ಪ್ರಗತಿಪರ ಮಠಾಧೀಶರ ವೇದಿಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿರುವುದೇ ಐತಿಹಾಸಿಕವಾದುದು. ನನಗೆ ತಿಳಿದಂತೆ ರಾಜ್ಯದ ಯಾವ ಮಠವೂ ಈ ರೀತಿ ಅದನ್ನೇ ಒಂದು ಕಾರ್ಯಕ್ರಮವನ್ನಾಗಿ ಮಾಡಿಕೊಂಡು ಅಂಬೇಡ್ಕರ್ ಜಯಂತಿಯನ್ನು ಆಚರಿಸಿಲ್ಲ.
ಎಲ್ಲ ಜಾತಿ-ಧರ್ಮಗಳಿಗೆ ಸೇರಿರುವ ಸುಮಾರು 285 ಮಠಾಧೀಶರು ಈ ಸಮಾರಂಭದಲ್ಲಿ ಸಮಾವೇಶಗೊಂಡಿದ್ದಾರೆ ಎಂದು ನಿಡುಮಾಮಿಡಿ ಸ್ವಾಮೀಜಿಗಳು ಹೇಳಿದ್ದಾರೆ. ನಾವೆಲ್ಲ ಕಣ್ಣಾರೆ ಅನುಭವ ಮಂಟಪವನ್ನು ನೋಡಿಲ್ಲ, ಕೇಳಿದ್ದೇವೆ, ಓದಿದ್ದೇವೆ ಅಷ್ಟೇ. ಆದರೆ ಈ ದಿನ ನನಗೆ ಇಲ್ಲೊಂದು ಅನುಭವ ಮಂಟಪ ಕಾಣುತ್ತಿದೆ. ಬಸವಣ್ಣನ ಆಶಯ, ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿ ಇಂತಹದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಎಲ್ಲ ಮಠಾಧೀಶರಿಗೆ ನಾನು ತಲೆಬಾಗಿ ನಮಿಸುವೆ.
ಬಸವಣ್ಣ ಹೇಗೆ ಒಂದು ಸಮುದಾಯಕ್ಕೆ ಸೀಮಿತವಾಗದ ಜಗಜ್ಯೋತಿಯೋ ಹಾಗೆ ಅಂಬೇಡ್ಕರ್ ಕೂಡಾ ಸಮಾನತೆಯ ಬುನಾದಿಯ ಮೇಲೆ ಸಮಾಜವನ್ನು ಕಟ್ಟಬೇಕೆಂದು ಬಯಸುವ ನಮ್ಮೆಲ್ಲರ ಪಾಲಿನ ದಾರಿದೀಪ. ಆದರೆ ಎಲ್ಲರಿಗೂ ಸಲ್ಲಬೇಕಾಗಿರುವ ಬಸವಣ್ಣ-ಅಂಬೇಡ್ಕರ್ ಅವರಂಹ ವಿಶ್ವಗುರುಗಳನ್ನು ನಾವೆಲ್ಲ ಸೇರಿ ಸೀಮಿತವಾದ ಜಾತಿ-ಧರ್ಮ-ಸಮುದಾಯದ ಕೋಟೆಯೊಳಗೆ ಬಂಧಿಸಿಬಿಟ್ಟಿದ್ದೇವೆ. ಅಲ್ಲಿಂದ ಅವರನ್ನು ಬಿಡುಗಡೆಗೊಳಿಸಿ ಸಮಾಜದೊಳಗೆ ಪ್ರತಿಷ್ಠಾಪಿಸಬೇಕಾಗುತ್ತದೆ. ಇಂದು ನಡೆಯುತ್ತಿರುವುದು ಅಂತಹದ್ದೊಂದು ಪ್ರಯತ್ನ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿದ್ದಕ್ಕೆ ನಿಮಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಬಸವಣ್ಣ ಮತ್ತು ಅಂಬೇಡ್ಕರ್ ವೈಯಕ್ತಿಕವಾಗಿ ನನಗೂ ಜ್ಞಾನಗುರುಗಳು. ನಾನು ಬಸವ ಜಯಂತಿಯ ದಿನವೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವನು. ಆ ದಿನ ಮೇ 13 ಆಗಿತ್ತು. 13 ಸಂಖ್ಯೆಯನ್ನು ಬಹಳ ಜನ ಅಪಶಕುನ ಎಂದು ತಿಳಿದುಕೊಂಡಿದ್ದಾರೆ. ನನಗೂ ಕೆಲವರು ದಿನಾಂಕ ಬದಲಿಸಲು ಸಲಹೆ ನೀಡಿದ್ದರು. ಆದರೆ ನನ್ನದು ಮೂಢನಂಬಿಕೆಯಲ್ಲ, ಬಸವಣ್ಣನ ಮೇಲಿನ ನಂಬಿಕೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ನಾನು ಘೋಷಿಸಿದ ಯೋಜನೆಗಳಿಗೆ ಕೂಡಾ ಬಸವಣ್ಣ ಮತ್ತು ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳೇ ಪ್ರೇರಣೆ ಎನ್ನುವುದನ್ನು ನೀವೆಲ್ಲ ಗಮನಿಸಿದ್ದೀರಿ ಎಂದು ನಾನು ತಿಳಿದುಕೊಂಡಿದ್ದೇನೆ.
“ಆ ದಿನ ಮೇ 13 ಆಗಿತ್ತು. 13 ಸಂಖ್ಯೆಯನ್ನು ಬಹಳ ಜನ ಅಪಶಕುನ ಎಂದು ತಿಳಿದುಕೊಂಡಿದ್ದಾರೆ. ನನಗೂ ಕೆಲವರು ದಿನಾಂಕ ಬದಲಿಸಲು ಸಲಹೆ ನೀಡಿದ್ದರು. ಆದರೆ ನನ್ನದು ಮೂಢನಂಬಿಕೆಯಲ್ಲ, ಬಸವಣ್ಣನ ಮೇಲಿನ ನಂಬಿಕೆ “
ಕೋಮುವಾದ, ಜಾತಿ ತಾರತಮ್ಯ, ಮೂಢನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆ ಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ, ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
ಬಸವಣ್ಣ ಮತ್ತು ಅಂಬೇಡ್ಕರ್ ಸಿದ್ಧಾಂತಗಳ ನಡುವೆ ಹಲವಾರು ಬಗೆಯ ಸಾಮ್ಯತೆಗಳನ್ನು ಹುಡುಕಿಕೊಳ್ಳುತ್ತಾ ಹೋಗಬಹುದು. ಬಸವಣ್ಣನವರು ಕಟ್ಟಿ ನಡೆಸಿದ ಅನುಭವ ಮಂಟಪಕ್ಕೂ, ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೂ ಸಾಮ್ಯತೆಗಳಿವೆ. ಇಬ್ಬರ ದೃಷ್ಟಿಯಲ್ಲಿಯೂ ಸಾಮಾನ್ಯ ಜನರೇ ಪ್ರಭುಗಳು. ಇಬ್ಬರೂ ಜಾತಿ-ಮತ ಮೀರಿದ ಸಮಾನತೆಯ ಹರಿಕಾರರು. ಇಬ್ಬರೂ ಸಮಾಜದ ಪಿಡುಗುಗಳಾದ ವರ್ಣ ವ್ಯವಸ್ಥೆ ಜಾತಿ ತಾರತಮ್ಯ ಮತ್ತು ವೈದಿಕಶಾಹಿಯನ್ನು ವಿರೋಧಿಸಿದವರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ ತಂದುಕೊಡುವ ರಾಜಕೀಯ ಪ್ರಜಾಪ್ರಭುತ್ವದ ಮೇಲೆ ಅಷ್ಟೊಂದು ನಿರೀಕ್ಷೆಗಳಿರಲಿಲ್ಲ. ಅಸಮಾನತೆಯ ಬುನಾದಿಯ ಮೇಲಿರುವ ಇಲ್ಲಿನ ಸಾಮಾಜಿಕ ವ್ಯವಸ್ಥೆ ಮತ್ತು ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ. ಈ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಿ ಒಂದು ಮತಕ್ಕೆ ಒಂದೇ ಮೌಲ್ಯ ಇರುವ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸದೆ ಇದ್ದರೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು.
ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಿ ಒಂದು ಮತಕ್ಕೆ ಒಂದೇ ಮೌಲ್ಯ ಇರುವ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸದೆ ಇದ್ದರೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದರು.
ಬಸವಣ್ಣನವರದ್ದು ಸಾಮಾಜಿಕ ಚಳುವಳಿ ಎಂದು ಮೇಲ್ನೋಟಕ್ಕೆ ಅನಿಸಿದರೂ ಆ ಚಳುವಳಿ ರಾಜಕೀಯ ಮತ್ತು ಸಾಂಸ್ಕೃತಿಕ ಚಳುವಳಿಯೂ ಆಗಿತ್ತು ಎನ್ನುವದು ಅರಿವಾಗುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಕಲ್ಯಾಣ ಕೇಂದ್ರದಲ್ಲಿ ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕ್ರಾಂತಿ ಸಮಾಜದಲ್ಲಿ ವೈಚಾರಿಕ ಸ್ಪೋಟವನ್ನೇ ಮಾಡಿದ್ದು ನಿಜ. ಈ ಕ್ರಾಂತಿಯಲ್ಲಿ ಪಾಲ್ಗೊಂಡವರು ಸಾಮಾನ್ಯ ಜನತೆ ಅದರಲ್ಲಿಯೂ ಮುಖ್ಯವಾಗಿ ಶೂದ್ರ ಮತ್ತು ದಲಿತ ಸಮುದಾಯ. ಈ ದೃಷ್ಟಿಯಲ್ಲಿ ಇದೊಂದು ನಿಜವಾದ ಜನಪರ ಚಳವಳಿ ಎಂದು ಕರೆಯಬಹುದು.

ಶರಣ ಚಳವಳಿ ಮೂಲತಃ ಜಾತಿ ವಿನಾಶ ಚಳವಳಿಯಾಗಿತ್ತು. ಇದು ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯನ್ನು ಮುರಿದು ಸಮಾನತೆಯ ಆಧಾರದಲ್ಲಿ ಸಮಾಜವನ್ನು ಕಟ್ಟುವ ಪ್ರಯತ್ನವಾಗಿತ್ತು. ಶರಣ ಚಳವಳಿಯಲ್ಲಿ ಭಾಗವಹಿಸಿದ್ದ ಬಹುತೇಕ ನಾಯಕರು ಕೆಳಜಾತಿಯವರೇ ಆಗಿದ್ದರು ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿದ್ದರು. ಇಂತಹ ಒಂದು ಸಮುದಾಯವನ್ನು ಹೊಸ ಸಮಾಜ ನಿರ್ಮಾಣದ ವೈಚಾರಿಕ ಕ್ರಾಂತಿಗೆ ಸಜ್ಜುಗೊಳಿಸಿದ್ದು ಶರಣ ಚಳುವಳಿ.
ಬಸವಾದಿ ಶರಣರ ಕಾಲಘಟ್ಟವು ತನ್ನ ಜಾತಿವಿರೋಧಿ ನಿಲುವಿನಿಂದಾಗಿಯೇ ಗಮನ ಸೆಳೆಯುತ್ತದೆ. ಒಬ್ಬಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಅಲಕ್ಷಿತ ತಳ ಸಮುದಾಯದ ಕಾಯಕ ಜೀವಿಗಳಾಗಿದ್ದರು. ಇವರು ತಮ್ಮ ಸೀಮಿತ ನೆಲೆಯಲ್ಲಿಯೇ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದಲ್ಲದೆ ಜಾತಿ ವ್ಯವಸ್ಥೆಯ ತಾಯಿ ಬೇರಾದ ಕರ್ಮಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷಕ್ಕಿಳಿದದ್ದನ್ನು ಕಾಣಬಹುದಾಗಿದೆ.
ಶರಣ ಧರ್ಮದ ವಿಶಿಷ್ಟತೆಯೆಂದರೆ ಅದು ಇತರ ಧರ್ಮಗಳಂತೆ ಈ ಜಗತ್ತನ್ನು ಮಿಥ್ಯೆ ಎಂದೋ ಮಾಯೆ ಎಂದೋ ಭಾವಿಸದೆ, ಈ ಜಗತ್ತು ಸತ್ಯ ಎಂದು ಅಂಗೀಕರಿಸಿದ ಪ್ರಗತಿಪರ ನಿಲುವು. ಆಧ್ಯಾತ್ಮದ ಬದಲಿಗೆ ಅನುಭಾವ, ದೇವರ ಬದಲಿಗೆ ಲಿಂಗ ಎಂಬ ಮಾತುಗಳು ಹುಟ್ಟಿಕೊಂಡದ್ದು ಇದೇ ಚಳುವಳಿಯ ಕಾಲದಲ್ಲಿ. ಇಂದು ತಾಂಡವವಾಡುತ್ತಿರುವ ಜಾತೀಯತೆ, ಮೂಢನಂಬಿಕೆ, ಕಂದಾಚಾರಗಳು, ಕಪಟ ಜ್ಯೋತಿಷಿಗಳು ಮತ್ತು ವಾಸ್ತುತಜ್ಞರ ಹಾವಳಿಗಳನ್ನು ನೋಡಿದರೆ ಹನ್ನೆರಡನೆ ಶತಮಾನದ ಶರಣರ ಬಗೆಗಿನ ನಮ್ಮ ಗೌರವ ನೂರ್ಮಡಿಯಾಗುತ್ತಿದೆ. ಅಂತಹದ್ದೊಂದು ವೈಚಾರಿಕ ಕ್ರಾಂತಿ ಬಗ್ಗೆ ಹೆಮ್ಮೆ ಮೂಡುತ್ತದೆ.
ಯಾವ ಧರ್ಮದ ಎಲ್ಲ ಅಂಶಗಳೂ ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಹೇಳಲು ಬರುವುದಿಲ್ಲ, ಮತ್ತೆ ಮತ್ತೆ ಸ್ಥಗಿತಗೊಳ್ಳುವುದೇ ಎಲ್ಲ ಧರ್ಮಗಳ ಲಕ್ಷಣವಾಗುವುದರಿಂದ ಮತ್ತೆ ಮತ್ತೆ ಅದನ್ನು ಚಲನಶೀಲಗೊಳಿಸುವ ಪ್ರಯತ್ನಗಳು ನಡೆಯಬೇಕು. ಈ ದೃಷ್ಟಿಯಿಂದಲೇ ಬಸವಣ್ಣನವರು ಧರ್ಮ ಸ್ಥಾವರ ಆಗದೆ ಜಂಗಮ ಆಗಬೇಕು ಎಂದು ಹೇಳಿದ್ದರು. ಶರಣಧರ್ಮದ ಎಷ್ಟೋ ಅಂಶಗಳು ಇಂದಿನ ಬದುಕಿಗೆ ಅಪ್ರಸ್ತುತವಾಗಿವೆ; ಎಷ್ಟೋ ಸಂಗತಿಗಳು ಅಪವ್ಯಾಖ್ಯಾನಗೊಂಡಿವೆ. ಆದರೂ ಶರಣ ಧರ್ಮದ ಮಹತ್ವದ ವಿಚಾರಗಳು ಈ ಹೊತ್ತಿಗೆ ಮಾತ್ರವಲ್ಲ, ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎನ್ನುವುದೇ ಅದರ ಮಹತ್ವವನ್ನು ಸಾರುತ್ತದೆ.
‘ಕುಲವನರಸುವರೆ ಶರಣರಲ್ಲಿ ವರ್ಣಸಂಕರವಾದ ಬಳಿಕ’ ಎಂದು ಬಸವಣ್ಣನವರು ಕೇಳುವ ಪ್ರಶ್ನೆ. ಹಿಂದೂ ಧರ್ಮದ ಪ್ರಕಾರ ‘ವರ್ಣ ಸಂಕರ’ ಒಂದು ಮಹಾ ಅನಾಹುತ. ವರ್ಣಸಂಕರದಿಂದ ಧರ್ಮಗ್ಲಾನಿ. ಆದರೆ ಬಸವಣ್ಣನವರಿಗೆ ಅದು ಜಾತಿಯ ಶ್ರೇಣೀಕರಣವನ್ನು ಮುರಿದು ಸಮಾನತೆಯನ್ನು ನೆಲೆಗೊಳಿಸುವ ಸಾಧನ. ಅವರೇ ನಿಂತು ಮಾಡಿಸಿದ ‘ಅಂತರ್ಜಾತೀಯ ವಿವಾಹ’ ಈ ವರ್ಣಸಂಕರ ಪ್ರಯತ್ನದಲ್ಲಿ ಒಂದು ದಿಟ್ಟ ಹೆಜ್ಜೆ.
ದೇವಸ್ಥಾನಗಳನ್ನು ನಿರಾಕರಿಸಿ, ದೇವರ ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸಿ, ದೇಹವನ್ನೇ ದೇವಾಲಯವನ್ನಾಗಿ ಮಾಡಿದವರು ಬಸವಣ್ಣ. ಪುರೋಹಿತಶಾಹಿ ಕಲ್ಪಿಸಿದ ಸ್ವರ್ಗ ನರಕಾದಿ ಶೋಷಕ ತಂತ್ರಗಳನ್ನು ಧಿಕ್ಕರಿಸಿ ಇಹದ ಬದುಕಿನ ಮೇಲಿನ ಪ್ರೀತಿಯನ್ನು ಮೂಢಿಸಿದ, ಅನೇಕ ಅವೈಚಾರಿಕವಾದ ಆಚರಣೆಗಳನ್ನೂ ಮೂಢನಂಬಿಕೆಗಳನ್ನು ತಿರಸ್ಕರಿಸಿದ, ವೃತ್ತಿಯ ತಾರತಮ್ಯಗಳ ಮೇಲಿನಿಂದ ಮನುಷ್ಯನ ಸಾಮಾಜಿಕ ಅಂತಸ್ತನ್ನು ಪರಿಗಣಿಸದೆ ಕಾಯಕವೆಲ್ಲವೂ ಪೂಜ್ಯವೆಂದು ಸಾರಿದವರು ಬಸವಣ್ಣ.
ಜಾತಿಯನ್ನು ಶರಣರು ನಿರಾಕರಿಸಿದರು. ಒಂದು ರೀತಿಯಲ್ಲಿ ಬಸವಚಳುವಳಿ ಎನ್ನವುದು ಜಾತಿ ವಿನಾಶ ಚಳುವಳಿಯೇ ಆಗಿದೆ. ಬಸವಾದಿ ಶರಣರ ವಚನಗಳು ಜಾತಿ ವಿನಾಶದ ಕಹಳೆಗಳಾಗಿವೆ. ಜಾತಿ ಕೂಪದಿಂದ ಪಾರಾಗಲು ವಚನಗಳು ಆಧ್ಯಾತ್ಮದ ಬೆಳಕಿನ ಮೂಲಕ ಪ್ರಯತ್ನಪಟ್ಟದ್ದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬಸವ ಚಳುವಳಿಯ ನಿಜವಾದ ಉದ್ದೇಶ ಏನಿತ್ತೋ ಅದು ಈಡೇರಿಲ್ಲ ಎಂದು ಅನಿಸುತ್ತದೆ. ಇದು ಕೇವಲ ಬಸವಣ್ಣನವರಿಗೆ ಸಂಬಂಧಿಸಿದುದಲ್ಲ.
ಇಂದು ಕೇವಲ ಮೇಲ್ಜಾತಿ ಜನರು ಮಾತ್ರವಲ್ಲ ಹಿಂದುಳಿದ ಮತ್ತು ದಲಿತ ಜಾತಿಗಳು ಕೂಡಾ ತಮಗೊಂದು ಮಠ ಮತ್ತು ಸ್ವಾಮಿಗಳು ಅತ್ಯವಶ್ಯಕ ಎನ್ನುವ ನಿರ್ಧಾರಕ್ಕೆ ಬಂದಿರುವ ಹಾಗೆ ಕಾಣುತ್ತಿದೆ. ಇದಕ್ಕೆ ಮೇಲ್ಜಾತಿ ಮಠಗಳು ಕಾರಣ ಎನ್ನುವದು ಸ್ಪಷ್ಟವಾಗಿದೆ.
ಆದರೆ ಉದ್ದೇಶಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಠಗಳೆಂದರೆ ಧಾರ್ಮಿಕ –ಆಧ್ಯಾತ್ಮಿಕ ಪ್ರವಚನಕ್ಕೆ ಸೀಮಿತವಾದುದಲ್ಲ. ಅವುಗಳು ಮಠಗಳಾಚೆ ನೋಡಬೇಕಾಗುತ್ತದೆ. ಅಲೌಕಿಕ ಜಗತ್ತಿಗಷ್ಟೇ ತಮ್ಮನ್ನು ಕಟ್ಟಿಹಾಕಿಕೊಳ್ಳದೆ ಲೌಕಿಕ ಬದುಕಿನ ಕಡೆಯೂ ಗಮನಹರಿಸಬೇಕಾಗುತ್ತದೆ. ಬಹುಮುಖ್ಯವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕಾಗುತ್ತದೆ. ಬಹುಮುಖ್ಯವಾಗಿ ಹಿಂದುಳಿದ ಜಾತಿಗಳ ಸ್ವಾಮಿಗಳಿಗೆ ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ಇದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಠಗಳೆಂದರೆ ಧಾರ್ಮಿಕ –ಆಧ್ಯಾತ್ಮಿಕ ಪ್ರವಚನಕ್ಕೆ ಸೀಮಿತವಾದುದಲ್ಲ. ಅವುಗಳು ಮಠಗಳಾಚೆ ನೋಡಬೇಕಾಗುತ್ತದೆ. ಅಲೌಕಿಕ ಜಗತ್ತಿಗಷ್ಟೇ ತಮ್ಮನ್ನು ಕಟ್ಟಿಹಾಕಿಕೊಳ್ಳದೆ ಲೌಕಿಕ ಬದುಕಿನ ಕಡೆಯೂ ಗಮನಹರಿಸಬೇಕಾಗುತ್ತದೆ.
ಕರ್ನಾಟಕ ಸರ್ಕಾರ ಮೂಡನಂಬಿಕೆ ನಿಷೇಧ ಕಾಯಿದೆಯನ್ನು ಅನುಷ್ಟಾನಕ್ಕೆ ತರಲು ಗಂಭೀರವಾದ ಚಿಂತನೆ ನಡೆಸಿದೆ ಎಂದು ಹಿಂದೆಯೂ ಹಲವಾರು ಬಾರಿ ಹೇಳಿದ್ದೇನೆ. ಇದು ಭಾವನಾತ್ಮಕ ವಿಚಾರ, ಸಾಕಷ್ಟು ಮಂದಿ ಅನಕ್ಷರಸ್ಥರು, ಅರೆಶಿಕ್ಷಿತರನ್ನು ಹೊಂದಿರುವ ರಾಜ್ಯದಲ್ಲಿ ಅವಸರದಲ್ಲಿ ಕೈಗೊಳ್ಳುವ ತೀರ್ಮಾನ ಅನಾಹುತಕ್ಕೆ ಎಡೆಮಾಡಿಕೊಡಬಹುದು.
ಸರ್ಕಾರ ತನ್ನ ನಿರ್ಧಾರ ಕೈಗೊಳ್ಳುವ ಮೊದಲು ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರಿಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆಯಿದೆ. ಇವೆಲ್ಲ ತೀರಾ ಭಾವುಕ ವಿಚಾರ. ಈ ಬಗ್ಗೆ ಮೊದಲು ಅಂಬೇಡ್ಕರ್ ಹಾಗೂ ಬುದ್ಧ ಅನುಯಾಯಿಗಳಾದ ಪ್ರಗತಿಪರ ಸಂಘಟನೆಗಳು ಬದಲಾವಣೆಗಾಗಿ ಸಮಾಜವನ್ನು ಹದಗೊಳಿಸಬೇಕಾಗುತ್ತದೆ. ಆ ಕೆಲಸವನ್ನು ಪ್ರಗತಿಪರ ಮಠಾಧೀಶರು ಇಂತಹ ಸಮಾವೇಶಗಳ ಮೂಲಕ ನಡೆಸುತ್ತಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

