ಕರ್ನಾಟಕಕ್ಕೆ ಖಾಲಿ ಚೊಂಬು ನೀಡದೇ, ತುಂಬಿದ ಚೊಂಬನ್ನೇ ನೀಡಲಾಗಿದೆ
ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಕುರಿತ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಈ ವರೆಗೆ 17 ಬಜೆಟ್ ಗಳನ್ನು ಮಂಡಿಸಿದ್ದೇನೆ, ಬಜೆಟ್ ಮೇಲೆ 50 ಜನ ಮಾತನಾಡಿದ್ದು ಇದೇ ಮೊದಲು. ಚರ್ಚೆಯಲ್ಲಿ ಭಾಗವಹಿಸಿ, ಬಜೆಟ್ ಅನ್ನು ಟೀಕೆ, ಸ್ವಾಗತ, ವಿಮರ್ಶೆ ಮಾಡಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು.
ವಿರೋಧ ಪಕ್ಷದವರು ಸೋಷಿಯಲ್ ಮೀಡಿಯಾಕ್ಕೆ ಹೂರಣ ನೀಡಲು ಬಹಳ ಕಸರತ್ತು ಮಾಡಿ ಪದಪುಂಜಗಳನ್ನು ಬಳಸಿದ್ದಾರೆ. ವಿರೋಧಪಕ್ಷದ ನಾಯಕರು ಆಯವ್ಯಯದ ಬಗ್ಗೆ ಸ್ಥೂಲವಾಗಿ ಅಧ್ಯಯನ ಮಾಡದೇ, ಪ್ರತಿಕ್ರಿಯೆ ನೀಡಿದ್ದಾರೆಯೇ ಹೊರತು, ಆಳವಾದ ಅಧ್ಯಯನ ನಡೆಸಿಲ್ಲ ಎಂಬುದು ಕಂಡುಬರುತ್ತದೆ ಎಂದರು. ವಿರೋಧ ಪಕ್ಷದವರು ಬಜೆಟ್ ಅನ್ನು ಎಷ್ಟೇ ಟೀಕಿಸಿದರೂ, ಮಾವಿನ ಹಣ್ಣು ಬೇವಿನ ಹಣ್ಣು ಆಗಲು ಸಾಧ್ಯವಿಲ್ಲ. ಬಜೆಟ್ ಖಾಲಿ ಚೊಂಬು ಎಂದು ಟೀಕಿಸಲಾಗಿದೆ. ಆದರೆ ಕರ್ನಾಟಕಕ್ಕೆ ಖಾಲಿ ಚೊಂಬು ನೀಡದೇ, ತುಂಬಿದ ಚೊಂಬನ್ನೇ ನೀಡಲಾಗಿದೆ. ನಮ್ಮ ಬಜೆಟ್ ತುಂಬಿದ ಕೊಡ ಎಂದು ತಿಳಿಸಿದರು.
ಆರ್ಥಿಕ ತಜ್ಞರ ಅಭಿಪ್ರಾಯ ಮತ್ತು ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ಇದು ಎಲ್ಲ ಸಮುದಾಯಗಳನ್ನು ತಲುಪಿದ ಬಜೆಟ್, ರಾಜ್ಯದ ಸುಸ್ಥಿರ ಮತ್ತು ಸಶಕ್ತ 11ಜಿ ಮಾದರಿಯ ಬಜೆಟ್, ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಒತ್ತು, ಜನಪ್ರಿಯತೆ ಮತ್ತು ವಾಸ್ತವದ ಬಜೆಟ್, ರಾಜ್ಯದ ಬೊಕ್ಕಸವನ್ನು ಸುಸ್ಥಿರವಾಗಿಡುವ ದೂರದೃಷ್ಟಿಯ ಬಜೆಟ್, ನಿರುದ್ಯೋಗ ನಿವಾರಣೆ, ಸಾಮಾಜಿಕ ಭದ್ರತೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯದ ಮೇಲೆ ಕೇಂದ್ರಿತ ಹಾಗೂ ಎಲ್ಲರನ್ನೊಳಗೊಂಡ ಬಜೆಟ್, ಹೂಡಿಕೆಗಳಿಗೆ ಹಾಗೂ ನವೋದ್ಯಮಿಗಳಿಗೆ ನೆರವಾಗುವ ಯೋಜನೆಗಳ ಬಜೆಟ್ ಎಂಬ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ ಎಂದರು.
ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂ.ಗಳಷ್ಟು ಹೆಚ್ಚಿನ ಗಾತ್ರದ್ದಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ (2025 ರಲ್ಲಿ 50.65 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು. ಈ ವರ್ಷ 53.47 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ].
2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4 ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದನ್ನು ಹೇಳುತ್ತದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನು ದೇಶದಲ್ಲಿಯೇ ನಂ.1 ಮಾಡುವತ್ತ ಹೆಜ್ಜೆಯಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಷ್ಟೆಲ್ಲದರ ನಡುವೆ ನಾವು ವಿತ್ತೀಯ ಶಿಸ್ತನ್ನೂ ಪಾಲಿಸಿದ್ದೇವೆ. ನಮ್ಮ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟಿರಲಿದೆ. ನಮ್ಮ ಜಿ.ಎಸ್.ಡಿ.ಪಿ ಈ ವರ್ಷ 33,05,500 ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ. [ದೇಶದ ಜಿಡಿಪಿ ಗಾತ್ರವು 2026-27 ರ ಆಯವ್ಯಯದಲ್ಲಿ ಪ್ರಸ್ತಾಪಿಸಿರುವಂತೆ 393 ಲಕ್ಷ ಕೋಟಿ ರೂಗಳಷ್ಟಾಗಲಿದೆ]. ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಗೆ ಎದುರಾಗಿ ಶೇ.24.94 ರಷ್ಟಿರಲಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದಂತೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಗೆ ಎದುರಾಗಿ ಶೇ.55.6 ರಷ್ಟಿದೆ. [ಇದು ಶೇ.40 ರ ಒಳಗೆ ಇರಬೇಕು] ಎಂದರು. ನಮ್ಮ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇದೆ. ಮುಂದಿನ ವರ್ಷಕ್ಕೆ ಶೇ.2.95 ರಷ್ಟು ಇರಲಿದೆ ಎಂಬುದು ನಮ್ಮ ಅಂದಾಜಾಗಿದೆ. ಆದರೆ 2026-27ನೇ ಸಾಲಿಗೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟು ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 16 ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ರಾಜ್ಯಗಳು ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಶೇ.4.2 ರೊಳಗೆ ವಿತ್ತೀಯ ಕೊರತೆ ಹೊಂದಿರಬೇಕು. ಇದನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಂಡಿಸಿದ 17 ಆಯವ್ಯಯದಲ್ಲಿಯೂ ಆರ್ಥಿಕ ಶಿಸ್ತನ್ನೂ ಪಾಲಿಸಲಾಗಿದೆ. ಜನರಿಗೆ ಸಾಮಾಜಿಕ ನ್ಯಾಯ ನೀಡಿ, ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವುದು ಮುಖ್ಯ. ನಾವು ಅಧಿಕಾರದಲ್ಲಿದ್ದು, ಜನರಿಗೆ ಮಾಡುವ ಒಳಿತು ಅತ್ಯಂತ ಮುಖ್ಯವಾಗಿದೆ. ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರು, ದೀನದಲಿತರಿಗೆ ಶಕ್ತಿ ತುಂಬಿರುವುದು ಮುಖ್ಯ ಎಂದು ತಿಳಿಸಿದರು.
ದಕ್ಷಿಣ ಭಾರತದ ನಮ್ಮ ಸುತ್ತಮುತ್ತಲ ಪ್ರಗತಿಶೀಲ ರಾಜ್ಯಗಳಿಗೆ ಹೋಲಿಕೆ ಮಾಡಿದರೂ ಸಹ ನಮ್ಮ ವಿತ್ತೀಯ ಕೊರತೆಯ ಪ್ರಮಾಣ ನಿಗದಿತ ಮಟ್ಟದ ಒಳಗೇ ಇದೆ. 2025-26 ಪರಿಷ್ಕೃತ ಅಂದಾಜಿನಲ್ಲೂ ರಾಜ್ಯದ ವಿತ್ತೀಯ ಕೊರತೆ ಶೇ.2.95 ರಷ್ಟು ಇರಲಿದೆ. ಮಹಾರಾಷ್ಟ್ರದಲ್ಲಿ ಶೇ.3.0 ರಷ್ಟು, ಆಂಧ್ರಪ್ರದೇಶ ಶೇ.4.5, ಕೇರಳ ಶೇ.3.8, ತಮಿಳುನಾಡು ಶೇ.3.5 ರಷ್ಟು ಇರಲಿದೆ ಎಂದರು.
ವಾಸ್ತವವಾಗಿ ರೆವೆನ್ಯೂ ಡಿಫಿಸಿಟ್ ಇರಬಾರದು. ಆದರೆ ಕೇಂದ್ರ ಸರ್ಕಾರ ಒಳಗೊಂಡಂತೆ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ರೆವೆನ್ಯೂ ಡಿಫಿಸಿಟ್ ಇದೆ. ಅದರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳದ್ದೇ ಕಡಿಮೆ ಇದೆ. ವಿಜಯೇಂದ್ರ ಸೇರಿದಂತೆ ವಿಪಕ್ಷ ನಾಯಕರು ರೆವಿನ್ಯೂ ಸರಿಯಾಗಿ ಸಂಗ್ರಹವಾಗದ ಕಾರಣ ಪ್ರತಿ ವರ್ಷ ಬಜೆಟ್ಟನ್ನು ಪರಿಷ್ಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಯವ್ಯಯ ಅಂದಾಜಿಗೆ ಹೋಲಿಸಿದರೆ ಪಕ್ಕದ ರಾಜ್ಯಗಳ ಸ್ವಂತ ರಾಜಸ್ವ ಸಂಗ್ರಹಣೆಯು ವಾಸ್ತವ/ಪರಿಷ್ಕೃತ ಸಂಗ್ರಹಣೆಯಲ್ಲಿ ಕಡಿಮೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕರ್ನಾಟಕ ರಾಜ್ಯದ್ದೊಂದೆ ಸಮಸ್ಯೆಯಲ್ಲ. ಕೇಂದ್ರ ಸರ್ಕಾರದ ಅಪಕ್ವ ಆರ್ಥಿಕ ನೀತಿಗಳಿಂದ ಉಂಟಾಗುತ್ತಿರುವ ಸಮಸ್ಯೆಯಾಗಿದೆ. ಆದರೆ ನಮ್ಮ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೂ ಸಹ ನಮ್ಮ ಸ್ವಂತ ರಾಜಸ್ವ ಸಂಗ್ರಹ ಉತ್ತಮವಾಗಿದೆ. ಕೇಂದ್ರ ಸರ್ಕಾರದವರು ಕಳೆದ ವರ್ಷದ ಮಧ್ಯ ಭಾಗದಲ್ಲಿ ಇದ್ದಕ್ಕಿದ್ದಂತೆ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸುತ್ತೇವೆಂದು ಹೇಳಿ ಪರಿಷ್ಕರಣೆ ಮಾಡಿದ ಕಾರಣಕ್ಕೆ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. 2025-26ನೇ ಸಾಲಿನಲ್ಲಿ ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಗೂ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ರಾಜಸ್ವ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ತರ್ಕಬದ್ಧಗೊಳಿಸುವಿಕೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ಕ್ಕೆ ಕಡಿಮೆಯಾಗಿದೆ ಎಂದರು.
2025-26ನೇ ಸಾಲಿನಲ್ಲಿ ಸುಮಾರು 10,000 ಕೋಟಿ ಕೊರತೆಯಾದರೆ 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದಾಗಿ 2025-26ರ ಪರಿಷ್ಕೃತ ಅಂದಾಜಿನಲ್ಲಿ 22,957 ಕೋಟಿ ರೂ.ಗಳಷ್ಟು ರಾಜಸ್ವ ಕೊರತೆಯಾಗಿರುತ್ತದೆ. ಹೋಗಲಿ, ಜಿಎಸ್‌ಟಿ ದರ ಪರಿಷ್ಕರಣೆಯಿಂದ ಜನರಿಗೆ ಹೆಚ್ಚಿನ ಲಾಭ ದೊರೆಯಿತೆ? ಎಂದು ನೋಡಿದರೆ ಅದೂ ಇಲ್ಲ. ಕಾರು, ಬೈಕುಗಳ ಬೆಲೆ ತುಸು ಕಡಿಮೆಯಾಗಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಇತ್ತ ಜನರಿಗೂ ಇಲ್ಲ. ಜನ ಕಲ್ಯಾಣಕ್ಕೂ ಇಲ್ಲ. ಲಾಭಾಂಶವನ್ನು ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿವೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ರೆವಿನ್ಯೂ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ. 2.92 ಲಕ್ಷ ಕೋಟಿ ರೂ.ಗಳಷ್ಟಿದ್ದ ಕಳೆದ ವರ್ಷದ ಅಂದಾಜು ಈ ವರ್ಷ 3.15 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆಯೆಂದು ಅಂದಾಜು ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ತೆರಿಗೆ ಹಂಚಿಕೆಯ ಪಾಲು 14ನೇ ಹಣಕಾಸು ಆಯೋಗದ ಶಿಫಾರಸ್ಸು ಶೇ.4.713 ರಿಂದ 15ನೇ ಹಣಕಾಸು ಆಯೋಗದ ಶಿಫಾರಸ್ಸು ಶೇ.3.647ಕ್ಕೆ ಇಳಿಕೆಯಾಗಿದ್ದು, ಹಿಂದಿನ ಆಯೋಗದ ಶಿಫಾರಸ್ಸಿಗೆ ಹೋಲಿಸಿದರೆ ಶೇ.23ರಷ್ಟು ಕಡಿಮೆಯಾಗಿದೆ. ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಹಂಚಿಕೆ ಮಾಡಲು ಸಮಾನತೆ ಮತ್ತು ಬೆಳವಣಿಗೆ ಎರಡಕ್ಕೂ ಪ್ರಾಮುಖ್ಯತೆ ನೀಡುವ ಸೂತ್ರವನ್ನು ಶಿಫಾರಸ್ಸು ಮಾಡಬೇಕು ಎಂದು ರಾಜ್ಯವು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿತ್ತು. 16ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ.4.131 ರಷ್ಟು ತೆರಿಗೆ ಪಾಲನ್ನು ಶಿಫಾರಸ್ಸು ಮಾಡಿದೆ. ಇದು 15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಪಾಲಿಗಿಂತ ಶೇ.13 ರಷ್ಟು ಹೆಚ್ಚಳವಾಗಿದ್ದು, ನಮ್ಮ ಬೇಡಿಕೆಯನ್ನು ಭಾಗಶಃ ಪರಿಗಣಿಸಿದಂತಾಗಿದೆ. ಆದರೆ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ Surplus budget ಮಾಡಿದ್ದೇವೆ. ನಿಮ್ಮದು Deficit budget ರಾಜಸ್ವ ಕೊರತೆಯ ಬಜೆಟ್ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ನಾನು 2000ನೇ ಇಸವಿಯಿಂದಲೂ ರಾಜ್ಯದ ಎಲ್ಲ ಬಜೆಟ್‌ಗಳನ್ನು ನೋಡಿದ್ದೇನೆ. ಎಲ್ಲ ಬಜೆಟ್‌ಗಳಲ್ಲೂ ಫಿಸ್ಕಲ್ ಡಿಫಿಸಿಟ್ ಇದ್ದೇ ಇತ್ತು. ನಿಮ್ಮ ನಾಲ್ಕು ವರ್ಷಗಳ ಅವಧಿಯಲ್ಲೂ ಫಿಸ್ಕಲ್ ಡಿಫಿಸಿಟ್ ಇತ್ತು. ಜಿ.ಎಸ್.ಟಿ. ಪರಿಹಾರ ಒಟ್ಟಿಗೆ ಬಿಡುಗಡೆಯಾದ ಕಾರಣ ಸರ್ಪ್ಲಸ್ ಆಯಿತು. ಈ ಯಾವ ವಿಚಾರಗಳು ಗೊತ್ತಿಲ್ಲದೆ ವಿರೋಧ ಪಕ್ಷದ ಸದಸ್ಯರು ಮಾತನಾಡುತ್ತಾರೆ ಎಂದರು.
ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಲ್ಲಿ ಸೂಚಿಸಿರುವಂತೆ ರಾಜ್ಯವು ರಾಜಸ್ವ ಹೆಚ್ಚುವರಿಯನ್ನು ಕಾಯ್ದುಕೊಂಡು ಬಂದಿರುತ್ತದೆ. ಆದರೆ, ಜಿ.ಎಸ್.ಟಿ. ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್ ಚಾರ್ಜ್ ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು.
ಕೇಂದ್ರ ಸರ್ಕಾರ 2023-24ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳಿಸಿದ್ದರಿಂದ, ಕೇಂದ್ರ ಸರ್ಕಾರ ಅಂದಾಜಿಸಿದ್ದ ಜಿ.ಎಸ್.ಟಿ. ಸಂಗ್ರಹಣೆಗೆ (Protected Revenue) ಹೋಲಿಸಿದರೆ, ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು 2023-24ರಲ್ಲಿ 30,871 ಕೋಟಿ ರೂ.ಗಳು ಮತ್ತು 2024-25ರಲ್ಲಿ 40,368 ಕೋಟಿ ರೂ.ಗಳು ಕೊರತೆಯಾಗಿರುತ್ತದೆ. 15ನೇ ಹಣಕಾಸಿನಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 2023-24ರಿಂದ 2025-26ರವರೆಗೆ 39,500 ಕೋಟಿ ರೂ.ಗಳು ನಷ್ಟವಾಗಿರುತ್ತದೆ. ಇದರ ಪರಿಣಾಮವಾಗಿ, 2023-24ರಿಂದ ರಾಜಸ್ವ ಕೊರತೆಯನ್ನು ಎದುರಿಸುವಂತಾಯಿತು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2022) ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡಿರುತ್ತದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಒಟ್ಟು ಪರಿಹಾರ 57,351 ಕೋಟಿ ರೂ.ಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2023ರಿಂದ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿರುತ್ತದೆ. ಆದಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು ಎಂದರು.
2017ರಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯದಿಂದ, 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಕೇಂದ್ರವು ಮಾಡಿದ ದ್ರೋಹದಿಂದ, ಜಿಎಸ್‌ಟಿ ಪರಿಹಾರ ನೀಡದ ಕಾರಣ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಉಂಟಾಗಿದೆ. ಪರಿಸ್ಥಿತಿ ಹೀಗಾದರೆ ರಾಜ್ಯಗಳ ಆರ್ಥಿಕತೆ ಹೇಗೆ ಉಳಿಯುತ್ತದೆ? ಇಷ್ಟೆಲ್ಲದರ ನಡುವೆಯೂ ನಮ್ಮ ರಾಜ್ಯವನ್ನು ನಾವು ಮುನ್ನಡೆಸುತ್ತಿದ್ದೇವೆ. ಗ್ಯಾರಂಟಿಯಂಥ ಜನ ಕಲ್ಯಾಣ ಯೋಜನೆಗಳಿಗಾಗಿ ನಯಾಪೈಸೆ ಖರ್ಚು ಮಾಡದ ಗುಜರಾತ್ ರಾಜ್ಯವು ಈ ಬಾರಿ 1,00,000 ಕೋಟಿ ರೂ.ಗಳಷ್ಟು ಸಾಲ ಮಾಡುತ್ತಿದೆ ಎಂದು ತಿಳಿಸಿದರು.
ಇಲ್ಲಿ ತಮಗೆ ಅರ್ಥವಾಗಿರಬಹುದು, 3-4 ಕಾರಣಗಳಿಂದ ರಾಜಸ್ವ ಕೊರತೆಯ ಸಮಸ್ಯೆ ಉಂಟಾಗಿರುತ್ತದೆ. 15ನೇ ಹಣಕಾಸು ಆಯೋಗವು ಕಡಿಮೆ ಹಂಚಿಕೆ ಮಾಡಿತು, ಆಯೋಗವು ಶಿಫಾರಸು ಮಾಡಿದ ಅನುದಾನಗಳನ್ನು ಕೇಂದ್ರ ಸರ್ಕಾರ ಕೊಡದೆ ವಂಚಿಸಿತು. ಜಿಎಸ್‌ಟಿ ಪರಿಹಾರ ನಿಲ್ಲಿಸಲಾಯಿತು, ಜಿಎಸ್‌ಟಿ ದರಗಳ ಪರಿಷ್ಕರಣೆ, ಜೆಜೆಎಂ ಮುಂತಾದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಕೊಡದೆ ಅನ್ಯಾಯ ಮಾಡಿದ ಕಾರಣ ರಾಜಸ್ವ ಕೊರತೆಯ ಸಮಸ್ಯೆ ಉದ್ಭವಿಸಿದೆ. ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದ ಸಾಲದ ಪ್ರಮಾಣವೂ ಹೆಚ್ಚಾಗುತ್ತಾ ಬಂದಿದೆ. 2024-25 ರಲ್ಲಿ 14.72 ಲಕ್ಷ ಕೋಟಿ ರೂ. ಇದ್ದದ್ದು, 2026-27ನೇ ಸಾಲಿಗೆ 16.96 ಲಕ್ಷ ಕೋಟಿ ರೂ. ಆಗಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 16ನೇ ಹಣಕಾಸು ಆಯೋಗದ ಮಾರ್ಗಸೂಚಿ 4.2 % ಗಿಂತ ಹೆಚ್ಚಿಗೆ ಇದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್ ಗೆ ಹೋಲಿಸಿದರೆ 2027 ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗುತ್ತಿದೆ [53.11 ಲಕ್ಷ ಕೋಟಿ ರೂಗಳಿದ್ದದ್ದು ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗುತ್ತಿದೆ ] ಬಿಜೆಪಿ ಸರ್ಕಾರ ಸಾಲ ಮಾಡಿ ಮಾಡಿದ್ದೇನು? ಸಾಮಾಜಿಕ ನ್ಯಾಯಕ್ಕೆ ಕೊಟ್ಟ ಅನುದಾನವೆಷ್ಟು? ಕೊರೋನ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಪ್ರತಿ ಕುಟುಂಬಕ್ಕೆ 10,000 ರೂ ಕೊಡಿ ಜನರ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ, ಅವರ ಕಷ್ಟ ಸ್ವಲ್ಪವಾದರೂ ಕಡಿಮೆಯಾಗಲಿ ಎಂದು ಹೇಳಿದರೆ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕೇಳಲಿಲ್ಲ. ಆದರೂ ಸಾಲ ಮಾಡಿ ಮಾಡಿದ್ದೇನು? ಒಂದು ರಸ್ತೆ ಸರಿ ಮಾಡಲಿಲ್ಲ. ತಮ್ಮ 4 ವರ್ಷಗಳ 2019-23 ರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಕೇವಲ 5 ಹಾಸ್ಟೆಲ್‌ಗಳನ್ನು ಕೊಟ್ಟರು. 2,832 ಸಂಖ್ಯೆಯ ಬಸ್ಸುಗಳನ್ನು ಕೊಂಡುಕೊಳ್ಳಲಾಯಿತು. ನಾಲ್ಕು ವರ್ಷಗಳಲ್ಲಿ 5.75 ಲಕ್ಷ ಮನೆಗಳನ್ನು ನಿರ್ಮಿಸಿದರು. ಹೊಸ ಆಸ್ಪತ್ರೆಗಳಿರಲಿಲ್ಲ. ವೈದ್ಯರ ನೇಮಕಾತಿ ಇರಲಿಲ್ಲ. ಆದರೂ 5,53,363 ಕೋಟಿ ರೂಗಳಷ್ಟು ಔಟ್‌ಸ್ಟಾಂಡಿಂಗ್ ಸಾಲವನ್ನು 2023ರಲ್ಲಿ ಉಳಿಸಿ ಹೋಗಲಾಯಿತು. ಹಾಗಿದ್ದರೆ ಅಷ್ಟು ಹಣ ಎಲ್ಲಿ ಹೋಯಿತು? ಎಂದು ಸದನದಲ್ಲೇ ಪ್ರಶ್ನಿಸಿದರು
ನಾನು ಎಂದೂ ಸಾಲ ಮಾಡಲೇಬಾರದು ಎಂದು ಹೇಳಿಲ್ಲ. ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲ ಜನರ ಕಲ್ಯಾಣಗಳಿಗಾಗಿ ಮತ್ತು ನಾಡಿನ ಕಲ್ಯಾಣಕ್ಕಾಗಿ ಬಳಕೆಯಾಗಿದೆಯೇ ಇಲ್ಲವೇ ಎಂದು ನೋಡಬೇಕು. ದೇಶದಲ್ಲಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ನಂ.2 ರಲ್ಲಿದೆ ಹಾಗೂ ಬಂಡವಾಳ ಹೂಡಿಕೆಯಲ್ಲಿಯೂ ಕರ್ನಾಟಕ ನಂ.2 ಇದೆ ಎಂದರು.
ರಾಜ್ಯಕ್ಕೆ ಅನ್ಯಾಯವಾದಾಗ ಯಾವುದೇ ಸರ್ಕಾರವಿದ್ದರೂ ವಿರೋಧಿಸಲೇಬೇಕು
2014 ರಲ್ಲಿ ಮೋದಿಯವರು ಪ್ರಧಾನಿಯಾದಾಗ, ಸಾಲದ ಮೊತ್ತ ₹53,11,000 ಕೋಟಿ, ಅವರು ಬಂದ ಅವಧಿಯಿಂದ ಇಂದಿಗೆ ₹218 ಲಕ್ಷ ಕೋಟಿಗೆ ಸಾಲದ ಮೊತ್ತ ಏರಿಕೆಯಾಗಿದೆ. ಅವರ ಅವಧಿಯಲ್ಲಿ 165 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ. ಮೋದಿಯವರು ದೇಶವನ್ನು ಸಾಲಕ್ಕೆ ದೂಡಿದ್ದಾರೆ. ಈ ವರ್ಷ ₹16,96,000 ಕೋಟಿ ಸಾಲ ಮಾಡಿದ್ದಾರೆ. ನಿಯಮಗಳ ಪ್ರಕಾರ ಸಾಲದ ಮೊತ್ತ 40% ರಷ್ಟಿರಬೇಕಿದ್ದು, ಕೇಂದ್ರದ ಈ ಪ್ರಮಾಣ 56% ರಷ್ಟು ಹೆಚ್ಚಿದೆ. ಆದರೆ ನಮ್ಮ ಸರ್ಕಾರ ಈ ವರ್ಷ 1,32,000 ಕೋಟಿ ಸಾಲ ಮಾಡಿದೆ. ರಾಜ್ಯಕ್ಕೆ ಅನ್ಯಾಯವಾದಾಗ ಯಾವುದೇ ಸರ್ಕಾರವಿದ್ದರೂ ವಿರೋಧಿಸಲೇಬೇಕು. ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಈ ಅನ್ಯಾಯವನ್ನು ವಿರೋಧಿಸಬೇಕು. ಹಣಕಾಸು ಆಯೋಗದಲ್ಲಿ 29% ಶಿಫಾರಸ್ಸು ಮಾಡಿದ್ದು, ಆಗ ನಾನು 40% ಕೊಡಬೇಕೆಂದು ಒತ್ತಾಯಿಸಿದ್ದೆ. ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗ, ತೆರಿಗೆ ಪಾಲಿನಲ್ಲಿ ಶೇ. 50 ರಷ್ಟು ರಾಜ್ಯಗಳಿಗೆ ಕೊಡಬೇಕೆಂದು ಒತ್ತಾಯಿಸಿದ್ದರು. ಕರ್ನಾಟಕದಿಂದ 4.50 ಲಕ್ಷ ಕೋಟಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ರಾಜ್ಯಕ್ಕೆ ಮರಳಿ ಬರುವುದು 14-15% ರಷ್ಟು ಮಾತ್ರ ಎಂದು.
ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರು ಪ್ರಶ್ನಿಸಿ
ಕರ್ನಾಟಕಕ್ಕೆ 14ನೇ ಆಯೋಗದಲ್ಲಿ 4.713% ರಷ್ಟು ಪಾಲು ದೊರಕಿತ್ತು. ಆದರೆ 15ನೇ ಹಣಕಾಸಿನ ಆಯೋಗದಲ್ಲಿ 3.647% ರಷ್ಟು ಅಂದರೆ 1.1% ರಷ್ಟು ಕಡಿಮೆಯಾಗಿ ಅನ್ಯಾಯವಾಗಿತ್ತು. ಇದರಂತೆ ₹11,495 ಕೋಟಿ ರಾಜ್ಯಕ್ಕೆ ಖೋತಾ ಆಗಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಈ ಅನ್ಯಾಯವನ್ನು ಪ್ರಶ್ನಿಸಿ ಪ್ರತಿಭಟನೆ ಮಾಡಲಾಯಿತು. ಕೇಂದ್ರ ಸರ್ಕಾರ 2023-24 ರಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ ₹5,300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಲಿಲ್ಲ. ಆಗಿದ್ದ ರಾಜ್ಯದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವುದಾಗಿ ತಿಳಿಸಿದರು. ಆದರೆ ಈ ಯಾವ ಘೋಷಣೆಗಳು ಫಲ ಕಾಣಲಿಲ್ಲ. ಆದ್ದರಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಬಿಜೆಪಿಯವರೂ ಪ್ರಶ್ನಿಸಬೇಕು ಎಂದು ವಾಗ್ದಾಳಿ ನಡೆಸಿದರು.
ನ್ಯಾಯಯುತವಾದ ರಾಜ್ಯದ ಪಾಲನ್ನು ನಮಗೆ ನೀಡಿಲ್ಲ. 16ನೇ ಆಯೋಗದಲ್ಲಿ ಸ್ವಲ್ಪ ಸುಧಾರಣೆಯಾಗಿ 4.131 ರಷ್ಟು ರಾಜ್ಯಕ್ಕೆ ನಿಗದಿಯಾಗಿದೆ. ಆದರೆ ರಾಜ್ಯ ಕೋರಿದ್ದ 4.7% ರಷ್ಟು ಬರಲಿಲ್ಲ. ಆದ್ದರಿಂದ ಕೇಂದ್ರದ ವಿರುದ್ಧದ ಹೋರಾಟ ಮುಂದುವರೆಯಲಿದೆ. ಸದ್ಯದಲ್ಲಿಯೇ ರಾಜ್ಯದ ಅನುದಾನದ ಬೇಡಿಕೆಯನ್ನಿಟ್ಟು ಪಕ್ಷಾತೀತವಾದ ನಿಯೋಗವೊಂದು ಕೇಂದ್ರಕ್ಕೆ ಹೋಗಬೇಕಿದೆ.
ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಟೀಕೆ ಬಂದಿದೆ. ನಮ್ಮ ಸರ್ಕಾರ 1.32 ಲಕ್ಷ ಕೋಟಿ ಸಾಲ ಮಾಡಿರುವುದು, ಬಜೆಟ್ ಗಾತ್ರ ₹4,48,004 ಕೋಟಿ ಇದೆ. ಇದು ಸಾಲದ ಬಜೆಟ್ ಹೇಗೆ ಆಗಲು ಸಾಧ್ಯ? ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ಸಾಲವನ್ನು ನಿಯಮದ ಮಿತಿಯೊಳಗೆ ಮಾಡಲಾಗಿದೆ. ರಾಜ್ಯದ ಸಾಲದ ಮೊತ್ತ 8,24,000 ಕೋಟಿ ರೂ.ಗಳಷ್ಟಿದೆ ಎಂದರು.
2008 ರಿಂದ 2013 ರವರೆಗೆ ಇದ್ದ ಬಿಜೆಪಿಯೂ ಸಾಲ ಮಾಡಿದೆ. ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟು ಆಗುತ್ತದೆ. ಮೋದಿಯವರು ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯಕ್ಕಿಂತ ದೇಶ ಕಡಿಮೆ ಇದೆ. ದಕ್ಷಿಣ ಭಾರತದ ರಾಜ್ಯಗಳು, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದು, ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ ₹1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡಿದೆ. ಯುವನಿಧಿಯಡಿ 600 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯನ್ನು ಖಂಡಿತವಾಗಿಯೂ ಸ್ಥಗಿತಗೊಳಿಸಿಲ್ಲ ಎಂದರು.
ನಮ್ಮ ಬಜೆಟ್ ರಿವಿನ್ಯೂ ಡಿಫಿಸಿಟ್ ಆಗಿದೆ. 2026-27ರ ಬಜೆಟ್ ನ್ನು ರೆವಿನ್ಯೂ ಸರ್ಪ್ಲಸ್ ಮಾಡಬೇಕೆಂಬ ಇಚ್ಛೆಯಿದ್ದರೂ, ಕೇಂದ್ರ ಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜಿಎಸ್‌ಟಿ ಯಲ್ಲಿ 10% ಬೆಳವಣಿಗೆಯಿತ್ತು, ಆದರೆ ಕೇಂದ್ರ ಸರ್ಕಾರ, ಜಿಎಸ್‌ಟಿ ದರವನ್ನು ಕಡಿತಗೊಳಿಸಿದ್ದರಿಂದ ಜಿಎಸ್‌ಟಿ ಬೆಳವಣಿಗೆ 4% ಗೆ ಕುಸಿಯಿತು. ದೇಶದ ಏಳು ರಾಜ್ಯಗಳು ಕೇಂದ್ರದ ಈ ನೀತಿಯನ್ನು ವಿರೋಧಿಸಿ, ಪರಿಹಾರ ಕೇಳಿವೆ. ಇದರಲ್ಲಿ ನಾವೂ ಒಬ್ಬರು. ಜಿಎಸ್‌ಟಿ ಜಾರಿಯಾದ ನಂತರದಿಂದ 2023-24ರವೆಗೆ ಕೇಂದ್ರ ಸರ್ಕಾರ ಪರಿಹಾರವನ್ನು ನೀಡಿದೆ, ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಪರಿಹಾರ ನೀಡಲಾಗಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹10 ಸಾವಿರ ಕೋಟಿ ಕಡಿಮೆಯಾಗಿ, 2026-27 ರಲ್ಲಿ ₹15 ಸಾವಿರ ಕೋಟಿ ನಷ್ಟವಾಗಲಿದೆ ಎಂದರು.
ಎಲ್ಲರನ್ನೊಳಗೊಂಡ ಸಮಸಮಾಜ ನಿರ್ಮಾಣ ನಮ್ಮ ಗುರಿ
ಬುದ್ಧ, ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು. ಆದರೂ ಸಮಾಜದಲ್ಲಿ ಜಾತಿ, ವರ್ಗ ವ್ಯವಸ್ಥೆ ಇದೆ. ಸುಧಾರಣೆಗಳನ್ನು ತಂದರೂ ಜಾತಿವ್ಯವಸ್ಥೆ ಜೀವಂತವಿದೆ. ಸರ್ವಜನಾಂಗದ ಶಾಂತಿಯ ತೋಟ ಎಂಬುದು ನಮ್ಮ ಸರ್ಕಾರದ ಸಿದ್ಧಾಂತ. ಎಲ್ಲರನ್ನೊಳಗೊಂಡ ಸಮಸಮಾಜ ನಿರ್ಮಾಣ ನಮ್ಮ ಗುರಿ. ಎಲ್ಲಾ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆಯೇ ಹೊರತು ದ್ವೇಷವನ್ನಲ್ಲ. ನಾನು ಯಾವುದೇ ಮೂಢನಂಬಿಕೆಗಳನ್ನು ಬೆಂಬಲಿಸುವುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಇರಬೇಕು. ಆದ್ದರಿಂದ ನಮ್ಮ ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿತು.
ನಮ್ಮ ಸರ್ಕಾರವು ಶಿಕ್ಷಣಕ್ಕೆ 2026-27 ರಲ್ಲಿ 72,386 ಕೋಟಿ ಇಟ್ಟಿದೆ. ಬಿಜೆಪಿಯವರ ಕಾಲಾವಧಿಯಲ್ಲಿ ಬಿಬಿಎಂಪಿಗೆ ನಾಲ್ಕು ವರ್ಷದಲ್ಲಿ ₹10,435 ಕೋಟಿ ನೀಡಿದ್ದರು. ನಮ್ಮ ಸರ್ಕಾರ ನಾಲ್ಕು ವರ್ಷದಲ್ಲಿ ಒಟ್ಟು ₹20,200 ಕೋಟಿ ನೀಡಿದೆ. ಆದ್ದರಿಂದ ನಮ್ಮ ಸರ್ಕಾರ ಗ್ಯಾರಂಟಿ ಮತ್ತು ಅಭಿವೃದ್ದಿಗೆ ಸಮಾನವಾಗಿ ವೆಚ್ಚ ಮಾಡುತ್ತಿದ್ದು, ಬಿಜೆಪಿಯವರು ಈ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದರು.
ಸಾಮಾಜಿಕ ಭದ್ರತೆಯ ಯೋಜನೆಗಳಿಗೆ ₹10,600 ಕೋಟಿ ಗೆ ಮೀಸಲಿಟ್ಟಿದ್ದೇವೆ. ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬಲಾಗುತ್ತಿದೆ. ಬಿಜೆಪಿಯು ಟಿಕಲ್ ಡೌನ್ ಎಕಾನಮಿನಲ್ಲಿ ನಂಬಿಕೆಯಿರಿಸಿದೆ, ನಮ್ಮದು ಯೂನಿವರ್ಸಲ್ ಬೇಸಿಕ್ ಇನ್ಕಂ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ. ಆದ್ದರಿಂದ ಈ ಬಾರಿಯ ಬಜೆಟ್ ಅಭಿವೃದ್ಧಿಪರ ಹಾಗೂ ಜನಪರ ಬಜೆಟ್ ಆಗಿದೆ. ವಿರೋಧ ಪಕ್ಷದವರು ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

