ಆರ್ಚ್ ಬಿಷಪ್ ಡೆರೆಕ್ ಫೆರ್ನಾಂಡೀಸ್ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ: ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಪ್ರೀತಿ ಮತ್ತು ಅನುಕಂಪಗಳೇ ಎಲ್ಲ ಧರ್ಮಗಳ ತಿರುಳು. ನಮ್ಮ ದೇಶದಲ್ಲಿ ಹಲವು ಜಾತಿಧರ್ಮಗಳ ಜನರಿದ್ದರೂ, ಎಲ್ಲರೂ ಐಕ್ಯತೆ ಹಾಗೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಸಮಾಜವನ್ನು ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಧರ್ಮಪ್ರಾಂತ್ಯಕ್ಕೆ ಭೇಟಿ ನೀಡಿ ಆರ್ಚ್ ಬಿಷಪ್ ಡೆರೆಕ್ ಫೆರ್ನಾಂಡೀಸ್ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಹಾಗೂ ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಸಮಾನ ಅವಕಾಶಗಳನ್ನು ನೀಡುವ, ಸಮಾಜವಾದವನ್ನು ಪ್ರತಿಪಾದಿಸುವ ಸಮಾಜ ನಿರ್ಮಿಸುವ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಇದಕ್ಕೆ ಪೂರಕವಾಗಿ ಕ್ರಿಶ್ಚಿಯನ್ ಸಮುದಾಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ದ್ವೇಷ ಬಿತ್ತುವ ಕೆಲಸದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳ ತಿರುಳು ಪ್ರೀತಿ ಮತ್ತು ಅನುಕಂಪ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಎಲ್ಲ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದರು.

