ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನೂತನ ಉದ್ಯಾನವನ ಹಾಗೂ ಕಾರಂಜಿಯನ್ನು ಉದ್ಘಾಟನೆ
ಬೆಂಗಳೂರು: ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಈ ಉದ್ಯಾನವನ ಹಾಗೂ ಸೌಂದರ್ಯೀಕರಣ ಕಾಮಗಾರಿ ನಡೆದಿದ್ದು, ಸುವರ್ಣಸೌಧದ ಭವ್ಯವಾದ ವಾಸ್ತುಶಿಲ್ಪಕ್ಕೆ ತೋಟಗಾರಿಕೆಯ ವಿನ್ಯಾಸವು ಪೂರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ನೂತನ ಉದ್ಯಾನವನ ಹಾಗೂ ಕಾರಂಜಿಯನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಆರ್.ಎಸ್ ನ ಹಾಗೂ ಆಲಮಟ್ಟಿ ಉದ್ಯಾನವನಗಳ ಮಾದರಿಗಳನ್ನು ಅಳವಡಿಸಿಕೊಂಡು ಸುವರ್ಣ ವಿಧಾನಸೌಧದ ಈ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಸುತ್ತಲು ನಿರ್ಮಿಸಿರುವ ಉದ್ಯಾನವನ ಹಾಗೂ ಸೌಂದರ್ಯೀಕರಣವು ಈ ಪ್ರದೇಶಕ್ಕೆ ನೂತನ ಮೆರಗನ್ನು ನೀಡಿದೆ. ಒಟ್ಟು 4.63 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ಮತ್ತು ಸೌಂದರ್ಯೀಕರಣದ ಯೋಜನೆಯಡಿ ತೆರೆದ 2 ರಂಗಮಂದಿರವೂ ಇದ್ದು, ಒಟ್ಟು 400 ಮಂದಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಇದೆ. ಒಟ್ಟಾರೆ 8 ಕಾರಂಜಿಗಳನ್ನು ಉದ್ಯಾನವನದಲ್ಲಿ ಅಳವಡಿಸಲಾಗಿದ್ದು, ಕಲ್ಲಿನ ಮೆಟ್ಟಿಲುಗಳ ಜಲಪಾತ, ಮೂವತ್ತು ಬಗೆಯ ಗಿಡಗಳನ್ನು ನೆಡಲಾಗಿದೆ. ಒಟ್ಟಾರೆ ಇದೊಂದು ಉತ್ತಮ ಕಾರ್ಯ ಎನ್ನುವುದು ನನ್ನ ಭಾವನೆ ಎಂದರು.

