ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಸ್ವಾತಂತ್ರ್ಯದ ಬೆಳಗು, ಕರ್ನಾಟಕ ಅಭಿವೃದ್ಧಿ ಮಾದರಿಯ ಮಿನುಗು

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಅನಾವರಣಗೊಳಿಸಿದ ನಾಡಿನ ಅಭಿವೃಧ್ಧಿ ನಕಾಶೆಯು ಈ ಕಾರಣಕ್ಕೆ ಕರ್ನಾಟಕದ ಭವ್ಯ ಭವಿತವ್ಯದ ದಿಕ್ಸೂಚಿಯಾಗಿದೆ.

ಅಭಿವೃದ್ಧಿಯ ಯಂತ್ರಕ್ಕೆ ಹಲವು ಚಕ್ರಗಳು. ಅಭಿವೃದ್ಧಿಯ ಪಥದಲ್ಲಿ ಸಾಗುವುದೆಂದರೆ ಗಡಿಯಾರದ ಯಂತ್ರದೊಳಗೆ ಅಡಕಗೊಂಡಿರುವ ಚಿಕ್ಕ, ದೊಡ್ಡ ತಿರುಗಣೆ ಚಕ್ರಗಳನ್ನೆಲ್ಲವನ್ನೂ ಒಗ್ಗೂಡಿಸಿ ಪ್ರಗತಿಯ ತೇರು ಎಳೆಯುವ ಕೆಲಸದಂತೆ. ಹಾಗಾಗಿಯೇ ಅಭಿವೃದ್ಧಿಯ ನೊಗ ಹೊತ್ತವರಿಗೆ ನಾಡಿನ ಆರ್ಥಿಕತೆಯ ಸ್ಥೂಲ (ಮ್ಯಾಕ್ರೋ), ಸೂಕ್ಷ್ಮ (ಮೈಕ್ರೋ) ಗ್ರಹಿಕೆಗಳೆರಡರ ಅರಿವು ಒಟ್ಟಂದದಲ್ಲಿ ಕಾಣುತ್ತಿರಬೇಕು. ಆಗ ಮಾತ್ರವೇ ಏಕಕಾಲಕ್ಕೆ ನಾಡೊಂದನ್ನು ಸಾಮಾಜಿಕ, ಆರ್ಥಿಕ ಪ್ರಗತಿ ಪಥದಲ್ಲಿ ಒಯ್ಯಲು ಸಾಧ್ಯ.

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 77ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಅನಾವರಣಗೊಳಿಸಿದ ನಾಡಿನ ಅಭಿವೃಧ್ಧಿ ನಕಾಶೆಯು ಈ ಕಾರಣಕ್ಕೆ ಕರ್ನಾಟಕದ ಭವ್ಯ ಭವಿತವ್ಯದ ದಿಕ್ಸೂಚಿಯಾಗಿದೆ. ನಾಡಿನ ಸುಸ್ಥಿರ, ಸಮಗ್ರ ಅಭಿವೃಧ್ಧಿಯ ಆಶಯವನ್ನಷ್ಟೇ ಅದು ಅನಾವರಣ ಮಾಡದೆ, ಅದರ ಅನುಷ್ಠಾನಕ್ಕೆ ಕೈಗೊಂಡಿರುವ ಮಹತ್ವದ ಕ್ರಮಗಳ ಮಾಹಿತಿಯನ್ನೂ ಅದು ವಿಫುಲವಾಗಿ ನೀಡಿದೆ. ಸಾಮಾಜಿಕ ಹಾಗೂ ಭೌತಿಕ ಅಭಿವೃದ್ಧಿಯೆರಡನ್ನೂ ಒಗ್ಗೂಡಿಸಿ ಕರ್ನಾಟಕದ ಆರ್ಥಿಕತೆಗೆ ಚೈತನ್ಯವನ್ನೂ, ಓಘವನ್ನು ನೀಡಿರುವುದನ್ನು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕರ್ನಾಟಕದ ಸರ್ವಾಂಗೀಣ ಪ್ರಗತಿಯ ಈ ಮಾದರಿಯನ್ನು ಅವರು ‘ಕರ್ನಾಟಕ ಅಭಿವೃದ್ಧಿ ಮಾದರಿ’ ಎಂದೇ ಹೆಸರಿಸಿದ್ದಾರೆ.

ಒಂದೆಡೆ ಜನರ ಸಾಮಾಜಿಕ, ಆರ್ಥಿಕ ಚೈತನ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಮೂಲ ಆದಾಯ [Universal Basic Income] ಪರಿಕಲ್ಪನೆಯಡಿ ಕೈಗೊಂಡಿರುವ ಐದು ಗ್ಯಾರಂಟಿ ಯೋಜನೆಗಳು ಮತ್ತೊಂದೆಡೆ ನಾಡಿನ ಮೂಲಸೌಕರ್ಯವನ್ನು ಹೆಚ್ಚಿಸಲು ಕೈಗೊಂಡಿರುವ ಕ್ರಮಗಳು ಹಾಗೂ ಬಂಡವಾಳವನ್ನು ಆಕರ್ಷಿಸುವ ಮೂಲಕ ಉದ್ಯೋಗ ಸೃಷ್ಟಿಯನ್ನು ದಾಖಲಿಸಲು ನಡೆಸಿರುವ ಪ್ರಯತ್ನಗಳ ಬಗ್ಗೆ ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಸರಳವಾಗಿ, ಸುದೀರ್ಘವಾಗಿ ವಿವರಿಸಿದರು. ಭಾಷಣದ ವೇಳೆ ಮುಖ್ಯಮಂತ್ರಿಯವರು ಪ್ರಸ್ತಾಪಿಸಿದ ಅಂಕಿಅಂಶಗಳು ಈ ದೃಷ್ಟಿಯಿಂದ ಗಮನಾರ್ಹ.

ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರ ಅನುಕೂಲವಾಗುತ್ತಿದೆ ಎಂದು ಮುಖ್ಯಮಂತ್ರಿಯವರು ಭಾಷಣದಲ್ಲಿ ತಿಳಿಸಿದ್ದಾರೆ. ಈವರೆಗೆ ಈ ಯೋಜನೆಯಡಿ ನಾಡಿನ ಮಹಿಳೆಯರು 38.58 ಕೋಟಿ ಟ್ರಿಪ್‌ಗಳನ್ನು ಪೂರೈಸಿದ್ದಾರೆ. ಈ ಯೋಜನೆಯು ನಾಡಿನ ಆರ್ಥಿಕ ಶಕ್ತಿಗೆ ಚೈತನ್ಯವೀಯುತ್ತಿದ್ದು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಶಂಸೆಗೆ ಕಾರಣವಾಗಿದೆ ಎನ್ನುವ ಅಂಶಗಳನ್ನು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಮುಂದುವರೆದು, ಎರಡನೆಯ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿಯ ಮೂಲಕ ಪ್ರತಿಯೊಂದು ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ 1.49 ಕೋಟಿ ಗ್ರಾಹಕರು ಯೋಜನೆಯಡಿ ನೊಂದಾಯಿಸಿಕೊಂಡಿದ್ದು ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿಯವರು ನೀಡಿದರು. ಈ ಸೌಲಭ್ಯಕ್ಕಾಗಿಯೇ ರಾಜ್ಯ ಸರ್ಕಾರವು ವಾರ್ಷಿಕ 13,910 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿರುವುದಾಗಿ ತಿಳಿಸಿದರು.

ಅದೇ ರೀತಿ, ಹಸಿವು ಮುಕ್ತ ಕರ್ನಾಟಕದ ಕಲ್ಪನೆಯನ್ನು ಸಾಕಾರಗೊಳಿಸುವ ಸಲುವಾಗಿ ಮತ್ತೊಂದು ಗ್ಯಾರಂಟಿ ಯೋಜನೆ ‘ಅನ್ನ ಭಾಗ್ಯ’ವನ್ನು ಜಾರಿಗೊಳಿಸಿದ್ದು. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರವು ಪ್ರತಿ ಫಲಾನುಭವಿಗೆ ಕೇಂದ್ರವು ನೀಡುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ 5 ಕೆ ಜಿ ಅಕ್ಕಿಯ ಬದಲಿಗೆ ಅನ್ನಭಾಗ್ಯ ಯೋಜನೆಯಡಿ 1.04 ಕೋಟಿ ಕುಟುಂಬಗಳು ನಗದು ಸೌಲಭ್ಯ ಪಡೆಯುತ್ತಿವೆ. ಉಳಿದ ಕುಟುಂಬಗಳಿಗೆ ಸದ್ಯದಲ್ಲಿಯೇ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಿರುವುದಾಗಿ ಮಾಹಿತಿ ನೀಡಿದರು.

ಇನ್ನು, ಬಡತನ ನಿವಾರಣೆಗೆ ನೇರ ನಗದು ನೀಡುವ ಕಾರ್ಯಕ್ರಮ ಅತ್ಯುತ್ತಮ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಗೃಹಲಕ್ಷ್ಮಿ’ ಯೋಜನೆಯ ಮುಖೇನ ಮಾಸಿಕ ರೂ.2000 ಹಣವನ್ನು ಕುಟುಂಬಗಳ ಯಜಮಾನಿಯರಿಗೆ ವರ್ಗಾಯಿಸಲಾಗುವುದು. ಯೋಜನೆಗೆ ಆಗಸ್ಟ್‌ 27ರಂದು ಚಾಲನೆ ನೀಡಲಾಗುವುದು ಎಂದಿದ್ದಾರೆ. ಇದಾಗಲೆ 1.08 ಕೋಟಿ ಕುಟುಂಬಗಳ ಯಜಮಾನಿಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮತ್ತೊಂದು ಮಹತ್ವದ, ಐದನೆಯ ಗ್ಯಾರಂಟಿ ಯೋಜನೆಯಾದ ಯುವನಿಧಿಯು ಪದವಿ, ಡಿಪ್ಲೊಮಾ ಪಡೆದ ಯುವಕರಿಗೆ ಕೂಡಲೇ ಉದ್ಯೋಗ ದೊರೆಯದಿದ್ದರೆ, ನಿರಾಶರಾಗದಂತೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಆರ್ಥಿಕ ಬೆಂಬಲವನ್ನು ನೀಡುವ ಯೋಜನೆಯಾಗಿದೆ ಎಂದು ವಿವರಿಸಿದರು. ಇದರಡಿ ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದ ಯುವಜನರಿಗೆ ಉದ್ಯೋಗ ದೊರೆಯುವವರೆಗೆ ಅಥವಾ ಗರಿಷ್ಠ ಎರಡು ವರ್ಷದವರೆಗೆ, ಪದವೀಧರರಿಗೆ 3000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. 2022-23ರ ಶೈಕ್ಷಣಿಕ ವರ್ಷ ಅಂತ್ಯಗೊಂಡ 6 ತಿಂಗಳ ನಂತರ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.


ಈ ಗ್ಯಾರಂಟಿ ಯೋಜನೆಗಳು ಒಟ್ಟಂದದಲ್ಲಿ ಆರ್ಥಿಕ ವ್ಯವಸ್ಥೆಯ ಚೈತನ್ಯಕ್ಕೆ ಹಾಗೂ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಲಿವೆ ಎನ್ನುವುದನ್ನು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ವಿವರಿಸಿದರು. ಸರ್ಕಾರವು ರಾಜ್ಯದ ಭೌತಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬ ಎರಡೂ ಮಾದರಿಗಳನ್ನು ಒಂದೇ ರೀತಿಯಲ್ಲಿ ಪರಿಭಾವಿಸಿದೆ. ನಾವು ಸೃಷ್ಟಿಸಲು ಹೊರಟಿರುವ ಅಭಿವೃದ್ಧಿಯಲ್ಲಿ ರಾಜ್ಯದ ಸರಾಸರಿ 1.30 ಕೋಟಿ ಕುಟುಂಬಗಳಿಗೆ ಸೇರಿದ ಜನರು ಪಾಲ್ಗೊಳ್ಳುತ್ತಿದ್ದಾರೆ. ಇಷ್ಟು ವ್ಯಾಪಕ ಪ್ರಮಾಣದ ಕೋಟಿ ಜನರಿಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಸವಲತ್ತುಗಳು ನೇರವಾಗಿ ತಲುಪಲಿವೆ. ಇದರೊಟ್ಟಿಗೇ ಸಮಗ್ರ ಮಹಿಳಾ ಸಶಕ್ತೀಕರಣ ಈ ಯೋಜನೆಗಳಿಂದ ಸಾಧ್ಯವಾಗಲಿದೆ. ಇದರಿಂದ ಕರ್ನಾಟಕ ಮಾದರಿ ಅಭಿವೃದ್ಧಿ ವ್ಯಾಖ್ಯಾನವು ಪ್ರಾರಂಭವಾಗಲಿದೆ ಎಂದು ಖಚಿತವಾಗಿ ನುಡಿದರು.

ಗ್ಯಾರಂಟಿ ಯೋಜನೆಗಳು ಮಾತ್ರವೇ ಅಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ಸ್ಥಗಿತಗೊಂಡಿದ್ದ, ಈ ಹಿಂದಿನ ತಮ್ಮದೇ ಸರ್ಕಾರದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ್ದ ಕೃಷಿ ಭಾಗ್ಯ, ಅನುಗ್ರಹ ಯೋಜನೆ, ವಿದ್ಯಾಸಿರಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಥಗಿತಗೊಂಡಿರುವ ವಿದ್ಯಾರ್ಥಿವೇತನ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮರುಜಾರಿಗೆ ಕ್ರಮ ಕೈಗೊಳ್ಳುವ ಮಾಹಿತಿಯನ್ನೂ ಮುಖ್ಯಂತ್ರಿಯವರು ಭಾಷಣದ ವೇಳೆ ನೀಡಿದ್ದಾರೆ.

ಶೋಷಿತ ವರ್ಗದ ಶ್ರೇಯೋಭಿವೃದ್ಧಿಗೆ ಪಿಟಿಸಿಎಲ್‌ ಕಾಯಿದೆಗೆ ಮಾಡಲಾಗಿರುವ ತಿದ್ದುಪಡಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆಯಾದ ಭೂಮಿಯ ಅಕ್ರಮ ಪರಭಾರೆ ವಿರುದ್ಧ ದೂರು ನೀಡಲು ಯಾವುದೇ ಕಾಲಮಿತಿ ಇಲ್ಲ ಎಂದು ತಿಳಿಸುವ ಮೂಲಕ ಈ ವರ್ಗಗಳಲ್ಲಿ ಭರವಸೆ ಮೂಡಿಸಿದ್ದಾರೆ. ಅಲ್ಲದೆ, ಈ ಸಮುದಾಯಗಳಿಗೆ ಮೀಸಲಿರುವ ಅನುದಾನ ಇತರೆ ಕಾರ್ಯಗಳಿಗೆ ದುರ್ಬಳಕೆಯಾಗುವುದನ್ನು ತಡೆಗಟ್ಟಲು ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ವಿಶೇಷ ಯೋಜನೆ ಕಾಯ್ದೆ 2013ರ ಸೆಕ್ಷನ್ 7(ಡಿ)ಯನ್ನು ಜಾರಿಗೆ ತಂದಿರುವುದನ್ನು ಪ್ರಸ್ತಾಪಿಸಿದ್ದಾರೆ.

ದಮನಿತ ವರ್ಗಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ ಪರಿಶಿಷ್ಟ ಜಾತಿ/ ಪಂಗಡಗಳ ಜನರಿಗೆ ನೀಡುತ್ತಿದ್ದ ಗುತ್ತಿಗೆ ಮೊತ್ತದ ಮಿತಿಯನ್ನು 50 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳಿಗೆ ಏರಿಸಲಾಗಿರುವ ಮಾಹಿತಿಯನ್ನು ಸಹ ಮುಖ್ಯಮಂತ್ರಿಗಳು ಭಾಷಣದಲ್ಲಿ ಹಂಚಿಕೊಂಡರು. ಇದಲ್ಲದೆ ಶಿಕ್ಷಣ, ಆರೋಗ್ಯ, ಹೈನುಗಾರಿಕೆ ಮುಂತಾದ ಕ್ಷೇತ್ರಗಳಿಗೆ ನೀಡಿರುವ ಒತ್ತು, ಜಾರಿಗೊಳಿಸಲಾಗಿರುವ ಯೋಜನೆಗಳ ಮಾಹಿತಿಯನ್ನು ಮುಖ್ಯಮಂತ್ರಿಯವರು ನೀಡಿದರು. ವಿಶೇಷವಾಗಿ ಹೈನುಗಾರರು ಒದಗಿಸುವ ಪ್ರತಿ ಲೀಟರ್‌ ಹಾಲಿಗೆ 3 ರೂ. ಮೊತ್ತವನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಹೈನುಗಾರಿಕೆಗೆ ಹಾಗೂ ಆ ಮೂಲಕ ಗ್ರಾಮೀಣ ಅರ್ಥವ್ಯವಸ್ಥೆಗೆ ನವಚೈತನ್ಯವನ್ನು ತುಂಬಿರುವ ಬಗ್ಗೆ ವಿವರಿಸಿದರು.

ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆಗೊಳಿಸಲು ಉಪನಗರಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆಯೂ ಭಾಷಣದಲ್ಲಿ ಮಾಹಿತಿ ನೀಡಲಾಯಿತು. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿಗಳಲ್ಲಿ ಉಪನಗರ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಿದೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ಮೆಟ್ರೋ ರೈಲು 69.66 ಕಿ.ಮೀ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2026ರ ವೇಳೆಗೆ ಬೆಂಗಳೂರಿನಲ್ಲಿ 175.55 ಕಿ.ಮೀ. ಮೆಟ್ರೋ ಜಾಲ ಕಾರ್ಯಾಚರಣೆ ನಡೆಸಲಿದೆ ಎಂದು ಮಾಹಿತಿ ಹಂಚಿಕೊಂಡರು.

ರಾಜ್ಯದ ಜನತೆಗೆ ಜೀವನೋಪಾಯವನ್ನು ಕಲ್ಪಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಭಿನ್ನ ಕಾರ್ಯತಂತ್ರಗಳನ್ನು ನಮ್ಮ ಸರ್ಕಾರವು ಅಳವಡಿಸಿಕೊಳ್ಳಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಜನೆ ಮಾಡಲು ಹಾಗೂ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಕೃಷಿ ಸಂಸ್ಕರಣೆ ಉದ್ಯಮಗಳ ಸ್ಥಾಪನೆಗೆ ಬೆಂಬಲ ನೀಡಲಾಗುವುದು. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೆ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಉತ್ಪಾದನಾ ವಲಯದಲ್ಲಿ ಸುಸ್ಥಿರ ಬೆಳವಣಿಗೆಯ ಮೂಲಕ ಏಷ್ಯಾದಲ್ಲಿಯೇ ಮೊದಲ ಸ್ಥಾನಕ್ಕೆ ಒಯ್ಯುವ ಗುರಿಯ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಲಾಯಿತು. ಕಳೆದ 10 ವರ್ಷಗಳಲ್ಲಿ ರಾಜ್ಯದ ಕೈಗಾರಿಕಾ ವಲಯವು ಶೇ. 9.3 ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ದರವನ್ನು ಶೇ. 15-16 ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಪ್ರತಿವರ್ಷ ಕನಿಷ್ಠ 1.4 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 14 ಲಕ್ಷ ಹೊಸ ಉದ್ಯೋಗಗಳ ಸೃಜನೆಯಾಗುವ ಅಗತ್ಯವಿದೆ ಎಂದು ಅವರು ವಿವರಿಸಿದರು.

ಕಳೆದ ಎರಡು ತಿಂಗಳಲ್ಲಿ ಫಾಕ್ಸ್‍ಕಾನ್, ಇಂಟರ್‍ನ್ಯಾಷನಲ್ ಬ್ಯಾಟರಿ ಕಂಪೆನಿ, ಟಾಟಾ ಟೆಕ್ನಾಲಜೀಸ್ ಮತ್ತಿತರ ಕಂಪೆನಿಗಳಿಂದ ಗಣನೀಯ ಪ್ರಮಾಣದ ಹೂಡಿಕೆ ಆಕರ್ಷಿಸಲಾಗಿದೆ. ಹೂಡಿಕೆ ಆಕರ್ಷಣೆಯಲ್ಲಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆ, ಆಟೊಮೊಬೈಲ್, ವಿದ್ಯುತ್ ವಾಹನಗಳು (EV), ಇಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ವಲಯ, ಸ್ಟಾರ್ಟಪ್‍ಗಳು, ವಿವಿಧ ಸಂಘಟನೆಗಳು, ಮೂಲ ಸೌಕರ್ಯ ಅಭಿವೃದ್ಧಿ ವಲಯದ ಸಂಸ್ಥೆಗಳೊಂದಿಗೆ ನಿರಂತರ ಸಂವಾದ ನಡೆಸುತ್ತಿರುವುದಾಗಿ ತಿಳಿಸಿದರು.

ಜಿಡಿಪಿ ವೇಗವರ್ಧನೆಗೆ ಸಂಬಂಧಿಸಿದಂತೆ ವೈಮಾನಿಕ ಮತ್ತು ಭದ್ರತಾ ವಲಯಗಳ ಕೈಗಾರಿಕೆಗಳಿಗೆ ಹಾಗೂ ಎಲೆಕ್ಟ್ರಾನಿಕ್ ಬಿಡಿಭಾಗಗಳು, ಕೋರ್ ಕೈಗಾರಿಕೆಗಳು ಮತ್ತು ವೇರ್ ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸೂಚನೆ ನೀಡಿದರು. ಸೆಮಿಕಂಡಕ್ಟರ್‌ ಉದ್ಯಮದ ಸಹಿತ ನೂತನ ತಂತ್ರಜ್ಞಾನಾಧಾರಿತ ಉದ್ಯಮಗಳಿಗೆ ಆದ್ಯತೆ ನೀಡುವ ಭರವಸೆ ನೀಡಿದರು.

ಇದೆಲ್ಲವನ್ನೂ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೈಗಾರಿಕಾ ನೀತಿಯನ್ನು ಇನ್ನಷ್ಟು ಪ್ರಗತಿಪರವಾಗಿ ರೂಪಿಸಿ ಪುನರ್ ರಚಿಸುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು. ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯ, ಡಿಜಿಟಲ್ ಸೇವಾ ಪೂರೈಕೆ, ಅತ್ಯುತ್ತಮ ಹೂಡಿಕೆ ಉತ್ತೇಜನ ಸಂಸ್ಥೆಗಳನ್ನು ರೂಪಿಸುವ ವಾಗ್ದಾನ ಮಾಡಿದರು.

ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ದೃಷ್ಟಿಯಿಂದ ಬೆಂಗಳೂರಿನಿಂದ ಹೊರಗೆ ಹೆಚ್ಚು ಉದ್ಯೋಗಾವಕಾಶ ಸೃಜಿಸುವ ಮೂಲಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಸುಸ್ಥಿರ ಬದುಕು ರೂಪಿಸಲು ಒತ್ತು ನೀಡಿರುವುದಾಗಿ ಮುಖ್ಯಮಂತ್ರಿಯವರು ವಿವರಿಸಿದರು. ಸರ್ಕಾರವು ಮಿಲಿಯನ್ ಪ್ಲಸ್ ನಗರಗಳೆಂದು ಗುರುತಿಸಲಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಬಳ್ಳಾರಿ ನಗರಗಳ ಉಪನಗರಗಳಾಗಿ ಕೈಗಾರಿಕಾ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿಪಡಿಸಲಿದೆ ಎಂದು ಹೇಳಿದರು.

ಯಾವುದೇ ನಾಡಿನಲ್ಲಿ ಅಭಿವೃದ್ಧಿಯು ಸಾಧ್ಯವಾಗಬೇಕೆಂದರೆ ಅಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ಶಾಂತಿ, ಸಹಬಾಳ್ವೆ ಸಮಾಜದಲ್ಲಿ ಹಾಸುಹೊಕ್ಕಾಗಿರಬೇಕು ಎನ್ನುವ ಅಂಶವನ್ನು ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ವಿಶೇಷವಾಗಿ ಒತ್ತು ನೀಡಿದ್ದು ಗಮನಾರ್ಹವಾಗಿತ್ತು. ‘ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿʼ ಹೆಸರಿನಲ್ಲಿ ನಡೆಯುವ ಅನೈತಿಕ ದಬ್ಬಾಳಿಕೆಯನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ಭ್ರಷ್ಟಾಚಾರವನ್ನು ಹತ್ತಿಕ್ಕಲು, ನಾಡಿನ ನೆಲ, ಜಲ ಹಾಗೂ ಅಸ್ಮಿತೆಯನ್ನು ಎತ್ತಿಹಿಡಿಯಲು ತಾವು ಬದ್ಧ ಎಂದು ವಿವರಿಸಿದರು.

ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ತಮ್ಮ ನೇತೃತ್ವದ ಸರ್ಕಾರವು ಕೈಗೊಂಡಿರುವ ಕ್ರಮಗಳು, ಜಾರಿಗೊಳಿಸಿರುವ ಯೋಜನೆಗಳ ಮೂಲಕ ಅಭಿವೃದ್ಧಿಯ ವಿಚಾರದಲ್ಲಿ ತಾವು ಹೊಂದಿರುವ ವಿಸ್ತೃತ ಮುನ್ನೋಟವನ್ನು, ವಿಶಾಲ ಭಿತ್ತಿಯನ್ನು ನಾಡಿನ ಜನತೆಯೊಂದಿಗೆ ಹಂಚಿಕೊಂಡರು. ಆ ಮೂಲಕ ದೇಶಕ್ಕೆ ಮಾದರಿಯಾಗುವಂತಹ, ತನ್ನ ಅಂತಃಕರಣದಲ್ಲಿ ಮಾನವೀಯತೆಯನ್ನು ಹಾಸುಹೊಕ್ಕಾಗಿ ಉಳ್ಳ ‘ಕರ್ನಾಟಕ ಮಾದರಿ ಅಭಿವೃದ್ಧಿ’ಯನ್ನು ನೀಡಲು ಪಣತೊಟ್ಟರು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ