ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಕೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ಅಭಿನಂದಿಸಿ, ಮುಂದಿನ ಕ್ರೀಡಾ ಬದುಕು ಹೀಗೆಯೇ ಯಶಸ್ಸುಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಈ ವೇಳೆ ಭಾರತ ತಂಡದ ನಾಯಕಿ, ತುಮಕೂರಿನ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿಯನ್ನು ವಿಶೇಷವಾಗಿ ಶ್ಲಾಘಿಸಿದರು.
ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ನೀಡುವ ಘೋಷಣೆ ಮಾಡಿದರು. ಹಾಗೆಯೇ ಭಾರತ ತಂಡದ ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ನೀಡುವ ನಿರ್ಧಾರವನ್ನು ಸಹ ಪ್ರಕಟಿಸಿದರು. ಇದರಿಂದ ತಂಡದಲ್ಲಿದ್ದ ಇತರೆ ರಾಜ್ಯಗಳ 13 ಆಟಗಾರ್ತಿಯರಿಗೂ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ಹಾಗೂ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಉಪಸ್ಥಿತರಿದ್ದು, ಆಟಗಾರ್ತಿಯರಿಗೆ ಶುಭ ಹಾರೈಸಿದರು.

