ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

100 ದಿನ | ರಾಜಕೀಯ, ಅಭಿವೃದ್ಧಿಯ ಪರಿಭಾಷೆ ಬದಲಿಸಿದ ಕರ್ನಾಟಕದ ‘ಗೇಮ್‌ ಚೇಂಜರ್’ ಸರ್ಕಾರ

ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಚುನಾವಣೆಗೂ ಮುನ್ನ ನಾಡಿನ ಜನತೆಗೆ ನೀಡಿದ್ದ ಭರವಸೆಯಂತೆ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎನ್ನುವ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಥಮ ಸಂಪುಟ ಸಭೆಯಲ್ಲಿಯೇ ತಾತ್ವಿಕ ಅನುಮೋದನೆ ನೀಡಿತು.

ಇಂದು ದೇಶಾದ್ಯಂತ ನಾಗರಿಕರಲ್ಲಿ ಚುನಾವಣಾ ಪ್ರಣಾಳಿಕೆಗಳ ವಿಚಾರವಾಗಿ ಒಂದು ಸಂಚಲನ ಮೂಡಿದೆ. ಜನಸಾಮಾನ್ಯರ ಚರ್ಚೆಗಳಲ್ಲಿ ಬಹುತೇಕ ಮರೆತೇ ಹೋದಂತಿದ್ದ ‘ಚುನಾವಣಾ ಪ್ರಣಾಳಿಕೆ’ ಎನ್ನುವ ವಿಷಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗಳ ಕೇಂದ್ರದಲ್ಲಿ ಕಾಣಿಸಿಕೊಂಡಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆ ಎನ್ನುವುದು ‘ಹುಸಿ ಆಶ್ವಾಸನೆಗಳ ಕಂತೆ’ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗಿದ್ದ ಸಂದರ್ಭದಲ್ಲಿಯೇ ಆ ಬಗ್ಗೆ ಅಗತ್ಯವಾಗಿ ಎಲ್ಲರೂ ಹೊಂದಬೇಕಾದ ಗಂಭೀರತೆಯನ್ನು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಾಧಿಸಿ ತೋರಿಸಿದೆ.

ಸರ್ಕಾರವೊಂದು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿಯೇ ದೇಶದ ರಾಜಕಾರಣದಲ್ಲಿ ಸಕಾರಾತ್ಮಕ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುತ್ತದೆ ಎನ್ನುವುದೇ ತನ್ನಷ್ಟಕ್ಕೆ ಒಂದು ದೊಡ್ಡ ಸಾಧನೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಚುನಾವಣೆಗೂ ಮುನ್ನ ನಾಡಿನ ಜನತೆಗೆ ನೀಡಿದ್ದ ಭರವಸೆಯಂತೆ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎನ್ನುವ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಥಮ ಸಂಪುಟ ಸಭೆಯಲ್ಲಿಯೇ ತಾತ್ವಿಕ ಅನುಮೋದನೆ ನೀಡಿತು. ಆಗ ಈ ಕುರಿತು, “ಇದು ಕೇವಲ ತಾತ್ವಿಕ ಅನುಮೋದನೆಯಷ್ಟೇ, ಇದನ್ನು ಅನುಷ್ಠಾನಗೊಳಿಸಲು ಐದು ವರ್ಷ ಸಾಲದು” ಎನ್ನುವ ಕೊಂಕು ಮಾತು, ಸಿನಿಕತನ ರಾಜಕೀಯವಾಗಿ ಕೇಳಿಬಂದು ಸಾರ್ವಜನಿಕವಾಗಿಯೂ ಹಬ್ಬಿತ್ತು. ಆದರೆ, ಇದಕ್ಕೆಲ್ಲ ಮಾತಿನಲ್ಲಿ ಉತ್ತರ ನೀಡದೇ ತ್ವರಿತಗತಿಯಲ್ಲಿ ನಾಲ್ಕು ಯೋಜನೆಗಳನ್ನು ನೂರು ದಿನಗಳ ಅಲ್ಪ ಅವಧಿಯಲ್ಲಿಯೇ ಅನುಷ್ಠಾನಗೊಳಿಸುವ ಮೂಲಕ ತನ್ನ ಕೃತಿಯಿಂದ ರಾಜ್ಯ ಸರ್ಕಾರ ಉತ್ತರ ನೀಡಿದೆ. ಇದು ಇಡೀ ದೇಶವನ್ನೇ ಒಂದು ಖುಷಿಯ ಅಚ್ಚರಿಗೆ ದೂಡಿದೆ.

ವರ್ಗಭೇದವಿಲ್ಲದೆ ನಾಡಿನ ಎಲ್ಲ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನಾಡಿನೊಳಗೆ ಎಲ್ಲಿ ಬೇಕಾದರೂ ಸಂಚರಿಸಲು ನಿಗದಿತ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಸಾರಿಗೆಯ ಸೌಲಭ್ಯವನ್ನು ಶಕ್ತಿ ಯೋಜನೆ ಕಲ್ಪಿಸಿದೆ. ಅದೇ ರೀತಿ, ಇನ್ನೂರು ಯೂನಿಟ್‌ ಗಳವರೆಗೆ ಪ್ರತಿ ಮನೆಗೆ ಉಚಿತವಾಗಿ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ, ಕುಟುಂಬದ ಯಜಮಾನಿಯರಿಗೆ ಮಾಸಿಕ ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆ ಹಾಗೂ ಬಿಪಿಎಲ್‌ ಕಾರ್ಡುಹೊಂದಿರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಗಳನ್ನು ಸರ್ಕಾರ ಇದಾಗಲೇ ಜಾರಿಗೆ ತಂದಿದೆ. ಇದರಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡಲು ಅಕ್ಕಿಯ ಕೊರತೆ ಉದ್ಭವಿಸಿರುವುದರಿಂದ ಈ ಸಮಸ್ಯೆ ಪರಿಹಾರವಾಗುವವರೆಗೆ ಇದಾಗಲೇ ನೀಡುತ್ತಿರುವ ಐದು ಕೆಜಿ ಅಕ್ಕಿಯ ಜೊತೆಗೆ, ಉಳಿದ ಐದು ಕೆಜಿ ಅಕ್ಕಿಗೆ ಪರ್ಯಾಯವಾಗಿ ಪ್ರತಿಯೊಬ್ಬ ಫಲಾನುಭವಿಗೂ ಐದು ಕೆಜಿ ಅಕ್ಕಿಗೆ ತತ್ಸಮಾನವಾಗಿ ರೂ.170 ಹಣವನ್ನು ಸರ್ಕಾರ ಪಾವತಿಸುತ್ತಿದೆ.

ಸರ್ಕಾರವೊಂದು ಸಮಾಜಮುಖಿಯಾಗಿ ಇಷ್ಟು ಕ್ಷಿಪ್ರ ಅವಧಿಯಲ್ಲಿ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಸಾಮಾಜಿಕ ರಕ್ಷಾ ಕವಚಗಳಂತಿರುವ ಈ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ದೇಶದಲ್ಲಿ ಮಾತ್ರವೇ ಅಲ್ಲದೆ ಜಾಗತಿಕವಾಗಿಯೂ ಹೊಸದಂದು ಸಂಕಥನಕ್ಕೆ ಕಾರಣವಾಗಿರುವುದು ಅತಿಶಯೋಕ್ತಿಯಲ್ಲ. ಇದಾಗಲೇ ಅನುಷ್ಠಾನಗೊಂಡಿರುವ ನಾಲ್ಕು ಯೋಜನೆಗಳಡಿ ಬರುವ ಫಲಾನುಭವಿಗಳ ಬೃಹತ್‌ ಪ್ರಮಾಣವನ್ನು ಗಮನಿಸಿದಾಗ ಈ ಯೋಜನೆಗಳು ಹುಟ್ಟುಹಾಕಿರುವ ಸಕಾರಾತ್ಮಕ ಚರ್ಚೆಗಳ ಮಹತ್ವ ತಿಳಿಯುತ್ತದೆ.

ರಾಷ್ಟ್ರ ರಾಜಕಾರಣದಲ್ಲಿ ಕಳೆದ ಕೆಲ ದಶಕಗಳಲ್ಲಿ ಮುಂಚೂಣಿಗೆ ಬಂದಿದ್ದ, ವಿಶೇಷವಾಗಿ ಕಳೆದೊಂದು ದಶಕದಲ್ಲಿ ವ್ಯಾಪಿಸಿಕೊಂಡಿದ್ದ ಕೋಮುವಾದ, ಮತೀಯದ್ವೇಷದ ರಾಜಕಾರಣವನ್ನು ಹಿನ್ನೆಲೆಗೆ ಸರಿಸಿ, ಸಮಾಜೋ-ಆರ್ಥಿಕ ಅಭಿವೃದ್ಧಿ ವಿಚಾರವನ್ನು ಮುನ್ನೆಲೆಗೆ ತರುವ ಮೂಲಕ ಕರ್ನಾಟಕದ ಸರ್ಕಾರವು ಚುನಾವಣಾ ರಾಜಕಾರಣದಲ್ಲಿ ಮಹತ್ವದ ಪಲ್ಲಟಕ್ಕೆ ಕಾರಣವಾಗಿದೆ. ಮುಂಬರುವ ವಿವಿಧ ವಿಧಾನಸಭಾ ಚುನಾವಣೆಗಳು, ಲೋಕಸಭಾ ಚುನಾವಣೆಗಳ ರಾಜಕೀಯ ಪರಿಭಾಷೆಯ ಮೇಲೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಕಾರಾತ್ಮಕ ಪರಿಣಾಮವನ್ನು ಬೀರತೊಡಗಿವೆ. ಬರಲಿರುವ ದಿನಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಅಣಿಯಾಗುತ್ತಿರುವ ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಕೋಮು ರಾಜಕಾರಣದ ಪಟ್ಟುಗಳನ್ನು ಸಡಿಲಗೊಳಿಸಿ ಅಭಿವೃದ್ಧಿ ರಾಜಕಾರಣವನ್ನು, ವಿಶೇಷವಾಗಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ವಿಷಯಗಳತ್ತ ಗಮನಹರಿಸುತ್ತಿರುವುದು ಕಂಡುಬರುತ್ತಿದೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯೇ ಸರಿ. ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕ ಸರ್ಕಾರವನ್ನು ಚುನಾವಣಾ ರಾಜಕಾರಣದ ಪರಿಭಾಷೆಯನ್ನು ಬದಲಾಯಿಸಿದ ‘ಗೇಮ್‌ ಚೇಂಜರ್‌ ಸರ್ಕಾರ’ ಎಂದು ಕರೆಯಲು ಅಡ್ಡಿಯಿಲ್ಲ.

ಮೇಲಿನದ ರಾಜಕಾರಣದ ಮಾತಾದರೆ, ಅಭಿವೃದ್ಧಿಯ ವಿಚಾರದಲ್ಲಿಯೂ ಸಹ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ‘ಗೇಮ್ ಚೇಂಜರ್‌’ಗಳಾಗಿವೆ. ಕಳೆದ ಮೂರು ದಶಕದಲ್ಲಿ ದೇಶದಲ್ಲಿ ನವ ಉದಾರೀಕರಣ ಚಿಂತನೆಗಳು, ಬಂಡವಾಳಶಾಹಿ ಅರ್ಥ ವ್ಯವಸ್ಥೆಯ ಫಲವಾಗಿ ವಿಫುಲ ಸಂಪತ್ತು, ಉದ್ಯೋಗಾವಕಾಶಗಳೇನೋ ಸೃಷ್ಟಿಯಾಗಿವೆ. ಆದರೆ, ಇದೇ ವೇಳೆ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರವೂ ವ್ಯಾಪಕವಾಗಿ ಹೆಚ್ಚಳವಾಗಿದೆ. ಇದು ಭೌಗೋಳಿಕವಾಗಿ, ವರ್ಗಾಧಾರಿತವಾಗಿಯೂ ಪ್ರತಿಫಲನವಾಗಿದೆ. ಇಂದು ದೇಶದ ಆರ್ಥಿಕ ಬೆಳವಣಿಗೆಯು ಬೆರಳೆಣಿಕೆಯ ಮೆಟ್ರೋ ನಗರಗಳ ಆರ್ಥಿಕ ಚಟುವಟಿಕೆ, ಅಭಿವೃದ್ಧಿ ದರವನ್ನು ಆಧರಿಸಿದೆ. ಮೆಟ್ರೋ ನಗರಗಳನ್ನು ನವ ಆರ್ಥಿಕತೆಯ ‘ಅಭಿವೃದ್ಧಿ ಎಂಜಿನ್‌ ಗಳು’ ಎನ್ನಲಾಗುತ್ತಿದೆ. ಆದರೆ, ಈ ಬೆಳವಣಿಗೆಯು ಭೌಗೋಳಿಕವಾಗಿ, ನಗರಕೇಂದ್ರಿತ ಹಾಗೂ ಗ್ರಾಮೀಣ ಕೇಂದ್ರಿತ ಅರ್ಥವ್ಯವಸ್ಥೆಯ ನಡುವೆ ವ್ಯಾಪಕ ಕಂದರ ನಿರ್ಮಾಣವಾಗಲು ಕಾರಣವಾಗಿದೆ. ಕೃಷಿ ಆಧರಿತ ಅರ್ಥವ್ಯವಸ್ಥೆಯೇ ಪ್ರಧಾನವಾದ ಗ್ರಾಮೀಣ ಭಾರತವು ಹಿಂದೆಂದೂ ಕಾಣದ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲವು ನಗರಗಳೆಡೆಗೆ ವಲಸೆ ಹೋಗುತ್ತಿರುವುದನ್ನು ಕಾಣುತ್ತಿದೆ.

ಆದರೆ, ಈ ವಲಸೆ ಬಹುತೇಕ ಗ್ರಾಮೀಣ ಕುಟುಂಬಗಳ ಪಾಲಿಗೆ, ವಿಶೇಷವಾಗಿ ಶ್ರಮದ ದುಡಿಮೆಯನ್ನೇ ನೆಚ್ಚಿಕೊಂಡಿರುವ ಕುಟುಂಬಗಳ ಪಾಲಿಗೆ ಹಿತಕರವಾಗಿಯೇನೂ ಇಲ್ಲ. ನಗರಗಳು ಈ ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನೇನೋ ನೀಡುತ್ತಿವೆ, ಆದರೆ ಅವರ ಸುಸ್ಥಿರ ಬದುಕಿಗೆ ದಾರಿಯಾಗುತ್ತಿಲ್ಲ. ಗ್ರಾಮೀಣ ಮತ್ತು ನಗರಗಳ ನಡುವೆ ಜೀವನ ನಿರ್ವಹಣಾ ವೆಚ್ಚದಲ್ಲಿ ಇರುವ ಅಪಾರ ಅಂತರದಿಂದಾಗಿ ಈ ಶ್ರಮಿಕ ವರ್ಗಗಳ ದುಡಿಮೆಯ ಬಹುಪಾಲನ್ನು ನಗರಗಳು ತಿಂದು ಹಾಕುತ್ತಿವೆ. ಅಷ್ಟೇ ಅಲ್ಲ, ನಗರಗಳೆಡೆಗೆ ನಡೆಯುತ್ತಿರುವ ಈ ವಲಸೆಯ ವ್ಯಂಗ್ಯ ಹೇಗಿದೆಯೆಂದರೆ ಹಳ್ಳಿಗಾಡಿನ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ದೊರೆಯುತ್ತಿದ್ದ ಉತ್ತಮ ಶಿಕ್ಷಣದಿಂದ ನಗರಪ್ರದೇಶಗಳಿಗೆ ವಲಸೆ ಬಂದ ಸಂದರ್ಭದಲ್ಲಿ ಈ ವಲಸೆ ಕುಟುಂಬಗಳ ಮಕ್ಕಳು ವಂಚಿತರಾಗುತ್ತಿದ್ದಾರೆ. ಅದರ ಬದಲಿಗೆ, ನಗರದ ಸಾಮಾಜಿಕ ಪ್ರತಿಷ್ಠೆಯನ್ನು ಅಳವಡಿಸಿಕೊಳ್ಳುವ ಭರದಲ್ಲಿ ದುಡ್ಡುತೆತ್ತು ಅರ್ಹ ಅಧ್ಯಾಪಕರು, ಸೂಕ್ತ ಮೂಲಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳಲ್ಲಿ ಕಳಪೆ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಈ ಕುಟುಂಬಗಳು ಅರ್ಪಿಸುತ್ತಿವೆ. ಇದು ಮತ್ತೊಂದು ಸುತ್ತಿನ ಸಾಮಾಜಿಕ, ಶೈಕ್ಷಣಿಕ ಕಂದರಕ್ಕೆ ಆಸ್ಪದವೀಯುತ್ತಿದೆ. ಅದೇ ರೀತಿ, ಶ್ರಮದ ಉದ್ಯೋಗಗಳನ್ನರಸಿ ಬರುವ ಕೌಶಲ್ಯರಹಿತ ದುಡಿಮೆಯ ಈ ಕೈಗಳು ನಗರಗಳಲ್ಲಿ ದಿನಗಳದಂತೆ ಸೋಲತೊಡಗುತ್ತವೆ. ಕೌಶಲ್ಯವಿಲ್ಲದೆ, ಕೇವಲ ದೈಹಿಕ ಬಲವನ್ನೇ ನಂಬಿಕೊಂಡ ಪರಿಣಾಮ ಅದರಿಂದ ದೊರೆಯುವ ದುಡಿಮೆಯಿಂದ ಕುಟುಂಬದ ಖರ್ಚುವೆಚ್ಚವನ್ನು ಸರಿದೂಗಿಸಲಾಗದೆ ಅಸಹಾಯವಾಗತೊಡಗುತ್ತವೆ.

ಈ ಸಮಸ್ಯೆಗಳ ಮೂಲವನ್ನು ಗಮನಿಸಿದರೆ, ಗ್ರಾಮೀಣ ಭಾಗದಿಂದ ಉದ್ಯೋಗಗಳ ಕಾರಣಕ್ಕೆ ಉಂಟಾಗುವ ವಲಸೆ, ವಿಶೇಷವಾಗಿ ಕೌಶಲರಹಿತ ಕಾರ್ಮಿಕರ ವಲಸೆ ತಂದೊಡ್ಡುವ ಸಮಸ್ಯೆಗಳು ಕಾಣುತ್ತವೆ. ಇಂತಹದ್ದನ್ನು ಪರಿಹರಿಸಲು ಇರುವ ದಾರಿಯೆಂದರೆ, ಶ್ರಮವನ್ನೇ ನಂಬಿಕೊಂಡಿರುವ ಈ ವರ್ಗಗಳಿಗೆ ಅವು ಮೂಲತಃ ವಾಸವಾಗಿರುವ ಸ್ಥಳಗಳಲ್ಲಿಯೇ ಸುಸ್ಥಿರ ಬದುಕಿಗೆ ಅಗತ್ಯವಾದ ಆಧಾರಗಳನ್ನು ಒದಗಿಸುವುದು. ಗ್ಯಾರಂಟಿ ಯೋಜನೆಗಳ ಭಾಗವಾಗಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯದಂತಹ ಯೋಜನೆಗಳು, ಗ್ರಾಮೀಣ ಉದ್ಯೋಗ ಖಾತರಿಯಂತಹ ಯೋಜನೆಗಳು ಈ ಕಾರ್ಯವನ್ನು ಸಮರ್ಥವಾಗಿ ಮಾಡಬಲ್ಲವಾಗಿವೆ.

ಹೀಗೆ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಬದುಕಿಗೆ ನೆರವಾಗುವ ಸಾಮರ್ಥ್ಯವಿರುವ ಈ ಯೋಜನೆಗಳು ನಗರ ಪ್ರದೇಶಗಳ ಕೆಳವರ್ಗಗಳ ಬದುಕಿನಲ್ಲಿಯೂ ಸಹ ಸ್ಥಿರತೆಯನ್ನು ಒದಗಿಸಿಕೊಡಲಿವೆ. ಇಂದು ಬೆಂಗಳೂರಿನಂತಹ ಮೆಟ್ರೋ ನಗರವೇ ಇರಲಿ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಂತಹ ತ್ವರಿತಗತಿಯ ಬೆಳವಣಿಗೆ ಕಾಣುತ್ತಿರುವ ನಗರಗಳೇ ಅಗಲಿ ಇಲ್ಲೆಲ್ಲಾ, ಮಧ್ಯಮ ಹಾಗೂ ಕೆಳ ವರ್ಗಗಳು ಸದಾಕಾಲ ಜೀವನಶೈಲಿ ಹಾಗೂ ಬೆಲೆ ಏರಿಕೆ ನಡುವೆ ಅಡಕತ್ತರಿಯಲ್ಲಿ ಸಿಲುಕಿ ತತ್ತರಿಸುತ್ತಿರುತ್ತಿವೆ. ವಾರ್ಷಿಕ ಆದಾಯ ರೂ. 3 ಲಕ್ಷ ಹಾಗೂ ಅದಕ್ಕಿಂತ ಕೆಳಗಿರುವ ಈ ಕುಟುಂಬಗಳ ಪಾಲಿಗೆ ಅದನ್ನು ಮೀರಿ ಗಳಿಸುವ ಅಥವಾ ಅದರಲ್ಲಿಯೇ ಉಳಿಸುವ ಪ್ರತಿಯೊಂದು ರೂಪಾಯಿ ಹಣವೂ ಬಹುಮುಖ್ಯವಾಗುತ್ತದೆ. ಭವಿಷ್ಯದ ಹೊಂಗನಸಿಗೆ, ಕೌಟುಂಬಿಕ ಭದ್ರತೆಗೆ ಆಸರೆಯಾಗುತ್ತದೆ. ಗ್ಯಾರಂಟಿ ಯೋಜನೆಗಳ ಫಲವಾಗಿ ಇಂದು ಇಂತಹ ಪ್ರತಿಯೊಂದು ಕುಟುಂಬದಲ್ಲಿಯೂ ಮಾಸಿಕ 3-4 ಸಾವಿರ ರೂ ಹಣ ಉಳಿತಾಯವಾಗುತ್ತಿದೆ. ಇದಕ್ಕಿಂತಲೂ ಕೆಳಗಿನ ಆದಾಯವಿರುವ ಬಡತನ ರೇಖೆಗಿಂತ ಕೆಳಗಿರುವ ಕಟುಂಬಗಳಿಗಂತೂ ಗೃಹಜ್ಯೋತಿ, ಶಕ್ತಿ ಯೋಜನೆಗಳ ಪ್ರಯೋಜನ ಮಾತ್ರವೇ ಅಲ್ಲದೆ, ಗೃಹಲಕ್ಷ್ಮಿ, ಅನ್ನಭಾಗ್ಯದಂತಹ ಯೋಜನೆಗಳ ಲಾಭವೂ ದೊರೆಯುತ್ತಿದ್ದು ಮಾಸಿಕ 4-5 ಸಾವಿರ ರೂಪಾಯಿ ಹಣದ ಪೂರಕ ಬೆಂಬಲ ದೊರೆಯುತ್ತಿದೆ. ಇದು ಈ ವರ್ಗಗಳ ಬದುಕಿನಲ್ಲಿ ಗಣನೀಯ ಸುಧಾರಣೆಗೆ ಕಾರಣವಾಗುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲವಾಗಿ ಉಂಟಾಗುತ್ತಿರುವ ಉಳಿಕೆ, ಗಳಿಕೆಗಳೆರಡೂ ಈ ವರ್ಗಗಳಿಗೆ ಸಾಮಾಜಿಕ ಭದ್ರತೆಯನ್ನು, ಸುಸ್ಥಿರತೆಯನ್ನು ತಂದುಕೊಡುವಲ್ಲಿ ಸಫಲವಾಗಿವೆ. ಇದರ ಪರಿಣಾಮ ಉತ್ತಮ ಶಿಕ್ಷಣ, ಆರೋಗ್ಯ ಸೇವೆಗಳನ್ನು ಪಡೆಯಲು, ವಿವಿಧ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸಲು ಈ ವರ್ಗಗಳಿಗೆ ಸಾಧ್ಯವಾಗುತ್ತಿದೆ.

ಮೇಲಿನ ಈ ಅಂಶಗಳನ್ನು ಗಮನಿಸಿದರೆ ಗ್ಯಾರಂಟಿ ಯೋಜನೆಗಳು ಕೇವಲ ರಾಜಕೀಯವಾಗಿ ಮಾತ್ರವೇ ಅಲ್ಲದೆ, ಸಮಾಜೋ-ಆರ್ಥಿಕ ದೃಷ್ಟಿಕೋನದಿಂದಲೂ ‘ಗೇಮ್ ಚೇಂಜರ್’ಗಳಾಗಿವೆ ಎನ್ನುವುದು ಅತಿಶಯೋಕ್ತಿಯಲ್ಲ. ಈ ಯೋಜನೆಗಳು ದೇಶದ ಮುಂದೆ ಮಾನವಿಕ ಅಭಿವೃದ್ಧಿ ಕೇಂದ್ರಿತವಾದ ಹೊಸದೊಂದು ಅಭಿವೃದ್ಧಿ ಮಾದರಿಯನ್ನು ಇರಿಸಿವೆ. ಭವಿಷ್ಯದಲ್ಲಿ ಸಮಾಜದಲ್ಲಿರುವ ಆರ್ಥಿಕ ಕಂದರವನ್ನು ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾಣಿಸತೊಡಗಿವೆ.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ