ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಕುರಿತಂತೆ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿಸಿದ್ದರಾಮಯ್ಯ ಮಾತನಾಡಿ, ಹಿಂದೆ ಜಾರಿಯಲ್ಲಿದ್ದ ಮನರೇಗಾ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ಕೆಲಸವಿತ್ತು. ಮನರೇಗಾ ಬರುವ ಮುನ್ನ ಕೆಲಸ ಹುಡುಕಿಕೊಂಡು ಜನ ವಲಸೆ ಹೋಗುತ್ತಿದ್ದರು. ಮನರೇಗಾ ಅಡಿಯಲ್ಲಿ ಬೇಡಿಕೆಗೆ ಅನುಸಾರವಾಗಿ ಕೆಲಸ ಒದಗಿಸಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಆಹಾರ ಭದ್ರತೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಹಕ್ಕು ನೀಡಿದರು. ಈ ಮೂಲಕ ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಯಿತು ಎಂದರು.
ಮಕ್ಕಳನ್ನು ಶಾಲೆಗೆ ಕಳುಹಿಸಿ ಕೂಲಿಗೆ ಹೋಗುತ್ತಿದ್ದರು. ವಿಬಿ ಜಿ ರಾಮ್ ಜಿ ಪ್ರಕಾರ ಕೇಂದ್ರ ಸರ್ಕಾರವೇ ಕೆಲಸ ಎಲ್ಲಿ ನೀಡಬೇಕೆಂದು ತೀರ್ಮಾನಿಸುತ್ತದೆ. ಸಂವಿಧಾನದ 73/74 ತಿದ್ದುಪಡಿಯ ಪ್ರಕಾರ ವಿಕೇಂದ್ರೀಕರಣದಡಿ ಗ್ರಾಮ ಸಭೆಯಲ್ಲಿ ಎಲ್ಲಿ ಕೆಲಸವಾಗಬೇಕೆಂದು ತೀರ್ಮಾನವಾಗುತ್ತಿತ್ತು. ಈಗ ಅದಕ್ಕೆ ತಿಲಾಂಜಲಿ ಇಡಲಾಗಿದೆ ಎಂದು ತಿಳಿಸಿದರು.
ಜವಾಹರ್ ಲಾಲ್ ನೆಹರೂ ಅವರು ಒಂದು ಗ್ರಾಮದಲ್ಲಿ ಒಂದು ಶಾಲೆ, ಪಂಚಾಯತಿ, ಸಹಕಾರ ಸಂಘ ಇರಬೇಕು ಎಂದಿದ್ದರು. ಮಹಾತ್ಮ ಗಾಂಧಿಯವರು ಗ್ರಾಮಗಳ ಪ್ರಗತಿಯಾಗದೆ ದೇಶ ಪ್ರಗತಿಯಾಗುವುದಿಲ್ಲ ಎಂದಿದ್ದರು. ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತವಾಗಬೇಕು. ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ 51% ಗಿಂತ ಹೆಚ್ಚು ಮಹಿಳೆಯರು ಇದ್ದಾರೆ ಎಂದರು.
ಮನರೇಗಾ ಇಲ್ಲದೇ ಹೋಗಿದ್ದರೆ ಕೋವಿಡ್ -19 ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಬದುಕು ದುಸ್ತರವಾಗುತಿತ್ತು. ಈಗ ಗ್ರಾಮ ಸಭೆಯಲ್ಲೂ ಅಲ್ಲ, ಪಂಚಾಯತಿ ಪ್ರಕಾರ ತೀರ್ಮಾನವಾಗುವುದಿಲ್ಲ. ಇದರಿಂದ ಉದ್ಯೋಗಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ಈಗ ವರ್ಷದಲ್ಲಿ 60 ದಿನ ಕೃಷಿ ಚಟುವಟಿಕೆಗಳು ಇದ್ದ ಸಂದರ್ಭದಲ್ಲಿ ಕೆಲಸಗಳಿಲ್ಲ. ಮನರೇಗಾ ಅಡಿಯಲ್ಲಿ ಕೃಷಿ ಚಟುವಟಿಕೆಗಳಿದ್ದಾಗಲೂ ಕೆಲಸ ಮಾಡಬಹುದಾಗಿತ್ತು. ಇಲ್ಲಿ ಗುತ್ತಿಗೆದಾರರಿಗೆ ನಿಷೇಧವಿತ್ತು ಎಂದರು.
ಮನರೇಗಾ ಕಾಯ್ದೆಯಲ್ಲಿ ಗುತ್ತಿಗೆ ಎಂಬ ಪದವೇ ಇಲ್ಲ. ಈಗ ಎಲ್ಲಾ ಗುತ್ತಿಗೆದಾರರು ಪ್ರವೇಶ ಮಾಡಬಹುದಾಗಿದೆ. ಸೇತುವೆ, ಹೆದ್ದಾರಿ, ಮುಂತಾದ ದೊಡ್ಡ ಕೆಲಸಗಳಿಗೆ ಜನ ಹೋಗಬೇಕಾಗುತ್ತದೆ. ಪಂಚಾಯತಿಗಳಿಗೆ ಕೊಟ್ಟಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮನರೇಗಾ ರದ್ದು ಮಾಡಿ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳ ದೊಡ್ಡ ಪಟ್ಟಿ ಇದೆ. ಅವುಗಳೆಂದರೆ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿಗಳ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಬದುಕಿಗೆ ಮಾರಕವಾದ ಕಾಯ್ದೆಯಿದು.
ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಪರಿಚ್ಛೇದ 5 ಕಲಂ (1) ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಬಜೆಟ್ ಮಾಡಿದರೆ ಮಾತ್ರ ಕೆಲಸ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರರ ಕೆಲಸ ಕಿತ್ತುಕೊಂಡಂತಾಗಿದೆ. 125 ದಿನಕೆಲಸ ಕೊಡುವುದಾಗಿ ಹೇಳಲಾಗಿದೆ. 60:40 ಅನುದಾನದ ಅನುಪಾತ ಮಾಡಿರುವುದು ಕೇಂದ್ರ ಪುರಸ್ಕೃತ ಯೋಜನೆಯಂತಿದೆ ಎಂದರು.
ಪ್ರಧಾನಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರು ತೆಗೆದುಹಾಕಲು ಈಗ ಜ್ಞಾನೋದಯವಾಗಿದೆಯೇ? ಮನರೇಗಾ ಅಡಿ ಪ್ರತಿ ಪಂಚಾಯತಿಗೆ ಕನಿಷ್ಠ ₹1 ಕೋಟಿವರೆಗೂ ಕೆಲಸ ನೀಡಬಹುದಾಗಿತ್ತು. ಈಗ ಅದಕ್ಕೆ ಅವಕಾಶವಿಲ್ಲ, ಏಕೆಂದರೆ ಅನೇಕ ರಾಜ್ಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡಬೇಕಾದ ಅನುದಾನ ಕೊಡುವುದಿಲ್ಲ. ಹಣಕಾಸು ಆಯೋಗ ಶಿಫಾರಸು ಮಾಡಿದ ಅನುದಾನವನ್ನೂ ಬಿಡುಗಡೆ ಮಾಡುವುದಿಲ್ಲ ಎಂದರು.
15 ನೇ ಹಣಕಾಸು ಆಯೋಗದ ವತಿಯಿಂದ ರಾಜ್ಯಕ್ಕೆ ₹15,000 ಕೋಟಿ ನಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಂದಿನವರೆಗೂ ಅನುದಾನ ಕೊಟ್ಟಿಲ್ಲ. ಇದಕ್ಕೆ ಯಾವ ಬಳಕೆ ಪ್ರಮಾಣ ಪತ್ರವನ್ನು ನೀಡಬೇಕು? ಎಂದು ಪ್ರಶ್ನಿಸಿದರು.
ಪ್ರತಿ ಗ್ರಾಮವೂ ಯೋಜನೆಯನ್ನು ಜಾರಿ ಮಾಡಬಹುದಾಗಿತ್ತು. ಈಗ ವರ್ಷದ 10 ತಿಂಗಳು ಮಾತ್ರ ಕೆಲಸ ಮಾಡಬಹುದು. ಕೂಲಿಯ ಮೊತ್ತವನ್ನು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಕೊಡಲಾಗುತ್ತಿತ್ತು. ಕೂಲಿಯನ್ನು ಬೆಲೆಯೇರಿಕೆಗೆ ಸರಿದೂಗಿಸಲಾಗುತ್ತಿತ್ತು. ಈಗಿನ ಕಾಯ್ದೆ ಪ್ರಕಾರ ಕೂಲಿಗೆ ಯಾವುದೇ ಖಾತ್ರಿ ಇಲ್ಲ. ಗ್ರಾಮ ಪಂಚಾಯಿತಿಗೆ ನೀಡುವ ಅನುದಾನದ ಮೇಲೆ ನಿರ್ಧಾರವಾಗುತ್ತದೆ. ಕೂಲಿಯನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಕೇಂದ್ರ ಸರ್ಕಾರ 60 ರಷ್ಟು ಹಾಗೂ ರಾಜ್ಯ ಸರ್ಕಾರ 40ರಷ್ಟು ಅನುದಾನ ನೀಡಬೇಕೆಂದಿದೆ ಎಂದರು.
ಈಗ ಅನೇಕ ರಾಜ್ಯಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ. ಈಗಿನ ಪ್ರಧಾನಿಗಳು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ಶೇ. 50 ದಿನಗಳ ಕೆಲಸ ನೀಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳಾಗಿದ್ದಾಗ ಒಂದು ನಿಲುವು, ಪ್ರಧಾನಿಗಳಾದಾಗ ಮತ್ತೊಂದು ನಿಲುವೇ? ಮನರೇಗಾದಲ್ಲಿ ಆಸ್ತಿ ಸೃಷ್ಟಿಸುವ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕಾಯ್ದೆ ಅಡಿ ಸರಬರಾಜು(supply based) ಆಧಾರಿತ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಬಿ ಜಿ ರಾಮ್ ಜಿ ಜಾರಿಗೆ ತಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

