ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ :ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 12 ರಿಂದ 15% ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ 74% ತಲುಪಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರಕುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಶಿಕ್ಷಕರ ತಪ್ಪಲ್ಲ, ಪಟ್ಟಭದ್ರ ವ್ಯವಸ್ಥೆಯ ಪರಿಣಾಮವಾಗಿ ಜಾತಿ ಎನ್ನುವುದು ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವುದರಿಂದ ಶಿಕ್ಷಣದಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನವು ಒಬ್ಬ ವ್ಯಕ್ತಿ ಜವಾಬ್ದಾರಿಯುತವಾಗಿ ವಿಕಾಸವಾಗಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆಯಬೇಕೆಂದು ಸ್ಪಷ್ಟವಾಗಿ ಹೇಳುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಮೌಢ್ಯ, ಕಂದಾಚಾರಗಳಿಂದ ಸಮಾಜ ಕೂಡಿದ್ದು, ಇವುಗಳನ್ನು ದೂರ ಮಾಡುವ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯ. ಅಸಮಾನತೆಯಿಂದ ಕೂಡಿರುವ ಸಮಾಜದಲ್ಲಿ ಮುಖ್ಯವಾಹಿನಿಗೆ ಎಲ್ಲರೂ ಬರಬೇಕೆಂದರೆ ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದರು. 

ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣ ನೀಡಲು ಶಿಕ್ಷಕರಿಂದ ಮಾತ್ರ ಸಾಧ್ಯ. ಸಾಮಾನ್ಯರನ್ನು  ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಬುದ್ಧಿ, ಕರುಣೆ ಮತ್ತು ಕೌಶಲ್ಯ ಮಿಳಿತವಾದಾಗ ಮಾತ್ರ ವಿಕಾಸ ಸಾಧ್ಯ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅತ್ಯಂತ ಹೆಚ್ಚು ಗೌರವಿಸುತ್ತೇನೆ. ಅವರ ಕಾರಣದಿಂದಲೇ ನಾನಿಂದು ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದಿದ್ದೇನೆ ಎಂದರು.  

ಶಿಕ್ಷಕರ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಹಿಂದೆ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ 5 ವರ್ಷಗಳಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದೆ. 6 ಮತ್ತು 7ನೇ ವೇತನ ಆಯೋಗವನ್ನು ಜಾರಿ ಮಾಡಿದ್ದು ನಾನೆ. ಉಳಿದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಒಪಿಎಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ವೇತನ ಬಡ್ತಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. 

ಶಿಕ್ಷಕರ ನಡವಳಿಕೆ ಉತ್ತಮವಾಗಿರಬೇಕು. ಎಲ್ಲಾ ಮಕ್ಕಳಿಗೂ ವೈಚಾರಿಕತೆ , ವೈಜ್ಞಾನಿಕತೆಯುಳ್ಳ ಶಿಕ್ಷಣ ನೀಡಿದರೆ ಸುಭದ್ರ, ಸುಂದರ  ಸಮಾಜ, ದೇಶವನ್ನು ಕಟ್ಟಬಹುದು. ರಾಷ್ಟ್ರದ ಭವಿಷ್ಯವನ್ನು ರೂಪಿಸುವಂಥ ಮಕ್ಕಳನ್ನು ತಯಾರು ಮಾಡುವುದು ನಿಮ್ಮ ಗುರಿಯಾಗಲಿ ಎಂದು ಹಾರೈಸಿದರು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ