ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಭೀಮಣ್ಣ ಖಂಡ್ರೆ ಜನಸೇವೆಯ ಸಂಕಲ್ಪವನ್ನು ತಮ್ಮ ಜೀವನದ ಧ್ಯೇಯವಾಗಿಸಿದ್ದರು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸರಳ ಸಜ್ಜನಿಕೆಯ ಮೂರ್ತರೂಪವಾಗಿದ್ದ ಭೀಮಣ್ಣ ಖಂಡ್ರೆಯವರು ಸಮಾಜದ ಏಳಿಗೆಗಾಗಿ ಅವಿರತವಾಗಿ ತಮ್ಮ ಬದುಕನ್ನು ಸವೆಸಿದ ಕಾಯಕಯೋಗಿ. ಪರರ ಹಿತವೇ ಪರಮ ತಪ ಎಂದು ನಂಬಿ ಖಂಡ್ರೆಯವರು, ಜನಸೇವೆಯ ಸಂಕಲ್ಪವನ್ನು ತಮ್ಮ ಜೀವನದ ಧ್ಯೇಯವಾಗಿಸಿದ್ದರು ಎಂದು ಬೆಂಗಳೂರಿನಲ್ಲಿ ನಡೆದ  ಡಾ|| ಭೀಮಣ್ಣ ಖಂಡ್ರೆಯವರ ನುಡಿ ನಮನ ಕಾರ್ಯಕ್ರಮದಲ್ಲಿ ಹೇಳಿದರು.

ಬಸವಾದಿ ಶರಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, 102 ವರ್ಷಗಳ ಕಾಲ ಸಾಮಾಜಿಕ ಚಿಂತನೆಯೊಂದಿಗೆ ಸಾರ್ಥಕ ಜೀವನ ನಡೆಸಿದರು. ಜಾತಿ- ವರ್ಗ ಹಾಗೂ ಮೇಲು-ಕೀಳೆಂಬ ಬೇಧಭಾವಗಳನ್ನು ಕಟುವಾಗಿ ಟೀಕಿಸುತ್ತಿದ್ದ ಅವರು, 60ರ ದಶಕದಲ್ಲಿಯೇ ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದರು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದ ಖಂಡ್ರೆಯವರು, ಬಡವ ಬಲ್ಲಿದರೂ ಗೌರವದ ಬದುಕನ್ನು ಜೀವಿಸಬೇಕೆಂದು ಹಂಬಲಿಸಿದ್ದರು. ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ಭೀಮಣ್ಣ ಖಂಡ್ರೆಯವರು ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯರಾಗಿದ್ದಲ್ಲದೇ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.

ಹಿರಿಯರ ತ್ಯಾಗ-ಬಲಿದಾನಗಳಿಂದ ದೊರಕಿರುವ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದವರು. ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಏಕೀಕರಣದ ಚಳುವಳಿಯಲ್ಲಿ ಭಾಗವಹಿಸಿ, ಜನಪರ ಹೋರಾಟಗಾರರೆಂದೇ ಗುರುತಿಸಿಕೊಂಡಿದ್ದರು ಎಂದು ಹೇಳಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದ ಭೀಮಣ್ಣ ಖಂಡ್ರೆಯವರು, ಕನ್ನಡ ಉಳಿವಿಗಾಗಿ ನಡೆಸಿದ ಹೋರಾಟ ಕಂಡು ಡಾ.ಚನ್ನಬಸವ ಪಟ್ಟದ್ದೇವರು ‘ಲೋಕನಾಯಕ’ ಎಂದು ಬಣ್ಣಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಕೃಷಿ, ಶಿಕ್ಷಣ, ಸಹಕಾರ, ಕಾನೂನು, ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹೀಗೆ ಜನಸೇವೆಗೆ ಅವಕಾಶ ದೊರಕಬಹುದಾದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಅನ್ನದಾತನ ಸಂಕಷ್ಟಗಳಿಗೆ ಧ್ವನಿಯಾಗಿದ್ದ ಖಂಡ್ರೆಯವರು, 1972ರಲ್ಲಿ ರೈತರ ಮೇಲೆರಿಗಿದ್ದ ಬರಗಾಲದ ಪರಿಸ್ಥಿಯಲ್ಲಿ ಬೀಜ ಚಳವಳಿ ಕೈಗೊಳ್ಳುವ ಮೂಲಕ ನೆರವಾಗಿದ್ದರು. ಕಿಸಾನ್ ರ‍್ಯಾಲಿಗಳನ್ನು ಆಯೋಜಿಸಿ, ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗಿದ್ದ ಖಂಡ್ರೆಯವರು, ನಂತರ ಜಿಲ್ಲೆಯ ಸಮಗ್ರ ಪ್ರಗತಿಗೆ ಗಣನೀಯ ಕೊಡುಗೆ ನೀಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಅವರು ಕೈಗೊಂಡ ಕಾರ್ಯಗಳು ಇಂದು ಸಹ ಜನರ ಮನಸ್ಸಿನಲ್ಲಿ ಉಳಿದಿವೆ. ನನಗೆ ವೈಯಕ್ತಿಕವಾಗಿ ಡಾ. ಭೀಮಣ್ಣ ಖಂಡ್ರೆಯವರೊಂದಿಗೆ ಉತ್ತಮ ಒಡನಾಡವಿತ್ತು. ಹಿರಿಯರಾಗಿ ಸದಾ ಯುವಕರನ್ನು ಪ್ರೋತ್ಸಾಹಿಸುವ ಗುಣ ಹೊಂದಿದ್ದ ಖಂಡ್ರೆಯವರು ಪಕ್ಷಾತೀತವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಮುದಾಯದ ಶಿಕ್ಷಣ, ಸಂಘಟನೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ವೃದ್ಧಿಗೆ ಶ್ರಮಿಸಿದರು. ಸಂಘಟನೆಯ ಶಕ್ತಿಯನ್ನ ನಂಬಿದ್ದ ಖಂಡ್ರೆಯವರು ಸಮಾಜದಲ್ಲಿ ಐಕ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಭೀಮಣ್ಣ ಖಂಡ್ರೆ ಅವರ ಜೀವನ ಮತ್ತು ಆದರ್ಶಗಳು ನಮಗೆ ಮತ್ತು ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ. ಅಚಲ ಬದ್ಧತೆ, ನ್ಯಾಯಪರತೆ, ಬಡವರ ಪರ ಕಾಳಜಿಯ ಗುಣಗಳನ್ನು ಹೊಂದಿದ್ದ ಭೀಮಣ್ಣ ಖಂಡ್ರೆಯವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಸಾರ್ವಜನಿಕ ಜೀವನದಲ್ಲಿ ನಿಷ್ಠೆ, ಮಾನವೀಯತೆ ಹಾಗೂ ಸೇವಾಭಾವವಿದ್ದರೆ ಮಾತ್ರ ನಿಜವಾದ ನಾಯಕತ್ವ ಸಾಧ್ಯವೆಂದು ನಿರೂಪಿಸಿ, ಅದರಂತೆ ಬದುಕಿದ ಧೀಮಂತ ನಾಯಕ ಭೀಮ್ಣಣ ಖಂಡ್ರೆಯವರ ನಿಧನವು ನಾಡಿಗೆ ತುಂಬಲಾರದ ನಷ್ಟವಾಗಿದೆ.  ಡಾ: ಭೀಮಣ್ಣ ಖಂಡ್ರೆ ಅವರ ಅಗಲಿಕೆಯಿಂದ ಉಂಟಾದ ದುಃಖದಲ್ಲಿ ಅವರ ಕುಟುಂಬ ಸದಸ್ಯರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ