ಮೈಸೂರು, ಮಾರ್ಚ್ 28: ನಮ್ಮ ಸರ್ಕಾರ ಶಿಕ್ಷಣ, ಕಾನೂನು ವ್ಯವಸ್ಥೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ವಿಶ್ವೇಶ್ವರನಗರದಲ್ಲಿ ನೂತನವಾಗಿ ನಿರ್ಮಿಸಿರುವ ಜೆ ಸಿ ಸ್ಪೋರ್ಟ್ಸ್ ಮೆಡಿಸನ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೆ ಸಿ ಸ್ಪೋರ್ಟ್ಸ್ ಮೆಡಿಸನ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪಕರಾದ ಡಾ. ಗಿರೀಶ್ ಚಂದ್ರ ಅವರು ನಿಪುಣ ವೈದ್ಯರಾಗಿದ್ದು, ಅವರ ತಂದೆಯವರೂ ಮೈಸೂರು ತಾಲ್ಲೂಕಿನ ಮೊದಲ ವೈದ್ಯರಾಗಿದ್ದರು. ಸಮಾಜದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಪ್ರಮುಖವಾಗಿದ್ದು, ಮನುಷ್ಯ ಆರೋಗ್ಯದಿಂದ ಬದುಕುವುದು ಹೆಚ್ಚು ಮುಖ್ಯ ಎಂದರು.
ಬಡವರಿಗೆ ಉಚಿತ ಚಿಕಿತ್ಸೆ ನೀಡಿ
ಡಾಕ್ಟರ್ ಗಿರೀಶ್ ಚಂದ್ರ ಅವರು ವೈದ್ಯರಾಗಿ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿರುವ ಬಡವರಿಗೆ ಸಾಧ್ಯವಾದರೆ ಉಚಿತವಾಗಿ ಇಲ್ಲದಿದ್ದರೆ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ಜಿಲ್ಲೆಯವನೇ ಆದ ನಾನ್ನ ಮೇಲೆ ಇಲ್ಲಿನ ಜನರ ಋಣವಿದೆ. ಆದ್ದರಿಂದ ಮೈಸೂರಿನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ. ಸಮಾಜಮುಖಿಯಾಗುವ ಮೂಲಕ ಮನುಷ್ಯ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಬಂದಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ತಿಳಿಸಿದ್ದರು ಎಂದರು.
ನುಡಿದಂತೆ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ
ಎಲ್ಲರಿಗೂ ಸಾಮಾಜಿಕ, ಆರ್ಥಿಕವಾಗಿ ಸಫಲರಾಗುವ ದಿಕ್ಕಿನಲ್ಲಿ ಸರ್ಕಾರ ದೃಢವಾದ ಹೆಜ್ಜೆಗಳಲ್ಲಿಟ್ಟಿದೆ. ನುಡಿದಂತೆ ನಡೆಯುವುದು ಕಷ್ಟದ ಕೆಲಸವಾದರೂ ನುಡಿದಂತೆ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಮಸಮಾಜ ನಿರ್ಮಾಣವಾಗಬೇಕಾದರೆ ಬಡವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ಬರಬೇಕು
ಹೊಟ್ಟೆ ತುಂಬಾ ಊಟವಿಲ್ಲದವರು, ಬಟ್ಟೆಯಿಲ್ಲದವರು ನಿಜವಾದ ಬಡವರು. ಸಮಸಮಾಜ ನಿರ್ಮಾಣವಾಗಬೇಕಾದರೆ ಬಡವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ಬರಬೇಕು ಎಂದರು. ಅಸಮಾನತೆಯನ್ನು ಹೋಗಲಾಡಿಸಬೇಕು. ನಮ್ಮ ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅಂಥವರು ಬಂದು ಹೋಗಿದ್ದು ಅವರು ಏನು ಹೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಗಾಂಧೀಜಿ ಅಂತ್ಯೋದಯ, ಸರ್ವೋದಯ ಮಂತ್ರವನ್ನು ನೀಡಿದ್ದಾರೆ. ಎಲ್ಲರಿಗೂ ಸ್ವಾವಲಂಬನೆ ಬರಬೇಕು ಎಂದಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಒಳ್ಳೆಯದನ್ನು ಮಾಡಿ
ಜೀವನದಲ್ಲಿ ಒಳ್ಳೆಯದನ್ನು ಮಾಡಬೇಕು. ಎಷ್ಟು ಹಣವಿದ್ದರೂ ಆರೋಗ್ಯವಿಲ್ಲದಿದ್ದರೆ ಪ್ರಯೋಜನವಿಲ್ಲ ಎಂದರು. ಜನರು ಸ್ಮರಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು.

