಂದ ಸ್ಥಾಪಿಸಲಾಗಿರುತ್ತದೆ.
• ಹೊಸ ಪಶುಪಾಲನ ಕೇಂದ್ರಗಳು ಸ್ಥಾಪನೆಯಾಗಿರುತ್ತವೆ.
• ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವುಳ್ಳಎಪಿಎಂಸಿ ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ.
• ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಲಾಗಿರುತ್ತದೆ.
• 39 ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಶಿಕ್ಷಕರ ವಸತಿ ಗೃಹ, ಕ್ಲಸ್ಟರ್ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

