ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ ಉದ್ಘಾಟನೆ ಸಮಾರಂಭ
ಬೆಂಗಳೂರು: ದೇಶ-ವಿದೇಶಗಳ ಗ್ರಾಹಕರಿಗೆ ಕರ್ನಾಟಕದ ಹೆಮ್ಮೆಯ ಪಾರಂಪರಿಕ ಮತ್ತು ಜಿಐ ಮಾನ್ಯತೆ ಹೊಂದಿರುವ ವಿಶಿಷ್ಟ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ಮಳಿಗೆ ಸ್ಥಾಪನೆ ಮಾಡಲಾಗಿದೆ. ಕರ್ನಾಟಕದ ಕೈಗಾರಿಕಾ ಭೂಪಟದಲ್ಲಿ ಇದೊಂದು ಸಂತಸದ ಕ್ಷಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟ ಕೇಂದ್ರವಾದ “ಕಲಾಲೋಕ ಮಳಿಗೆ”ಯನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜನನಿಬಿಡತೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಪ್ರತಿದಿನವೂ ಇಲ್ಲಿ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಿರುತ್ತಾರೆ. ಇಂಥವರಿಗೆ ಇಲ್ಲಿಗೆ ಬಂದ ತಕ್ಷಣವೇ ಕರ್ನಾಟಕದ ಅಭಿಮಾನದ ಪಯಣ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ಕಲಾಲೋಕ ಮಳಿಗೆ ನಿರ್ಮಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದರು.

