ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ತಂತ್ರಜ್ಞಾನ ವೇದಿಕೆ ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಐಟಿ ಕ್ಷೇತ್ರದ ರಫ್ತಿಗೆ ಕರ್ನಾಟಕವು 64 ಬಿಲಿಯನ್ ಡಾಲರ್ ಕೊಡುಗೆ ನೀಡಿದೆ. ಇದು ದೇಶದ ಒಟ್ಟು ರಫ್ತಿನ ಮೂರನೇ ಒಂದು ಭಾಗ ಎಂದು ಕೊಂಡಾಡಿದರು.
ಐಟಿಸಿ ಮೌರ್ಯ ಹೋಟೆಲ್‌ನ ಕಮಲ್ ಮಹಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಮಾಡಿದ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.
➤ ಕರ್ನಾಟಕವು ಸಂಪ್ರದಾಯ ಮತ್ತು ಪ್ರಗತಿಯು ಸಂಧಿಸುವ ಸ್ಥಳ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿ ಮತ್ತು ಪಟ್ಟದಕಲ್ಲಿನ ಪುರಾತನ ಅವಶೇಷಗಳು ನಮ್ಮ ಶ್ರೀಮಂತ ಇತಿಹಾಸವನ್ನು ಸಾರುತ್ತವೆ. ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಮಾಧುರ್ಯದ ಮೂಲಕವೂ ನಮ್ಮ ಚರಿತ್ರೆ ಪ್ರತಿಫಲಿಸುತ್ತದೆ.
➤ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿರುವ ನಮ್ಮ ಕನ್ನಡ ಭಾಷೆ, ಕವಿ ಪಂಪನ ಜಾಣ್ಮೆ ಹಾಗೂ ಬಸವಣ್ಣನಂತಹ ತತ್ವಜ್ಞಾನಿಗಳ ಆದರ್ಶಗಳನ್ನು ಹೊತ್ತಿದೆ. ಶ್ರವಣಬೆಳಗೋಳದ ಪವಿತ್ರ ನೆಲೆದಿಂದ ಕೂಡಲಸಂಗಮದ ಜೀವತುಂಬಿದ ಸಂಪ್ರದಾಯಗಳವರೆಗೆ ಕರ್ನಾಟಕ ರಾಜ್ಯ ಅನ್ವೇಷಿಸಲು ಕಾಯುತ್ತಿರುವ ಸಾಂಸ್ಕೃತಿಕ ಗಣಿಯಾಗಿದೆ.
➤ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳು, ಪ್ರಶಾಂತ ಸಮುದ್ರತೀರಗಳು, ವನ್ಯಜೀವಿ ಧಾಮಗಳು, ವೈಭವೋಪೇತ ಅರಮನೆಗಳು ಮತ್ತು ಕೊಡಗಿನ ಕಾಫೀ ತೋಟಗಳನ್ನುಳ್ಳ ನಮ್ಮ ರಾಜ್ಯವು ವೈವಿಧ್ಯಮಯ ಪ್ರವಾಸೋದ್ಯಮ ಅನುಭವಗಳನ್ನು ನೀಡುತ್ತದೆ.
➤ ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ, ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ. 337 ಬಿಲಿಯನ್ ಡಾಲರ್ ಜಿಎಸ್ ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದು ರಾಷ್ಟ್ರದ ಜಿಡಿಪಿಗೆ ಶೇ 9 ರಷ್ಟು ಕೊಡುಗೆಯನ್ನು ನೀಡುತ್ತಿದೆ.
➤ ನಮ್ಮ ರಾಜಧಾನಿ ಬೆಂಗಳೂರು ಜಾಗತಿಕ ಟೆಕ್ ನಾಯಕನಾಗಿದ್ದು, ಪ್ರಪಂಚದಾದ್ಯಂತ ಪ್ರತಿಷ್ಠಿತ 15 ಸ್ಟಾರ್ಟ್ ಅಪ್ ಪರಿಸರವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 18,000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ಬೆಂಗಳೂರು ನೆಲೆಯಾಗಿದ್ದು, 50+ ಯೂನಿಕಾರ್ನ್‌ಗಳು ಮತ್ತು ಭಾರತದ ಶೇ 40ರಷ್ಟು ಸಾಮರ್ಥ್ಯಾ ಕೇಂದ್ರಗಳು , ಬಾಷ್, ಇಂಟೆಲ್ ಮತ್ತು ಎಸ್ಎಪಿ ಕಂಪನಿಗಳ ಆರ್ & ಡಿ ಕೇಂದ್ರಗಳನ್ನು ಹೊಂದಿದೆ.
➤ ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆಯನ್ನು ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ.
➤ ಕರ್ನಾಟಕದ ಯಶಸ್ಸು ಅದರ ಜನ ಹಾಗೂ ನೀತಿಗಳಿಂದಾಗಿ ದೊರೆತಿದೆ. ನಿಪುಣ ಕರ್ನಾಟಕ ಕಾರ್ಯಕ್ರಮಗಳ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಮೈಕ್ರೋಸಾಫ್ಟ್ ಮತ್ತು ಅಕ್ಸೆಂಚರ್‌ನಂತಹ ಜಾಗತಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಎಐ, ಸೈಬರ್ ಸೆಕ್ಯುರಿಟಿ ಮತ್ತು ಜೈವಿಕ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿದ್ದೇವೆ.
➤ ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ, ಬೆಂಗಳೂರು, ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಂಸ್ಥೆಗಳನ್ನು ಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರಗಳಿಗೆ ಅವು ನೀಡಿರುವ ಕೊಡುಗೆಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ.
➤ ಎಲೆಕ್ಟ್ರಾನಿಕ್ಸ್, ಆನಿಮೇಷನ್, ಗೇಮಿಂಗ್, ಗ್ರೀನ್ ಹೈಡ್ರೋಜನ್, ಪ್ರವಾಸೋದ್ಯಮ ಮತ್ತು ವಿದ್ಯುತ್ ಚಲನೆಗಳಲ್ಲಿ ಕರ್ನಾಟಕದ ಮುಂದಾಲೋಚನೆಯುಳ್ಳ ನೀತಿಗಳು ಸುಸ್ಥಿರ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ.
➤ 2017 ರಲ್ಲಿ ಪ್ರಾರಂಭಿಸಲಾದ ಜಾಗತಿಕ ನಾವೀನ್ಯತಾ ಮೈತ್ರಿಯು ಕರ್ನಾಟಕವನ್ನು ವಿಶ್ವದೊಂದಿಗೆ ಬೆಸೆಯುವ ಸಂಪರ್ಕಸೇತುವಾಗಿದೆ. 2018 ರಲ್ಲಿ ವಿಶ್ವದ ಹತ್ತು ದೇಶದೊಂದಿಗಿನ ಮೈತ್ರಿ ಈಗ 35 ದೇಶಗಳಿಗೆ ವಿಸ್ತರಿಸಿದ್ದು, ಜರ್ಮನಿ, ಆಸ್ಟ್ರೇಲಿಯಾ, ಯುಕೆ, ಯುಎಸ್. ಜಪಾನ್, ಇಸ್ರೇಲ್, ಫ್ರಾನ್ಸ್, ಸೌತ್ ಕೊರಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಟ್ಸರ್ಲ್ಯಾಂಡ್ ದೇಶಗಳು ಮೈತ್ರಿಯಲ್ಲಿವೆ.
➤ ಶಿಕ್ಷಣ, ಸಂಶೋಧನೆ, ಸ್ಮಾರ್ಟ್ ಸಿಟಿ, ಶುದ್ಧ ಇಂಧನ, ಪ್ರವಾಸೋದ್ಯಮ ಮತ್ತು ವ್ಯಾಪಾರಗಳಲ್ಲಿ ನಮ್ಮೊಂದಿಗೆ ಸಹಯೋಗ ಬೆಳೆಸಲು ಆಹ್ವಾನಿಸುತ್ತೇವೆ. ನಮ್ಮ ಜನರು ಹಾಗೂ ನಮ್ಮ ವಿಶ್ವಕ್ಕೆ ಲಾಭದಾಯಕವಾಗಿ ಪರಿಣಮಿಸುವ ಪರಿಹಾರಗಳನ್ನು ಒಟ್ಟಾಗಿ ಕಂಡುಕೊಳ್ಳೋಣ.
➤ ನಮ್ಮ ವಿದ್ಯುನ್ಮಾನ, ಐಟಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳು ಚಾಲನಾ ಶಕ್ತಿಯಾಗಿದ್ದು, ಕರ್ನಾಟಕವು, ಭಾರತದ ಐಟಿ ಕ್ಷೇತ್ರದ ರಫ್ತಿಗೆ ಸುಮಾರು 64 ಬಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡಿದೆ.ಇದು ರಾಷ್ಟ್ರದ ಒಟ್ಟು ರಫ್ತಿನ ಮೂರನೇ ಒಂದು ಭಾಗವಾಗಿದೆ.
➤ಎಐ ಕ್ಲಸ್ಟರ್ಸ್, ವಿದ್ಯುನ್ಮಾನ ಪಾರ್ಕ್ ಮತ್ತು ಜೈವಿಕ ನಾವೀನ್ಯತಾ ಹಬ್‌ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಭವಿಷ್ಯದ ಡಿಜಿಟಲ್ ವಿಷಯಗಳಿಗೆ ಸನ್ನದ್ಧವಾಗುವತ್ತ ಕರ್ನಾಟಕವು ದೇಶದಲ್ಲಿಯೇ ಪ್ರಥಮ ರಾಜ್ಯವಾಗಿದ್ದು, ಆನಿಮೇಶನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಹೊಂದಿದೆ.
➤ ಸ್ಟಾರ್ಟ್ ಅಪ್ಸ್, ಜಾಗತಿಕ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ನೀತಿನಿರೂಪಕರು ಒಟ್ಟಿಗೆ ಕಾರ್ಯನಿರ್ವಹಿಸುವಂತಹ ಪರಿಸರ ವ್ಯವಸ್ಥೆಯನ್ನು ಈ ಪ್ರಯತ್ನಗಳು ರೂಪಿಸಲಿವೆ.
➤ 2025 ರ ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ನಮ್ಮ ಈ ಯೋಜನೆಗಳಿಗೆ ಶಕ್ತಿ ತುಂಬಲಿವೆ. ಭವಿಷ್ಯೀಕರಿಸುವ(Futurise) ಎಂಬ ವಿಷಯ ವನ್ನು ಆಧರಿಸಿದ ಸಮಿಟ್ ನಲ್ಲಿ, ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳಲಾಗುವುದು.
➤ ನೋಬೆಲ್ ಪುರಸ್ಕೃತರು, ವಿಶ್ವದ ನಾಯಕರು ಹಾಗೂ ನಾವೀನ್ಯಗಾರರನ್ನು ಬೆಂಗಳೂರು ಟೆಕ್ ಸಮಿಟ್ ಸತ್ಕರಿಸಿದೆ. ಈ ವರ್ಷ ಸಮಿಟ್‌ನಲ್ಲಿ ವಿಶ್ವದ 60 ದೇಶಗಳ ಸುಮಾರು 1200 ಪ್ರದರ್ಶಕರು, 600 ಭಾಷಣಕಾರರು ಹಾಗೂ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.
➤ ಕರ್ನಾಟಕ ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ನಮ್ಮ ಹೊಸ ನಾವೀನ್ಯಾತಾ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಯಲ್ಲಿ ಸಂಶೋಧನೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿವೆ. ಮಂಗಳೂರಿನಲ್ಲಿ ಫಿನ್ ಟೆಕ್ ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಡ್ರೋನ್ ಅಭಿವೃದ್ಧಿ ಯೋಜನೆಗಳು ನಮ್ಮ ಸಮತೋಲಿತ ಬೆಳವಣಿಗೆಯಲ್ಲಿನ ದೂರದೃಷ್ಟಿಯನ್ನು ಬಿಂಬಿಸುತ್ತದೆ.
➤ ಕರ್ನಾಟಕ ವಿಶ್ವದೊಂದಿಗಿನ ಪಾಲುದಾರಿಕೆಗೆ ಸಿದ್ದವಾಗಿದೆ. ತಂತ್ರಜ್ಞಾನ, ಪ್ರವಾಸೋದ್ಯಮ ಅಥವಾ ಪ್ರತಿಭೆಯ ಮೂಲಕ ಜಾಗತಿಕ ಸಹಯೋಗವು ಒಟ್ಟು ಯಶಸ್ಸಿಗೆ ರಹದಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

