ಮಧ್ಯಾಹ್ನದ ಬಳಿಕ ನಡೆಯುತ್ತಿರುವ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಸಿಎಂ ನೀಡಿದ ಸೂಚನೆಗಳು ಹೀಗಿವೆ
•ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಅರ್ಜಿಗಳನ್ನು ಕಾಟಾಚಾರಕ್ಕೆ ವಿಲೇವಾರಿ ಮಾಡದೆ ಅರ್ಜಿಗಳಿಗೆ ನ್ಯಾಯ ಒದಗಿಸಬೇಕು.
• ಕಾನೂನು ಬದ್ಧವಾಗಿ ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲದಿದ್ದರೆ ಮೊದಲೇ ಅರ್ಜಿದಾರರಿಗೆ ತಿಳಿಸಬೇಕು.
• ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ತಹಶೀಲ್ದಾರ್ಗಳು ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ನಡೆಸಬೇಕು.
• ಸಕಾಲ ಯೋಜನೆಯಡಿ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
• ಜಲಜೀವನ ಮಿಷನ್ ಅಡಿ ಯೋಜನೆ ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ. ಅದೇ ರೀತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.
• ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೂ.1400 ಕೋಟಿ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳ ಕೂಲಿ ಹಣ ಪಾವತಿಗೆ ಬಾಕಿಯಿದೆ. ಕೇಂದ್ರದಿಂದ ಹಣ ಬಿಡುಗಡೆಗೆ ಒತ್ತಡ ಹಾಕಬೇಕು.
• ಗ್ರಾಮೀಣ ಪ್ರದೇಶದಲ್ಲಿ 1.50 ಕೋಟಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಾಕಿಯಿರುವ 1352 ಇ-ಸ್ವತ್ತು ಅರ್ಜಿಗಳನ್ನು ನಿಗದಿತ ಅವಧಿಯ ಒಳಗಾಗಿ ವಿಲೇವಾರಿ ಮಾಡಬೇಕು.
• ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಒಂದು ವಾರದ ಒಳಗಾಗಿ ಇನ್ನುಳಿದ ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಇನ್ನೂ 5ಕಡೆ ಇಂದಿರಾ ಕ್ಯಾಂಟೀನ್ಗಳಿಗೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು.
• ನಗರಾಭಿವೃದ್ಧಿ ಇಲಾಖೆಯಡಿ ಒಟ್ಟು 46,85,107 ಎ-ಖಾತಾ ಸ್ವತ್ತುಗಳನ್ನು ಗುರುತಿಸಲಾಗಿದ್ದು, 21,18,459 ಸ್ವತ್ತುಗಳಿಗೆ ಇ-ಖಾತಾ ನೀಡಲಾಗಿದೆ. 9,93,342 ಅನಧಿಕೃತ ಬಿ-ಖಾತಾ ಸ್ವತ್ತುಗಳನ್ನು ಗುರುತಿಸಲಾಗಿದ್ದು, ಇದುವರೆಗೆ 2,21,691 ಬಿ-ಖಾತಾ ನೀಡಲಾಗಿದೆ. ಎಲ್ಲಾ ಸ್ವತ್ತುಗಳಿಗೆ ನಿಯಮಾನುಸಾರ ಖಾತಾ ಒದಗಿಸಿ ತೆರಿಗೆ ವ್ಯಾಪ್ತಿಗೆ ಬರಲು ಕ್ರಮ ಕೈಗೊಳ್ಳಬೇಕು.
• ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯು ಪ್ರಮಾಣ ನಿಯಂತ್ರಣದಲ್ಲಿದೆ. ಆದರೂ ಡೆಂಗ್ಯು ನಿಯಂತ್ರಣಕ್ಕೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ.
• ಎಲ್ಲಾ ತಾಲೂಕುಗಳಲ್ಲಿ ಡಯಾಲಿಸಿಸ್ ಯುನಿಟ್ ಪ್ರಾರಂಭಿಸಲು ಈಗಾಗಲೇ ಆದೇಶ ನೀಡಲಾಗಿದೆ. ಇವು ಪ್ರಾರಂಭವಾಗಿದೆಯೇ? ಪ್ರಾರಂಭವಾಗಿದ್ದರೆ ಕಾರ್ಯನಿರ್ವಹಿಸುತ್ತಿವೆಯೇ? ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ಖಾತ್ರಿಪಡಿಸುವುದು ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜವಾಬ್ದಾರಿಯಾಗಿದೆ.
ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳಿಗೆ ನೀವು ನಿರಂತರವಾಗಿ ಭೇಟಿ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ವೈದ್ಯಾಧಿಕಾರಿಗಳನ್ನು ಅನಗತ್ಯವಾಗಿ ಸಭೆಗಳಿಗೆ ಆಹ್ವಾನಿಸಬಾರದು.
• ಬಾಣಂತಿಯರ ಮರಣ ಪ್ರಮಾಣ ಕೇರಳಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.30 ರಷ್ಟು ಕಡಿಮೆಯಾಗಿದ್ದರೂ, ಇದನ್ನು ಇನ್ನಷ್ಟು ಕಡಿಮೆಗೊಳಿಸಲು ಸಾಂಸ್ಥಿಕ ಹೆರಿಗೆಯನ್ನು ಹೆಚ್ಚಿಸುವುದು, ಅಗತ್ಯ ಉಪಕರಣಗಳ ಖರೀದಿ ಸೇರಿದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
• ಸ್ಮಶಾನ ಮತ್ತು ಕಬರಸ್ತಾನಗಳಿಗೆ ಜಮೀನು ಒದಗಿಸಲು ಆದ್ಯತೆ ನೀಡಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಖರೀದಿ ಮಾಡಿ ಒದಗಿಸಬೇಕು.
ಹಾಸ್ಟೆಲ್ಗಳಿಗೆ ನಿವೇಶನ ಗುರುತಿಸುವ ಸಂದರ್ಭದಲ್ಲಿ ಊರಿನಿಂದ ಬಹಳ ದೂರವಿರುವ ನಿರ್ಜನ ಪ್ರದೇಶದಲ್ಲಿ ನೀಡಬಾರದು. ನಿವೃತ್ತ ಸೈನಿಕರಿಗೆ ನಿವೇಶನ ಕುರಿತಾದ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಿ ಅವರಿಗೆ ಜಮೀನು ಒದಗಿಸಬೇಕು. ಪ್ರತಿ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಒತ್ತುವರಿಯಾಗಿದ್ದರೆ ಅದನ್ನು ತಕ್ಷಣ ತೆರವುಗೊಳಿಸಬೇಕು.
• ಮುಂದಿನ ಸಭೆಯ ವೇಳೆ ನಿವೇಶನ ಲಭ್ಯವಿಲ್ಲದ ಬಗ್ಗೆ ಯಾವುದೇ ದೂರು ಬರಬಾರದು.
• ಸೈನಿಕರ ಕಲ್ಯಾಣ ನಿಗಮ ಸ್ಥಾಪಿಸುವ ಕುರಿತಾದ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
• ಒಟ್ಟು 59 ತಾಲೂಕುಗಳಲ್ಲಿ ಕ್ರೀಡಾಂಗಣಗಳು ಲಭ್ಯವಿಲ್ಲ. ಎಲ್ಲಾ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಗುರುತಿಸಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
• ಯುವನಿಧಿ ಯೋಜನೆಯಡಿ ಪ್ರತಿ ಫಲಾನುಭವಿಗೆ ಎರಡು ವರ್ಷಗಳ ಅವಧಿಗೆ ನೆರವು ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಫಲಾನುಭವಿಗಳಿಗೆ ಉದ್ಯೋಗ ದೊರೆತರೆ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಿದರೆ ನೆರವು ಸ್ಥಗಿತಗೊಳ್ಳುತ್ತದೆ. ಪ್ರತಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರ ಬೆಳವಣಿಗೆ ಮೇಲೆ ನಿಗಾ ವಹಿಸಬೇಕು.