ಕನ್ನಡ ಸಾಮರಸ್ಯ ನೆಲೆಗಳು ಕೃತಿ ಲೋಕಾರ್ಪಣೆ
ಬೆಂಗಳೂರು: ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕರ್ನಾಟಕದ ಬಹುಮುಖ ಪರಂಪರೆಯನ್ನು ಪ್ರತಿನಿಧಿಸುವ ಕನ್ನಡ ಸಾಮರಸ್ಯ ನೆಲೆಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಬಿಡುಗಡೆಯಾಗಿರುವ ಎಲ್ಲವೂ ಯೋಗ್ಯವಾದ ಪುಸ್ತಕಗಳಾಗಿವೆ. ನಮ್ಮ ದೇಶದಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳ ಜನ ಇದ್ದು, ರಾಜ್ಯದಲ್ಲಿಯೂ ವೈವಿಧ್ಯತೆ ಇದೆ. ಇದರಲ್ಲಿಯೇ ಏಕತೆಯನ್ನು ನಾವು ಸಾಧಿಸಿದ್ದೇವೆ ಎಂದು ತಿಳಿಸಿದರು.
ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧನಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂವಿಧಾನ ಜಾರಿಯಾದ ನಂತರ ಸಮಾಜದ ಸುಧಾರಣೆಯಲ್ಲಿ ವೇಗ ಹೆಚ್ಚಿದೆಯಾದರೂ ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ.
ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಬಸವಣ್ಣ ಹೇಳಿದ ಇವ ನಮ್ಮವ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ನಮ್ಮಲ್ಲಿ ಬರಬೇಕು. ಈ ಗುಣಗಳು ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ. ಬದುಕುವ ದಾರಿ ಮಾತ್ರ.
ಯುವಕರಲ್ಲಿ ಮಾನವೀಯತೆ ಹೆಚ್ಚಾಗಬೇಕೆನ್ನುವ ನಿಟ್ಟಿನಲ್ಲಿ ಇಂದು ಬಿಡುಗಡೆಯಾಗಿರುವ ಪುಸ್ತಕಗಳು ಪ್ರಯೋಜನಕಾರಿಯಾಗಲಿವೆ. ಇವು ಯುವಜನರನ್ನು ತಲುಪದೇ ಹೋದರೆ, ಅದರಿಂದ ಬದಲಾವಣೆಯಾಗದೆ ಹೋದರೆ ಅದರ ಉದ್ದೇಶ ಸಫಲವಾಗುವುದಿಲ್ಲ ಎಂದರು.
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಪೀಳಿಗೆ ಪಂಪ, ಕನಕದಾಸರು, ಬಸವಣ್ಣ, ಕುವೆಂಪು ಮುಂತಾದವರ ಬಗ್ಗೆ ತಿಳಿದುಕೊಳ್ಳಬೇಕು. ಈ ಪುಸ್ತಕಗಳನ್ನು ಹೊರತಂದಿರುವುದು ಉತ್ತಮ ಕೆಲಸವಾಗಿದೆ ಎಂದು ತಿಳಿಸಿದರು.
ದೇವರು – ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕುವೆಂಪುರವರು ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬರಲು ಕರೆ ನೀಡಿದರು. ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

