ಅಕ್ಟೋಬರ್ 9: ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ.
ರಾಜ್ಯಾದ್ಯಂತ ಮಹಿಳಾ ನೌಕರರಿಗೆ ಮಾಸಿಕ 1 ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ 2025 ಜಾರಿಗೆ ನಿರ್ಧಾರ
ಜಲಾನಯನ ಅಭಿವೃದ್ಧಿ ಘಟಕ – ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ 2.0ʼ ಯೋಜನೆಯಡಿ ರಾಜ್ಯದ 15 ತಾಲೂಕುಗಳ 39,413 ಹೆಕ್ಟೇರ್ ಪ್ರದೇಶದಲ್ಲಿ ₹90.07 ಕೋಟಿ ವೆಚ್ಚದಲ್ಲಿ ಹೆಚ್ಚುವರಿ 15 ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಭದ್ರತೆ ಬಲಪಡಿಸಲು ₹38.33 ಕೋಟಿ ವೆಚ್ಚದಲ್ಲಿ ಹೊಸ ತಂತ್ರಾಂಶ ಅಳವಡಿಕೆಗೆ ನಿರ್ಣಯ
ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ₹405.55 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ತೀರ್ಮಾನ
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2025 ಅನ್ನು ಮುಂದಿನ ವಿಧಾನಮಂಡಲದಲ್ಲಿ ಮಂಡಿಸಲು ನಿರ್ಧಾರ
ಆಯವ್ಯಯದಲ್ಲಿ ಘೋಷಿಸಿದಂತೆ ₹1,000 ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆಗಳ ನಿರ್ಮಾಣ ಮತ್ತು ₹1,000 ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಗೀಡಾದ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕಗಳ ನಿರ್ಮಾಣ ಮಾಡಲು ನಿರ್ಧಾರ
ಬೀದರ್ ಜಿಲ್ಲೆಯ ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಘೋಷಿಸಲು ನಿರ್ಣಯ
ಸ್ವಾಯತ್ತ ಸಂಸ್ಥೆಯ ಸ್ಥಾನಮಾನದೊಂದಿಗೆ ಕನಕಪುರದ ವೈದ್ಯಕೀಯ ಕಾಲೇಜು ಅನ್ನು 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಆರಂಭಿಸಲು ಮತ್ತು ಅವಶ್ಯವಿರುವ ವೈದ್ಯಕೀಯ ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳು ಮತ್ತಿತರ ಕಾಮಗಾರಿಗಳನ್ನು ₹550 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯ ಕಟ್ಟಡ ನವೀಕರಣ ಹಾಗೂ ಪೂರಕ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ₹70 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಕಟ್ಟಡ ನವೀಕರಣ ಮತ್ತು ಆಡಿಟೋರಿಯಂ ಕಾಮಗಾರಿಗಳನ್ನು ₹50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ನಿರ್ಧಾರ
ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ʼಇಂದಿರಾ ಆಹಾರ ಕಿಟ್‌ಗಳನ್ನು ವಿತರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

