ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಕರ್ನಾಟಕವನ್ನು ಕ್ವಾಂಟಮ್‌ ಕ್ಷೇತ್ರದ ಜಾಗತಿಕ ಹಬ್‌ ಆಗಿಸುವುದು ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕ್ವಾಂಟಮ್ ಇಂಡಿಯಾ ಬೆಂಗಳೂರು 2025ರ ಉದ್ಘಾಟನಾ ಸಮಾರಂಭ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಂಬೆಸ್ಸಿ ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ ಆರಂಭವಾದ ಕ್ವಾಂಟಮ್ ಇಂಡಿಯಾ ಬೆಂಗಳೂರು 2025ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿಗಳ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:

  1. ಕ್ವಾಂಟಮ್‌ ಇಂಡಿಯಾ ಬೆಂಗಳೂರು – 2025 ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ. ಇದೊಂದು ಮಹತ್ವದ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಮೈಲಿಗಲ್ಲಾಗಿದೆ.
  2. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತರು, ವಿಜ್ಞಾನಿಗಳು, ತಜ್ಞರು ಸೇರಿದಂತೆ ಭಾರತ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ ಕೋರುತ್ತೇನೆ.
  3. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಐಎಸ್‌ಸಿಯ ಕ್ವಾಂಟಮ್ ಟೆಕ್ನಾಲಜಿ ಇನಿಷಿಯೇಟಿವ್ (ಐಕ್ಯೂಟಿಐ) ಮತ್ತು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದ ಕ್ವಾಂಟಮ್ ಪ್ರಯಾಣದಲ್ಲಿ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ.
  4. ನಮ್ಮ ಗುರಿಯು ಈ ವೇದಿಕೆಯನ್ನು ಕ್ವಾಂಟಮ್‌ ಕ್ಷೇತ್ರದ ಜಾಗತಿಕ ಹಬ್‌ ಆಗಿಸುವುದಾಗಿದೆ. ಕೊಲಾಬರೇಷನ್‌, ಇನೋವೇಷನ್‌ ಮತ್ತು ರಿಯಲ್ ವರ್ಲ್ಡ್ ಕ್ವಾಂಟಮ್ ಅಪ್ಲಿಕೇಶನ್‌ಗಳನ್ನು ಉತ್ತೇಜಿಸುವುದಾಗಿದೆ.
  5. ಕರ್ನಾಟಕವು ಸಿದ್ಧವಿದೆ, ಭಾರತವೂ ಸಿದ್ಧವಿದೆ, ಎರಡೂ ಜೊತೆಯಾಗಿ ಕ್ವಾಂಟಮ್‌ ಯುಗದಲ್ಲಿ ವಿಶ್ವವನ್ನು ಮುನ್ನಡೆಸುತ್ತೇವೆ ಎಂಬುದನ್ನು ನಾನು ಇಂದು ಹೆಮ್ಮೆಯಿಂದ ಘೋಷಿಸುತ್ತೇನೆ.
  6. ಐಟಿ, ಜೈವಿಕ ತಂತ್ರಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಕರ್ನಾಟಕವು ಪ್ರಬಲವಾಗಿದ್ದು, ದೀರ್ಘಾವದಿಯಿಂದ ಭಾರತದ ತಂತ್ರಜ್ಞಾನ ಮತ್ತು ನಾವಿನ್ಯತೆಯ ರಾಜಧಾನಿಯಾಗಿದೆ. ಜ್ಞಾನದ ಹಬ್‌ ಆಗಿ ಗುರುತಿಸಿಕೊಂಡಿರುವ ಬೆಂಗಳೂರು ಈ ಶೃಂಗವನ್ನು ಮಾದರಿ ಆತಿಥೇಯ ಕಾರ್ಯಕ್ರಮವನ್ನಾಗಿಸಿದೆ.
  7. “ಕ್ವಾಂಟಮ್ ಇಕೋಸಿಸ್ಟಮ್‌ ನಿರ್ಮಾಣ: ಸಮಾಜಕ್ಕೆ ಕ್ಯೂಬಿಟ್‌” ಎಂಬ ಥೀಮ್‌, ಕ್ವಾಂಟಮ್ ಸಂಶೋಧನೆಯನ್ನು ಆರೋಗ್ಯ, ರಕ್ಷಣಾ, ಆರ್ಥಿಕ ಮತ್ತು ಆಡಳಿತ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಲು ನಮಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
  8. 2025ನ್ನು ಕ್ವಾಂಟಮ್‌ನ ಅಂತರರಾಷ್ಟ್ರೀಯ ವರ್ಷ ಎಂದು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕದ ಕ್ವಾಂಟಮ್ ವಿಷನ್ 2035ನ್ನು ಘೋಷಿಸಲು ನನಗೆ ಹೆಮ್ಮೆ ಎನಿಸುತ್ತದೆ.
  9. 20 ಬಿಲಿಯನ್ ಡಾಲರ್ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಾಣ ಮಾಡುವ ಮೂಲಕ ಉದ್ಯೋಗ ಸೃಷ್ಟಿ, ಕೈಗಾರಿಕೆಗಳು ಹಾಗೂ ಸಮಾಜಕ್ಕೆ ಪ್ರಯೋಜನಕಾರಿಯಾದ ಸಂಶೋಧನೆಯನ್ನು ಕೈಗೊಳ್ಳುವುದು ನಮ್ಮ ಗುರಿ.
  10. ಇದನ್ನು ಸಾಧಿಸಲು ನಾವು ಕರ್ನಾಟಕ ಕ್ವಾಂಟಮ್‌ ಮಿಷನ್‌(ಕೆಕ್ಯೂಎಂ) ಆರಂಭಿಸುವ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಟ್‌ಅಪ್‌ಗಳಿಗಾಗಿ ನಾವು 1,000 ಕೋಟಿ ರೂ. ಅನುದಾನವನ್ನು ಕೊಡುತ್ತಿದ್ದೇವೆ.
  11. ಕ್ವಾಂಟಮ್ ತಂತ್ರಜ್ಞಾನದ ಕಾರ್ಯಪಡೆಯು ನೀತಿ ನಿರೂಪಣೆಗೆ ಮಾರ್ಗದರ್ಶನ ಮಾಡಿದರೆ, ಕ್ವಾಂಟಮ್ ಪಾರ್ಕ್‌ಗಳು, ಉತ್ಪಾದನಾ ವಲಯಗಳು ಹಾಗೂ ಕ್ಯೂ-ಸಿಟಿ ನಾವಿನ್ಯತೆಯನ್ನು ಪೋಷಿಸುತ್ತವೆ.
  12. ಬೆಂಗಳೂರುನಲ್ಲಿ ಐಟಿ ಕ್ಷೇತ್ರ ಉತ್ತಂಗಕ್ಕೆ ಏರಿದಂತೆ ಕ್ಯೂ-ಸಿಟಿ, ಸಮಗ್ರವಾದ ಕ್ವಾಂಟಮ್ ಹಬ್‌ ಭಾರತವನ್ನು ಜಾಗತಿಕ ನಾಯಕನನ್ನಾಗಿಸಲಿದೆ.
  13. ನಮ್ಮ ಕಾರ್ಯತಂತ್ರವು ಕರ್ನಾಟಕ ನೇತೃತ್ವದ ಭಾರತದ ಕ್ವಾಂಟಮ್‌ ಕ್ರಾಂತಿಗೆ ಐದು ಪ್ರಮುಖ ಸ್ತಂಭಗಳನ್ನು ಸ್ಥಾಪಿಸುವುದಾಗಿದೆ:
  • ಮೊದಲನೆಯದಾಗಿ ಕೌಶಲ್ಯಾಭಿವೃದ್ಧಿ: 20ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಕ್ವಾಂಟಮ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುತ್ತೇವೆ ಹಾಗೂ ಪ್ರತಿ ವರ್ಷ 150 ಪಿಎಚ್‌ಡಿ ಫೆಲೋಶಿಪ್‌ಗಳಿಗೆ ನೆರವು ನೀಡುತ್ತೇವೆ. ಇದರಿಂದ ನಾವೀನ್ಯತೆಗೆ ಉತ್ತೇಜನ ನೀಡುವ ತಜ್ಞರನ್ನು ಹುಟ್ಟುಹಾಕಲಿದೆ.
  • ಎರಡನೆಯದಾಗಿ, ಉತ್ಕೃಷ್ಟ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿ. ಆರೋಗ್ಯ ರಕ್ಷಣೆ, ರಕ್ಷಣಾ ಮತ್ತು ಸೈಬರ್ ಭದ್ರತೆ ವಲಯಗಳ ಅಭಿವೃದ್ಧಿಗಾಗಿ ಅತ್ಯಾಧುನಿಕ ಕ್ವಾಂಟಮ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು,1,000- ಕ್ಯೂಬಿಟ್ ಪ್ರೊಸೆಸರ್‌ಗಳನ್ನು ಒಳಗೊಂಡಂತೆ ಮತ್ತು ಪೈಲಟ್‌ ರಿಯಲ್‌-ವರ್ಲ್ಡ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ.
  • ಮೂರನೆಯದಾಗಿ ಮೂಲ ಸೌಕರ್ಯ ಸೃಷ್ಟಿ: ಕರ್ನಾಟಕವು ಭಾರತದ ಪ್ರಥಮ ಕ್ವಾಂಟಮ್ ಹಾರ್ಡ್ವೇರ್ ಪಾರ್ಕ್ ನಿರ್ಮಿಸಲಿದೆ. ಇದರಲ್ಲಿ 4 ನಾವಿನ್ಯತಾ ವಲಯಗಳು ಹಾಗೂ ಕ್ವಾಂಟಮ್ ಘಟಕಗಳ ಸ್ಥಳಿಯ ಉತ್ಪಾದನೆಯನ್ನು ಉತ್ತೇಜಿಸಲು ಮೀಸಲಿಡಲಾದ ಫ್ಯಾಬ್ ಲೈನ್ ಅನ್ನು ಸ್ಥಾಪಿಸಲಿದೆ.
  • ನಾಲ್ಕನೆಯದಾಗಿ ಉದ್ಯಮಗಳಿಗೆ ಬೆಂಬಲ: ನೂರಕ್ಕೂ ಹೆಚ್ಚು ಸ್ಟಾರ್ಟಪ್ ಗಳಿಗೆ ಪೋಷಣೆ, ನೂರಕ್ಕೂ ಹೆಚ್ಚು ಪೇಟೆಂಟ್ ಗಳನ್ನು ದಾಖಲಿಸಲು ನೆರವು ನೀಡುವುದು ಮತ್ತು ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಸಹಾಯ ಒದಗಿಸಲು ಕ್ವಾಂಟಮ್ ವೆಂಚರ್ ಕ್ಯಾಪಿಟಲ್ ಫಂಡ್ ಅನ್ನು ಪ್ರಾರಂಭಿಸುತ್ತೇವೆ.
  • ಅಂತಿಮವಾಗಿ ಜಾಗತಿಕ ಪಾಲುದಾರಿಕೆಗಳು. ಇಂಡಿಯಾ ಕ್ವಾಂಟಮ್ ಸಮಾವೇಶ ಹಾಗೂ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗದಂತಹ ಕ್ರಮಗಳಿಂದಾಗಿ ನಾವು ಕರ್ನಾಟಕವನ್ನು ಜಾಗತಿಕ ಕ್ವಾಂಟಮ್ ಕೇಂದ್ರವನ್ನಾಗಿಸುತ್ತೇವೆ.
  1. 2035ರ ವೇಳೆಗೆ 10,000 ಉನ್ನತ ಕೌಶಲ್ಯವಿರುವ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕವನ್ನು ಏಷ್ಯಾದ ಕ್ವಾಂಟಮ್ ರಾಜಧಾನಿಯನ್ನಾಗಿ ಸ್ಥಾಪಿಸುವುದು ನಮ್ಮ ಗುರಿ.
  2. ಸಾಮಾನ್ಯ ನಾಗರಿಕರಿಗೆ ಕ್ವಾಂಟಮ್ ಹೇಗೆ ಪ್ರಯೋಜನಕಾರಿ ಎಂದು ಕೆಲವರು ಕೇಳಬಹುದು.
  • ಪ್ರಾರಂಭಿಕ ಹಂತದಲ್ಲಿ ರೋಗಗಳ ಪತ್ತೆಗೆ, ಸುರಕ್ಷಿತ ಸಂವಹನ ಹಾಗೂ ಸ್ಮಾರ್ಟ್ ಕೃಷಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
  • ರಾಷ್ಟ್ರೀಯ ಭದ್ರತೆ ಶಿಕ್ಷಣ ಮತ್ತು ಆಡಳಿತವನ್ನು ಬಲಪಡಿಸುತ್ತದೆ.
  1. ಕ್ವಾಂಟಮ್ ಎನ್ನುವುದು ನಮಗೆ ಕೇವಲ ತಂತ್ರಜ್ಞಾನವಲ್ಲ. ಇದು ಪ್ರಗತಿ, ಘನತೆ ಹಾಗೂ ಅಭಿವೃದ್ಧಿಯನ್ನು ಒಳಗೊಂಡಿದೆ.
  2. ಕ್ವಾಂಟಮ್ ಕಂಪ್ಯೂಟಿಂಗ್‌, ಕ್ರಿಪ್ಟೋಗ್ರಫಿ ಹಾಗೂ ಸೆನ್ಸಿಂಗ್‌ನಲ್ಲಿ ಜಾಗತಿಕವಾಗಿ ರಾಷ್ಟ್ರಗಳು ಸ್ಪರ್ಧೆಗೆ ಇಳಿದಿವೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್ ಮೂಲಕ ಕರ್ನಾಟಕದ ನಾಯಕತ್ವದಲ್ಲಿ ಭಾರತವು ಮುಂದಡಿಯಿಡುತ್ತಿದೆ.
  3. ಐಐಎಸ್‌ಸಿ ಸೇರಿದಂತೆ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಹಾಗೂ ಅತ್ಯುತ್ತಮ ಸ್ಟಾರ್ಟ್‌ಅಪ್ ಇಕೋಸಿಸ್ಟಮ್‌ ಮೂಲಕ ಕರ್ನಾಟಕವು ಭಾರತದ ಕ್ವಾಂಟಮ್ ಕ್ರಾಂತಿಯನ್ನು ಮುನ್ನಡೆಸಲು ಅನನ್ಯ ಸ್ಥಾನವನ್ನು ಪಡೆದಿದೆ.
  4. ಇದು ಕೇವಲ ಯೋಜನೆ ಅಲ್ಲ. ಬದಲಿಗೆ ವಿಜ್ಞಾನಿಗಳು, ಉದ್ಯಮಿಗಳು ಮತ್ತು ಯುವಕರಿಗೆ ಕರ್ನಾಟಕದಿಂದ ಕ್ವಾಂಟಮ್‌ ನಾವೀನ್ಯತೆಗಳನ್ನು ವಿಶ್ವಕ್ಕೆ ಪೂರೈಸುವ ಮೂಲಕ ಸಾಧನೆ ಮಾಡುವ ಮಾರ್ಗವಾಗಿದೆ.
  5. ಈ ಶೃಂಗವು ಹೊಸ ವಿಚಾರಗಳು, ಪಾಲುದಾರರು ಮತ್ತು ಅನ್ವೇಷಣೆಗಳು ಹೊರ ಹೊಮ್ಮಲು ಸಹಕಾರಿಯಾಗಲಿದೆ. ಭಾರತದ ಉತ್ಕೃಷ್ಟ ಗುಣಮಟ್ಟದ ಕ್ವಾಂಟಮ್‌ಗೆ ಉತ್ತೇಜನ ನೀಡಲಿದೆ.
  6. ನಾನು ಉದ್ಯಮಿಗಳಿಗೆ ಕರ್ನಾಟಕದ ಕ್ವಾಂಟಮ್ ಇಕೋಸಿಸ್ಟಮ್‌ನಲ್ಲಿ ಹೂಡಿಕೆ ಮಾಡುವಂತೆ ಮತ್ತು ನಮ್ಮ ಸಂಸ್ಥೆಗಳೊಂದಿಗೆ ಸಹಯೋಗ ಹೊಂದುವಂತೆ ಒತ್ತಾಯಿಸುತ್ತೇನೆ.
  7. ನಮ್ಮ ವಿಜ್ಞಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕ್ವಾಂಟಮ್ ಭವಿಷ್ಯವಾಗಿದೆ ಮತ್ತು ಕರ್ನಾಟಕವು ನಿಮ್ಮ ಮೈದಾನವಾಗಿದೆ.
  8. ಒಟ್ಟಾಗಿ, ಭಾರತವನ್ನು ಜಾಗತಿಕ ಕ್ವಾಂಟಮ್ ಸೂಪರ್ ಪವರ್ ಆಗಿಸೋಣ.

    ಭಾರತದ ನಾವೀನ್ಯತಾ ನಗರವಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಸ್ಫೂರ್ತಿದಾಯಕ ಹಾಗೂ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾರೈಸಿದರು.
Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ