ಬೆಂಗಳೂರು: ಸಾಮಾನ್ಯ ಗ್ರಾಮದಲ್ಲಿ ಹುಟ್ಟಿ ಪಂಚಾಯತಿ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕೆ. ಎಚ್. ಪಾಟೀಲ್ ಅವರು ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಆಯೋಜಿಸಿದ್ದ ಸಹಕಾರಿ ರಂಗದ ಭೀಷ್ಮ ಕೆ ಎಚ್ ಪಾಟೀಲರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಸಹಕಾರಿ ಕ್ಷೇತ್ರದಲ್ಲಿ ಇವರು ಮಾಡದಿರುವ ಕೆಲಸವಿಲ್ಲ. ಸಹಕಾರಿ ಕ್ಷೇತ್ರ ಮಾತ್ರವಲ್ಲದೆ, ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದರು. ದೇವರಾಜ ಅರಸು, ವೀರೇಂದ್ರ ಪಾಟೀಲ್ ಹಾಗೂ ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಮಾಡಿದ್ದರು ಎಂದರು.
ಕೆ.ಹೆಚ್.ಪಾಟೀಲರ ಸಂಪರ್ಕ ರಾಜಕೀಯವಾಗಿ ಕಡಿಮೆಯಿದ್ದರೂ ಅವರು ಸಚಿವರಾಗಿ ಮಾಡುತ್ತಿದ್ದ ಕೆಲಸವನ್ನು ಗಮನಿಸುತ್ತಿದ್ದೆ. ಓದು ಕಡಿಮೆಯಿದ್ದರೂ ಜನಪರವಾದ ಅಪಾರ ಕಾಳಜಿಯನ್ನು ಹೊಂದಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಡವರು, ದಲಿತರು, ಅಲ್ಪಸಂಖ್ಯಾತರಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದ್ದನ್ನು ನಾವು ಸ್ಮರಿಸಲೇಬೇಕು. ಕೆ.ಎಚ್.ಪಾಟೀಲ್ರ ಪುತ್ರ, ಸಚಿವರೂ ಆದ ಹೆಚ್.ಕೆ.ಪಾಟೀಲರು ಅವರ ತಂದೆಯವರು ನಡೆದ ದಾರಿಯಲ್ಲೇ ನಡೆಯುತ್ತಿದ್ದು, ಅವರಿಗಿಂತಲೂ ಹೆಚ್ಚು ಬೆಳೆಯಲಿ ಎಂದು ಹಾರೈಸಿದರು.

