ಚೇನಂಡ ಹಾಕಿ ಪಂದ್ಯಾವಳಿಯ ಲೋಗೋ ಬಿಡುಗಡೆ
ಬೆಂಗಳೂರು: ಕೊಡವರು ಅಂದ್ರೆ ಹಾಕಿ. ಹಾಕಿ ಅಂದ್ರೆ ಕೊಡವರು. ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ “ಚೇನಂಡ ಹಾಕಿ ಪಂದ್ಯಾವಳಿ”ಯ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಾಕಿ ಪಟುಗಳು ಮಿಂಚಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯನ್ ಗೇಮ್ಸ್ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ಮತ್ತು ಘನತೆ ತಂದುಕೊಟ್ಟಿದ್ದಾರೆ ಎಂದರು.
ಕೊಡವ ಸಂಸ್ಕೃತಿ ತನ್ನದೇ ಆದ ಭಿನ್ನತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಇದು ನಮ್ಮ ಸಂಸ್ಕೃತಿಯ ಹೆಮ್ಮೆ. 2026ರ ಮೇ ತಿಂಗಳಲ್ಲಿ ನಡೆಯುವ ಪಂದ್ಯಾವಳಿಗೆ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ. ಪಂದ್ಯಾವಳಿ ನೋಡಲು ನಾನೂ ಬರುತ್ತೇನೆ ಎಂದರು.
ಈ ಸಂದರ್ಭ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಮತ್ತು ಸಚಿವರಾದ ಎನ್.ಎಸ್. ಬೋಸರಾಜು, ಬೈರತಿ ಸುರೇಶ್ ಮತ್ತು ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್ ಸೇರಿ ಕೊಡವ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದ್ದರು.

