ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ದೇವೇಗೌಡರ ಶಾಪ, ನಮ್ಮ ಪಾಲಿಗೆ ಆಶೀರ್ವಾದ; ಸಿಎಂ ಪ್ರತಿಕ್ರಿಯೆ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯರಾದ ದೇವೇಗೌಡ ಶಾಪವನ್ನು ಆಶೀರ್ವಾದವೆಂದು ಸ್ವೀಕರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯರಾದ ದೇವೇಗೌಡ ಶಾಪವನ್ನು ಆಶೀರ್ವಾದವೆಂದು ಸ್ವೀಕರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳು, ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

“ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು” ಎಂದು ಹೇಳಿದ್ದಾರೆ.

“ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ” ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ ಗಾಳಿ ದೇವೇಗೌಡರಿಗೂ ಸೋಕಿದ ಹಾಗಿದೆ. ಅದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದು ಸಂಗ ದೋಷದ ಫಲ” ಕುಟುಕಿದ್ದಾರೆ.

“ಜಾತ್ಯತೀತ ಜನತಾದಳ ಅಂತ್ಯವಾಗಬಾರದು ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅದೇ ರೀತಿ ದೇವೇಗೌಡರು ಇನ್ನಷ್ಟು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿರಬೇಕೆಂದು ಕೂಡಾ ನಾನು ಬಯಸುತ್ತೇನೆ. ಆದರೆ ಜೆಡಿಎಸ್ ಮತ್ತು ಅವರ ಹೊಸ ಮಿತ್ರ ಬಿಜೆಪಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷ ಈ ಬಯಕೆ ಈಡೇರಿಕೆಗೆ ನಿರಂತರ ಪ್ರಯತ್ನ ಮಾಡಲಿದೆ” ಎಂದು ಹೇಳಿದ್ದಾರೆ.

“ಜಾತ್ಯತೀತ ಜನತಾ ಪಕ್ಷ ಎನ್ನುವುದು “ಬಿಜೆಪಿಯ ಬಿ ಟೀಮ್” ಎಂದು ಹಿಂದಿನಿಂದಲೇ ನಾನು ಹೇಳಿಕೊಂಡು ಬಂದಿದ್ದೇನೆ. ನನ್ನ ಮಾತನ್ನು ಒಪ್ಪಿಕೊಂಡು ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸಿದ್ದಕ್ಕೆ ಜೆಡಿಎಸ್ ಪಕ್ಷವನ್ನು ಅಭಿನಂದಿಸುತ್ತೇನೆ. ಈ ಪಕ್ಷದ ಜಾತ್ಯತೀತ ಮುಖವನ್ನು ನಿಜ ಎಂದು ನಂಬಿ ಒಂದಷ್ಟು ಸೆಕ್ಯುಲರ್ ಮತದಾರರು ದಾರಿತಪ್ಪುವುದನ್ನು ಜೆಡಿಎಸ್ ಪಕ್ಷದ ಈ ನಿಲುವು ತಪ್ಪಿಸಿದೆ. ಇದು ಮುಂದಿನ ಚುನಾವಣೆಯನ್ನು ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ನೇರ ಸಂಘರ್ಷವಾಗಿ ಪರಿವರ್ತಿಸಿದೆ. ಜಾತ್ಯತೀತತೆ ಮತ್ತು ಸೌಹಾರ್ದತೆಯ ಪರಂಪರೆಯ ಕರ್ನಾಟಕದ ಮತದಾರರು ಮುಂದಿನ ಚುನಾವಣೆಗಳಲ್ಲಿ ಸರಿಯಾದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ” ಎಂದು ಹೇಳಿದ್ದಾರೆ.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ