ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಗ್ಯಾರಂಟಿ ಯೋಜನೆಗಳು ವಿರೋಧಿಸಿದವರಿಂದಲೇ ಗ್ಯಾರಂಟಿ ನಕಲು!

ಇಂದು ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಾತ್ರವೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ, ಜಾಗತಿಕ ಸ್ತರದಲ್ಲಿ ಸುದ್ದಿಯಲ್ಲಿವೆ. ಇದಕ್ಕೆ ಕಾರಣ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ಎಂದು ಸುಲಭವಾಗಿ ಉತ್ತರಿಸಿದರೆ ಅದು ಅರ್ಧಮಾತ್ರವೇ ಸತ್ಯ.

ಕರ್ನಾಟಕದ ಜನತೆ ಕಾಂಗ್ರೆಸ್‌ ಪಕ್ಷವನ್ನು ಹರಸಿ, ಆಶೀರ್ವದಿಸಿ ಅಧಿಕಾರಕ್ಕೆ ತಂದು ಆರು ತಿಂಗಳು ಸಂದಿವೆ. ಈ ಸಂದರ್ಭದಲ್ಲಿ ಮೊದಲಿಗೆ ನಾಡಿನ ಸಮಸ್ತ ಜನತೆಗೆ ಸರ್ಕಾರದ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ.

ನಾಡಿನ ಜನತೆ ನಮ್ಮನ್ನು ಪ್ರಚಂಡ ಬಹುಮತದೊಂದಿಗೆ ಆರಿಸಿ ಸರ್ಕಾರವನ್ನು ರಚಿಸಲು ಅನುವು ಮಾಡಿಕೊಟ್ಟಿದ್ದರ ಹಿಂದೆ ನಮ್ಮಲ್ಲಿ ಅವರು ಇರಿಸಿದ ಭರವಸೆ, ಅವರ ಆಶೋತ್ತರಗಳನ್ನು ಈಡೇರಿಸಲು ನಾವೇ ಸೂಕ್ತ ಎನ್ನುವ ವಿಶ್ವಾಸವಿತ್ತು. ಈ ಭರವಸೆ, ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಛಲದಿಂದ ಕಳೆದ ಆರು ತಿಂಗಳ ಅವಧಿಯಲ್ಲಿ ನಮ್ಮ ಸರ್ಕಾರ ಅವಿರತವಾಗಿ ಕೆಲಸ ಮಾಡಿದೆ. ಅಲ್ಪ ಅವಧಿಯಲ್ಲಿಯೇ ಚುನಾವಣೆಯ ವೇಳೆ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.

ಇಂದು ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಾತ್ರವೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ, ಜಾಗತಿಕ ಸ್ತರದಲ್ಲಿ ಸುದ್ದಿಯಲ್ಲಿವೆ. ಇದಕ್ಕೆ ಕಾರಣ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ಎಂದು ಸುಲಭವಾಗಿ ಉತ್ತರಿಸಿದರೆ ಅದು ಅರ್ಧಮಾತ್ರವೇ ಸತ್ಯ. ಚುನಾವಣಾ ರಾಜಕಾರಣಕ್ಕಾಗಿ ಅವಸರದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಲು ಹೊರಟಿರುವ ಪ್ರತಿಪಕ್ಷಗಳೇನಿವೆ ನೈಜ ಕಾಳಜಿಯಿಂದ ಚುನಾವಣಾ ರಾಜಕಾರಣದ ಆಚೆಗೆ ನಿಂತು ದೇಶದ ಸ್ಥಿತಿಗತಿಯ ಬಗ್ಗೆ, ಇಲ್ಲಿನ ಜನರ ಬದುಕು ಬವಣೆಗಳ ಬಗ್ಗೆ ಗಂಭೀರವಾಗಿ ಆಲೋಚಿಸಲು ತೊಡಗಿದಾಗ ಮಾತ್ರ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನತೆ ಏಕೆ ಪುರಸ್ಕರಿಸಿದರು ಎನ್ನುವುದನ್ನು ಅರಿಯಲು ಸಾಧ್ಯ.

ಯಾವುದೇ ದೇಶ, ನಾಡಿನಲ್ಲಿ ಜನತೆ ನೆಮ್ಮದಿಯಿಂದ ಬದುಕಬೇಕೆಂದರೆ ಮೊದಲಿಗೆ ಅವರು ಅಲ್ಲಿ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಹ ಪೂರಕವಾದ ವಾತಾವರಣವಿರಬೇಕು. ಇದು ಸಾಧ್ಯವಾಗಬೇಕೆಂದರೆ ಅತಿಯಾದ ಬೆಲೆ ಏರಿಕೆ, ಸಂಪತ್ತು ಹಾಗೂ ಅವಕಾಶಗಳ ಅಸಮಾನ ಸೃಷ್ಟಿಯನ್ನು ಕೊನೆಗಾಣಿಸಬೇಕು, ಜನಸಾಮಾನ್ಯರ ಬಾಳಿಗೆ ಕೊಳ್ಳಿ ಹಿಡುವ ಬೆಲೆ ಏರಿಕೆ, ಅಶಾಂತಿಯ ವಾತಾವರಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬೇಕು. ಬಹುಮುಖ್ಯವಾಗಿ, ಸಂಪತ್ತು-ಸವಲತ್ತುಗಳ ಹಂಚಿಕೆಯ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಉದ್ದೇಶಪೂರ್ವಕವಾಗಿ ನುಣುಚಿಕೊಳ್ಳುವುದು, ಜನಸಾಮಾನ್ಯರಿಗೆ ಅವರ ಹಕ್ಕಾಗಿ ನೀಡಬೇಕಾದ ಘನತೆಯ ಬಾಳಿಗೆ ಅಡ್ಡಿಯಾಗುವಂತಹ ಆರ್ಥಿಕ, ಸಾಮಾಜಿಕ ಕಂದರಗಳನ್ನು ಸೃಷ್ಟಿಸುವುದು, ಪೋಷಿಸುವುದನ್ನು ಮೊದಲು ಅಧಿಕಾರಾರೂಢ ಸರ್ಕಾರಗಳು ಬಿಡಬೇಕು. ಜನತೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಪುರಸ್ಕರಿಸಿ ನಮ್ಮ ಕೈ ಹಿಡಿಯಲು ಕಾರಣ ನಾವು ಅವರ ಮುಂದಿರಿಸಿದ ಅವರ ಘನತೆಯ ಬದುಕನ್ನು ಕೇಂದ್ರದಲ್ಲಿರಿಸಿಕೊಂಡು ರೂಪಿಸಿದ ಅಭಿವೃದ್ಧಿ ಮಾದರಿ. ಇದುವೇ ನಮ್ಮ ಕರ್ನಾಟಕದ ಹೆಮ್ಮೆಯ ಅಭಿವೃದ್ಧಿ ಮಾದರಿ.

ಇಂದು ಸಂಪತ್ತಿನ ಸೃಜನೆಯಲ್ಲಿ ಸಮಸ್ಯೆಗಳಿಲ್ಲ, ಬದಲಿಗೆ ಸಂಪತ್ತನ್ನು ಹೆಚ್ಚೆಚ್ಚು ವಿಕೇಂದ್ರೀಕರಣಗೊಳಿಸುವ, ಅಭಿವೃದ್ಧಿಯ ಅವಕಾಶಗಳು ಎಲ್ಲರಿಗೂ ವಿಸ್ತರಿಸುವ ಸುಸ್ಥಿರ ಪ್ರಗತಿಯನ್ನು ಸಾಧಿಸುವ ಬಗೆಗಳ ಅನ್ವೇಷಣೆ ಸವಾಲಿನದ್ದಾಗಿದೆ. ಸುಸ್ಥಿರ ಅಭಿವೃದ್ಧಿ ಎನ್ನುವುದು ಕೇವಲ ಮೂಲಸೌಕರ್ಯಗಳ ನಿರ್ಮಾಣದಿಂದ, ಸಂಪರ್ಕ ಜಾಲದಿಂದ ಮಾತ್ರವೇ ಸಾಧ್ಯವಾಗುವುದಿಲ್ಲ. ಬದಲಿಗೆ, ಎಲ್ಲ ಜನ ಸಮುದಾಯಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬಲವರ್ಧನೆ ಮಾಡುವ ಕ್ರಮಗಳು ಅತ್ಯವಶ್ಯಕವಾಗಿವೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಎನ್ನುವುದು ಬಾಯಿ ಮಾತಾಗದೆ ಅದನ್ನು ಕಾರ್ಯನುಷ್ಠಾನಗೊಳಿಸುವ ಯೋಜನೆಗಳು, ವಿಧಾನಗಳಿಗೆ ಆಳುವ ಸರ್ಕಾರಗಳು ಗಮನಹರಿಸಬೇಕಿದೆ. ಈ ದೃಷ್ಟಿಯಲ್ಲಿ ಕರ್ನಾಟಕ ಸರ್ಕಾರವು ಇಂದು ದೇಶಕ್ಕೆ ಹಾಗೂ ಜಗತ್ತಿಗೆ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಅಪೂರ್ವ ಮಾದರಿಯನ್ನು ಒದಗಿಸಿದೆ.

ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯೆರಡನ್ನೂ ಒಳಗೊಂಡಿರುವ ಕರ್ನಾಟಕದ ಸರ್ವಾಂಗೀಣ ಪ್ರಗತಿಯ ‘ಕರ್ನಾಟಕ ಅಭಿವೃದ್ಧಿ ಮಾದರಿ’ ಇದಾಗಿದೆ. ಇದರ ಒಂದು ಬದಿಯಲ್ಲಿ ಜನಸಾಮಾನ್ಯರ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದಿರುವ ವರ್ಗ, ಸಮುದಾಯಗಳ ಸಾಮಾಜಿಕ, ಆರ್ಥಿಕ ಚೈತನ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಮೂಲ ಆದಾಯ [Universal Basic Income] ಪರಿಕಲ್ಪನೆಯಡಿ ಕೈಗೊಂಡಿರುವ ಐದು ಗ್ಯಾರಂಟಿ ಯೋಜನೆಗಳಿವೆ. ಮತ್ತೊಂದು ಬದಿಯಲ್ಲಿ ಕೈಗಾರಿಕೆ, ಸೇವಾವಲಯಗಳ ಸಹಿತ ಎಲ್ಲ ಆರ್ಥಿಕ ವಲಯಗಳಲ್ಲಿನ ಪ್ರಗತಿಯು ದಾಪುಗಾಲಿರುವಂತೆ ಮಾಡಲು ಕೈಗೊಂಡಿರುವ ಕ್ರಮಗಳು, ಉತ್ತೇಜನಗಳಿವೆ. ಯೋಜಿತವಾದ ಮೂಲಸೌಕರ್ಯದ ಹೆಚ್ಚಳ, ವಿಫುಲ ಬಂಡವಾಳ ಆಕರ್ಷಣೆ, ಉದ್ಯಮಸ್ನೇಹಿ ವಾತಾವರಣದ ನಿರ್ಮಾಣ, ಆಡಳಿತದಲ್ಲಿ ಸಮಾಜಮುಖಿ ತಂತ್ರಜ್ಞಾನದ ಅಳವಡಿಕೆ, ನವೀನ ಚಿಂತನೆಗಳು, ನವೋದ್ಯಮಗಳಿಗೆ ನೀಡುವ ವ್ಯವಸ್ಥಿತ ಪ್ರೋತ್ಸಾಹ, ಕೌಶಲ ಹೊಂದಿರುವ ಮಾನವ ಸಂಪನ್ಮೂಲದ ನಿರ್ಮಾಣದಂತಹ ಕ್ರಮಗಳಿವೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಕುಹುಕದಿಂದ ಮಾತನಾಡಿದವರು ಗ್ಯಾರಂಟಿ ಯೋಜನೆಗಳ ಹೆಮ್ಮೆಯ ಫಲಾನುಭವಿಗಳ ನಾವಾಗಿದ್ದೇವೆ ಎಂದು ಜನತೆ ಮೆಚ್ಚಿ ನುಡಿಯುತ್ತಿರುವುದನ್ನು ವಿಶೇಷವಾಗಿ ಗಮನಿಸಬೇಕು. ತಮ್ಮ ಸೋಲಿನ ಕಾರಣ ಎಲ್ಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರ ಜನತೆ ಗ್ಯಾರಂಟಿ ಯೋಜನೆಗಳನ್ನು ಮನಃಪೂರ್ವಕವಾಗಿ ಇಂದು ಸ್ವಾಗತಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಮಾದರಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗದೆ ಧರ್ಮ, ಜಾತಿಗಳನ್ನು ಮುಂದುಮಾಡಿ ಚುನಾವಣೆ ಎದುರಿಸಿದ ಪಕ್ಷಗಳು ಸಹ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದಲ್ಲಿ ಬಹಿರಂಗವಾಗಿ ತೆಗಳುವ ಧೈರ್ಯವಿಲ್ಲ. ಬದಲಿಗೆ, ಸರ್ಕಾರದ ಬಳಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಂಪನ್ಮೂಲವಿಲ್ಲ ಎಂದೆಲ್ಲಾ ಸುಳ್ಳು ಹೇಳಿ ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳ ತ್ವರಿತ ಹಾಗೂ ಸಮರ್ಥ ಅನುಷ್ಠಾನಕ್ಕೆ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ!

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎನ್ನುವವರು ಒಂದೋ ಆಡಳಿತವನ್ನು ನಡೆಸಲು ಬಾರದವರಾಗಿರಬೇಕು, ಇಲ್ಲವೇ ಇಂತಹ ಅತ್ಯವಶ್ಯಕ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ತಲುಪಬಾರದು ಎನ್ನುವ ಸಮಾನತೆಯ, ಸಂವಿಧಾನದ ಆಶಯಗಳ ವಿರೋಧಿಗಳಾಗಿರಬೇಕು.ಈ ಎರಡರ ನಡುವೆ ಪ್ರತಿಪಕ್ಷಗಳು ತಾವು ಎಲ್ಲಿ ನಿಲ್ಲುತ್ತೇವೆ ಎನ್ನುವುದನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳಲಿ.

ನಮ್ಮ ಸರ್ಕಾರಕ್ಕೆ ಆರು ತಿಂಗಳು ತುಂಬಿರುವ ಈ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಾವು ಮಾಡಿರುವ ಸಾಧನೆಯನ್ನು ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಮಹಿಳೆಯರನ್ನು ನಾಡಿನ ಪ್ರಗತಿಯ ಮುಖ್ಯವಾಹಿನಿಗೆ ತರಲು ಮೊದಲಿಗೆ ಅವರನ್ನು ಆರ್ಥಿಕ, ಸಾಮಾಜಿಕ ಸಂಕೋಲೆಗಳಿಂದ ಮುಕ್ತಗೊಳಿಸಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ಒಂದು ಜವಾಬ್ದಾರಿಯುತ ಸರ್ಕಾರವಾಗಿ ತುಂಬಬೇಕು. ಈ ನಿಟ್ಟಿನಲ್ಲಿ ನಾವು ಜಾರಿಗೆ ತಂದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದಾಗಿ ನಾಡಿನ ಎಲ್ಲ ಮಹಿಳೆಯರು ರಾಜ್ಯಾದ್ಯಂತ ಸರ್ಕಾರದ ಸಾರಿಗೆ‌ ಬಸ್‌ಗಳಲ್ಲಿ ಉಚಿತವಾಗಿ ಪಯಣಿಸುತ್ತಿದ್ದಾರೆ. ಕರ್ನಾಟಕದ ಮಹಿಳೆಯರು ಶಕ್ತಿ ಯೋಜನೆಯನ್ನು ಅತೀವ ಮೆಚ್ಚುಗೆಯಿಂದ ಸ್ವಾಗತಿಸಿದ್ದು ಪ್ರತಿನಿತ್ಯ 60 ಲಕ್ಷ ಮಹಿಳೆಯರು ಈ ಯೋಜನೆಯಡಿ ಉಚಿತ ಪ್ರಯಾಣದ ಸದುಪಯೋಗ ಪಡೆಯುತ್ತಿದ್ದಾರೆ. ಆ ಮೂಲಕ ಹಿಂದಿನ ಸರ್ಕಾರದ ಅವಧಿಯಲ್ಲಿ ನಿಸ್ತೇಜಗೊಂಡಿದ್ದ ನಾಡಿನ ಆರ್ಥಿಕತೆಗೆ ಪ್ರಗತಿಯ ನಾಗಾಲೋಟ ದಕ್ಕಿಸಿದ್ದಾರೆ. ಈವರೆಗೆ ಯೋಜನೆಯಡಿ 97.2 ಕೋಟಿಗೂ ಅಧಿಕ ಟಿಕೆಟ್ ವಿತರಿಸಲಾಗಿದೆ. ಈ ಉಚಿತ ಟಿಕೆಟ್‌ ಮೌಲ್ಯ ರೂ. 2,303 ಕೋಟಿ. ಈ ಯೋಜನೆಯಿಂದಾಗಿ ನಮ್ಮ ರಾಜ್ಯದ ಮಹಿಳೆಯರು ದಕ್ಕಿಸಿಕೊಂಡಿರುವ ಆತ್ಮವಿಶ್ವಾಸವನ್ನು ಹಣದ ಮೂಲಕ ಅಳೆಯಲಾಗದು.

ರಾಜ್ಯದಲ್ಲಿ ಪ್ರಸ್ತುತ ಗೃಹಜ್ಯೋತಿ ಯೋಜನೆಯಡಿ ಮಾಸಿಕ ಗರಿಷ್ಠ 200 ಯುನಿಟ್‌ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ‌ನೊಂದಾಯಿತ ಕುಟುಂಬಗಳ ಸಂಖ್ಯೆ 1.56 ಕೋಟಿಯಷ್ಟಿದೆ. ಕಳೆದ 3 ತಿಂಗಳ ಅವಧಿಯಲ್ಲಿ ಈ ಯೋಜನೆಗಾಗಿ ರೂ. 2,152 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯುತ್‌ ಎನ್ನುವುದು ಪ್ರಗತಿಯ, ಅವಕಾಶಗಳ ಸಂಕೇತ. ಕುಟುಂಬವೊಂದಕ್ಕೆ ವಿದ್ಯುತ್‌ ಭದ್ರತೆಯನ್ನು, ಖಾತರಿಯನ್ನು ನೀಡುವುದು ಎಂದರೆ ಅದರ ಪ್ರಗತಿಯ ಖಾತರಿ ನೀಡಿದಂತೆ. ಅವರ ಬದುಕನ್ನು ಆಶಾದಾಯಕವಾಗಿಸಿದಂತೆ.

ಹಸಿವು ಮುಕ್ತ ಕರ್ನಾಟಕವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಜಾರಿಗೆ ತಂದ ಹತ್ತು ಕೆಜಿ ಅಕ್ಕಿಯ ಖಾತರಿ ನೀಡುವ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಹಾಗೂ ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ ಉಳಿದ ಐದು ಕೆಜಿ ಅಕ್ಕಿಗೆ ಪರ್ಯಾಯವಾಗಿ ಪ್ರತಿ ಫಲಾನುಭವಿಗೆ ತಲಾ ರೂ. 170 ಹಣದ ವರ್ಗಾವಣೆ ಮಾಡಿದ್ದೇವೆ. 3.92 ಕೋಟಿ ಫಲಾನುಭವಿಗಳ ಖಾತೆಗೆ ರೂ. 2,444 ಕೋಟಿ ಹಣ ಜಮೆ ಮಾಡಿದ್ದೇವೆ. ಈ ನಾಡಿನಲ್ಲಿ ಯಾರೊಬ್ಬರೂ ಹಸಿದು ಮಲಗಬಾರದು ಎನ್ನುವ ನಮ್ಮ ತತ್ವವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ.

ರಾಜ್ಯದ ಮಹಿಳೆಯರು, ವಿಶೇಷವಾಗಿ ಮನೆಯ ನಿರ್ವಹಣೆಯ ಹೊಣೆ ಹೊತ್ತ ಬಿಪಿಎಲ್‌ ಕುಟುಂಬಗಳ ಈ ನಾಡಿನ ನೈಜ ಗೃಹ ಲಕ್ಷ್ಮಿಯರಿಗೆ ಮಾಸಿಕ ರೂ. 2,000 ಧನಸಹಾಯ ನೀಡುತ್ತಿದ್ದೇವೆ. ಇದರ ಅಡಿ, 99.52 ಲಕ್ಷ ನೊಂದಾಯಿತ ಮಹಿಳೆಯರ ಖಾತೆಗೆ ಹಣದ ವರ್ಗಾವಣೆ ಮಾಡಲಾಗಿದೆ. ರೂ. 17,500 ಕೋಟಿ ಅನುದಾನ ಮೀಸಲಿರಿಸಿದ್ದು ಈ ವರೆಗೆ ರೂ. 11,200 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಕರ್ನಾಟಕದ ಪ್ರತಿಯೊಂದು ಮನೆಯನ್ನು ನಡೆಸುವ ಮಹಿಳೆಯೂ ಗೃಹ ಲಕ್ಷ್ಮಿಯೇ ಆಗಿದ್ದು ಅಂತಹವರಿಗೆ ನೀಡುವ ಹಣ ಆ ಕುಟುಂಬದ ಉನ್ನತಿಗೆ ಬಳಕೆಯಾಗುತ್ತಿದೆ. ಮನೆಯೊಡತಿಗೆ ನೀಡುವ ಹಣದ ಬಗ್ಗೆ ಕುಹುಕವಾಡುವುದು ಈ ನಾಡಿನ ಹೆಣ್ಣುಮಕ್ಕಳ ವಿವೇಕದ ಬಗ್ಗೆ ಕುಹುಕವಾಡಿದಂತೆಯೇ ಸರಿ.

ಶೀಘ್ರದಲ್ಲಿಯೇ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.1,500 ನಿರುದ್ಯೋಗ ಭತ್ಯೆಯನ್ನು ನೀಡುವ ಯುವನಿಧಿ ಯೋಜನೆಯನ್ನು ಸಹ ಜಾರಿಗೆ ತರುತ್ತೇವೆ. ಯುವಕರ ಪಾಲಿಗೆ ಭರವಸೆಯನ್ನು ಮೂಡಿಸುವುದು, ಅವರ ಕನಸುಗಳ ರೆಕ್ಕೆ ಬಲಿಯಲು ಅವಕಾಶ ಕಲ್ಪಿಸುವುದು, ಸೂಕ್ತ ಕೌಶಲ್ಯಗಳನ್ನು ಕಲಿಯಲು ಆರ್ಥಿಕ ಬೆಂಬಲ ನೀಡುವ ಮೂಲಕ ಅವರನ್ನು ಈ ದೇಶದ ಆಸ್ತಿಯಾಗಿಸುವುದು ಈ ಯೋಜನೆಯ ಉದ್ದೇಶ. ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇರಿಸಿಕೊಂಡಿದ್ದೇವೆ. ಈ ನಾಡಿನ ಯುವಪೀಳಿಗೆಗೆ ಅಗತ್ಯ ಮಾರ್ಗದರ್ಶನ ಹಾಗೂ ಸಣ್ಣಪ್ರಮಾಣದ ಆರ್ಥಿಕ ಬೆಂಬಲ ನೀಡಿದರೆ ಸಾಕು ಅವರು ನವನವೀನ ಕೌಶಲಗಳನ್ನು ಕಲಿಯುವ ಮೂಲಕ ಈ ದೇಶದ ಭವ್ಯ ಭವಿಷ್ಯಕ್ಕೆ ಸುಭದ್ರ ಅಡಿಪಾಯ ಹಾಕಬಲ್ಲವರಾಗಿದ್ದಾರೆ. ಅವರ ಕನಸು, ಕೌಶಲ್ಯಗಳಿಗೆ ಸರ್ಕಾರವೊಂದು ನೀಡಬೇಕಾದ ಕನಿಷ್ಠ ಬೆಂಬಲ ಇದು ಎನ್ನುವುದು ನಮ್ಮ ಭಾವನೆ.

ಹೀಗೆ, ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕವು ಇಂದು ನಾಡಿನ ಜನತೆಯ ಬದುಕು ಅಸ್ಥಿರವೂ, ಅಭದ್ರವೂ ಆಗದಂತೆ ನೆಮ್ಮದಿಯ ಕವಚವೊಂದನ್ನು ಕಟ್ಟಿದೆ. ನಮ್ಮ ಜನತೆಗೆ ಇಷ್ಟು ಮಾತ್ರ ಬೆಂಬಲ ಸಿಕ್ಕರೆ ಸಾಕು ಅವರು ಜಗತ್ತೇ ನಿಬ್ಬೆರಗಾಗುವಂತೆ ನಾಡಿನ ಪ್ರಗತಿಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಕನ್ನಡಿಗರೊಳಗಿನ ಒಳಿತಿನ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ನಮ್ಮ ಹೆಮ್ಮೆಯ ಕರ್ನಾಟಕದ ಜನತೆಗೆ ನೀಡುವ ಪ್ರತಿಯೊಂದು ಸೌಲಭ್ಯ, ಸವಲತ್ತುಗಳನ್ನೂ ಅವರು ನಾಡಿನ ಸರ್ವತೋಮುಖ ಪ್ರಗತಿಗೆ ನಿಶ್ಚಿತವಾಗಿಯೂ ಬಳಸುತ್ತಾರೆ ಎನ್ನುವುದು ನನ್ನ ಸ್ಪಷ್ಟ ಅಭಿಮತ. ಈ ಬಗ್ಗೆ ಅನುಮಾನವೇ ಬೇಡ. ನಾವು ಒಂದು ಸರ್ಕಾರವಾಗಿ ಜನರಿಗೆ ಇಂದು ನೆಮ್ಮದಿಯ ಬದುಕು ನೀಡಿದರೆ ಅವರು ನಮಗೆ ಭರವಸೆಯ ನಾಳೆಗಳನ್ನು ನೀಡುತ್ತಾರೆ. ಇದು ಖಚಿತ.

(ಇದು ಕನ್ನಡಪ್ರಭ ಪತ್ರಿಕೆಗಾಗಿ ಬರೆದ ಲೇಖನ)

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ