ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಸಂತಾಪ ನುಡಿ
ಬೆಳಗಾವಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದರು. ಉತ್ತಮ ಸಂಘಟಕರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಗಲಿದ ಆರ್.ವಿ. ದೇವರಾಜ್ ಅವರಿಗೆ ಸಂತಾಪ ಸೂಚಿಸಿದರು. ಅವರು 1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ್ತು 1999 ಹಾಗೂ 2013ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಿಂದ 2010ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿಗೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದು ಅತ್ಯಂತ ನೋವಿನ ಸಂಗತಿ. ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ದೇವರಾಜ್ ಅವರು ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

