ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಪ್ರತಿಪಕ್ಷ ನಾಯಕರು ತಮ್ಮ ರಾಜಕೀಯ ಮೇಲಾಟಕ್ಕೆ ಸದನದ ಗಾಂಭೀರ್ಯ ಬಲಿಗೊಡದಿರಲಿ

ಶಾಸನಸಭೆಯ ಆಗುಹೋಗುಗಳ ಬಗ್ಗೆ, ಸದನ ಕಲಾಪಗಳ ಬಗ್ಗೆ ಗಂಭೀರವಾಗಿರುವ ಆಸಕ್ತ ಜನತೆ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಸದನದಲ್ಲಿ ನಡೆಯುವ ಕಲಾಪಗಳ ಮಾಹಿತಿ ನೀಡಲು ಸಾಮಾಜಿಕ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

ಪ್ರಜಾಪ್ರಭುತ್ವದಲ್ಲಿ ಶಾಸನ ಸಭೆಗೆ ಇನ್ನಿಲ್ಲದ ಮಹತ್ವವಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ರೂಪು ತಳೆದ ಪ್ರಜಾತಂತ್ರವಾದಿ ಸರ್ಕಾರಗಳು ಜನರು ತಮಗೆ ನೀಡಿರುವ ಶಕ್ತಿಯನ್ನು ಬಳಸಿ ಜನರಿಗೋಸ್ಕರ ಶಾಸನಗಳನ್ನು ರೂಪಿಸಿ, ಜನಪರವಾದ ನೀತಿ, ನಿರ್ಧಾರಗಳನ್ನು ಕೈಗೊಂಡು ಜನ ಕಲ್ಯಾಣವನ್ನು ಕೇಂದ್ರದಲ್ಲಿರಿಸಿಕೊಂಡು ಆಡಳಿತ ನಡೆಸುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ.

ಶಾಸನ ಸಭೆಯ ಪ್ರತಿಯೊಬ್ಬ ಸದಸ್ಯರೂ ಮತದಾರರು ತಮ್ಮನ್ನು ಆಯ್ಕೆ ಮಾಡುವ ಮೂಲಕ ತಮಗೆ ಧಾರೆ ಎರೆದ ಶಕ್ತಿಯಿಂದಾಗಿ ಜನಪ್ರತಿನಿಧಿಯಾಗಿ ಶಾಸನ ಸಭೆ ಪ್ರವೇಶಿಸುತ್ತಾರೆ. ಹಾಗಾಗಿ, ಆಡಳಿತ ಪಕ್ಷವೇ ಇರಲಿ, ವಿಪಕ್ಷವೇ ಇರಲಿ ಮೊದಲು ನಾವೆಲ್ಲರೂ ಶಾಸನ ಸಭೆಯಲ್ಲಿ ಜನರನ್ನು ಪ್ರತಿನಿಧಿಸುವ ಶಾಸಕರು. ನಮ್ಮ ಮೊದಲ ಜವಾಬ್ದಾರಿ ಹಾಗೂ ಕಾಳಜಿ ನಮ್ಮನ್ನು ಆಯ್ಕೆ ಮಾಡಿ ಸದನಕ್ಕೆ ಕಳುಹಿಸಿರುವ ಜನರೆಡೆಗೆ ಇರುತ್ತದೆ. ತದನಂತರ ನಾವುಗಳು ಸಂವಿಧಾನಾತ್ಮಕವಾಗಿ ನಮಗೆ ದೊರೆತಿರುವ ಹುದ್ದೆ, ಜವಾಬ್ದಾರಿಯ ಮೂಲಕ ಆಡಳಿತ ಪಕ್ಷ, ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತೇವೆ.

ವಿಧಾನಸಭಾ ನಾಯಕನಾಗಿ, ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿ ಸಹಜವಾಗಿಯೇ ಶಾಸನಾತ್ಮಕ ಕರ್ತವ್ಯ ಹಾಗೂ ಕಾರ್ಯಾಂಗದ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆಗಾರಿಕೆ ನನ್ನದಾಗಿದೆ. ನನ್ನ ಈ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ರಾಜ್ಯದ ಜನತೆ ಸರ್ಕಾರದ ಮೇಲೆ ಇರಿಸಿರುವ ನಂಬಿಕೆಯನ್ನು, ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಲು ನಾನು ಹಾಗೂ ನನ್ನ ಸಂಪುಟ ಸಹೋದ್ಯೋಗಿಗಳು ಅವಿರತವಾಗಿ ಶ್ರಮಿಸುತ್ತಿದ್ದೇವೆ.

ಬೆಳಗಾವಿಯಲ್ಲಿ ನಡೆದ ಹದಿನಾರನೆಯ ವಿಧಾನಸಭೆಯ ಎರಡನೆಯ ಅಧಿವೇಶದಲ್ಲಿ ಭಾಗವಹಿಸಲು ನನ್ನನ್ನೂ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಶಾಸಕರು, ವಿಶೇಷವಾಗಿ ಸಚಿವರು ಉತ್ಸಾಹದಿಂದ ಆಗಮಿಸಿದ್ದೆವು. ಕಳೆದ ಆರು ತಿಂಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಕ್ಷಿಪ್ರ ಜಾರಿಯೂ ಸೇರಿದಂತೆ ನಾಡಿನ ಅಭ್ಯುದಯಕ್ಕೆ, ಜನಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳನ್ನು ಸದನದ ಮೂಲಕ ಈ ನಾಡಿನ ಜನತೆಯ ಮುಂದಿರಿಸಲು ಹಾಗೂ ಕರ್ನಾಟಕದ ಭವಿತವ್ಯದ ಬಗ್ಗೆ ನಾವು ಹೊಂದಿರುವ ಕನಸುಗಳನ್ನು, ಯೋಜನೆಗಳನ್ನು ಚರ್ಚಿಸಲು ಉತ್ಸುಕರಾಗಿದ್ದೆವು. ನನ್ನ ಇಡೀ ಸಚಿವ ಸಂಪುಟದ ಸಹೋದ್ಯೋಗಿಗಳು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ, ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ತಾವು ಉಸ್ತುವಾರಿ ಹೊತ್ತಿರುವ ಖಾತೆಗಳ ಮೂಲಕ ಕೈಗೊಳ್ಳಲು ನಿರ್ಧರಿಸಿರುವ ಕಾರ್ಯಕ್ರಮಗಳು, ಯೋಜನೆಗಳ ಕುರಿತು ಸದನದ ಮುಖೇನ ಜನತೆಯ ಮುಂದಿರಿಸಲು ಸಿದ್ಧರಾಗಿ ಬಂದಿದ್ದರು.

ಆದರೆ, ಬೆಳಗಾವಿಯ ಸುವರ್ಣ ಸೌಧದಲ್ಲಿ ಆಗಿದ್ದೇನು?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಈ ಬಾರಿಯ ಅಧಿವೇಶನ ವಿಪಕ್ಷಗಳ ಅಸಾಮರ್ಥ್ಯವನ್ನು ಅನಾವರಣ ಮಾಡಿತು. ತಾಳಮೇಳವಿಲ್ಲದೆ ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿರುವ ವಿಪಕ್ಷ ನಾಯಕರನ್ನು ನಾಡಿನ ಜನತೆಯ ಮುಂದೆ ಜಗಜ್ಜಾಹೀರು ಮಾಡಿತು. ಅಧಿವೇಶನ ಆರಂಭವಾದಾಗ ಪ್ರತಿಪಕ್ಷಗಳಲ್ಲಿ ವಿಶೇಷವಾಗಿ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದಲ್ಲಿ ಕಂಡುಬಂದ ಗೊಂದಲ ಸದನ ಮುಗಿಯುವವರೆಗೆ ಮುಂದುವರಿಯಿತು. ಉತ್ತರ ಕರ್ನಾಟಕದ ವಿಚಾರವಾಗಿ ಚರ್ಚಿಸಲು ಸಭಾಧ್ಯಕ್ಷರು ಕಟ್ಟುನಿಟ್ಟಾಗಿ ಮುಂದಾಗದೆ ಹೋಗದಿದ್ದರೆ ಇಡೀ ಉತ್ತರ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಮಸಿ ಬಳಿಯುವ ರೀತಿಯಲ್ಲಿ ಬಹುಶಃ ವಿಪಕ್ಷಗಳು ಸದನದ ಚರ್ಚೆಯಿಂದ ವಿಮುಖವಾಗಿಬಿಡುತ್ತಿದ್ದವೇನೋ ಎಂದು ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಗಂಭೀರವಾಗಿ ಅನಿಸಿದ್ದು ನಿಜ.

ನಾನು ಇಲ್ಲಿ ಯಾವುದೇ ಪ್ರತಿಪಕ್ಷದ ನಾಯಕರನ್ನು ಹೆಸರಿಸಿ ಮಾತನಾಡಲು ಹೋಗುವುದಿಲ್ಲ. ಆದರೆ, ವಿಧಾನಮಂಡಲದ ಚರ್ಚೆಗಳನ್ನು ಅರ್ಥಪೂರ್ಣವಾಗಿಸುವಲ್ಲಿ, ಅವುಗಳ ಮೌಲ್ಯವರ್ಧನೆ ಮಾಡುವಲ್ಲಿ ವಿಪಕ್ಷ ನಾಯಕರು, ಅದರಲ್ಲಿಯೂ ಹಿರಿಯ ನಾಯಕರ ಪಾತ್ರ ಬಹುದೊಡ್ಡದಾಗಿರುತ್ತದೆ. ಆಡಳಿತಾರೂಢ ಸರ್ಕಾರದ ಮೇಲೆ ತಮ್ಮ ಹರಿತ ವಿಮರ್ಶೆಗಳು, ಟೀಕೆ ಟಿಪ್ಪಣಿ, ಅನುಭವಗಳಿಂದ ಚಾಟಿ ಬೀಸುವ ವಿಶೇಷ ಸವಲತ್ತು, ಅಧಿಕಾರ ವಿಪಕ್ಷಗಳಿಗಿರುತ್ತದೆ. ಈ ಕಾರಣಕ್ಕೆ ವಿರೋಧ ಪಕ್ಷದ ನಾಯಕನಿಗೆ ನಮ್ಮ ಸಂವಿಧಾನದಲ್ಲಿ ಮುಖ್ಯಮಂತ್ರಿಗೆ ಸರಿಸಮನಾದ ಸ್ಥಾನಮಾನವನ್ನೂ ಸಹ ಕಲ್ಪಿಸಲಾಗಿದೆ. ವಿಪಕ್ಷದ ಸಾಲಿನಲ್ಲಿ ಕುಳಿತವರು ತಾವು ಅಧಿಕಾರದಿಂದ ವಂಚಿತರಾದವರು ಎನ್ನುವ ಹತಾಶೆಯಿಂದಲೋ, ಆಡಳಿತ ಪಕ್ಷವು ತಮ್ಮನ್ನು ವಂಚಿಸಿ ಅಧಿಕಾರ ಪಡೆದಿದೆ ಎನ್ನುವ ಸಂಕುಚಿತ ಮನೋಭಾವದಿಂದಲೋ ಅಲ್ಲಿ ಕೂರಬಾರದು. ಬದಲಿಗೆ, ಸರ್ಕಾರದ ಮೌಲ್ಯಮಾಪನವನ್ನು ಮಾಡಲು, ಸರ್ಕಾರದ ಆಡಳಿತವನ್ನು ಬಿಗಿಗೊಳಿಸಲು ತಮ್ಮನ್ನು ವಿಪಕ್ಷದಲ್ಲಿ ಕಾವಲಿಗೆ ಕೂರಿಸಲಾಗಿದೆ ಎನ್ನುವ ಕಳಕಳಿಯಿಂದ ಅಲ್ಲಿ ಕೂರಬೇಕು. ಹಾಗಾದಾಗ, ಸಹಜವಾಗಿಯೇ ನಾಡಿನ ಜನತೆಯೆಡೆಗೆ ಪ್ರತಿಪಕ್ಷಗಳಾಗಿ ತಾವು ಹೊಂದಿರುವ ಜವಾಬ್ದಾರಿಯನ್ನು ನಿರ್ವಹಿಸಲು ವಿಪಕ್ಷಗಳಿಗೆ, ವಿಪಕ್ಷ ನಾಯಕರಿಗೆ ಸಾಧ್ಯವಾಗುತ್ತದೆ.

ಈ ಹಿಂದಿನ ಅಧಿವೇಶನದ ವೇಳೆ ವಿರೋಧ ಪಕ್ಷದ ನಾಯಕನೇ ಇಲ್ಲದೆ ಸದನ ನಡೆಯುವಂತಹ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿದ್ದಕ್ಕೆ ನಾಡಿನ ಜನತೆ ಮೂಕ ಸಾಕ್ಷಿಯಾಗಿದ್ದರು. ರಾಜಕೀಯ ಪಕ್ಷವೊಂದರ ಆಂತರಿಕ ವಿಚಾರಗಳೇನೇ ಇದ್ದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಗೊಡದ ಆ ಪಕ್ಷದ ಸರ್ವೋಚ್ಚ ನಾಯಕರ ವರ್ತನೆಯೇ ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿಯಾದದ್ದು ಎನ್ನುವುದು ಸರ್ವ ವಿಧಿತ. ಶಾಸಕಾಂಗವೆಂದರೆ ಅದು ಆಡಳಿತ ಪಕ್ಷ ಮಾತ್ರವೇ ಅಲ್ಲ, ಪ್ರತಿಪಕ್ಷಗಳೂ ಕೂಡ. ಪ್ರತಿಪಕ್ಷಗಳಿಗೆ ತಮ್ಮದೇ ಆದ ಹೊಣೆಗಾರಿಕೆ, ಬಾಧ್ಯತೆಗಳಿವೆ. ಶಾಸನ ಸಭೆಯಲ್ಲಿ ಅದನ್ನು ಸಮರ್ಥವಾಗಿ ನಿರ್ವಹಿಸಲು ವಿಪಕ್ಷ ನಾಯಕನ ಸ್ಥಾನ ಅತ್ಯಗತ್ಯ. ಅಂತಹ ಸ್ಥಾನವನ್ನು ಆಂತರಿಕ ಕಾರಣಗಳಿಗಾಗಿ ಖಾಲಿ ಉಳಿಸಿ ಪ್ರಜಾಪ್ರಭುತ್ವದ ಅಪಹಾಸ್ಯವನ್ನು ಮಾಡಲಾಗಿತ್ತು. ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವೇನೋ ಭರ್ತಿಯಾಗಿತ್ತು, ಆದರೆ ಆ ಬಗ್ಗೆ ಅವರದೇ ಪಕ್ಷದ ಸದಸ್ಯರಿಗೆ ಅನುಮಾಗಳಿದ್ದಂತೆ ತೋರಿದ್ದು ಸದನದುದ್ದಕ್ಕೂ ನಿಚ್ಚಳವಾಗಿ ಕಂಡು ಬಂತು.

ಪ್ರತಿಪಕ್ಷಗಳು ವಿಧಾನಮಂಡಲದೊಳಗೆ ನಾಡಿನ ದನಿಯಾಗಿ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಮಿಡಿವ ಹೆಂಗರುಳಾಗಿ ಹೊರಹೊಮ್ಮಿದಷ್ಟೂ ಆಡಳಿತ ಪಕ್ಷವು ತಾಯಿ ಹೃದಯದಿಂದ ಜನತೆಯನ್ನು ಪೊರೆಯುವ ಕೆಲಸ ಹೆಚ್ಚು ಅರ್ಥಪೂರ್ಣವಾಗುತ್ತದೆ. ಆದರೆ, ಅದನ್ನು ಮರೆತು ಕೇವಲ ಅಧಿಕಾರ ರಾಜಕಾರಣದ ಮೇಲಾಟವಾಡಲು ಸದನವನ್ನು ಬಳಸಿಕೊಂಡರೆ ಅದು ಸ್ವಾರ್ಥವಾಗುತ್ತದೆ. ಸದಾ ತಮ್ಮೊಳಗೇ ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿಹೋದ ವಿರೋಧ ಪಕ್ಷದ ನಾಯಕರಲ್ಲಿ ರಾಜ್ಯದೆಡೆಗೆ ಯಾವುದೇ ಕಳಕಳಿಯಾಗಲಿ, ಬದ್ಧತೆಯಾಗಲಿ ಅಧಿವೇಶನದ ವೇಳೆ ಕಾಣಲಿಲ್ಲ ಎನ್ನುವುದನ್ನು ವಿಷಾದದಿಂದ ಇಲ್ಲಿ ಹೇಳಬೇಕಿದೆ.

ಸದನದಲ್ಲಿ ಸಮರ್ಥ ಪ್ರತಿಪಕ್ಷವಾಗಿ ಸರ್ಕಾರದ ಪ್ರತಿಯೊಂದು ನಡೆಯನ್ನೂ ಕಟು ವಿಮರ್ಶೆಗೊಳಪಡಿಸುವ ಅವಕಾಶ ಇರುವಾಗ ಅಧಿವೇಶನ ನಡೆಯುತ್ತಿರುವಾಗಲೇ ಸದನದ ಹೊರಗೆ ರಸ್ತೆಗಳಲ್ಲಿ ಅವರದೇ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ನಡೆಸುವ ಪ್ರತಿಭಟನೆ ರಾಜ್ಯದ ಜನತೆಗೆ ಏನು ಸಂದೇಶ ನೀಡುತ್ತದೆ? ಒಂದನೆಯದು, ಇದು ಸದನದೊಳಗೆ ಇರುವ ತನ್ನದೇ ಪಕ್ಷದ ನಾಯಕರ ಸಾಮರ್ಥ್ಯದ ಬಗ್ಗೆ ಆ ಪಕ್ಷದ ಹಿರಿಯರಿಗೆ ಇರುವ ಅನುಮಾನವನ್ನು ತೋರುತ್ತದೆ, ಎರಡನೆಯದು, ಸದನದೊಳಗೆ ಇರುವ ನಾಯಕರಿಗಿಂತ ಸದನದ ಹೊರಗಿರುವ ತಾವು ಹೆಚ್ಚು ಸಮರ್ಥರು ಎಂಬುದನ್ನು ನಿರೂಪಿಸಲು ಹೊರಟಿರುವ ವೈಯಕ್ತಿಕ ವಿಜೃಂಭಣೆಯ ಹಪಹಪಿಯನ್ನು ತೋರುತ್ತದೆ. ಇದೆರಡರ ಹೊರತಾದ ಬೇರೆ ಆಂತರಿಕ ರಾಜಕೀಯ ಕಾರಣಗಳು ಇರಬಹುದೇನೋ. ಆದರೆ, ಅಂತಹ ಕಾರಣಗಳಿಂದ ರಾಜ್ಯದ ಜನತೆಗೆ ಆಗುವ ಲಾಭವೇನೂ ಇಲ್ಲವಾದ್ದರಿಂದ ಈ ಎರಡು ಕಾರಣಗಳನ್ನೇ ನಾನು ಪ್ರಧಾನವಾಗಿ ಇಲ್ಲಿ ಗುರುತಿಸುತ್ತೇನೆ.

ಆಡಳಿತ ವಿಪಕ್ಷ ಎನ್ನುವ ಭೇದವಿಲ್ಲದೆ ವಿಧಾನ ಮಂಡಲಕ್ಕೆ ರಾಜ್ಯದ ಜನತೆಯೆಡೆಗೆ ತನ್ನ ಪ್ರಾಥಮಿಕ ಜವಾಬ್ದಾರಿಯಿದೆ. ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಚಟುವಟಿಕೆಗಳು, ನೀತಿ-ನಿರೂಪಣಾ ವಿಷಯಗಳ ಬಗ್ಗೆ, ವಿಶೇಷವಾಗಿ ರಾಜ್ಯದ, ಜನಕಲ್ಯಾಣದ ಹಿತದಿಂದ ರೂಪಿಸಲಾಗುವ ಶಾಸನಗಳ ಬಗ್ಗೆ ಜನತೆಗೆ ವಿಷದವಾಗಿ ತಿಳಿಸುವ ಹೊಣೆಗಾರಿಕೆ ಇದೆ. ಧನ ವಿನಿಯೋಗ ಮಸೂದೆಗಳ ಮೂಲಕ ಆಯವ್ಯಯಕ್ಕೆ ಅನುಮೋದನೆ ಪಡೆಯುವುದು ಮಾತ್ರವೇ ಅಲ್ಲದೆ, ಅದರ ಅನುಸಾರ ಸರ್ಕಾರ ವಿವಿಧ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವುದು, ಹೆಚ್ಚುವರಿ ಖರ್ಚುವೆಚ್ಚ ಹೊಂದಿಸಲು ಫೂರಕ ಧನವಿನಿಯೋಗ ಮಸೂದೆ ಮಂಡಿಸುವುದು ಅನುಮೋದನೆ ಪಡೆಯುವುದು ಇವೆಲ್ಲವೂ ಯಾಂತ್ರಿಕವಾಗಿ ನಡೆಯುವಂತೆ ಹೊರನೋಟಕ್ಕೆ ಗೋಚರಿಸಿದರೂ ಇದೆಲ್ಲವೂ ಶಾಸನಸಭೆಯಲ್ಲಿ ಸಾಕಷ್ಟು ಚರ್ಚೆ, ಸಮಾಲೋಚನೆಗಳ ಪ್ರಕ್ರಿಯೆಯ ಮೂಲಕವೇ ಅಂಗೀಕಾರಗೊಳ್ಳಬೇಕಿರುತ್ತದೆ.

ಇಷ್ಟೇ ಪ್ರಮುಖವಾಗಿ ಶಾಸಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲು, ಅಹವಾಲು ಮಂಡಿಸಲು ಶಾಸನ ಸಭೆ ಅಧಿಕೃತ ವೇದಿಕೆಯಾಗರುತ್ತದೆ. ರಾಜ್ಯದ ಅಭಿವೃದ್ಧಿ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತಾದ ಹತ್ತಾರು ವರದಿಗಳ ಮಂಡನೆಗೆ ಕಾರಣೀಭೂತವಾಗಿರುತ್ತದೆ. ಈ ಎಲ್ಲವೂ ಸದನದ ಸ್ವತ್ತಾಗಿದ್ದು ಸದನದ ನಡಾವಳಿಗಳಲ್ಲಿ ಗಂಭೀರತೆಯಿಲ್ಲದೆ ಹೋದರೆ, ಅಧ್ಯಯನವಿಲ್ಲದೆ ಹೋದರೆ ಕಲಾಪಗಳಲ್ಲಿ ಸಕ್ರಿಯವಾಗಿ, ಸಕಾರಾತ್ಮಕವಾಗಿ ಪಾಲುಗೊಳ್ಳಲು ಸಾಧ್ಯವಿಲ್ಲ.

ಸದನದ ಕಲಾಪಗಳನ್ನು ಹೆಚ್ಚು ಸಕ್ರಿಯವಾಗಿಸಲು, ಚರ್ಚೆಗಳಲ್ಲಿ ಎಲ್ಲರ ದನಿ, ಅಭಿಪ್ರಾಯಗಳನ್ನು ಒಳಗೊಳ್ಳುವ ಉದ್ದೇಶದಿಂದ ವಾರ್ಷಿಕ ಕನಿಷ್ಠ 60 ದಿನಗಳ ಕಾಲ ವಿಧಾನಮಂಡಲ ಕಲಾಪ ನಡೆಯಬೇಕು ಎಂದು ‘ಕರ್ನಾಟಕ ರಾಜ್ಯ ವಿಧಾನಮಂಡಲ ಸರ್ಕಾರಿ ಕಾರ್ಯಕಲಾಪ ನಿರ್ವಹಣೆ ಅಧಿನಿಯಮ – 2002’ ಜಾರಿಗೆ ತರಲಾಗಿದೆ. ನನ್ನ ವೈಯಕ್ತಿಕ ನಿಲುವೂ ಸಹ ವಾರ್ಷಿಕ ಕನಿಷ್ಠ 60 ದಿನ ಸದನ ಕಲಾಪ ನಡೆಯಬೇಕು ಎನ್ನುವುದೇ ಆಗಿದೆ. ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ವತಿಯಿಂದ ಸಭಾಧ್ಯಕ್ಷರು, ಸಭಾಪತಿಗಳಿಗೆ ಸಂಪೂರ್ಣ ಬೆಂಬಲವಿರಲಿದೆ.

ಬೇಸರದ ಸಂಗತಿಯೆಂದರೆ ಸದನದಲ್ಲಿ ಲಭ್ಯವಾಗುವ ಅವಧಿಯನ್ನು ಮೌಲ್ಯಯುತ ಚರ್ಚೆಯಾಗಿ ಪರಿವರ್ತಿಸುವಲ್ಲಿ ತಮಗಿರುವ ಜವಾಬ್ದಾರಿಯನ್ನು ವಿಪಕ್ಷಗಳು ಮರೆಯುತ್ತಿರುವುದು. ಆ ಮೂಲಕ ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ವಿಪಕ್ಷಗಳು ಅಪಚಾರವೆಸಗುತ್ತಿವೆ. ಇದು ನೋವಿನ ವಿಚಾರ. ಮುಂದೆ, ಈ ರೀತಿ ಆಗದಿರಲಿ. ನೂತನ ವರ್ಷದಲ್ಲಿ ಅರಂಭವಾಗುವ ಅಧಿವೇಶನಗಳಲ್ಲಿಯಾದರೂ ಪ್ರತಿಪಕ್ಷಗಳು ಜನಸಾಮಾನ್ಯರ ನಿರೀಕ್ಷೆಗೆ ಅನುಗುಣವಾಗಿ, ಅವರ ಆಶೋತ್ತರಗಳನ್ನು ಎತ್ತಿಹಿಡಿಯುವಂತಹ ಚರ್ಚೆಗಳಿಗೆ ಮುಂದಾಗಲಿ. ಒಣ ಪ್ರತಿಷ್ಠೆಯ ಆಂತರಿಕ ರಾಜಕೀಯ ಮೇಲಾಟಗಳು, ಸಮಾಜದ ಸಾಮರಸ್ಯ ಕದಡುವ ಮತೀಯ ವಿಚಾರಗಳಿಗೆ ಸದನವನ್ನು ವೇದಿಕೆಯನ್ನಾಗಿಸಿಕೊಳ್ಳದೆ ಮೌಲ್ಯಯುತ ಚರ್ಚೆ ನಡೆಸುವ ಮೂಲಕ ಸದನ ಕಲಾಪದ ಗೌರವವನ್ನು ಕಾಪಾಡಲಿ ಎಂದು ನಾನು ಆಶಿಸುತ್ತೇನೆ.

ಇಂದಿನ ಆದುನಿಕ ಯುಗದಲ್ಲಿ ನಮಗೆಲ್ಲರಿಗೂ ನಮ್ಮ ಅಭಿಪ್ರಾಯ, ವಿಚಾರ, ಮಾಹಿತಿಯನ್ನು ತಲುಪಿಸಲು ಹತ್ತಾರು ವೇದಿಕೆಗಳಿವೆ. ಸಾಂಪ್ರದಾಯಿಕ ಮಾಧ್ಯಮಗಳ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳ ಆಯ್ಕೆಯೂ ನಮ್ಮ ಮುಂದಿದೆ. ನಮ್ಮ ಸರ್ಕಾರವೂ ಸಹ ಜನತೆಗೆ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ತಿಳಿಸಲು ವಿವಿಧ ಮಾಧ್ಯಮಗಳನ್ನು ಅನ್ವೇಷಿಸಿದೆ. ಶಾಸನಸಭೆಯ ಆಗುಹೋಗುಗಳ ಬಗ್ಗೆ, ಸದನ ಕಲಾಪಗಳ ಬಗ್ಗೆ ಗಂಭೀರವಾಗಿರುವ ಆಸಕ್ತ ಜನತೆ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಸದನದಲ್ಲಿ ನಡೆಯುವ ಕಲಾಪಗಳ ಮಾಹಿತಿ ನೀಡಲು ಸಾಮಾಜಿಕ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ನಾವು ಬಹುಮುಖ್ಯವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದೆವು. ರಾಜ್ಯ ಸರ್ಕಾರದ ಮುಖ್ಯಸ್ಥನಾಗಿ ಉತ್ತರ ಕರ್ನಾಟಕದಲ್ಲಿ ಸಮತೋಲಿತ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸದನದಲ್ಲಿ ನಾನು ಅನೇಕ ವಿಚಾರಗಳನ್ನು ಹಂಚಿಕೊಂಡೆ, ಸರ್ಕಾರವು ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ವಿವರವಾಗಿ ನೀಡಿದೆ. ಈ ಕುರಿತ ನನ್ನ ಉತ್ತರದ ಪೂರ್ಣ ಪಾಠವನ್ನು ಇಲ್ಲಿ ನೀಡಲಾದ ಯೂಟ್ಯೂಬ್‌ ಲಿಂಕ್‌ ಬಳಸಿ ಆಸಕ್ತರು ವೀಕ್ಷಿಸಬಹುದು:

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ