ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಕುರಿತ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, 2026-27ನೇ ಸಾಲಿನ ಬಜೆಟ್ ಬಗ್ಗೆ ಮಾತನಾಡಿದ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ವಿಮರ್ಶೆ, ಟೀಕೆಗಳನ್ನು, ಸ್ವಾಗತಿಸಿ ಅಭಿನಂದಿಸಿದರು. ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ನಿಖರ ಮತ್ತು ವಾಸ್ತವವಾಗಿದೆ. ಜಿಎಸ್ಟಿ ಪರಿಹಾರ ಹಾಗೂ ಕೇಂದ್ರದ ಪಾಲಿನ ಅನುದಾನ ಬಂದಿಲ್ಲ. ಇವೆಲ್ಲದ್ದರಿಂದ ಬಜೆಟ್ ರೆವಿನ್ಯೂ ಢೆಪಿಸಿಟ್ ಆಗಿದೆ. ಇಂತಹ ಸಂಕಷ್ಟದ ನಡುವೆಯೂ ನಮ್ಮ ಸರ್ಕಾರ ಸಮರ್ಪಕವಾಗಿ ಆರ್ಥಿಕತೆಯನ್ನು ನಿಭಾಯಿಸಿದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ 14ನೇ ಆಯೋಗದಲ್ಲಿ 4.713% ರಷ್ಟು ಪಾಲು ದೊರೆಕಿತ್ತು. ಆದರೆ 15 ನೇ ಹಣಕಾಸಿನ ಆಯೋಗದಲ್ಲಿ 3.647% ರಷ್ಟು ಅಂದರೆ 1.1% ರಷ್ಟು ಕಡಿಮೆಯಾಗಿ ಅನ್ಯಾಯವಾಗಿತ್ತು. ಇದರಂತೆ ₹11,495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ನಾವು ಧ್ವನಿಯೆತ್ತಬೇಕಾಯಿತು ಎಂದರು.
ಕೇಂದ್ರ ಸರ್ಕಾರ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ ₹5,300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಅಂದಿನ ರಾಜ್ಯದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿತು. ಆದರೆ ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ಆದ್ದರಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರೂ ಪ್ರಶ್ನಿಸಬೇಕು. ಆದ್ದರಿಂದ ಸರ್ವಪಕ್ಷದ ನಿಯೋಗದಲ್ಲಿ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಮನವಿ ಮಾಡಿಕೊಂಡರು.
ವಿರೋಧ ಪಕ್ಷದವರು, ಈ ಬಾರಿಯ ಬಜೆಟ್ ರೆವಿನ್ಯೂ ಡೆಫಿಸಿಟ್ ಎಂದು ಟೀಕಿಸುತ್ತಾರೆ. ಆದರೆ ಇದಕ್ಕೆ ಮೂಲ ಕಾರಣ, ಕೇಂದ್ರ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಆದ ಅನ್ಯಾಯ, ಜಿಎಸ್ಟಿ ಪರಿಷ್ಕರಣೆಯಿಂದ ₹10 ಸಾವಿರ ಕೋಟಿ ಖೋತಾ, ಜೆಜೆಎಂ ನಲ್ಲಿ ₹15 ಸಾವಿರ ಕೋಟಿ ಖೋತಾ, ಜಿಎಸ್ಟಿ ಪರಿಹಾರ ಸ್ಥಗಿತ ಮಾಡಿರುವುದು. ತೆರಿಗೆ ಸಂಗ್ರಹದ ಗುರಿಗಳು ಅವೈಜ್ಞಾವಿಕವಾಗಿದೆ ಎಂದು ಟೀಕೆ ಬಂದಿದೆ. 2025-26 ರಲ್ಲಿ ಗುರಿಯು ₹1,20,000 ಕೋಟಿ, 2026-27 ರಲ್ಲಿ ₹1,25,000 ಕೋಟಿ, 2025-26 ರಲ್ಲಿ ಅಬಕಾರಿ ತೆರಿಗೆ ₹40 ಸಾವಿರ ಕೋಟಿ, 2026-27 ಕ್ಕೆ ₹45 ಸಾವಿರ ಕೋಟಿ, ನೋಂದಣಿ ಇಲಾಖೆಯಡಿ 2026-27 ಕ್ಕೆ ₹29,000 ಕೋಟಿ, ಮೋಟಾರು ವಾಹನ ₹15,500 ಕೋಟಿಗಳ ತೆರಿಗೆಯ ಗುರಿಯನ್ನು ನೀಡಲಾಗಿದ್ದು, ಅವೈಜ್ಞಾನಿಕವಾಗಿ ಗುರಿ ನಿಗದಿ ಮಾಡಿರುವುದಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ
ಗ್ಯಾರಂಟಿ ಯೋಜನೆಗಳಿಂದ ಸಾಲ ಮಾಡಬೇಕಾಗಿ ಬಂದಿದೆ ಎಂಬ ಟೀಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ಮನುವಾದದ ಪ್ರಕಾರ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ, ಶಿಕ್ಷಣ ದೊರೆತಿರಲಿಲ್ಲ. ಪ್ರಧಾನಿ ಮೋದಿಯವರು ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಮಾಡಿದ್ದಾರೆ. ನಾವು ಸಂಪನ್ಮೂಲ ಕ್ರೋಡೀಕರಣಕ್ಕೆ ಕೆಲವೊಂದು ಬೆಲೆ ಏರಿಸಿದ್ದರೂ ಕೂಡ, ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ದರ ಏರಿಕೆ ಕಡಿಮೆಯೇ ಇದೆ ಎಂದರು.
ಗ್ಯಾರಂಟಿಗಳಿಗೆ 2026-27 ರಲ್ಲಿ ₹51,286 ಕೋಟಿ ನಿಗದಿಪಡಿಸಲಾಗಿದೆ. ಮಾರ್ಚ್ 2026ರವರೆಗೆ ₹1,31,000 ಕೋಟಿ ಗ್ಯಾರಂಟಿಗಳಿಗೆ ನೀಡಲಾಗಿದೆ. ನಮ್ಮ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ನಮ್ಮ ಗ್ಯಾರಂಟಿಗಳನ್ನೇ ಇತರೆ ರಾಜ್ಯಗಳಲ್ಲಿ ಅನುಸರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಡ್ಲಿ ಬೆಹನ್ ಯೋಜನೆಯಲ್ಲಿ 1,500 ರೂ. ಮಾಸಿಕ ನೀಡುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕಿಸುತ್ತಾರೆ. ಆದರೆ 2025-26 ರಲ್ಲಿ ಬಂಡವಾಳ ವೆಚ್ಚ ₹83,200 ಕೋಟಿ ಇಡಲಾಗಿದ್ದು , 2026-27ಕ್ಕೆ ಸುಮಾರು ₹84,567 ಕೋಟಿಗಳನ್ನು ಬಂಡವಾಳ ವೆಚ್ಚಕ್ಕೆ ಇಡಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ನಮಗಿಂತ ಕಡಿಮೆ ಬಂಡವಾಳ ವೆಚ್ಚವಿದೆ. ನೀರಾವರಿ, ಸಮಾಜ ಕಲ್ಯಾಣ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಿಗೆ ನಾವು ಅನುದಾನವನ್ನು ಕಡಿಮೆ ಮಾಡಿಲ್ಲ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರವಿನ್ನೂ ಅಧಿಸೂಚನೆ ಹೊರಡಿಸಿಲ್ಲ
ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರವಿನ್ನೂ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಹೊರಡಿಸಲು ಬಿಜೆಪಿ ಸಂಸದರೂ ಪ್ರಯತ್ನಿಸಬೇಕು. ಯೋಜನೆಯ ಭೂಸ್ವಾಧೀನಕ್ಕೆ 3 ಸಾವಿರ ಕೋಟಿ ಇಡಲಾಗಿದ್ದು, ಸ್ವಾಧೀನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಭೂ ಪರಿಹಾರ ನೀಡಬಹುದಾಗಿತ್ತು, ಆದರೂ ನೀಡಲಿಲ್ಲ. ನಮ್ಮ ಸರ್ಕಾರ ರೈತರಿಗೆ ಕನ್ಸೆಂಟ್ ಅವಾರ್ಡ್ ನಂತೆ ನೀರಾವರಿ ಜಮೀನಿಗೆ 40 ಲಕ್ಷ ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ನಿಗದಿಪಡಿಸಿದೆ. ಪೂರಕ ಬಜೆಟ್ನಲ್ಲಿ ಮತ್ತಷ್ಟು ಅನುದಾನ ನೀಡಲಾಗುವುದು. ಮಹಾದಾಯಿ ಮೇಕೆದಾಟು ಯೋಜನೆಗೆ ತೀರುವಳಿ ದೊರೆತಿಲ್ಲ ಎಂದು ತಿಳಿಸಿದರು.
2013ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಗೆ ಹಣ ನೀಡಬೇಕು ಎಂದು ಕಾನೂನು ಮಾಡಿದ್ದೆ. ಆದರೆ ಇಂತಹ ಜನಪರ ಯೋಜನೆಯನ್ನು ಬಿಜೆಪಿ ಸರ್ಕಾರ ಮಾಡಲೇ ಇಲ್ಲ. ಬಿಜೆಪಿಯ ಯಾವುದೇ ರಾಜ್ಯ ಸರ್ಕಾರಗಳು ಮಾಡಲಿಲ್ಲ. ಬಿಜೆಪಿಯ ನಾಲ್ಕು ವರ್ಷಗಳಲ್ಲಿ ಒಟ್ಟು ನೀಡಿದ್ದು 1,10,378 ಕೋಟಿ ರೂ.ಗಳು ಮಾತ್ರ. ಆದರೆ ಕಾಂಗ್ರೆಸ್ ನಾಲ್ಕು ವರ್ಷಗಳಲ್ಲಿ(ಮುಂದಿನ ವರ್ಷವೂ ಸೇರಿದಂತೆ) ಒಟ್ಟು 1,60,066 ಕೋಟಿ ರೂ. ನೀಡಲಿದೆ. ಬಿಜೆಪಿ ಸರ್ಕಾರಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚಿನ ಅನುದಾನವನ್ನು ಎಸ್ ಸಿ ಪಿ/ ಟಿಎಸ್ ಪಿ ಗೆ ನೀಡಿದೆ. ಒಟ್ಟು ಬಜೆಟ್ ಗಾತ್ರ 4,48,004 ಕೋಟಿ ರೂ. ರಲ್ಲಿ ಕರ್ನಾಟಕ 9.96% ರಷ್ಟು ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಯೋಜನೆ ಇಡಲಾಗಿದ್ದು, ಕೇಂದ್ರ ಸರ್ಕಾರ ಕೇವಲ 6.5% ರಷ್ಟು ಮಾತ್ರ ನಿಗದಿಪಡಿಸಿದೆ. ಕೇಂದ್ರಕ್ಕಿಂತ 3.36% ರಷ್ಟು ರಾಜ್ಯ ಸರ್ಕಾರ ಹೆಚ್ಚಿಗೆ ಮಾಡಿದೆ ಎಂದರು.
ಬಿಜೆಪಿ ನಾಲ್ಕು ವರ್ಷದಲ್ಲಿ 7ಡಿ ಯನ್ನು ರದ್ದು ಮಾಡಲಿಲ್ಲ. ಆದರೆ ನಮ್ಮ ಸರ್ಕಾರ 7ಡಿ(deemed expenditure) ಯನ್ನು ರದ್ದುಗೊಳಿಸಿತು. ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಯೋಜನೆಯಡಿ ಅನುದಾನ ನೀಡಲಾಗಿದ್ದು, ಇದರ ಹಣವನ್ನು ಗ್ಯಾರಂಟಿಗಳಿಗೆ ನೀಡಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ತಾವು ಅಧಿಕಾರದಲ್ಲಿದ್ದಾಗ ಬಿಜೆಪಿಯವರು ದಲಿತರಿಗೆ ನ್ಯಾಯ ನೀಡಲಿಲ್ಲ. ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆಯೇ ಹೊರತು ನಿಜವಾದ ಕಾಳಜಿ ಇಲ್ಲ. ಅಂಬೇಡ್ಕರ್ ಅವರು ಹೇಳಿದಂತೆ ಶೋಷಿತರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಲೇಬೇಕು, ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಸಮಾನತೆ ಬರುವುದಿಲ್ಲ. ನಮ್ಮ ಸರ್ಕಾರ ಬಡವರು, ಮಹಿಳೆಯರು, ದಲಿತರಿಗೆ ಶಕ್ತಿ ನೀಡಲು ಗ್ಯಾರಂಟಿಗಳನ್ನು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು .
ಬಿಜೆಪಿಯವರು ಟ್ರಿಕಲ್ ಡೌನ್ ಆರ್ಥಿಕ ತತ್ವ ಅಂದರೆ ಶ್ರೀಮಂತರಿಗೆ ಹೆಚ್ಚಿನ ಅನುಕೂಲವಾಗಿಸುವ ಆರ್ಥಿಕ ತತ್ವ ಪಾಲಿಸಿದರೆ, ನಮ್ಮ ಸರ್ಕಾರ ತಳಸಮುದಾಯದವರಿಗೆ ಶಕ್ತಿ ತುಂಬುವ ಮೂಲಕ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದ ಆರ್ಥಿಕತೆಯನ್ನು ಪಾಲಿಸುತ್ತದೆ. ನಮ್ಮ ಗ್ಯಾರಂಟಿಗಳನ್ನು ಯಾವುದೇ ಬೇಧವಿಲ್ಲದೇ ಎಲ್ಲ ಜಾತಿ ವರ್ಗ ಧರ್ಮದವರಿಗೂ ಕೊಡಲಾಗುತ್ತಿದೆ. ಗ್ಯಾರಂಟಿ ಯೋಜನೆಯ ಲಾಭ ಬಿಜೆಪಿಯವರೂ ಸೇರಿದಂತೆ ಎಲ್ಲರಿಗೂ ದೊರೆಯುತ್ತಿದೆ.
ಮೌಢ್ಯ ನಿಷೇಧ ಕಾಯ್ದೆ ಸೇರಿದಂತೆ ವೈಚಾರಿಕತೆ, ಸಮಾನತೆ ಸಾರುವ ಕಾಯ್ದೆ ಹಾಗೂ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಸಮಾಜದ ಜಾತಿ ವ್ಯವಸ್ಥೆಯಲ್ಲಿ ಜಡತ್ವವಿದೆ. ಈ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ನಮ್ಮ ಸರ್ಕಾರ ಎಸ್ ಸಿ ಎಸ್ ಪಿ/ ಟಿಎಸ್ ಪಿ ಯೋಜನೆ ತಂದಿದ್ದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ, ಮುಂಬಡ್ತಿಯಲ್ಲಿ ಮೀಸಲಾತಿಯನ್ನು ನೀಡಲಾಯಿತು. ಇಂತಹ ಉತ್ತಮ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು.
ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ವಾವಲಂಬಿ ಬದುಕಿಗೆ ನಮ್ಮ ಸರ್ಕಾರ ನೆರವಾಗುತ್ತಿದೆ. ಬುದ್ಧನ ಕರುಣೆ, ಶರಣರ ಸಮಾನತೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರವಾಗಿ ಬಜೆಟ್ನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

