ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

5 ಗ್ಯಾರಂಟಿ | ನುಡಿದಂತೆ ನಡೆದ ಸರ್ಕಾರ

5 ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೊಳಿಸಿ ನುಡಿದಂತೆ ನಡೆದ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ.

5 ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಜಾರಿಗೊಳಿಸಿ ನುಡಿದಂತೆ ನಡೆದ ಹೆಗ್ಗಳಿಕೆಗೂ ಪಾತ್ರವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ. ಬಡವರ ಹಸಿವು ಹಾಗೂ ಅಪೌಷ್ಟಿಕತೆ ದೂರವಾಗಿಸುವ ‘ಅನ್ನ ಭಾಗ್ಯ’ ಯೋಜನೆಗೆ ಚಾಲನೆಗೆ ಕೊಟ್ಟ ಸರ್ಕಾರ, ‘ಗೃಹ ಜ್ಯೋತಿ’ ಯೋಜನೆಯಡಿ ಎಲ್ಲ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸಿದೆ. ಮಹತ್ವದ ‘ಗೃಹಲಕ್ಷ್ಮಿ ಯೋಜನೆ’ಗೆ ಅಧಿಕೃತ ಮುದ್ರೆ ಒತ್ತಿ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಹೆಜ್ಜೆಯಿಟ್ಟಿದೆ. ನಾಲ್ಕು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ‘ಯುವನಿಧಿ’ ಯೋಜನೆಯನ್ನೂ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಯೋಗಕ್ಷೇಮ, ನೆಮ್ಮದಿಯ ಬದುಕು ಮತ್ತು ಎಲ್ಲ ರೀತಿ ಭದ್ರತೆ ಒದಗಿಸುವುದೇ ಆಡಳಿತದ ಅಂತಿಮ ಗುರಿಯಾಗಿರಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಲಕ್ಷ್ಯ.

ನುಡಿದಂತೆ ನಡೆದಿರುವ ರಾಜ್ಯ ಸರ್ಕಾರ ಕೇವಲ 100 ದಿನಗಳ ಒಳಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ, ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’, ಹಸಿವು ಮುಕ್ತ ಕರ್ನಾಟಕದ ಕನಸಿನ 10 ಕೆಜಿ ಆಹಾರ ಧಾನ್ಯ ನೀಡುವ ‘ಅನ್ನಭಾಗ್ಯ ಹಾಗೂ ಸ್ತ್ರ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಯಿಟ್ಟು ಪ್ರತಿ ಮನೆಯೊಡತಿ ಬ್ಯಾಂಕ್ ಖಾತೆಗೆ ಮಾಸಿಕ 2000 ರೂ ರವಾನಿಸುವ ‘ಗೃಹಲಕ್ಷ್ಮಿ’ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರುವ ಮೂಲಕ ನಾಡಿನ ಜನತೆಗೆ ನಾಲ್ಕು ಖಾತ್ರಿಗಳನ್ನು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದಷ್ಟು ಬೇಗನೆ ಉಳಿದಿರುವ ನಿರುದ್ಯೋಗ ಭತ್ಯೆ ನೀಡುವ ‘ಯುವನಿಧಿ’ ಯೋಜನೆಯನ್ನೂ ಜಾರಿಗೆ ತರುವ ಸಿದ್ಧತೆಯಲ್ಲಿದೆ.

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಜತೆ ಸಮಾಜದಲ್ಲಿ ಸಮಾನತೆ ತರಬೇಕು. ರಾಜ್ಯದ 6.5 ಕೋಟಿ ಜನಸಂಖ್ಯೆಗೆ ನೆಮ್ಮದಿ, ಭದ್ರತೆ ನೀಡಬೇಕು ಎಂಬುದು ಸರ್ಕಾರದ ಉದ್ದೇಶ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಧ್ಯಮ ವರ್ಗದವರ ನೆಮ್ಮದಿ ಕೆಡಿಸಿರುವ ತೆರಿಗೆ ಭಾರ, ಬೆಲೆಯೇರಿಕೆಗಳಿಂದ ತತ್ತರಿಸುವವರಿಗೆ ಆರ್ಥಿಕ ನ್ಯಾಯ ಒದಗಿಸಬೇಕೆಂಬುದು ಸರ್ಕಾರದ ಉದ್ದೇಶ.

ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಜನರು ಕೂಲಿ ಕೆಲಸ, ಬೀದಿಬದಿ ವ್ಯಾಪಾರ, ತಳ್ಳುಗಾಡಿ ವ್ಯಾಪಾರ, ಪಶುಪಾಲನೆ ಮುಂತಾದ ಅಸ್ತಿತ್ವವಿಲ್ಲದ ಕೆಲಸಗಳನ್ನು ಅವಲಂಬಿಸಿದ್ದಾರೆ. ಅಂತಹ ಮಂದಿಗೆ ಎಲ್ಲ ರೀತಿ ಭದ್ರತೆ ಒದಗಿಸುವುದು ಆಡಳಿತದ ಜವಾಬ್ದಾರಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ, ಆರೋಗ್ಯ, ಶಿಕ್ಷಣ, ಉದ್ಯೋಗ ಸಿಗಬೇಕೆಂಬ ಕಾಳಜಿಯಿಂದ ರಾಜ್ಯ ಸರ್ಕಾರ ಜನಕಲ್ಯಾಣದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಈ ಎಲ್ಲ ಐದು ಖಾತ್ರಿ ಯೋಜನೆಗಳಲ್ಲಿ ಯಾವುದೂ ಉಚಿತವಲ್ಲ. ಬದಲಿಗೆ ಇವುಗಳು ಬಡವರ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಸಬಲೀಕರಣಗೊಳಿಸುವ ಯೋಜನೆಗಳಾಗಿವೆ.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆ

ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರ ಬದುಕಲ್ಲಿ ಈ ನಾಲ್ಕೂ ಗ್ಯಾರಂಟಿ ಯೋಜನೆಗಳು ದೊಡ್ಡ ಮಟ್ಟದ ಚಲನೆಯನ್ನು ತಂದಿವೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂದೆ ಇರುವ ಯುರೋಪ್‌ ದೇಶಗಳಲ್ಲಿನ ‘ಸಾರ್ವತ್ರಿಕ ಮೂಲ ಆದಾಯ’ ಎಂಬ ಪರಿಕಲ್ಪನೆಯಡಿ ಸಾಮಾಜಿಕ ಅಭಿವೃದ್ಧಿ ಉಪಕ್ರಮಗಳನ್ನು ಆಚರಣೆಗೆ ತರುತ್ತಿವೆ. ಇಂತಹ ಜನಪರ ಉಪಕ್ರಮಗಳು ವಿಶ್ವದ ಅರ್ಥಶಾಸ್ತ್ರಜ್ಞರ ಗಮನಸೆಳೆದಿವೆ. ಇಂತಹ ಯೋಜನೆಗಳ ಅನುಷ್ಠಾನಕ್ಕೆ ಹಲವಾರು ಅಡೆತಡೆಗಳು ಬಂದಿದ್ದರೂ, ಅದರ ನಡುವೆಯೇ ನೀಡಿದ್ದ ಗ್ಯಾರಂಟಿ ವಾಗ್ದಾನಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮಹತ್ವದ ಕೆಲಸ ಮಾಡಿರುವುದು ಕೋಟ್ಯಂತರ ಜನರ ಪ್ರಶಂಸೆಗೆ ಪಾತ್ರವಾಗಿದೆ.

ಶಕ್ತಿ ಯೋಜನೆ; ನಾರಿಯರ ಹಾಗೂ ನಾಡಿನ ಪ್ರಗತಿಗೆ ನೆರವು

ಬೆಂಗಳೂರು ಮಹಾನಗರದಲ್ಲಿ ದಿನ ನಿತ್ಯ ಲಕ್ಷಾಂತರ ಮಹಿಳೆಯರು ಉದ್ಯೋಗ ನಿಮಿತ್ತ ಮನೆಯಿಂದ ಹೊರಗೆ ದುಡಿಯುತ್ತಾರೆ. ಮನೆ ಕೆಲಸದಿಂದ ಹಿಡಿದು ಸಿದ್ಧ ಉಡುಪು, ಕಾರ್ಖಾನೆ, ಸಾಫ್ಟ್‌ವೇರ್‍‌ ಉದ್ಯೋಗ ಸೇರಿದಂತೆ ವಿವಿಧ ಹಂತಗಳಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಅದರಲ್ಲೂ ಆರ್ಥಿಕವಾಗಿ ಶಕ್ತಿವಂತರಲ್ಲದ ಮಹಿಳೆಯರದ್ದು ಕರುಣಾಜನಕ ಸ್ಥಿತಿ. ಕುಟುಂಬದ ಅಗತ್ಯತೆಗಳನ್ನು ಪೂರೈಸಲು ದುಡಿಯಲೇಬೇಕಾದ ಪರಿಸ್ಥಿತಿ ದೂರದ ಕೆಲಸದ ಸ್ಥಳಕ್ಕೆ ಬಸ್ಸಿನಲ್ಲಿ ಹೋಗುವುದು ನಿತ್ಯದ ದಿನಚರಿ. ಆದರೆ ದುಡಿಯಿಂದ ಬಂದ ಅಲ್ಪ ಆದಾಯದಲ್ಲಿ ಒಂದಷ್ಟು ಹಣ ಬಸ್ಸು ಪ್ರಯಾಣಕ್ಕೇ ಖರ್ಚಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ದೂರದ ಸ್ಥಳಗಳಿಗೆ ಕೆಲಸ ಬಸ್ಸಿನಲ್ಲಿ ಹೋಗಲು ಹಣ ತೆರಬೇಕಾಗಿಲ್ಲ. ಪ್ರಯಾಣ ಉಚಿತ, ತಿಂಗಳಿಗೆ ಪ್ರಯಾಣಕ್ಕೆಂದು ಖರ್ಚಾಗುತ್ತಿದ್ದ ಹಣವೂ ಉಳಿತಾಯವಾಗುತ್ತಿದೆ. ಇದು ದುಡಿಯುವ ಮಹಿಳೆಯರ ಮುಖದಲ್ಲಿ ನೆಮ್ಮದಿಯ ನಗೆ ಮೂಡಿಸಿದೆ. ಬರೀ ಬೆಂಗಳೂರಷ್ಟೇ ಅಲ್ಲ, ರಾಜ್ಯದ ಇತರ ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರ ಮುಖದಲ್ಲೂ ಸಂತಸ ಮೂಡಿದೆ. ಹಳ್ಳಿಯಿಂದ ಪಟ್ಟಣಕ್ಕೆ, ಕಟ್ಟಡ ನಿರ್ಮಾಣ, ಕೃಷಿ ಸೇರಿದಂತೆ ನಾನಾ ಕೆಲಸಗಳಿಗೆ ಹಳ್ಳಿಯಿಂದ ತೆರಳುವ ಮಹಿಳೆಯರಿಗೆ ಬಸ್ಸು ಪ್ರಯಾಣದ ಖರ್ಚು ಉಳಿಯುತ್ತಿದೆ. ಈ ಹಣವನ್ನು ಸ್ಥಳೀಯ ಸಣ್ಣಪುಟ್ಟ ವ್ಯಾಪಾರ ಚಟುವಟಿಕೆಗಳಿಗೆ ಅಲ್ಪ ಪ್ರಮಾಣದ ಬಂಡವಾಳವಾಗಿ ತೊಡಗಿಸುತ್ತಿರುವುದರಿಂದ ಅವರ ಆದಾಯದ ಪ್ರಮಾಣದಲ್ಲೂ ಏರಿಕೆ ಆಗಿದೆ. ಇದು ಒಂದು ರೀತಿಯಲ್ಲಿ ಮಹಿಳಾ ಸ್ವಾವಲಂಬನೆಗೆ ಕಾರಣವಾಗಿದೆ. ಸರ್ಕಾರ ಕೊಟ್ಟ ಭರವಸೆಯಂತೆ ಕಾರ್ಯರೂಪಕ್ಕೆ ಇಳಿಸಿದ್ದಲ್ಲದೇ, ರಾಜ್ಯದ ಪ್ರಗತಿಗೂ ನೆರವಾಗಿದೆ.

ರಾಜಕೀಯ ಸ್ವಾತಂತ್ಯ್ರಕ್ಕಿಂತ ಸಾಮಾಜಿಕ ಸ್ವಾತಂತ್ಯ್ರ ಮುಖ್ಯ ಎಂಬ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿಕೆಯಂತೆ ಸಾಮಾಜಿಕ ನ್ಯಾಯ ಹಾಗೂ ಚೈತನ್ಯ ಒದಗಿಸುವ ನಿಟ್ಟಿನಲ್ಲಿ ಮೂಡಿಬಂದ ಗ್ಯಾರಂಟಿ ಯೋಜನೆಗಳು ಒಂದುಹಂತದಲ್ಲಿ ಯಶಸ್ವಿಯಾಗಿವೆ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಒಮದು ತಿಂಗಳಲ್ಲೇ ರಾಜ್ಯದೊಳಗೆ ಉಚಿತವಾಗಿ ಪ್ರಯಾಣ ಮಾಡುವ ‘ಶಕ್ತಿ’ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಜತೆಯಲ್ಲಿ ಪರೋಕ್ಷವಾಗಿ ರಾಜ್ಯದ ಆರ್ಥಿಕ ಅಭಿವೃದ್ಧಿಗೂ ಕಾರಣವಾಗಿದೆ.

ಸರ್ಕಾರ ಮೊಟ್ಟಮೊದಲಿಗೆ ಅನುಷ್ಠಾನಗೊಳಿಸಿದ ‘ಶಕ್ತಿ’ ಯೋಜನೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಹಾಗೂ ಲಿಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುತ್ತಿದೆ. ಈ ಯೋಜನೆ ನಿಜಾರ್ಥದಲ್ಲಿ ಮನೆಗಷ್ಟೇ ಮೀಸಲಾಗಿದ್ದ ಬಹಳಷ್ಟು ಮಹಿಳೆಯರಿಗೆ ಚೇತನ ನೀಡಿದೆ. ಒಂದು ರೀತಿಯಲ್ಲಿ ನಾರಿಯರ ಸಬಲೀಕರಣ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ತಂದಿದೆ.

ಪ್ರತಿನಿತ್ಯ ಸರಾಸರಿ 50 ರಿಂದ 60ಲಕ್ಷ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಅನುಕೂಲ ಪಡೆಯುತ್ತಿದ್ದಾರೆ. ದೂರದ ಊರುಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು, ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿಸಲು, ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಪ್ರವಾಸ ಮುಂತಾದ ಚಟುವಟಿಕೆ ಕೈಗೊಳ್ಳಲು ಇದು ಸಹಕಾರಿಯಾಗಿದೆ. ಪ್ರಯಾಣ ವೆಚ್ಚ ಉಳಿತಾಯದಿಂದ ಸ್ತ್ರೀಯರ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಿದೆ.

ಯೋಜನೆಯ ಬಗ್ಗೆ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಅಧ್ಯಯನ ನಡೆಸಿ ಪ್ರಶಂಸೆ ವ್ಯಕ್ತಪಡಿಸಿವೆ. ಈಗಾಗಲೇ 83.10 ಕೋಟಿ (ಅಕ್ಟೋಬರ್ 24, 2023ರ ಅಂಕಿ ಅಂಶ)ಗೂ ಅಧಿಕ ಬಾರಿ ಮಹಿಳೆಯರು ಉಚಿತವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಗರ ಸಾರಿಗೆ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ರಾಜ್ಯದಲ್ಲಿ ಪ್ರಯಾಣಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆದು ಸಂತಸಗೊಂಡಿದ್ದಾರೆ.

ಈ ಯೋಜನೆ ಜಾರಿಗೊಳಿಸುವ ಮುನ್ನ ನಷ್ಟದಲ್ಲಿದ್ದ ರಾಜ್ಯದ ಸಾರಿಗೆ ನಿಗಮ (ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ)ಗಳಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿದೆ. ಒಂದು ರೀತಿಯಲ್ಲಿ ಮಹಿಳೆಯರಿಗೆ ಮೀಸಲಾದ ಈ ಯೋಜನೆ ರಾಜ್ಯದ ದೇವಾಲಯಗಳು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಆರ್ಥಿಕ ಶಕ್ತಿ ತುಂಬುತ್ತಿದೆ.

ಶಕ್ತಿ ಸ್ಮಾರ್ಟ್ ಕಾರ್ಡ್

ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಸರ್ಕಾರದಿಂದ ‘ಶಕ್ತಿ ಸ್ಮಾರ್ಟ್’ ಕಾರ್ಡ್ ನೀಡಲಾಗುವುದು. ರಾಜ್ಯದ ಮಹಿಳೆಯರು ಶಕ್ತಿ ಸ್ಮಾರ್ಟ್‌ ಕಾರ್ಡ್‌ ಅನ್ನು ಸೇವಾ ಸಿಂದು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಸ್ಮಾರ್ಟ್ ಕಾರ್ಡ್‌ ಪಡೆಯುವವರೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರು ತಮ್ಮ ವಾಸ ಸ್ಥಳದ ದಾಖಲೆಯಾಗಿ ಆಧಾರ್ ಕಾರ್ಡ್‌, ಮತದಾರರ ಗುರುತಿನ ಚೀಟಿ, ತೋರಿಸಬಹುದು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ನೀಡಿರುವ ಗುರುತಿನ ಚೀಟಿ ತೋರಿಸಿ ಪ್ರಯಾಣಿಸುವ ಅನುಕೂಲವನ್ನೂ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರ ಕಲ್ಪಿಸಿದೆ. ಆದರೆ, ಗಮನಿಸಬೇಕಾದ ಒಂದು ಸಂಗತಿಯೆಂದರೆ, ಮಹಿಳಾ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಶೂನ್ಯ ಮೊತ್ತದ ಟಿಕೆಟ್‌ ಪಡೆದುಕೊಳ್ಳುವುದು ಅಗತ್ಯ.

ಶಕ್ತಿ ಯೋಜನೆಯಡಿ ಹವಾನಿಯಂತ್ರಿತ ಮತ್ತುಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸುವ ಅವಕಾಶ ಮಹಿಳೆಯರಿಗಿದೆ. ಆದರೆ, ರಾಜ್ಯದ ಹೊರಗೆ ಅಂತರರಾಜ್ಯ ಸಾರಿಗೆಗಳಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಸೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್‌ ಕಾರ್ಡ್‌ ದತ್ತಾಂಶ ಆಧರಿಸಿ ಇದನ್ನು ಭರಿಸುತ್ತದೆ. ಈ ಯೋಜನೆಯ ಸುಸೂತ್ರ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ 4000 ಕೋಟಿ ರೂ ತೆಗೆದಿರಿಸಲಾಗಿದೆ. ಅದರ ಭಾಗವಾಗಿ ರಾಜ್ಯ ಸರ್ಕಾರ ಕಂತುಗಳ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತಿದೆ.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದೆ. ಎರಡು ವರ್ಷಗಳಿಮದ ಗಾರ್ಮೆಂಟ್ಸ್‌ ಕಾರ್ಖಾನೆಗೆ ನಮ್ಮೂರಿನಿಂದ ಹೋಗುತ್ತಿದ್ದೇನೆ. ಅದಕ್ಕಾಗಿ ಕೆಎಸ್‌ಆರ್‍‌ಟಿಸಿ ಬಸ್‌ ಅವಲಂಬಿಸಿದ್ದೇನೆ. ದಿನವೂ ಕನಿಷ್ಠ 100 ರೂ ಬಸ್‌ ಟಿಕೆಟ್‌ಗೆ ವೆಚ್ಚವಾಗುತ್ತಿತ್ತು. ಶಕ್ತಿ ಯೋಜನೆ ಜಾರಿಗೊಂಡ ನಂತರ, ಉಚಿತ ಪ್ರಯಾಣದ ಅವಕಾಶ ಸಿಕ್ಕಿರುವುದರಿಂದ ಹಣ ಉಳಿತಾಯವಾಗುತ್ತಿದೆ. ನಾಲ್ಕು ತಿಂಗಳಿಂದ 12 ಸಾವಿರ ಉಳಿತಾಯವಾಗಿದೆ. ಅದನ್ನು ಇತರ ಅಗತ್ಯಗಳಿಗೆ ಬಳಸಲು ಅನುಕೂಲವಾಗಿದೆ. ಉದ್ಯೋಗಸ್ಥೆಯೂ ಸೇರಿದಂತೆ ಎಲ್ಲ ಮಹಿಳೆಯರಿಗೂ ಯೋಜನೆಯಿಂದ ಅನುಕೂಲವಾಗಿದೆ.

ಶಮಂತ, ಪದವೀಧರೆ, ಜಾಬಗೆರೆ, ಹುಣಸೂರು ತಾಲೂಕು , ಮೈಸೂರು

ಹೆಣ್‌ ಮಕ್ಕಳಿಗೆ ಬಸ್ ಫ್ರೀ ಮಾಡಿದ್ದು ಬಹಳ ಅನುಕೂಲ ಆಗೇತ್ರಿ. ಸರ್ಕಾರ ಪುಣ್ಯದ ಕೆಲಸ ಮಾಡೇತಿ. ನಾನು, ನನ್ನ ಗಂಡ ಬೈಲಹೊಂಗಲದಾಗ ಇರತೇವರಿ. ನಮ್ಮ ಹೊಲರಾಮದುರ್ಗ ತಾಲೂಕು ಚಂದರಗಿ ಸೀಮೆಯೊಳಗ ಐತಿ. 60 ಕಿ.ಮೀ. ದೂರ. ತಿಂಗಳಿಗೊಮ್ಮೆ ಹೋಗತಿದ್ದೆ. ಈಗ ಬಸ್ ಪುಕ್ಕಟ್ಟೆ ಆಗ್ಯದ. ವಾರದಾಗ ಎರಡು ಬಾರಿ ಹೊಕ್ಕೇನರಿ. ನಮ್ಮ ಪತಿ ಕೂಡ ಗಾಡಿಗೆ ರೊಕ್ಕ ಹಾಕಿ ಬ್ಯಾಸತ್ತಿದ್ದರು. ಈಗ ನಾನೇ ಅವರಿಗಿಂತ ಹೆಚ್ಚು ಹೊಲಕ್ಕೆ ಹೊಕ್ಕೇರಿ. ಅದರ, ಬಸ್‌ ಬಿರ್ರನ ಬಿಗಿದು ತುಂಬತಾವರಿ. ಸೀಟು ಸಿಗೋದಿಲ್ಲ. ಅದೊಂದ ತ್ರಾಸ್. ಇನ್ನೆರಡು ಬಸ್ ಬಿಟ್ಟರ ಛೋಲೊ ಆಗತ್ರಿ.

ಸಾಹೇಬಿ ಫಕ್ರುಸಾಬ್ ನದಾಫ, ನಂದೆಮ್ಮದೇವಿ ನಗರ, ಬೈಲಹೊಂಗಲ
Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ